ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌ ಕಾರ್ಖಾನೆ ಆರಂಭಕ್ಕೆ ಕ್ರಮ

ಮಂಡ್ಯ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಸರ್ವಾನುಮತದ ನಿರ್ಣಯ
Last Updated 16 ಫೆಬ್ರುವರಿ 2017, 9:06 IST
ಅಕ್ಷರ ಗಾತ್ರ
ಮಂಡ್ಯ: ಮೈಷುಗರ್‌ ಕಾರ್ಖಾನೆ ಆರಂಭಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬುಧವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ಬೀರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆ ಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು. 
 
ರೈತರು ಕಷ್ಟದಲ್ಲಿದ್ದಾರೆ. ಬರದಿಂದ ತತ್ತರಿಸಿ ಹೋಗಿದ್ದಾರೆ. ಮೈಷುಗರ್‌ ಕಾರ್ಖಾನೆ ಆರಂಭವಾದರೆ ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
 
ಸದಸ್ಯ ಪ್ರಶಾಂತ್‌ಬಾಬು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಲಿದೆ. ಸಮಸ್ಯೆ ನಿವಾರಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
 
ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಕುಮಾರ್‌ ಮಾತನಾಡಿ, ಇಲ್ಲಿಯವರೆಗೆ ತಾಲ್ಲೂಕಿನಲ್ಲಿ 40 ಕೊಳವೆಬಾವಿ ಕೊರೆಯಿಸಲಾಗಿದೆ. ನೀರಿನ ಅಭಾವ ಇರುವ ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.
 
ಕೊಳವೆಬಾವಿಗಳನ್ನು ರಾತ್ರೋರಾತ್ರಿ ಕೊರೆಯಿಸಲಾಗುತ್ತಿದೆ. ಅದರ ಬಗ್ಗೆ ಜನರಿಗೆ ಮಾಹಿತಿ ಗೊತ್ತಿರುವುದಿಲ್ಲ. ಪರಿಶೀಲನೆ ನಡೆಸಿದ್ದೀರಾ ಎಂದು ಸದಸ್ಯರಾದ ಬೋರೇಗೌಡ, ಮಂಜೇಗೌಡ, ಚೆನ್ನಪ್ಪ ಕೇಳಿದರು.
 
ಕೆಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳಿಗೆ ಪೈಪ್‌ಲೈನ್‌, ವಿದ್ಯುಚ್ಛಕ್ತಿ ಸಂಪರ್ಕ ಕೊಟ್ಟಿಲ್ಲ. ಮೂರು ತಿಂಗಳುಗಳಿಂದಲೂ ಸಮಸ್ಯೆ ಹಾಗೆಯೇ ಇದೆ. ಕೊಳವೆಬಾವಿ ಕೊರೆಯಿಸುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸದಸ್ಯರು ಸೂಚಿಸಿದರು.
 
ತಾಲ್ಲೂಕಿನ ತಂಗಳಗೆರೆಯ ಗ್ರಾಮದಲ್ಲಿ ನಾಲ್ಕು ಎಕರೆ ಸರ್ಕಾರಿ ಭೂಮಿ ಇದೆ. ಅದನ್ನು ಬಳಸಿ ಕೊಳ್ಳಬೇಕು. ಜತೆಗೆ ಆ ಸ್ಥಳದ ಬಗ್ಗೆ ಮಾಹಿತಿ ನೀಡಿ ಎಂದು ಸದಸ್ಯೆ ರಾಜೇಶ್ವರಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಎಂ.ಟಿ.ಬೋರಯ್ಯ ಅವರು, ಈ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದರು.
 
ಸದಸ್ಯೆ ಮಂಜುಳಾ ಮಾತನಾಡಿ, ಮುತ್ತೇಗೆರೆ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಸದಸ್ಯರ ಮಾತಿಗೆ ಗೌರವ ಕೊಡುವುದಿಲ್ಲ. ಆ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ಇದರ ಬಗ್ಗೆ ಪ್ರಶ್ನೆ ಮಾಡಿದರೆ ಇಲ್ಲದ ಸಬೂಬು ಹೇಳುತ್ತಾರೆ ಎಂದು ದೂರಿದರು.
 
ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸದಸ್ಯರಿಗೆ ಗೌರವ ಕೊಡುವುದಿಲ್ಲ. ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಹ್ವಾನ ಬಿಟ್ಟರೆ, ಇನ್ನುಳಿದ ಜಯಂತಿ ಕಾರ್ಯಕ್ರಮ ಹಾಗೂ ಯುವಜನ ಮೇಳಕ್ಕೂ ಸದಸ್ಯರಿಗೆ ಆಹ್ವಾನ ನೀಡಿಲ್ಲ ಎಂದು ಸದಸ್ಯರೆಲ್ಲರೂ ಸಮಾಜ ಕಲ್ಯಾಣಾಧಿಕಾರಿ ನಾಗಲಕ್ಷ್ಮಿ ವಿರುದ್ಧ ಟೀಕಿಸಿದರು.
 
ಮಧ್ಯ ಪ್ರವೇಶಿಸಿದ ಇ.ಒ, ಇನ್ನು ಮುಂದೆ ಹೀಗೆ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಮಹಿಳಾ ಸದಸ್ಯರನ್ನು ಕಡೆಗಣಿಸದಿರಿ: ಪುರುಷ ಸದಸ್ಯರು ಸಭೆಯಲ್ಲಿ ಪ್ರಶ್ನೆ ಕೇಳುವುದನ್ನು ನಡಾವಳಿ ಪುಸ್ತಕದಲ್ಲಿ ದಾಖಲು ಮಾಡುವಂತೆ, ಮಹಿಳಾ ಸದಸ್ಯರ ಪ್ರಶ್ನೆಗಳನ್ನು ನಮೂದಿಸಿ ಅದರ ಬಗ್ಗೆ ಚರ್ಚೆ ನಡೆಯಬೇಕು ಎಂದು ಮಹಿಳಾ ಸದಸ್ಯರು ಇಒ ಬೋರಯ್ಯ ಅವರನ್ನು ಕೇಳಿದರು. ನಿಮ್ಮ ಪ್ರಶ್ನೆಗಳನ್ನೂ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
 
ಅಧಿಕಾರಿಗೆ ಶಿಸ್ತುಕ್ರಮ ಜರುಗಿಸಿ: ಜೈವಿಕಾ ಎಂಬ ಮಗುವಿಗೆ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿ ಪಟ್ಟಿಗೆ ಸೇರಿಸಲು ವಿಫಲ ಆಗಿರುವ ಅಧಿಕಾರಿ ಯಾರೆಂದು ಗುರುತಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇದಕ್ಕೆ ಸಿಡಿಪಿಒ ನೀಡಿರುವ ವರದಿ ಸಮಂಜಸವಾಗಿಲ್ಲ ಎಂದು ಸದಸ್ಯ ಮಂಜೇಗೌಡ ಅಸಾಮಾಧಾನ ವ್ಯಕ್ತಪಡಿಸಿದರು.
 
ಇಒ ಮಾತನಾಡಿ, ಇನ್ನೊಂದು ಪತ್ರ ಬರೆಯಲಾಗುವುದು, ನಾವೇ ಹೋಗಿ ತಪ್ಪಿತಸ್ಥರು ಯಾರೆಂದು ಗುರುತಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಉಪಾಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗಣ್ಣ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT