ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಾಲಯವಾದ ಶಾಲಾ–ಕಾಲೇಜು ಗೋಡೆ

ಕೆಶಿಪ್ ಯೋಜನೆಯಡಿ ಹೆದ್ದಾರಿ ಕಾಮಗಾರಿ; ಪಟ್ಟಣದ ಹಲವೆಡೆ ಕಾಂಪೌಂಡ್‌ ತೆರವು
Last Updated 16 ಫೆಬ್ರುವರಿ 2017, 9:09 IST
ಅಕ್ಷರ ಗಾತ್ರ
ಮಳವಳ್ಳಿ: ರಸ್ತೆ ವಿಸ್ತರಣೆಗಾಗಿ ಶಾಲಾ, ಕಾಲೇಜುಗಳ ಕಾಂಪೌಂಡ್‌ ಒಡೆದು ಹಲವು ತಿಂಗಳಾದರೂ  ದುರಸ್ತಿ ಮಾಡದ ಕಾರಣ ಸಾರ್ವಜನಿಕರ ಮೂತ್ರ ವಿಸರ್ಜನೆ ಹಾಗೂ ಮದ್ಯ ಸೇವಿಸುವ ಕುಡುಕರ ತಾಣವಾಗಿ ಮಾರ್ಪಟ್ಟಿದೆ.
 
ಪಟ್ಟಣದಲ್ಲಿ ಹಾದು ಹೋಗಿರುವ ತುಮಕೂರು ಜಿಲ್ಲೆ ಕೊರಟಗೆರೆಯಿಂದ ಕೇರಳ ರಾಜ್ಯ ಗಡಿ ಬಾವಲಿವರೆಗಿನ ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಪಟ್ಟಣದ ಅನಂತರಾಂ ವೃತ್ತದ ಬಳಿ ಸರ್ಕಾರಿ ಪ್ರಾಥಮಿಕ ಶಾಲೆ, ಬಾಲಕಿಯರ ಪ್ರೌಢಶಾಲೆ, ಬಾಲಕಿಯರ ಪದವಿಪೂರ್ವ ಕಾಲೇಜುಗಳ ಸುತ್ತುಗೋಡೆಯನ್ನು ಹಲವು ತಿಂಗಳ ಹಿಂದೆ  ತೆರವು ಗೊಳಿಸಲಾಗಿತ್ತು. 
 
ಈ ಹೆದ್ದಾರಿ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಯೋಜನೆಯಡಿ ಕೈಗೊಳ್ಳಲಾಗಿದೆ. ಈಗ ರಸ್ತೆ ಕಾಮಗಾರಿಯೂ ನಡೆಯುತ್ತಿಲ್ಲ, ಅತ್ತ ಕಾಂಪೌಂಡ್ ನಿರ್ಮಾಣವೂ ಆಗಿಲ್ಲ. ಇದರಿಂದ ಸಾರ್ವಜನಿಕರಿಗೆ ಶೌಚಾಲಯಕ್ಕೆ ಮುಕ್ತ ಅವಕಾಶ ನೀಡಿದಂತಾಗಿದೆ.
 
ಪುರಸಭೆಯವರು ಇಡೀ ಪಟ್ಟಣ ದಲ್ಲಿ ಕನಿಷ್ಠ ಒಂದು ಶೌಚಾಲಯವನ್ನು ನಿರ್ಮಾಣ ಮಾಡದ ಕಾರಣ ಬೆಂಗ ಳೂರು, ಮಂಡ್ಯ ಕಡೆಯಿಂದ ಬರುವ ಸರ್ಕಾರಿ– ಖಾಸಗಿ ಬಸ್‌ಗಳು ಶಾಲೆಯ ಮುಂದೆ ಮುಖ್ಯರಸ್ತೆಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದರಿಂದ ಬಸ್‌ನಿಂದ ಇಳಿದ ಪ್ರಯಾಣಿಕರು ಸಹ ಮೂತ್ರವಿಸರ್ಜನೆಗೆ ಶಾಲೆ ಗೋಡೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ದುರ್ನಾತ ಹೆಚ್ಚಾಗಿ ವಿದ್ಯಾರ್ಥಿಗಳು ಓಡಾಡುವುದು ಅಸಹನೀಯವಾಗಿದೆ.  
 
ಸಂಜೆಯಾಗುತ್ತಿದ್ದಂತೆ ಅಲೆಮಾರಿ ಗಳು, ಭಿಕ್ಷುಕರು ಶಾಲೆಯ ಆವರಣವನ್ನೇ ತಂಗುದಾಣ ಮಾಡಿಕೊಳ್ಳುತ್ತಾರೆ. ಕೆಲವರು ಕುಡಿಯುವ ತಾಣವಾಗಿಯೂ ಬಳಸಿಕೊಂಡಿದ್ದಾರೆ.  ಶಾಲಾ–ಕಾಲೇಜು ಮುಖ್ಯರಸ್ತೆ ಯಲ್ಲಿದ್ದು, ಮೈದಾನದಲ್ಲೇ ಸಾರ್ವಜ ನಿಕರು ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಾರೆ. ಇದರಿಂದ ವಾಹನಗಳ ಕಿರಿಕಿರಿಯೂ ಹೆಚ್ಚಾಗಿದೆ. 
 
ಹಲವು ಕಟ್ಟಡಗಳ ಕಾಂಪೌಂಡ್‌ ತೆರವು: ಪಟ್ಟಣ ವ್ಯಾಪ್ತಿಯಲ್ಲಿ ಮದ್ದೂರು ರಸ್ತೆ ಕೆರೆ ಬಳಿಯಿಂದ– ಕೊಳ್ಳೇಗಾಲ ರಸ್ತೆ ಸಂಪರ್ಕಿಸುವ ರಸ್ತೆವರೆಗೆ ಹಲವು ಕಟ್ಟಡಗಳ ಮುಂದೆ ಇದ್ದ ಕಾಂಪೌಂಡ್‌ ಗಳನ್ನೂ ತೆರವುಗೊಳಿಸಲಾಗಿದೆ. ಇಲ್ಲಿ ಕೆಲವು ಕಡೆ ಚರಂಡಿ ನಿರ್ಮಿಸಲು ಗುಂಡಿ ತೋಡಿ ಹಾಗೆಯೇ ಬಿಟ್ಟಿದ್ದು, ಅಲ್ಲಲ್ಲಿ ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ.
 
ಮದ್ದೂರು ರಸ್ತೆಯಲ್ಲಿ ಪುರಸಭೆ ಮುಂದೆ ಆಯುಷ್ ಆಸ್ಪತ್ರೆ, ಆಸ್ಪತ್ರೆ ವಸತಿ ಗೃಹಗಳಿದ್ದು, ಚರಂಡಿ ನಿರ್ಮಿಸದ ಕಾರಣ ಸಿಬ್ಬಂದಿ ಹಲಗೆ ಇಟ್ಟು ಓಡಾಡುತ್ತಿದ್ದಾರೆ. ಇಂತಹ ಸಮಸ್ಯೆಗಳು ತಲೆದೋರಿ ಹಲವು ತಿಂಗಳು ಕಳೆದರೂ ಕೆಶಿಪ್‌ನವರು ಕಾಮಗಾರಿ ನಡೆಸಲು ಮುಂದಾಗದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
 
‘ವಿಶ್ವಬ್ಯಾಂಕ್ ಸಹಯೋಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವ ಬಗ್ಗೆ ಫೆ. 17ರಂದು ಶಾಸಕರು, ವಿಶ್ವಬ್ಯಾಂಕ್‌ನ ಅಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಶೀಘ್ರವೇ ಕಾಮಗಾರಿ ನಡೆಸಲಾಗುವುದು’ ಎನ್ನುತ್ತಾರೆ ಕೆಶಿಪ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬದರಿನಾಥ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT