ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮ

ಅನುಮತಿ ನೀಡುವ ಜಿಲ್ಲಾಡಳಿತದ ವಿರುದ್ಧ ಪ್ರೀತಂ ಜೆ.ಗೌಡ ಆಕ್ರೋಶ
Last Updated 16 ಫೆಬ್ರುವರಿ 2017, 9:17 IST
ಅಕ್ಷರ ಗಾತ್ರ
ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಿದ್ದಾರೆ. ಇದರಿಂದ ತ್ಯಾಜ್ಯ ಹೆಚ್ಚುತ್ತಿದ್ದು ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಬಂದಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಪ್ರೀತಂ ಜೆ. ಗೌಡ ಆಕ್ರೋಶ ವ್ಯಕ್ತಪಡಿಸಿದರು. 
 
ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ನಗರದ ಹೃದಯ ಭಾಗದಲ್ಲಿ ಜಿಲ್ಲಾ ಕ್ರೀಡಾಂಗಣವಿದೆ. ಜಿಲ್ಲಾಡಳಿತ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡಿ ಅಲ್ಲಿ ಅನೈರ್ಮಲ್ಯ ಸೃಷ್ಟಿಯಾಗಲು ಕಾರಣವಾಗಿದೆ. ಇದರಿಂದ ಮುಂಜಾನೆ ವಾಯುವಿಹಾರಕ್ಕೆ ಬರುವ ನಾಗರಿಕರು ಹಾಗೂ ಮಕ್ಕಳ ಕ್ರೀಡಾ ಚಟುವಟಿಕೆಗೆ ಸಮಸ್ಯೆಯಾಗುತ್ತಿದೆ. ಜಿಲ್ಲಾಡಳಿತ ಖಾಸಗಿ ವ್ಯಕ್ತಿಗಳ ಹಣದ ಆಮಿಷಕ್ಕೆ ಒಳಗಾಗಿ ಕ್ರೀಡಾಂಗಣದ ಸ್ವಚ್ಛತೆ ಹಾಳು ಮಾಡುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. 
 
ಬಾಲಕರ ಸರ್ಕಾರಿ ಕಾಲೇಜು ಆವರಣದ ಜಾಗವನ್ನು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ನೀಡಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಿಸಲು ಖಾಸಗಿ ಕಾರ್ಯಕ್ರಮ ಆಯೋಜಕರು ಗುಂಡಿ ತೆಗೆದಿದ್ದಾರೆ. ರಾತ್ರಿ ವೇಳೆ ಮದ್ಯವ್ಯಸನಿಗಳು ಕ್ರೀಡಾಂಗಣದಲ್ಲಿ ಕುಳಿತು ಕುಡಿದು ಎಲ್ಲೆಂದರಲ್ಲಿ ಗಾಜಿನ ಬಾಟಲಿಗಳನ್ನು ಒಡೆಯುತ್ತಾರೆ. ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಒಟ್ಟಾರೆ ಜಿಲ್ಲಾಡಳಿತ  ಕ್ರೀಡಾಪಟುಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಆರೋಪಿಸಿದರು. 
 
ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿ ಮದುವೆ ಕಾರ್ಯಗಳಿಗೂ ಅನುಮತಿ ನೀಡುವುದರಲ್ಲಿ ಸಂಶಯವಿಲ್ಲ ಎಂದು ಅವರು ಕಿಡಿಕಾರಿದರು. ಖಾಸಗಿ ಕಾರ್ಯಕ್ರಮಗಳಿಗೆ ಕ್ರೀಡಾಂಗಣದಲ್ಲಿ ಅನುಮತಿ ನೀಡಬಾರದು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. 
 
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸ್ಥಳೀಯ ಶಾಸಕರು ವೈಜ್ಞಾನಿಕ ರೀತಿಯಲ್ಲಿ ಕೊಳವೆಬಾವಿ ಕೊರೆಯಿಸುತ್ತಿಲ್ಲ. ಕೇವಲ ತಮ್ಮ ಬೆಂಬಲಿಗರಿಗೆ ಕೊಳವೆಬಾವಿ ಕೊರೆಯಿಸಲು ಅವಕಾಶ ನೀಡುತ್ತ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 
 
ಲಭ್ಯವಿರುವ ಮಾಹಿತಿ ಪ್ರಕಾರ ಶಾಸಕರು 70 ಕೊಳವೆ ಬಾವಿ ಕೊರೆಯಿಸಿದ್ದಾರೆ. ಅವುಗಳಲ್ಲಿ 7ರಲ್ಲಿ ಮಾತ್ರ ನೀರು ಬಂದಿದೆ. ಕಳೆದೆರಡು ವರ್ಷಗಳಿಂದ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸುವುದಾಗಿ ಹೇಳಿದ್ದರು. ಅದು ಇಂದಿಗೂ ಭರವಸೆಯಾಗಿಯೇ ಉಳಿದಿದೆ ಎಂದು ಹೇಳಿದರು.
 
ನಗರಸಭೆ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರದಲ್ಲಿದ್ದವರು ಜನರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಕೊಳವೆಬಾವಿ ಕೊರೆಯಿಸಲು ಮುಂದಾಗಬೇಕು. ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಮನಹರಿಸಬೇಕು ಎಂದು ಒತ್ತಾಯಿಸಿದರು. ರಾಜೀವ್‌, ಹೇಮಂತ್‌, ಯೋಗೇಶ್‌, ವೇಣುಗೋಪಾಲ್‌ ಗೋಷ್ಠಿಯಲ್ಲಿ ಇದ್ದರು.
 
* ಅಲ್ಪ ಹಣದ ಆಮಿಷಕ್ಕೆ ಜಿಲ್ಲಾಡಳಿತ ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡಿ, ಸ್ವಚ್ಛತೆ ಕಾಪಾಡಲು ಅದಕ್ಕಿಂತ ಹೆಚ್ಚು ವ್ಯಯ ಮಾಡುತ್ತಿದೆ
ಪ್ರೀತಂ ಜೆ.ಗೌಡ, ಉಪಾಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT