ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಯ ಹಣ ಸಾಲಕ್ಕೆ ಜಮೆ ಮಾಡಬೇಡಿ

ರೈತರು– ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರಂದೀಪ್‌ ಸೂಚನೆ
Last Updated 16 ಫೆಬ್ರುವರಿ 2017, 9:46 IST
ಅಕ್ಷರ ಗಾತ್ರ
ಮೈಸೂರು: ರೈತರ ಬ್ಯಾಂಕ್ ಖಾತೆಗೆ ಜಮೆಯಾಗುವ ಕೃಷಿ ಉತ್ಪನ್ನ ಮಾರಾಟದ ಹಣ ಹಾಗೂ ಬೆಳೆ ಪರಿಹಾರಧನವನ್ನು  ಸಾಲಕ್ಕೆ ಕಟಾಯಿಸಿ ಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ರೈತರು ಮತ್ತು ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು. 
 
ರೈತರ ಖಾತೆಗೆ ಜಮೆಯಾಗುವ ಕಬ್ಬು ಮಾರಾಟದ ಹಣವನ್ನು ಬ್ಯಾಂಕುಗಳು ಸಾಲಕ್ಕೆ ಕಟಾಯಿಸಿಕೊಳ್ಳಬಾರದು. ಜಮೆ ಮಾಡಿಕೊಂಡ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. 
 
ಕೇಂದ್ರದಿಂದ ರಾಜ್ಯಕ್ಕೆ ₹ 1,782 ಕೋಟಿ ಬೆಳೆ ಪರಿಹಾರ ಹಂಚಿಕೆ ಯಾಗಿದ್ದು, ಈ ಪೈಕಿ ₹ 450 ಕೋಟಿ ಮಂಜೂರಾಗಿದೆ ಎಂಬ ಮಾಹಿತಿ ಇದೆ. ‘ಭೂಮಿ’ ಸಾಫ್ಟ್‌ವೇರ್‌ ಹಾಗೂ ಆಧಾರ್ ಡೇಟಾ ಬೇಸ್‌ನಲ್ಲಿರುವ ಮಾಹಿತಿಯನ್ನು ಆಧರಿಸಿ ರೈತರ ಖಾತೆಗೆ ಪರಿಹಾರಧನ ಜಮೆ ಮಾಡಲಾಗುವುದು. ಈ ಡೇಟಾ ಬೇಸ್‌ನಲ್ಲಿ 1.51 ಲಕ್ಷ ನೋಂದಣಿ ಗುರಿ ಹಾಕಿಕೊಳ್ಳಲಾಗಿದ್ದು, 1.20 ಲಕ್ಷ ಸಾಧನೆಯಾಗಿದೆ. ಈ ಪೈಕಿ 20 ಸಾವಿರ ನೋಂದಣಿ ಹೊಂದಾಣಿಕೆ ಆಗುತ್ತಿಲ್ಲ ಎಂದರು.
 
ಪ್ರತಿ ಹೆಕ್ಟೇರ್‌ಗೆ ₹ 6,800 ಪರಿಹಾರ ನೀಡಬಹುದಾಗಿದೆ. ನೀರಾವರಿ ಜಮೀನಿಗೆ ಇದರ ದುಪಟ್ಟು ಪರಿಹಾರ ಸಿಗುತ್ತದೆ. ತೋಟಗಾರಿಕೆ ಬೆಳೆಗಳಿಗೆ ನೀರಾವರಿಗೆ ಪ್ರತಿ ಹೆಕ್ಟೇರ್‌ಗೆ ₹ 18 ಸಾವಿರ, ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ ₹ 13 ಸಾವಿರ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
 
ಜಿಲ್ಲೆಯಲ್ಲಿ 33 ಸಾವಿರಕ್ಕೂ ಹೆಚ್ಚು ರೈತರು ಫಸಲ್ ವಿಮಾ ಯೋಜನೆಗೆ ನೋಂದಣಿ ಮಾಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆ ವಿಮೆ ಅಧಿಸೂಚನೆಯಲ್ಲಿ ಪ್ರದೇಶಾವಾರು ನಿರ್ದಿಷ್ಟ ಬೆಳೆಯ ನಿರ್ಬಂಧ ತೆಗೆಯಬೇಕು. ಬಿತ್ತನೆಬೀಜ ವಿತರಿಸುವಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ವಿಮೆ ಕಂತು ಪಡೆದುಕೊಂಡರೆ, ರೈತರು ವಿಮೆ ನೋಂದಣಿಗೆ ಬ್ಯಾಂಕುಗಳಿಗೆ ಅಲೆ­ಯುವುದು ತಪ್ಪುತ್ತದೆ. ಕಬ್ಬು ಮತ್ತು ರೇಷ್ಮೆಯನ್ನು ವಿಮೆ ವ್ಯಾಪ್ತಿಗೆ ಸೇರಿಸ­ಬೇಕು ಎಂದು ರೈತರು ಕೋರಿದರು. 
 
ಕಬ್ಬಿನ ಇಳುವರಿ ಆಧರಿಸಿ ಬೆಲೆ ನಿಗದಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಶೇಕಡ 10.5ರಿಂದ 11ರಷ್ಟು ಇಳುವರಿ ಬರುತ್ತಿತ್ತು. ಈಗ ಶೇಕಡ 8.9ರಷ್ಟು ತೋರಿಸಲಾಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಒಂದೇ ಕಾರ್ಖಾನೆ ಮೈಸೂರಿನಲ್ಲಿ ಎರಡು ರೀತಿಯ ದರ ನೀಡುತ್ತಿದೆ. ಒಂದು ಕಡೆ ₹ 2,500 ನೀಡಿದರೆ ಮತ್ತೊಂದು ಕಾರ್ಖಾನೆಯಲ್ಲಿ ₹ 2,300 ನೀಡಲಾಗುತ್ತಿದೆ. ಈ ಗೊಂದಲ ನಿವಾರಿಸಬೇಕು ಎಂದರು.
 
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೆ.ರಾಮೇಶ್ವರಪ್ಪ, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಹೊಸಕೋಟೆ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT