ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆಗೆ ತಿಂಗಳಿಗೆ ₹ 1.5 ಲಕ್ಷ ನಷ್ಟ

ರಸ್ತೆ ಕಾಮಗಾರಿ: ಬಸ್‌ಗಳು ಸುತ್ತುಬಳಸಿ ಪ್ರಯಾಣ, ಡಿಸೇಲ್‌ ಬಳಕೆ ಹೆಚ್ಚಳ
Last Updated 16 ಫೆಬ್ರುವರಿ 2017, 10:03 IST
ಅಕ್ಷರ ಗಾತ್ರ
ಮೈಸೂರು: ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬಸ್‌ಗಳು ಸುತ್ತುಬಳಸಿ ಸಂಚರಿಸುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನಗರ ವಿಭಾಗಕ್ಕೆ ತಿಂಗಳಿಗೆ ಸುಮಾರು ₹ 1.5 ಲಕ್ಷ ನಷ್ಟವುಂಟಾಗುತ್ತಿದೆ.
 
ರಾಮಸ್ವಾಮಿ ವೃತ್ತದಿಂದ ಬನ್ನಿಮಂಟಪದ ಮಿಲೇನಿಯಂ ವೃತ್ತದವರೆಗಿನ ಮಾರ್ಗದ ರಸ್ತೆಗೆ ಹಂತಹಂತವಾಗಿ ಕಾಂಕ್ರೀಟ್‌ ಹಾಕುವ ಕಾಮಗಾರಿ ಆರಂಭಿಸಿ­ದಾಗಿನಿಂದ ಈ ಸಮಸ್ಯೆ ನೆಲೆಸಿದೆ. 2015ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಕಾಮಗಾರಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. 
 
ಸದ್ಯ ಗನ್‌ಹೌಸ್‌ನಿಂದ ಹಾರ್ಡಿಂಜ್‌ ವೃತ್ತದವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿ­ಕೊಳ್ಳಲಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸಾರಿಗೆ ಸಂಸ್ಥೆಯ ಪ್ರಕಾರ ನಿತ್ಯ 350ರಿಂದ 400 ಟ್ರಿಪ್‌ಗಳಿಗೆ ತೊಂದರೆ ಉಂಟಾ­ಗುತ್ತಿದೆ. ಮೂರೂವರೆ ಕಿ.ಮೀ ಬಳಸಿ­ಕೊಂಡು  ನಿಲ್ದಾಣ ತಲುಪಬೇಕಾಗಿದೆ. ಉದ್ಬೂರು ಕ್ರಾಸ್‌ನಿಂದ ಬರುವ ಬಸ್‌ಗಳಿಗೆ ಹೆಚ್ಚು ತೊಂದರೆ ಆಗುತ್ತಿದೆ. 
 
‘ಸುತ್ತುವರಿದು ನಿಲ್ದಾಣ ತಲುಪಬೇಕಾಗಿರುವುದರಿಂದ ನಿತ್ಯ 300 ಲೀಟರ್‌ ಹೆಚ್ಚುವರಿ ಡೀಸೆಲ್‌ ಖರ್ಚಾಗುತ್ತಿದೆ. ಕೆಲ ಟ್ರಿಪ್‌ಗಳ ಸಂಖ್ಯೆ ಕಡಿಮೆ ಆಗಿದೆ. ಇದರಿಂದ ಸಂಸ್ಥೆಯ ಆದಾಯಕ್ಕೆ ಹೊಡೆತ ಬಿದ್ದಿದೆ. ಅಲ್ಲದೆ, ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ನಗರ ನಿಲ್ದಾಣದ ಸುತ್ತಮುತ್ತ ಆಂತರಿಕ ಭದ್ರತಾ ಸಿಬ್ಬಂದಿ ಮೂಲಕ ಟ್ರಾಫಿಕ್‌ ನಿಯಂತ್ರಿಸುತ್ತಿದ್ದೇವೆ’ ಎಂದು  ಸಂಸ್ಥೆಯ ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ರಾಮಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 
 
ಕಳೆದ ವರ್ಷ ಕಾವೇರಿ ನದಿ ನೀರಿನ ವಿವಾದ, ಮುಷ್ಕರ ಸೇರಿದಂತೆ ನಾಲ್ಕೈದು ದಿನ ಕರ್ನಾಟಕ ಬಂದ್‌ ಆಗಿದ್ದರಿಂದ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಅಲ್ಲದೆ, ನೋಟು ಅಮಾನ್ಯದಿಂದಾಗಿ ಸಂಸ್ಥೆಗೆ ಅಪಾರ ನಷ್ಟ ಉಂಟಾಗಿತ್ತು. ‘ಹಲವು ತಿಂಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. 
 
ಹಾರ್ಡಿಂಜ್‌ ವೃತ್ತದಿಂದ ಕೋಟಿ ಆಂಜನೇಯ ಸ್ವಾಮಿ ದೇಗುಲ ನಡುವಿನ ರಸ್ತೆ ಕಾಮಗಾರಿ ಹಾಗೂ ನಗರ ನಿಲ್ದಾಣದ ಮುಂಭಾಗದ ರಸ್ತೆಗೆ ಕಾಂಕ್ರೀಟ್‌ ಹಾಕುವ ಕಾಮಗಾರಿ ವೇಳೆ ತುಂಬಾ ತೊಂದರೆ ಆಯಿತು’ ಎಂದರು.
 
‘ಸಂಚಾರ ಪೊಲೀಸರ ನೆರವಿನಿಂದಾಗಿ ಕೆಲ ಮಾರ್ಗಗಳಲ್ಲಿ ಸಂಚಾರ ಸುಲಭಗೊಳಿಸಲು ಸಾಧ್ಯ ವಾಗಿದೆ. ಮಾರ್ಗ ಬದಲಾಯಿಸಿ ಬಸ್‌ ನಿಲ್ದಾಣಗಳನ್ನು ಬೇರೆಡೆಗೆ ಸ್ಥಳಾಂತರಿ ಸಲಾಗಿದೆ’ ಎಂದು ಮಾಹಿತಿ ನೀಡಿದರು. 
 
ಎಲ್ಲೆಲ್ಲಿ ಕಾಮಗಾರಿ?: ಗನ್‌ಹೌಸ್‌ನಿಂದ ಹಾರ್ಡಿಂಜ್‌ ವೃತ್ತದವರೆಗೆ ಹಾಗೂ ಸಯ್ಯಾಜಿರಾವ್‌ ರಸ್ತೆಯ ಆಯುರ್ವೇದ ವೃತ್ತದಿಂದ ಹಳೆ ಆರ್‌ಎಂಸಿವರೆಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣ, ಸಿದ್ಧಾರ್ಥ ಬಡಾವಣೆಯ ಹಾಲಿನ ಡೇರಿ ವೃತ್ತದಿಂದ ಟೆರೇಷಿಯನ್‌ ಕಾಲೇಜುವರೆಗಿನ ಮಲೆಮಹದೇಶ್ವರ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿವೆ. ನಗರ ಹಾಗೂ ಗ್ರಾಮೀಣ ಸಾರಿಗೆಯ ಬಹುತೇಕ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. 
 
ಮಾರ್ಗ ಬದಲಾವಣೆ: ಕಾಮಗಾರಿ ನಿಮಿತ್ತ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಗನ್‌ಹೌಸ್‌ ಕಡೆಯಿಂದ ಹಾರ್ಡಿಂಜ್‌ ವೃತ್ತದ ಕಡೆ ಸಾಗುತ್ತಿದ್ದ ಬಸ್‌ಗಳು ನಂಜನಗೂಡು ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಮೃಗಾಲಯದ ಮುಂಭಾಗದಿಂದ ನಗರ ಹಾಗೂ ಗ್ರಾಮೀಣ ಬಸ್‌ ನಿಲ್ದಾಣ ತಲುಪಬೇಕಿದೆ. ಗನ್‌ಹೌಸ್ ಕಡೆಗೆ ಬರುವ ಬಸ್‌ಗಳು ಹಾರ್ಡಿಂಜ್‌ ವೃತ್ತದಿಂದ ಲೋಕರಂಜನ್‌ ರಸ್ತೆ, ಕಾರಂಜಿ ಕೆರೆ, ರೇಸ್‌ಕೋರ್ಸ್‌ ಮೂಲಕ ಸಂಚರಿಸುತ್ತಿವೆ. ಕುವೆಂಪುನಗರ, ರಾಮಸ್ವಾಮಿ ವೃತ್ತ, ಡಬಲ್‌ ರಸ್ತೆ, ಹಾರ್ಡಿಂಜ್‌ ವೃತ್ತದ ಮೂಲಕ ಹೋಗುತ್ತಿದ್ದ ಬಸ್‌ಗಳು ರಾಮಸ್ವಾಮಿ ವೃತ್ತದಿಂದ ರೈಲ್ವೆ ನಿಲ್ದಾಣ, ಕೆ.ಆರ್‌.ಆಸ್ಪತ್ರೆ, ದೊಡ್ಡಗಡಿಯಾರ ಮಾರ್ಗವಾಗಿ ನಗರ ಬಸ್‌ ನಿಲ್ದಾಣ ತಲುಪುತ್ತಿವೆ. 
 
ಗನ್‌ಹೌಸ್‌ನಿಂದ ಹಾರ್ಡಿಂಜ್‌ ವೃತ್ತದವರೆಗೆ ಕಾಮಗಾರಿಯನ್ನು 60 ದಿನಗಳೊಳಗೆ ಮುಗಿಸುವುದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. 
 
* ನಮಗೆ ಉಂಟಾಗುತ್ತಿರುವ ನಷ್ಟವನ್ನು ಪ್ರಯಾಣಿಕರಿಗೆ ಹೆಚ್ಚುವರಿ ದರ ವಿಧಿಸಿ ಸರಿದೂಗಿಸಲು ಸಾಧ್ಯವಿಲ್ಲ. ಬೇಗನೇ ರಸ್ತೆ ಕಾಮಗಾರಿ ಮುಗಿಸಿದರೆ ನಷ್ಟ ತಪ್ಪಿಸಬಹುದು
- ಕೆ.ರಾಮಮೂರ್ತಿ, ನಗರ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT