ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

42 ಸಾವಿರ ಲೀಟರ್‌ ಹಾಲು ಖೋತ

ಜಿಲ್ಲೆಯ ಹೈನುಗಾರಿಕೆಗೆ ತಟ್ಟಿದ ಬರಗಾಲದ ಬಿಸಿ
Last Updated 16 ಫೆಬ್ರುವರಿ 2017, 10:24 IST
ಅಕ್ಷರ ಗಾತ್ರ
ಚಾಮರಾಜನಗರ: ಬರಗಾಲದ ಬಿಸಿಯು ಜಿಲ್ಲೆಯ ಹೈನುಗಾರಿಕೆಗೂ ತಟ್ಟಿದೆ. ಹಸಿರು ಮೇವು ಇಲ್ಲದೆ ಚಾಮುಲ್‌ ವ್ಯಾಪ್ತಿ ಪ್ರತಿದಿನ 42 ಸಾವಿರ ಲೀಟರ್‌ನಷ್ಟು ಹಾಲಿನ ಉತ್ಪಾದನೆ ಕುಸಿತವಾಗಿದೆ.
 
ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಡಿ ನಿರೀಕ್ಷಿತ ಪ್ರಮಾಣದಡಿ ಮಳೆ ಸುರಿಯಲಿಲ್ಲ. ಹಿಂಗಾರು ಕೂಡ ವೈಫಲ್ಯ ಕಂಡಿತು. ಇದರಿಂದ ಜಾನುವಾರುಗಳಿಗೆ ಮೇವು ಸಂಗ್ರಹಕ್ಕೂ ತೊಂದರೆಯಾಯಿತು. ಕೊಳವೆಬಾವಿ ಆಶ್ರಿತ ನೀರಾವರಿ ಪ್ರದೇಶದಲ್ಲಿಯೂ ಮೇವಿನ ಉತ್ಪಾದನೆಯಾಗಿಲ್ಲ. ಕಬಿನಿ ಬಲದಂಡೆ ನಾಲೆಯಲ್ಲಿಯೂ ನೀರು ಹರಿಯಲಿಲ್ಲ. ಹಾಗಾಗಿ, ಕಾಲುವೆ ನೀರಾವರಿ ಪ್ರದೇಶದಲ್ಲಿಯೂ ಮೇವು ಬೆಳೆದಿಲ್ಲ. ಇದು ಹೈನುಗಾರಿಕೆ ಮೇಲೆ ಪರಿಣಾಮ ಬೀರಿದೆ.
 
ಚಾಮುಲ್‌ ವ್ಯಾಪ್ತಿ 458 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 95 ಸಂಘಗಳು ಮಹಿಳೆಯರ ನೇತೃತ್ವದಡಿಯೇ ನಡೆಯುತ್ತಿದ್ದು, ಲಾಭಗಳಿಸುತ್ತಿವೆ. ಸಾವಿರಾರು ಕುಟುಂಬಗಳು ಹೈನೋದ್ಯಮ ನಂಬಿ ಬದುಕು ಕಟ್ಟಿಕೊಂಡಿವೆ. ಬರಗಾಲವು ಎಲ್ಲರ ಬದುಕಿಗೆ ಬರೆ ಎಳೆದಿದೆ. 
 
ಜಿಲ್ಲೆಯು ಬಹುತೇಕ ಮಳೆಯಾಶ್ರಿತ ಪ್ರದೇಶ. ಒಂದೂವರೆ ದಶಕದ ಹಿಂದೆ ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿ ಮಾಡುತ್ತಿದ್ದರು. ರೈತರು ರೇಷ್ಮೆಹುಳು ಸಾಕಾಣಿಕೆ ಮಾಡುವುದಿಲ್ಲ. ರೇಷ್ಮೆಹುಳುಗಳೇ ರೈತರನ್ನು ಸಾಕುತ್ತವೆ ಎಂಬ ಮಾತು ಜನಜನಿತವಾಗಿತ್ತು. 
 
ಮಳೆ ಕೊರತೆ ಪರಿಣಾಮ ಮಳೆಯಾಶ್ರಿತ ಪ್ರದೇಶದ ರೇಷ್ಮೆ ಕೃಷಿ ಕ್ಷೀಣಿಸಿತು. ಮಿಶ್ರ ಬೇಸಾಯ ಪದ್ಧತಿ  ಯಡಿ ನೆಲೆಯೂರಿದ್ದ ಹಿಪ್ಪುನೇರಳೆ ಜಾಗದಲ್ಲಿ ಹೈನುಗಾರಿಕೆ ಸ್ಥಾನ ಪಡೆಯಿತು. ಹಲವು ಕುಟುಂಬಗಳು ಸಹಕಾರ ಸಂಘ, ಬ್ಯಾಂಕ್‌ ಮತ್ತು ಹಾಲು ಒಕ್ಕೂಟದ ನೆರವಿನಡಿ ಮಿಶ್ರತಳಿ ಹಸು ಖರೀದಿಸಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡವು.
 
ಆದರೆ, ಕಳೆದ ಐದು ವರ್ಷದಿಂದ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಇದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಒಣಮೇವಿನ ಲಭ್ಯತೆಯೂ ಕಡಿಮೆಯಾಗಿದೆ. ಕೇವಲ ಪಶುಆಹಾರ ನಂಬಿಕೊಂಡು ಹಸು ಸಾಕುವಂಥಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಲಿನ ಉತ್ಪಾದನೆಯು ನಿರೀಕ್ಷೆಗೂ ಮೀರಿ ಕಡಿಮೆಯಾಗಿದೆ.
 
ಉತ್ಪಾದಕರಿಗೆ ಉತ್ತೇಜನ: ರೈತರಿಗೆ ಉತ್ತೇಜನ ನೀಡಲು ಚಾಮುಲ್‌ ಮುಂದಾಗಿದೆ. ಬರಗಾಲದಲ್ಲಿ ಹಾಲಿನ ದರ ಹೆಚ್ಚಿಸಿದೆ. ಜತೆಗೆ, ಸರ್ಕಾರ ಕೂಡ ಪ್ರೋತ್ಸಾಹಧನ ಹೆಚ್ಚಿಸಿದೆ. ಆದರೆ, ಮೇವಿನ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ಕುಸಿತ ಕಂಡಿದೆ.
 
ಪ್ರಸ್ತುತ 1 ಲೀ. ಹಾಲಿಗೆ ಒಕ್ಕೂಟದಿಂದ ₹ 26 ನೀಡಲಾಗುತ್ತಿದೆ. ಅಲ್ಲದೆ, ರಾಜ್ಯ ಸರ್ಕಾರ 1 ಲೀ. ಹಾಲಿಗೆ ₹ 5 ಪ್ರೋತ್ಸಾಹಧನ ಘೋಷಿಸಿದೆ. ಜತೆಗೆ, ಎಸ್‌ಎನ್‌ಎಫ್‌ (ಸಾಲಿಡ್ಸ್‌ ನಾಟ್‌ ಫ್ಯಾಟ್‌) 3.5 ಜಿಡ್ಡಿನಾಂಶ ಆಧರಿಸಿ ಹೆಚ್ಚಳವಾಗುವ ಪ್ರತಿ ಒಂದು ಪಾಯಿಂಗ್‌ಗೆ 17 ಪೈಸೆ ಹೆಚ್ಚುವರಿ ಹಣ ನೀಡಲಾಗುತ್ತದೆ. 
- ಕೆ.ಎಚ್‌.ಓಬಳೇಶ್‌
 
* 2 ತಿಂಗಳಿನಲ್ಲಿ ಚಾಮುಲ್‌ನ ಸಿವಿಲ್‌ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ನಂತರ ಉಪಕರಣಗಳ ಅಳವಡಿಕೆ ಮಾಡಲಾಗುತ್ತದೆ. ಆಗಸ್ಟ್‌ಗೆ  ಒಕ್ಕೂಟ ಆರಂಭಿಸಲು ಸಿದ್ಧತೆ ನಡೆದಿದೆ
-ಡಾ.ಎಂ.ಎಸ್. ವಿಜಯಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಚಾಮುಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT