ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ಆಯೋಗ ವರದಿ: ಸರ್ಕಾರಕ್ಕೆ ಒತ್ತಾಯ

ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಎನ್‌.ಮುನಿಸ್ವಾಮಿ ಹೇಳಿಕೆ
Last Updated 16 ಫೆಬ್ರುವರಿ 2017, 10:59 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣಕ್ಕಾಗಿ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಸಲ್ಲಿಸಿರುವ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ರಾಜ್ಯದಾದ್ಯಂತ ದಲಿತ ಸಂಘಟನೆಗಳನ್ನು ಒಂದೇ ವೇದಿಕೆಯಡಿ ಸಂಘಟಿಸಲಾಗುತ್ತಿದೆ’ ಎಂದು ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಮನ್ವಯಕಾರ ಎನ್‌.ಮುನಿಸ್ವಾಮಿ ತಿಳಿಸಿದರು. 
 
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳ ಮೀಸಲಾತಿ ಜಾರಿಯಿಂದ ದಲಿತರ ನಡುವಿನ ಒಗ್ಗಟನ್ನು ಕಾಯ್ದುಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ. ಆ ಕಾರಣಕ್ಕೆ ಎಲ್ಲಾ ದಲಿತ ಸಂಘಟನೆಗಳನ್ನು ಸಮನ್ವಯ ಸಮಿತಿ ಅಡಿ ತಂದು ಸಂಘಟಿತ ಹೋರಾಟ ರೂಪಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ  ಜನವರಿಯಲ್ಲಿ ಮೊದಲ ಹಂತದ ಸಭೆ ನಡೆದಿದ್ದು, ಶೀಘ್ರದಲ್ಲಿಯೇ 2ನೇ ಸುತ್ತಿನ ಸಭೆ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು. 
 
‘ಸದಾಶಿವ ಆಯೋಗ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರ ಸಚಿವ ಸಂಪುಟದ ಒಪ್ಪಿಗೆ ಪಡೆದು ಸಾರ್ವಜನಿಕ ಚರ್ಚೆಗೊಳಪಡಿಸಿ, ವರ್ಗೀಕರಣ ಜಾರಿಗೆ ತರಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಈ ಹಿಂದೆ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಿದ ಜಾತಿವಾರು ಜನಗಣತಿಯ ವರದಿಯನ್ನು ಸರ್ಕಾರ ತಕ್ಷಣ ಬಹಿರಂಗಪಡಿಸಬೇಕು ಎಂದು ಸಭೆ ಒತ್ತಾಯಿಸಿದೆ’ ಎಂದರು. 
 
‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳ ಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಬೇಕು ಎನ್ನುವ ವಿಚಾರಕ್ಕೆ ಸಭೆ ಒಪ್ಪಿಗೆ ನೀಡಿದೆ. ಅಸ್ಪೃಶ್ಯ ಸಮುದಾಯದ ಐಕ್ಯತೆಯನ್ನು ಎಚ್ಚರದಿಂದ ಕಾಪಾಡಿಕೊಂಡು ರಾಜ್ಯದಲ್ಲಿ ಅಧಿಕಾರ ಹಿಡಿಯಲು ದಲಿತರು ಪ್ರಯತ್ನಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯದಾದ್ಯಂತ ಸಂಚರಿಸಿ ದಲಿತ ಸಂಘಟನೆಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು. 
 
ಸಮನ್ವಯ ಸಮಿತಿಯ ಸಮನ್ವಯಕಾರ ಸಿ.ಎಂ.ಮುನಿಯಪ್ಪ ಮಾತನಾಡಿ, ‘ಸಂವಿಧಾನಬದ್ಧ ಮೀಸಲಾತಿ ಪಡೆಯುವ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳ ಮುಖಂಡರ ನಡುವೆ ಆರೋಗ್ಯಕರ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಸದಾಶಿವ ಆಯೋಗದ ವರದಿ ವಿಚಾರವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುತ್ತದೆ’ ಎಂದು ಹೇಳಿದರು. 
 
ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ಬಿ.ಎನ್.ಗಂಗಾಧರಪ್ಪ ಮಾತನಾಡಿ, ‘ದಲಿತ ಸಂಘಟನೆಗಳು ಈ ಹಿಂದೆ ಆರಂಭಿಸಿದ್ದ ಹೋರಾಟಗಳನ್ನು ಮುಂದುವರಿಸಿಕೊಂಡು ಬರದಿರುವುದು ಮತ್ತು ಸಂಘಟನೆಗಳ ವಿಘಟನೆಯಿಂದ ಇವತ್ತು ಈ ಸ್ಥಿತಿ ಬಂದಿದೆ. ರಾಜ್ಯದಲ್ಲಿ ದಲಿತರ ಬೃಹತ್‌ ಸಭೆ ನಡೆಸಿ, ರ್‌್ಯಾಲಿಗಳನ್ನು ಆಯೋಜಿಸುವ ಮೂಲಕ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ’ ಎಂದರು.
 
ಜಿ. ಪಂ. ಸದಸ್ಯ ಕೆ.ಸಿ.ರಾಜಾಕಾಂತ್‌ ಮಾತನಾಡಿ, ‘ರಾಜಕೀಯ ಉದ್ದೇಶಗಳಿಂದ ದಲಿತರನ್ನು ಒಡೆದು ಆಳುವ ಜತೆಗೆ ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿವೆ. ಜಾತಿಗಳನ್ನು ಪರಸ್ಪರ ಎತ್ತಿ ಕಟ್ಟುವ ಮೂಲಕ ಸದಾಶಿವ ಆಯೋಗದ ವರದಿ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ದಲಿತರೆಲ್ಲರೂ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು. 
 
ಕವಿ ಗೊಲ್ಲಹಳ್ಳಿ ಶಿವಪ್ರಕಾಶ್, ಮುಖಂಡರಾದ ಸು.ಧಾ.ವೆಂಕಟೇಶ್, ಮೇಲೂರು ಮಂಜುನಾಥ್, ಜೀವಿಕಾ ರತ್ನಮ್ಮ  ಗೋಷ್ಠಿಯಲ್ಲಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT