ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜೋವಧೆಗೆ ಸುಳ್ಳು ಪೋಣಿಸಿದ ಬಿಜೆಪಿ

ಗ್ರಾಮ ಸ್ವರಾಜ್‌ ಜಾಗೃತಿ ಅಭಿಯಾನ ಪ್ರತಿನಿಧಿಗಳ ಕಾರ್ಯಾಗಾರ
Last Updated 16 ಫೆಬ್ರುವರಿ 2017, 11:07 IST
ಅಕ್ಷರ ಗಾತ್ರ
ಶಿಡ್ಲಘಟ್ಟ : ಕಾಂಗ್ರೆಸ್‌ ತೇಜೋವಧೆಗಾಗಿ ಬಿಜೆಪಿ ನಾಯಕರು ಸುಳ್ಳಿನ ಸರಮಾಲೆಗಳನ್ನೇ ಹೆಣೆಯುತ್ತಿದ್ದಾರೆ. ಬಿಜೆಪಿಯ ಸುಳ್ಳು ಆರೋಪ ಮತ್ತು ಅಪ್ರಚಾರಗಳನ್ನು ನಾವು ಗಟ್ಟಿಯಾಗಿ ಎದುರಿಸೋಣ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.
 
ನಗರದ ಕಾಂಗ್ರೆಸ್‌ ಭವನದಲ್ಲಿ ಬುಧವಾರ ರಾಜ್ಯ ಕಾಂಗ್ರೆಸ್‌ ಸಮಿತಿ, ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಗ್ರಾಮ ಸ್ವರಾಜ್‌ ಜಾಗೃತಿ ಅಭಿಯಾನ ಪ್ರತಿನಿಧಿಗಳ ಕಾರ್ಯಾಗಾರದಲ್ಲಿ  ಅವರು ಮಾತನಾಡಿದರು. 
ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ಜನರಿಗೆ ಪಕ್ಷದ ಚಿಂತನೆ ಮತ್ತು ಕಲ್ಪನೆಯನ್ನು ತಲುಪಿಸುವ ಕೆಲಸ ಮಾಡಬೇಕು.  
 
ಗ್ರಾಮ ಮಟ್ಟದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಿದೆ. ಜನಪ್ರತಿನಿಧಿಗಳನ್ನು ಸಂಘಟಿಸಿ ಚುನಾಯಿತ ಪ್ರತಿನಿಧಿಗಳಲ್ಲಿ ಹೊಸ ಹುರುಪು, ಜಾಗೃತಿ ಮತ್ತು ರಾಷ್ಟ್ರಪ್ರಜ್ಞೆಯನ್ನು ಬಲಪಡಿಸಬೇಕು.  ಗ್ರಾಮ ಸ್ವರಾಜ್ಯ, ಅಧಿಕಾರ ವಿಕೇಂದ್ರಿಕರಣಗಳತ್ತ ಹೆಚ್ಚು ಒತ್ತು ನೀಡಿ ಪಕ್ಷವನ್ನು ತಳಮಟ್ಟದಿಂದಲೂ  ಸಂಘಟಿಸಬೇಕು ಎಂದು ಹೇಳಿದರು.
 
ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಜಿಲ್ಲಾಮಟ್ಟದ ಪದಾಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್‌ ಮನೋಭಾವದ ನಾಗರಿಕರನ್ನು ಒಗ್ಗೂಡಿಸಿ, ಪಂಚಾಯತ್‌ರಾಜ್‌ನ ಜನಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಬೇಕಿದೆ. ಗ್ರಾಮದ ಸಮಸ್ಯೆಗಳ ಬಗ್ಗೆ ದನಿ ಎತ್ತುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.
 
ಗ್ರಾಮ ಮಟ್ಟದಲ್ಲಿ ಹೊಸ ನಾಯಕರನ್ನು ಗುರುತಿಸಿ, ಕಾಂಗ್ರೆಸ್‌ನಲ್ಲಿ ಹೆಚ್ಚು ಮಹತ್ವಪೂರ್ಣ ಪಾತ್ರ ನಿರ್ವಹಿಸಲು ಪ್ರೋತ್ಸಾಹಿಸಬೇಕು. ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ವಿವರಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
 
ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ, ಪಂಚಾಯಿತಿ ಜನಪ್ರತಿನಿಧಿ ಗಳು ಹಾಗೂ ಮುಖಂಡರು ಕೇವಲ ಸರ್ಕಾರದ ಅನುದಾನಗಳನ್ನು ತಲುಪಿಸಿದರೆ ಸಾಲದು. ಶೋಷಣೆ, ಅಸ್ಪೃಶ್ಯತೆ ಹೋಗಲಾಡಿಸಬೇಕು. ಶೌಚಾಲಯ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಜನಪ್ರತಿನಿಧಿಯ ಮನೆಯಲ್ಲೂ ಸಂವಿಧಾನ, ಗಾಂಧಿ, ಅಂಬೇಡ್ಕರ್‌, ನೆಹರೂ ಅವರ ಚಿಂತನೆಗಳ ಬಗ್ಗೆ ಅರ್ಥಮಾಡಿಸಬೇಕು ಎಂದರು.
 
ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಗಾಂಧೀಜಿ, ಅಂಬೇಡ್ಕರ್‌ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ರಾಜೀವ್‌ ಗಾಂಧಿ ಪ್ರಯತ್ನಿಸಿದರು. ಅವರ ಆಶಯವನ್ನು ಜನರಿಗೆ ತಿಳಿಸಿ ಕಾಂಗ್ರೆಸ್‌ ಬಲಪಡಿಸಬೇಕು. ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಒಗ್ಗೂಡಿ ಮುಂದುವರೆಯಬೇಕು ಎಂದು  ತಿಳಿಸಿದರು.
 
ಕಾಂಗ್ರೆಸ್‌ ಜಿಲ್ಲಾ  ಘಟಕ ಅಧ್ಯಕ್ಷ ಮುನಿಕೃಷ್ಣಪ್ಪ, ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್‌, ಜಿಲ್ಲಾ ಸಂಚಾಲಕ ಎನ್‌.ಆರ್‌.ನಿರಂಜನ್‌, ರಂಗಸ್ವಾಮಿ, ಗೋಪಾಲ್‌, ಗುಡಿಯಪ್ಪ, ಸತೀಶ್‌, ಎಸ್‌.ಎಂ.ನಾರಾಯಣಸ್ವಾಮಿ, ಚಂದ್ರೇಗೌಡ, ಬಾಲಕೃಷ್ಣ, ಗುಡಿಹಳ್ಳಿ ಚಂದ್ರು, ಮುರಳಿ, ಎಚ್‌.ಎಂ.ಮುನಿಯಪ್ಪ ಮತ್ತಿತರರು  ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT