ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ, ಆದಾಯ ವೃದ್ಧಿಗೆ ‘ತಂತ್ರಾಂಶ’

ವಿಜಯಪುರ ಮಹಾನಗರ ಪಾಲಿಕೆ; ಎಂಜಿನಿಯರಿಂಗ್‌, ಕಂದಾಯ ವಿಭಾಗದಲ್ಲಿ ಅಳವಡಿಕೆ
Last Updated 16 ಫೆಬ್ರುವರಿ 2017, 11:16 IST
ಅಕ್ಷರ ಗಾತ್ರ
ವಿಜಯಪುರ:  ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಮೂರು ವರ್ಷ ಗತಿಸಿದರೂ, ನಾಗರಿಕರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸಲು ವಿಫಲವಾಗಿರುವ  ಪಾಲಿಕೆಯು, ಜನಸ್ನೇಹಿ ಆಡಳಿತ ನೀಡಲು ಈಗ ‘ತಂತ್ರಾಂಶ’ದ ಮೊರೆ ಹೋಗಿದೆ.
 
‘ಪಾಲಿಕೆ ಆಡಳಿತದ ಬೆನ್ನೆಲುಬಾದ ಎಂಜಿನಿಯರಿಂಗ್‌ ಮತ್ತು ಕಂದಾಯ ವಿಭಾಗದ ಸಮರ್ಪಕ ನಿರ್ವಹಣೆಗಾಗಿ ಗುರುವಾರದಿಂದ (ಇದೇ 16ರಂದು) ಪರಿಣಾಮಕಾರಿ ‘ತಂತ್ರಾಂಶ’ ಬಳಕೆಗೆ ಮುನ್ನುಡಿ ಬರೆಯಲು ಸಕಲ ಸಿದ್ಧತೆ ನಡೆಸಿದೆ’ ಎಂದು ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
 
ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಪರಿಣಾಮ 2010ರಿಂದ ಇಲ್ಲಿವರೆಗೂ ಆಗಿನ ನಗರಸಭೆ, ಈಗಿನ ಮಹಾನಗರ ಪಾಲಿಕೆಗೆ ₹ 260 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಗೊಂಡಿದ್ದರೂ, ಸಂಪೂರ್ಣ ಬಳಕೆ ಯಾಗಿಲ್ಲ. ಇದರ ಪರಿಣಾಮ ನಗರದ ಜನತೆ ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.
 
ಆರೇಳು ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು 361 ಕಾಮಗಾರಿ ಇಂದಿಗೂ ನಡೆಯುತ್ತಿವೆ. ₹120 ಕೋಟಿ ಪಾಲಿಕೆ ಬಳಿ ಉಳಿದಿದೆ. ಇದೇ ಸ್ಥಿತಿಯಲ್ಲಿ ನಡೆದರೆ ಈ ದಶಕ ಗತಿಸಿದರೂ ಕಾಮಗಾರಿ ಪೂರ್ಣ ಗೊಳ್ಳುವುದಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಹೊಸ ಅನುದಾನ ಬರುವುದಿಲ್ಲ’.
 
‘ಇದನ್ನು ತಪ್ಪಿಸಲಿಕ್ಕಾಗಿ ಎಂಜಿನಿಯರಿಂಗ್‌ ವಿಭಾಗಕ್ಕೆ ನೂತನ ‘ಸಾಫ್ಟ್‌ವೇರ್‌’ ಅಳವಡಿಸಲಾಗುತ್ತಿದೆ. ಈ ಮೂಲಕ ಕಾಮಗಾರಿ ಸ್ಥಿತಿಗತಿ ಅರಿಯಲು, ವಿಳಂಬ ಗತಿ ತಪ್ಪಿಸಲು, ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ಪಾಲಿಕೆ ಆಡಳಿತ ಸಜ್ಜಾಗಿದೆ’ ಎಂದು ಹರ್ಷ ಶೆಟ್ಟಿ ಹೇಳಿದರು.
ಲೋಕೋಪಯೋಗಿ ವಿಭಾಗ: ಸೆಮೈನಲ್ ಸಾಫ್ಟ್‌ವೇರ್‌ ಏಜೆನ್ಸಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗ ನಡೆಯುತ್ತಿರುವ ಕಾಮಗಾರಿ, ಮುಂದೆ ನಡೆಯುವ ಕಾಮಗಾರಿಗೆ ಸಂಬಂಧಿಸಿದ ಸಕಲ ಮಾಹಿತಿ ಇದರಲ್ಲಿ ದೊರಕಲಿದೆ.
 
ಕಾಮಗಾರಿಯ ಟೆಂಡರ್‌ ಆರಂಭದಿಂದ ಅಂತ್ಯದವರೆಗೆ ಇದೇ 16ರ ವರೆಗಿನ ಎಲ್ಲ ಮಾಹಿತಿ ಲಭ್ಯ. ಪ್ರತಿ ಕಾಮಗಾರಿಗೂ ಮೂರು ಹಂತದ ಅವಧಿ ನೀಡಲಾಗಿರುತ್ತದೆ. ಇದಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸ ಲಾಗಿರುತ್ತದೆ. ಮೊದಲ ಹಂತಕ್ಕೆ ನೀಡಿದ ನಿರ್ದಿಷ್ಟ ಸಮಯ ಪೂರ್ಣಗೊಳ್ಳುತ್ತಿ ದ್ದಂತೆ, ಕಾಮಗಾರಿ ತೃಪ್ತಿಕರವಾಗಿರ ದಿದ್ದರೆ ಸಂಬಂಧಿಸಿದ ಎಂಜಿನಿಯರ್‌, ಗುತ್ತಿಗೆದಾರನಿಗೆ ತಕ್ಷಣವೇ ನೋಟಿಸ್‌ ಜಾರಿಯಾಗುತ್ತದೆ.
 
‘ಮೂರು ಹಂತದಲ್ಲೂ ಇದೇ ಪ್ರಕ್ರಿಯೆ ನಡೆಯುತ್ತದೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯದಿದ್ದರೆ, ಗಡುವಿನೊಳಗೆ ಮುಗಿಯದಿದ್ದರೇ ಒಪ್ಪಂದದ ಪ್ರಕಾರ ಗುತ್ತಿಗೆದಾರನ ಟೆಂಡರ್ ಗುತ್ತಿಗೆ ರದ್ದಾಗುತ್ತದೆ. ಇದೇ ರೀತಿ ಸಂಬಂಧಿಸಿದ ಎಂಜಿನಿಯರ್‌ ಅಸಮರ್ಥತೆ ಬಗ್ಗೆ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗೆ ವರದಿ ಸಲ್ಲಿಸಲಾಗುವುದು’ ಎಂದು ಹರ್ಷ ಶೆಟ್ಟಿ ವಿವರಿಸಿದರು.
 
‘ಪಾಲಿಕೆಯ ಎಲ್ಲ 17 ಎಂಜಿನಿ ಯರ್‌ಗಳಿಗೆ ಲ್ಯಾಪ್‌ಟಾಪ್, ಇಂಟರ್‌ ನೆಟ್‌ ಸೌಲಭ್ಯ ಒದಗಿಸಲಾಗಿದೆ. ಕಾಮಗಾರಿಗೆ ಸಂಬಂಧಿಸಿದ್ದನ್ನು ಪ್ರತಿ ಹಂತದಲ್ಲೂ ಚಿತ್ರ ಸಮೇತ ಅಪ್‌ಡೇಟ್ ಮಾಡಬೇಕು. ಈ ವೇಳೆ ಗುಣಮಟ್ಟ ನಮಗೆ ಕುಳಿತಲ್ಲೇ ಖಾತ್ರಿಯಾಗಲಿದೆ.
 
ಈ ವ್ಯವಸ್ಥೆಯಿಂದ ಎಲ್ಲ ಕಾಮಗಾರಿ ನಿಗದಿತ ಅವಧಿಯಲ್ಲಿ ಗುಣಮಟ್ಟ ದೊಂದಿಗೆ ಮುಗಿಯುತ್ತವೆ. ನಗರದ ಅಭಿವೃದ್ಧಿಯ ಚಿತ್ರಣವೂ ಬದಲಾಗು ತ್ತದೆ. ಯಾವ ಪ್ರಭಾವಕ್ಕೂ ಮಣಿಯದೆ ಜಾರಿಗೊಳಿಸಲಾಗುತ್ತಿದೆ’ ಎಂದರು.
 
‘ಇದೇ ರೀತಿ ಕಂದಾಯ ವಿಭಾಗ ದಲ್ಲೂ ‘ತಂತ್ರಾಂಶ’ ಅಳವಡಿಕೆ ಮೂಲಕ ಸ್ವಯಂ ತೆರಿಗೆ ಘೋಷಣೆ ಸಂದರ್ಭ ನಡೆಯುವ ಭ್ರಷ್ಟಾಚಾರ ತಪ್ಪಿಸಲು, ಶೇ 50ಕ್ಕೂ ಅಧಿಕ ಪ್ರಮಾಣದಲ್ಲಿ ಸಂದಾಯವಾಗದ ತೆರಿಗೆ ಸಂಗ್ರಹಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.
 
* ಎಂಜಿನಿಯರಿಂಗ್‌ ಮತ್ತು  ಕಂದಾಯ ವಿಭಾಗಕ್ಕೆ ಚುರುಕು ಮುಟ್ಟಿಸಲು ತಂತ್ರಾಂಶ  ಬಳಸುತ್ತಿರುವ ಮೊದಲ ಪಾಲಿಕೆ ವಿಜಯಪುರ
ಹರ್ಷ ಶೆಟ್ಟಿ, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT