ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರ್‌್ಯಾಲಿ

ವಿಜಯಪುರ: ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರಿಂದ ಪ್ರತಿಭಟನೆ; ಹಕ್ಕೊತ್ತಾಯ ಮಂಡನೆ
Last Updated 16 ಫೆಬ್ರುವರಿ 2017, 11:20 IST
ಅಕ್ಷರ ಗಾತ್ರ
ವಿಜಯಪುರ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಕರ್ತವ್ಯದಿಂದ ದೂರ ಉಳಿದು ರಾಜ್ಯ ಖಾಸಗಿ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನಾ ರ್‌್ಯಾಲಿ ನಡೆಸಿದರು. 
 
ಪ್ರತಿಭಟನಾ ಜಾಥಾ ಅಂಗವಾಗಿ ನಗರದ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.ನಗರದ ಸಿದ್ಧೇಶ್ವರ ದೇವಾಲಯ ದಿಂದ ಆರಂಭಗೊಂಡ ಪ್ರತಿಭಟನಾ ಜಾಥಾ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.
 
ಸಂಘಟನೆ ಪ್ರಮುಖರು ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡದಿರುವುದರಿಂದ ಸಾಕಷ್ಟು ತೊಂದರೆ ಎದುರಾಗುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಲ ತೊಂದರೆಗಳನ್ನು ಎದುರಿಸುತ್ತಿವೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ಕಲ್ಪಿಸಿಲ್ಲ. ಇದರಿಂದಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 
 
ಕೆಲವೊಂದು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ಶಿಕ್ಷಕರು ನಿವೃತ್ತಿಯಾಗಿದ್ದಾರೆ. ವಿಜಯಪುರ ತಾಲ್ಲೂಕು ವ್ಯಾಪ್ತಿಯ ಅನುದಾನಿತ ಶಿಕ್ಷಣ ಸಂಸ್ಥೆ ಯಲ್ಲಿ ಚಿತ್ರಕಲಾ ಶಿಕ್ಷಕರನ್ನು ಹೊರತು ಪಡಿಸಿ ಉಳಿದೆಲ್ಲ ಶಿಕ್ಷಕರು ನಿವೃತ್ತರಾಗಿ ದ್ದಾರೆ. ಆದರೆ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡದಿರುವುದರಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯಾಗುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹ ತೊಂದರೆ ಯಾಗುತ್ತಿದೆ ಎಂದು ದೂರಿದರು.
 
ಶಿಕ್ಷಕ ವಿದ್ಯಾರ್ಥಿಗಳ ಅನುಪಾತ ವನ್ನು ಸಿಬಿಎಸ್ಇ, ಐಸಿಎಸ್ಐ ಮಾದರಿಯಂತೆ ನಿಗದಿಗೊಳಿಸುವುದು, ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವುದು, ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ನಿವಾರಣೆ ಮಾಡುವುದು, ವೇತನ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ  ಹಕ್ಕೊತ್ತಾಯ ಮಂಡಿಸಲಾಯಿತು.
 
ಸಂಘಟನೆ ಗೌರವಾಧ್ಯಕ್ಷ, ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ, ಯರನಾಳ ವಿರಕ್ತ ಮಠದ ಗುರುಸಂಗನ ಬಸವ ಸ್ವಾಮೀಜಿ, ಸಿಂದಗಿ ಸಾರಂಗ ಮಠದ ಪ್ರಭುಸಾರಂಗದೇವ ಶಿವಾಚಾರ್ಯ, ಎಸ್.ಡಿ.ಕುಮಾನಿ, ಚಂದ್ರಶೇಖರ ಲೋಣಿ, ಎಂ.ಬಿ. ಬಿರಾದಾರ, ಎಸ್.ಆರ್. ವಿಭೂತಿ, ಅರವಿಂದ ಹುಣಶ್ಯಾಳ, ಈಶ್ವರ ಕಂಬಾರ, ಮಕಾನದಾರ, ಜಿ.ಡಿ.ಕೋಟ್ನಾಳ, ಎಸ್.ಟಿ.ಪೋಳ ಪಾಲ್ಗೊಂಡಿದ್ದರು.
 
* ವಿದ್ಯಾ ಪ್ರಸಾರದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ತೊಡಗಿಸಿಕೊಂಡಿವೆ. ರಾಜ್ಯ ಸರ್ಕಾರ ಈ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಿತ ಕಾಪಾಡಬೇಕು
- ಡಾ.ಮಹಾದೇವ ಶಿವಾಚಾರ್ಯ, ಸಂಘಟನೆ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT