ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡ: ಅಹೋರಾತ್ರಿ ಧರಣಿ ಅಂತ್ಯ

ಸಂರಕ್ಷಿತ ಸ್ಥಾನಮಾನಕ್ಕೆ ಆಗ್ರಹಿಸಿ ನಡೆದ ಮೂರನೇ ದಿನದ ಉಪವಾಸ ಸತ್ಯಾಗ್ರಹ ಯಶಸ್ವಿ
Last Updated 16 ಫೆಬ್ರುವರಿ 2017, 11:48 IST
ಅಕ್ಷರ ಗಾತ್ರ
ಗದಗ: ಕಪ್ಪತಗುಡ್ಡವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಮರು ಘೋಷಿಸುವಂತೆ ಒತ್ತಾಯಿಸಿ ನಗರದ ಗಾಂಧಿ ವೃತ್ತದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಅಹೋರಾತ್ರಿ ಧರಣಿಗೆ ಮಣಿದ ಸರ್ಕಾರ ಫೆ.20 ರಂದು ರಾಜ್ಯ ವನ್ಯಜೀವಿ ಮಂಡಳಿ ಸಭೆ ಕರೆಯಲು ನಿರ್ಧಾರ ಕೈಗೊಂಡಿದೆ.
 
ಸಭೆಯಲ್ಲಿ ಕಪ್ಪತಗುಡ್ಡದ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು, ಬುಧವಾರ ರಾತ್ರಿ 8.45ರ ಸುಮಾರಿಗೆ ಧರಣಿ ನೇತೃತ್ವದ ವಹಿಸಿದ್ದ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
 
ಜಿಲ್ಲಾ ಉಸ್ತುವಾರಿ ಸಚಿವರು ದಿನ ನಿಗದಿ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೂರು ದಿನಗಳ ಅಹೋರಾತ್ರಿ ಧರಣಿ ಬುಧ ವಾರ ರಾತ್ರಿ ಅಂತ್ಯಗೊಂಡಿತು. ಉಪ ವಾಸ ಸತ್ಯಾಗ್ರಹ ಕೈಗೊಂಡಿದ್ದ ಹೋರಾಟ ಗಾರರಿಗೆ ಸಿದ್ಧಲಿಂಗ ಸ್ವಾಮೀಜಿ ಎಳ ನೀರು ನೀಡಿ, ಧರಣಿ ಕೊನೆಗೊಳಿಸಿದರು.
 
ಇದಕ್ಕೂ ಮೊದಲು ನಡೆದ ಪ್ರತಿಭಟನೆಯಲ್ಲಿ ಕಪ್ಪತಗುಡ್ಡವನ್ನು ಸಂರ ಕ್ಷಿತ ಮೀಸಲು ಅರಣ್ಯ ಪ್ರದೇಶ ಎಂದು ಮರು ಘೋಷಣೆ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ.
 
ಸರ್ಕಾರಕ್ಕೆ ಬದ್ಧತೆ ಇದ್ದರೆ, ಪರಿಸರ ಪರ ಕಾಳಜಿ ಇದ್ದರೆ ಶೀಘ್ರದಲ್ಲೇ ಆದೇಶ ಹೊರಡಿಸಲಿ ಎಂದು ಪ್ರತಿಭಟನಾಕಾ ರರು ಆಗ್ರಹಿಸಿದರು. 
ಬುಧವಾರ ಹೋರಾಟಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಕಪ್ಪತಗುಡ್ಡ ವ್ಯಾಪ್ತಿಯ ಗ್ರಾಮಗಳಿಂದ ನೂರಾರು ಜನರು ಪಾದಯಾತ್ರೆಯಲ್ಲಿ ಗದುಗಿಗೆ ಬಂದು ಧರಣಿಯಲ್ಲಿ ಭಾಗವಹಿಸಿದರು. ಕೊಟುಮಚಗಿ ಗ್ರಾಮದ ಅಂಧರಾದ ಬಸವಾನಂದ ಸ್ವಾಮಿಜಿ ನೇತೃತ್ವದಲ್ಲಿ ನೂರಾರು ಜನರು ಪಾದಯಾತ್ರೆ ಮೂಲಕ ಧರಣಿ ವೇದಿಕೆಗೆ ಆಗಮಿಸಿದರು.
 
ನಗರದ ಮೈಲಾರಪ್ಪ ಮೆಣಸಗಿ ಕಾಲೇಜು, ಬಸವೇಶ್ವರ ಕಾಲೇಜು ಸೇರಿದಂತೆ ನಗರದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೂರು ದಿನಗಳಲ್ಲಿ 40ಕ್ಕೂ ಹೆಚ್ಚು ಸಂಘಟನೆಗಳು, 10 ಸಾವಿರಕ್ಕೂ ಹೆಚ್ಚು ಮಂದಿ ಧರಣಿಗೆ ಬೆಂಬಲ ಸೂಚಿಸಿದ್ದಾರೆ. 
 
ವಕೀಲರಿಂದ ಬೈಕ್‌ ರ್‍ಯಾಲಿ: ಕಲಾಪ ಬಹಿ ಷ್ಕರಿಸಿ, ಬೈಕ್‌ ರ್‍ಯಾಲಿ ಮೂಲಕ ಜಿಲ್ಲಾ ವಕೀಲರ ಸಂಘ  ಹೋರಾಟಕ್ಕೆ ಬೆಂಬಲ ಸೂಚಿಸಿದರು.
 
ಕುರಿಗಳೊಂದಿಗೆ ಪ್ರತಿಭಟನೆ
 
ಹಾಲುಮತ ಮಹಾಸಭಾದ ಸದಸ್ಯರು ಕುರಿಗಳೊಂದಿಗೆ ಧರಣಿ ವೇದಿಕೆ ಎದುರು ಪ್ರತಿಭಟನೆ ನಡೆಸಿದರು. ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನ ಮುಂದುವರಿಸದಿದ್ದರೆ ವಿಧಾನಸಭೆಗೆ ಲಕ್ಷ ಕುರಿಗಳನ್ನು ನುಗ್ಗಿಸುವುದಾಗಿ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್‌. ಗೌಡರ ಹೇಳಿದರು. ಬಳಿಕ ಧರಣಿ ವೇದಿಕೆ ಮುಂಭಾಗದಲ್ಲಿ ಬಲ್ದೋಟಾ ಕಂಪೆನಿ ಮತ್ತು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ಹೊಸಳ್ಳಿಯ ಬೂದೀಶ್ವರ  ಸ್ವಾಮೀಜಿ ಇದ್ದರು.

26 ಮಂದಿ ಉಪವಾಸ; ಸಂರಕ್ಷಿತ ಸ್ಥಾನಮಾನಕ್ಕಾಗಿ ಆಗ್ರಹಿಸಿ ಫೆ.13 ರಿಂದ 7 ಮಂದಿ ನಿರಂತರವಾಗಿ ಉಪವಾಸ ಕೈಗೊಂಡಿದ್ದಾರೆ. ಮಂಗಳವಾರ ಈ ಸಂಖ್ಯೆ 20ಕ್ಕೆ ಏರಿಕೆಯಾಯಿತು. ಬುಧವಾರ ಉಪವಾಸ ನಿರತರ ಸಂಖ್ಯೆ 26ಕ್ಕೆ ಏರಿಕೆಯಾಯಿತು. ಎಸ್.ಆರ್. ಹಿರೇಮಠ ಕೂಡ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಮೂವರು ಅಸ್ವಸ್ಥ:  ಉಪವಾಸ ನಿರತರಲ್ಲಿ ಬುಧವಾರ ಬೆಳಿಗ್ಗೆ ಮೂವರು ಅಸ್ವಸ್ಥಗೊಂಡರು. ಜನಸಂಗ್ರಾಮ ಪರಿಷತ್‌ನ ಪ್ರತಿಮಾ ನಾಯಕ್‌ ಅವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಯಿತು. ಸಕ್ಕರೆ ಪ್ರಮಾಣ ಕಡಿಮೆಯಾದ್ದರಿಂದ ನಿತ್ರಾಣಗೊಂಡ ಪ್ರಭುಗೌಡ ಪಾಟೀಲ ಎಂಬುವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತಲೆಸುತ್ತು ಕಾಣಿಸಿಕೊಂಡ ವಿನೂತನ ಸಂಸ್ಥೆಯ ನಿಂಗರಾಜ ನಿಡುವಣಿ ಅವರಿಗೆ ಧರಣಿ ವೇದಿಕೆಯಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
 
*ಸರ್ಕಾರ ಸಂಪೂರ್ಣ ಕಪ್ಪತಗುಡ್ಡವನ್ನೇ ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು. ತುಂಗಭದ್ರಾ ನದಿ ನೀರಿನಿಂದ  ಕಪ್ಪತ ಗುಡ್ಡದ ಕೆರೆಗಳನ್ನು ತುಂಬಿಸಬೇಕು
-ಶಿವಕುಮಾರ ಸ್ವಾಮೀಜಿ, ಕಪೋತಗಿರಿ ನಂದಿವೇರಿ ಮಠ
 
* ಚರ್ಮಕ್ಕೆ ಬೆಂಕಿ ಹಚ್ಚಿದರೂ ಸುಡಲಾರದ ಸರ್ಕಾರ ಇದು. ಕಪ್ಪತಗುಡ್ಡ ಸಂರಕ್ಷಣೆ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆ ಇಲ್ಲ. ರೈತರ ಶಾಪ ಸರ್ಕಾರಕ್ಕೆ ತಟ್ಟುತ್ತದೆ
-ನಿಜಗುಣಪ್ರಭು ಸ್ವಾಮೀಜಿ, ತೋಂಟದಾರ್ಯ ಶಾಖಾಮಠ, ಮುಂಡರಗಿ
 
* ಕಪ್ಪತಗುಡ್ಡ ಜಿಲ್ಲೆಗೆ ಮಹಾತಾಯಿ. ಸರ್ಕಾರವು ತನ್ನ ಜವಾಬ್ದಾರಿ ಅರಿತು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸ್ಥಾನಮಾನವನ್ನು ವಾಪಸ್‌ ನೀಡಬೇಕು
ಅನ್ನದಾನೀಶ್ವರ ಸ್ವಾಮೀಜಿ, ಮುಂಡರಗಿ ಅನ್ನದಾನೀಶ್ವ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT