ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗುಣ ಮತ್ತು ಅರಸ್‌ರ ‘ವರ್ಧನ’

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಈ ನನ್ನ ಕನಸಿನ ಕೂಸು ರೀಮೇಕ್ ಅಲ್ಲ!’
ನಿರ್ದೇಶಕ ಎಸ್‌.ಕೆ. ನಾಗೇಂದ್ರ ಅರಸ್ ಅವರು ತಮ್ಮ ‘ವರ್ಧನ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಆಡಿದ ಈ ಮಾತಿಗೆ ಕಾರಣ ಸ್ಪಷ್ಟವಾಗಿತ್ತು. ಇತ್ತೀಚಿನ ಕೆಲವು ನಿರ್ದೇಶಕರು ರೀಮೇಕ್ ವಿಷಯವನ್ನು ಮುಚ್ಚಿಟ್ಟು, ‘ವಿದೇಶಿ ಭಾಷೆಯ ಚಿತ್ರ ನಮಗೆ ಸ್ಫೂರ್ತಿ’ ಎಂದು ಹೇಳಿಕೊಳ್ಳುವುದಿದೆ. ಆ ಸಾಲಿಗೆ ನಾವು ಸೇರಿದವರಲ್ಲ ಎನ್ನುವುದನ್ನು ಅರಸು ಹೇಳುವಂತಿತ್ತು.

ಮಾತು ಮುಂದುವರಿಸಿದ ನಿರ್ದೇಶಕರು, ‘ಅರಸ್ ಕೈಗುಣ ಚನ್ನಾಗಿದೆ. ಅವನ ಚಿತ್ರದಲ್ಲಿ ಮಾಡಿದವರೆಲ್ಲ ಚೆನ್ನಾಗಿ ಬೆಳೆಯುತ್ತಾರೆ ಎಂದು ಎಲ್ಲರೂ ಹೇಳುತ್ತಾರೆ. ನನ್ನ ಬಗೆಗಿನ ಈ ಮಾತು ನಿಜವೂ ಇರಬಹುದು. ಯಾಕೆಂದರೆ, ನಾನು ನಿರ್ದೇಶಿಸಿದ ಚಿತ್ರಗಳಲ್ಲಿ ಪರಿಚಯಿಸಿದ ನಟರೀಗ ಒಂದು ಹಂತಕ್ಕೆ ಬೆಳೆದಿದ್ದಾರೆ. ಅಂತೆಯೇ, ‘ವರ್ಧನ’ನಾಗಿ ಕಾಣಿಸಿಕೊಂಡಿರುವ ಹರ್ಷ ಕೂಡ ಬೆಳೆಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಬೆಳೆದವರು ತಾವು ಬಂದ ಹಾದಿಯ ಎಂದಿಗೂ ಮರೆಯಬಾರದು’ ಎಂಬ ಕಿವಿಮಾತನ್ನೂ ಹೇಳಿದರು.

‘ನನ್ನ ಕಲ್ಪನೆಯನ್ನು  ಮೀರಿ ಎಲ್ಲ ನಟರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆ್ಯಕ್ಷನ್‌, ಕಾಮಿಡಿ ಹಾಗೂ ಸೆಂಟಿಮೆಂಟ್ ಈ ಚಿತ್ರದಲ್ಲಿ ಬೆರೆತಿದ್ದು, ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯಲಿದೆ’ ಎಂದು ನಿರ್ದೇಶಕರು ಮಾತಿಗೆ ವಿರಾಮ ಹಾಕಿದರು.

‘ಗಜಪಡೆ’ ಚಿತ್ರದ ಡಬ್ಬಿಂಗ್‌ ಮಾಡುವಾಗ ಜೊತೆಗಿದ್ದ ಅರಸ್ ಸರ್, ತೆರೆ ಮೇಲೆ ಮೂಡುತ್ತಿದ್ದ ದೃಶ್ಯಗಳನ್ನು ನೋಡಿಯೇ ತಮ್ಮ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು. ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾದರೂ, ಈ ಚಿತ್ರ ನನಗೆ ಹೊಸಯಾನದ ಅನುಭವ ನೀಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು ನಾಯಕ ನಟ ಹರ್ಷ.

ಇದುವರೆಗೆ ಹಿನ್ನೆಲೆ ಸಂಗೀತದಲ್ಲಷ್ಟೆ ಕೆಲಸ ಮಾಡುತ್ತಿದ್ದ ಮ್ಯಾಥ್ಯೋಸ್‌ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ‘ಎಷ್ಟು ಅಂತಾ ಇದೇ ಕೆಲಸ ಮಾಡಿಕೊಂಡಿರುವೆ. ನೀನು ಇಂಡಿಪೆಂಡೆಂಟ್ ಆಗಿ ಮ್ಯೂಸಿಕ್ ಡೈರೆಕ್ಟ್‌ ಮಾಡು’ ಎಂದು ಅರಸ್ ಕರೆದು ಕೆಲಸ ಕೊಟ್ಟಿದ್ದನ್ನು ಮ್ಯಾಥ್ಯೋಸ್ ನೆನಪಿಸಿಕೊಂಡರು.

ಖಳನ ಪಾತ್ರಗಳಲ್ಲಿ ಗಮನ ಸೆಳೆದಿದ್ದ ಪೆಟ್ರೊಲ್ ಪ್ರಸನ್ನ, ಈ ಚಿತ್ರದಲ್ಲಿ ಕಾಮಿಡಿ ಸಾರಥ್ಯ ವಹಿಸಿದ್ದಾರಂತೆ. ‘ಈ ಚಿತ್ರ ನೋಡಿದವರು ಇನ್ಮುಂದೆ ನನ್ನನ್ನು ಡಿಂಗ್ ರಾಜ ಎಂದು ಕರೆದರೂ ಆಶ್ಚರ್ಯವಿಲ್ಲ’ ಎಂದು ಪ್ರಸನ್ನ ತಮ್ಮ ಪಾತ್ರದ ಹೆಸರನ್ನು ಬಿಟ್ಟುಕೊಟ್ಟರು.

‘ಕಥೆ ಮೆಚ್ಚಿ ನಿರ್ಮಾಣ ಮಾಡಿದ್ದೇನೆ. ಒಳ್ಳೆಯ ನಿರ್ದೇಶಕರ ಜತೆ ಸಿನಿಮಾ ಮಾಡಿದ ತೃಪ್ತಿ ನನಗಿದೆ’ ಎಂದು ನಿರ್ಮಾಪಕ ಕೆ. ಸುಧಾಕರ್ ಮಾತು ಮುಗಿಸಿದರು.

ರಾಕೇಶ್ ಸಿ. ತಿಲಕ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ನಾಯಕಿ ನೇಹಾ ಪಾಟೀಲ್ ಮತ್ತು ಚಿಕ್ಕಣ್ಣ ಪತ್ರಿಕಾಗೋಷ್ಠಿಯಲ್ಲಿ ಕಾಣಲಿಲ್ಲ. ಜಾಕ್ ಮಂಜು ವಿತರಕರಾಗಿರುವ ಚಿತ್ರವು ಇಂದು (ಫೆ. 17) ರಾಜ್ಯದಾದ್ಯಂತ ಸುಮಾರು 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT