ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಲರ್‌ನಲ್ಲಿ ಉಪ್ಪು–ಹುಳಿ ಸಿನಿಮಾದಲ್ಲಿ ಉಳಿದದ್ದು ‘ತಿಳಿ’

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘‘ಮೊದಲ ಬಾರಿ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದಾಗ ಅದು ಯಾರನ್ನೂ ತಲುಪಿರಲಿಲ್ಲ. ನಾನೇ ಯಾರಿಗಾದರೂ ಸಿನಿಮಾ ಹೆಸರು ಹೇಳಿದಾಗ, ದೇವರ ಸಿನಿಮಾನಾ ಎಂದು ಕೇಳುತ್ತಿದ್ದರು. ಅದಕ್ಕೇ ‘ದೇವ್ರಾಣೆಗೂ ದೇವ್ರ್ ಸಿನಿಮಾ ಅಲ್ಲ’ ಎಂದು ಅಡಿಟಿಪ್ಪಣಿ ಇಟ್ಟೆ. ನಂತರ ದ್ವಂದ್ವಾರ್ಥವಿರುವ ಹೊಸ ಟ್ರೈಲರ್ ಬಿಡುಗಡೆ ಮಾಡಿದಾಗ ಅದು ತುಂಬಾ ಜನರಿಗೆ ತಲುಪಿತು. ಹಾಡುಗಳೂ ಹಿಟ್ ಆದವು’’.

ಇದು ‘ಶ್ರೀನಿವಾಸ ಕಲ್ಯಾಣ’ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂ.ಜಿ. ಶ್ರೀನಿವಾಸ್ ತಮ್ಮ ಚಿತ್ರದ ಬಗ್ಗೆ ಹೇಳಿದ ಮಾತುಗಳು. ಚಿತ್ರ ಇಂದು (ಫೆ. 17) ತೆರೆಗೆ ಬರುತ್ತಿದೆ.

‘ಟ್ರೈಲರ್ ರೀತಿ ಇಡೀ ಸಿನಿಮಾ ಇರುವುದಿಲ್ಲ. ಜನರನ್ನು ಸೆಳೆಯಲಿಕ್ಕಾಗಿ ಮಾತ್ರ ಈ ರೀತಿಯ ಡಬಲ್ ಮೀನಿಂಗ್ ಇದೆ. ಟ್ರೈಲರ್‌ನಲ್ಲಿರುವ ಅಪಾರ್ಥದ ಸಂಭಾಷಣೆಗಳು ಸಿನಿಮಾದ ದೃಶ್ಯಗಳ ಜೊತೆಗೆ ಬೇರೆಯದೇ ಅರ್ಥ ಹೊಮ್ಮಿಸುತ್ತವೆ’ ಎಂದು ಅವರು ವಿವರಣೆ ನೀಡಿದರು.

ಚಿತ್ರದ ಮುಖ್ಯ ಪಾತ್ರಗಳು ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ಪ್ರತಿನಿಧಿಸುತ್ತವೆ. ಈ ಎಲ್ಲ ಪಾತ್ರಗಳೂ ಸಾಗುವುದು ಮೋಕ್ಷದ ಕಡೆಗೆ.

ಟ್ರೈಲರ್‌ನಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳನ್ನು ಹೇಳಿದ ರಂಗಭೂಮಿ ಕಲಾವಿದೆ ನಿಖಿಲಾ ರಾವ್, ‘ನನಗೂ ಆ ಸಂಭಾಷಣೆ ಹೇಳಲು ಕಷ್ಟವೇ ಆಯಿತು. ಆದರೆ ಪಾತ್ರ ಅದನ್ನು ಬಯಸಿತ್ತು’ ಎಂದರು. ಕ್ರೋಧವನ್ನು ಪ್ರತಿನಿಧಿಸುವ ಅವರ ಪಾತ್ರ ಸೂಕ್ಷ್ಮ ಮತ್ತು ಬೋಲ್ಡ್ ಆಗಿದೆಯಂತೆ. ಧಾರಾವಾಹಿ ನಟಿ ಕವಿತಾ ಮುಗ್ಧ ಶಾಲಾ ಬಾಲಕಿಯಾಗಿ ಮಾತ್ಸರ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

‘ಹಾಡುಗಳಲ್ಲಿ ಕಮರ್ಷಿಯಲ್ ಅಂಶಗಳೊಂದಿಗೇ ಪ್ರಯೋಗವನ್ನೂ ಮಾಡಿದ್ದೇವೆ’ ಎಂದರು ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್. ರಾಘವೇಂದ್ರ ಥಾಣೆ ಮತ್ತೊಬ್ಬ ಸಂಗೀತ ನಿರ್ದೇಶಕ. ಯಾವುದೇ ಕೃತಕ ಬೆಳಕನ್ನು ಬಳಸದೆ ಸಹಜ ಬೆಳಕಿನಲ್ಲೇ ಚಿತ್ರೀಕರಣ ಮಾಡಿದ್ದಾಗಿ ಹೇಳಿಕೊಂಡರು ಛಾಯಾಗ್ರಾಹಕ ಅಶ್ವಿನ್ ಕದಂಬೂರು.

ಚಿತ್ರೀಕರಣಕ್ಕಿಂತ ಹೆಚ್ಚಿನ ಸಮಯವನ್ನು ವಿಕ್ರಮ್ ಶ್ರೀಧರ್ ಸಂಕಲನಕ್ಕೇ ತೆಗೆದುಕೊಂಡಿದ್ದಾರಂತೆ. ‘ನಾವು ಅಳವಡಿಸಿಕೊಂಡ ಕಾರ್ಯವಿಧಾನದಿಂದಾಗಿ ಅತೀ ಕಡಿಮೆ ಬಜೆಟ್‌ನಲ್ಲಿ ಚಿತ್ರೀಕರಣ ಮುಗಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ಭರತ್ ಜೈನ್ ನಿರ್ಮಾಪಕ. ಅಚ್ಯುತ ರಾವ್, ದತ್ತಣ್ಣ, ಆರ್.ಟಿ. ರಮಾ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಊಟಿ, ಉತ್ತರ ಕನ್ನಡದ ಅಂಕೋಲಾ, ಶಿರಸಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT