ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಧಿ’ ಎಂಬ ಸಪೂರ ಸುಂದರಿ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾನು ನಿರ್ದೇಶಕಿ ಆಗಬೇಕು! ಇದು ನಿಧಿ ಕುಶಾಲಪ್ಪ ಅವರ ಆಸೆ. ನಟಿ ಆಗಬೇಕು ಎನ್ನುವ ಆಸೆಯಿಂದ ಚಿತ್ರರಂಗಕ್ಕೆ ಬರುವವರು ಹೆಚ್ಚಾಗಿರುವ ಸಂದರ್ಭದಲ್ಲಿ ನಿಧಿ ನಿರ್ದೇಶಕಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ, ಸದ್ಯಕ್ಕೆ ಅವರಿಗೆ ದೊರೆಯುತ್ತಿರುವುದು ನಟನೆಯ ಅವಕಾಶಗಳು!

ಆಕರ್ಷಕ ಮೈಮಾಟ, ಸಾಮಾನ್ಯ ಎತ್ತರ, ಹೊಳೆಯುವ ಕಣ್ಣುಗಳು ಹಾಗೂ ನೋಟದಲ್ಲಿ ವಿಶೇಷ ಸೆಳೆತವಿರುವ ಈ ಸ್ನಿಗ್ಧ ಸುಂದರಿ ಕೊಡಗಿನವರು. ಮಾಧ್ಯಮ ಕ್ಷೇತ್ರದ ಬಗೆಗಿರುವ ಕುತೂಹಲ ಮತ್ತು ಆಸಕ್ತಿಯಿಂದಾಗಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. ಹುಡುಕಿಕೊಂಡು ಬಂದ ಅವಕಾಶದಿಂದಾಗಿ ಅಚಾನಕ್‌ ಆಗಿ ಸಿನಿಮಾಗೆ ಬಂದ ನಿಧಿ, ಇದೀಗ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವ ನಟಿ.

‘ಮಂಗಳೂರಿನಲ್ಲಿ ಓದುತ್ತಿದ್ದಾಗಲೇ ‘ನನ್ ಲವ್‌ ಟ್ರ್ಯಾಕ್‌’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದು ನನಗೆ ದೊಡ್ಡ ಅಚ್ಚರಿ. ಅಲ್ಲಿಯವರೆಗೆ ನಾನು ಸಿನಿಮಾದಲ್ಲಿ ನಟಿಸುತ್ತೇನೆಂಬ ಕನಸು ಕೂಡ ಕಂಡಿರಲಿಲ್ಲ. ಮಾಧ್ಯಮದ ವಿದ್ಯಾರ್ಥಿಯಾಗಿದ್ದ ನನಗೆ, ಪ್ರಭಾವಿ ಮಾಧ್ಯಮವಾದ ಸಿನಿಮಾ ಮೂಲಕ ನನ್ನ ಆಲೋಚನೆಗಳನ್ನು ಹೇಳಿಕೊಳ್ಳಬೇಕು ಎಂದಷ್ಟೆ ಎಣಿಸಿದ್ದೆ.

ಮೊದಲ ಸಿನಿಮಾ ಹೆಸರು ಮಾಡದಿದ್ದರೂ ಒಳ್ಳೆಯ ಅನುಭವ ನೀಡಿತು. ಚಿತ್ರರಂಗದ ಬಗ್ಗೆ ನನಗೆ ಸ್ವಲ್ಪಮಟ್ಟಿಗೆ ಸ್ಪಷ್ಟತೆ ಸಿಕ್ಕಿತು’ ಎಂದು ನಿಧಿ ತಮ್ಮ ಮೊದಲ ಚಿತ್ರದ ಅನುಭವನ್ನು ನೆನೆಯುತ್ತಾರೆ.

ಓದಿನ ಮಧ್ಯೆಯೇ ಬಿಡುವು ಮಾಡಿಕೊಂಡು ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿದ್ದ ನಿಧಿ, ನಂತರ ಸಂಪೂರ್ಣ ಗಮನ ಕೊಟ್ಟಿದ್ದು ವಿದ್ಯಾಭ್ಯಾಸದ ಕಡೆಗೆ. ಮತ್ತೆ ಚಿತ್ರರಂಗದತ್ತ ತಿರುಗಿದಾಗ ಸಿಕ್ಕ ಸಿನಿಮಾವೇ ‘ಪ್ರೀತಿ ಪ್ರೇಮ’. ಅಂದಹಾಗೆ ಈ ಚಿತ್ರ ತೆಲುಗಿನ ‘ಈ ರೋಜುಲು’ ಚಿತ್ರದ ರಿಮೇಕ್.
ಸಾರ್ವಕಾಲಿಕ ಸಬ್ಜೆಕ್ಟ್‌ ಸುತ್ತ

‘ಪ್ರೀತಿ ಪ್ರೇಮ’ ಎಂಬ ಶೀರ್ಷಿಕೆಯಲ್ಲೇ ಒಂದು ಸೆಳೆತವಿದೆ. ರೀಮೇಕ್ ಚಿತ್ರವಾದರೂ ಕನ್ನಡದ ಮಟ್ಟಿಗೆ ಈ ಕಥೆ ಹೊಸದು. ಪ್ರೇಮಕಥೆ ಎಲ್ಲ ಕಾಲಕ್ಕೂ ಸಲ್ಲುವಂತಹದ್ದು. ನಮ್ಮ ಚಿತ್ರದ ಕಥೆಯೂ ಈ ಕಾಲಕ್ಕೆ ಹೇಳಲೇಬೇಕಾದಂತಹ ಚಿತ್ರ. ಮೂಲ ಕಥೆಯನ್ನು ನಿರ್ದೇಶಕ ಕಾಶಿ ವಿಶ್ವನಾಥ್ ಈ ನೆಲಕ್ಕೆ ತಕ್ಕಂತೆ ಒಗ್ಗಿಸಿ ತೆರೆಗೆ ತಂದಿದ್ದಾರೆ’ ಎಂದು ನಿಧಿ ತಮ್ಮ ಚಿತ್ರದ ಬಗ್ಗೆ ಹೇಳುತ್ತಾರೆ.

‘ಹುಡುಗಿಯೊಬ್ಬಳು ಪರಿಚಯವಾದ ತಕ್ಷಣ, ಹುಡುಗರಿಗೆ ಎಲ್ಲೋ ಒಂದು ಕಡೆ ಪ್ರೀತಿಯ ಬೀಜ ಮೊಳಕೆಯೊಡೆಯುತ್ತದೆ. ಹುಡುಗಿಯೇನಾದರೂ ಸ್ವಲ್ಪ ಹತ್ತಿರವಾದರೆ, ಆಕೆಗೆ ನನ್ನ ಮೇಲೆ ಪ್ರೇಮ ಇರುವುದು ಖಚಿತ ಅಂದುಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಹುಡುಗಿಯರೆಂದರೆ ಕೇವಲ ಯೂಸ್ ಅಂಡ್ ಥ್ರೋ.

ಹುಡುಗಿಯರಿಗೂ ಈ ಮಾತು ಅನ್ವಯಿಸುತ್ತದೆ. ಇಂತಹ ಮನಸ್ಥಿತಿಯ ಪ್ರೀತಿ ಮತ್ತು ಸ್ನೇಹಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಹುಡುಗ–ಹುಡುಗಿಯರಿಬ್ಬರೂ ಸಂಬಂಧಿಸಿಕೊಂಡು ನೋಡಬಹುದಾದ ಚಿತ್ರವಿದು.

ಹುಡುಗರೆಂದರೆ ಅಷ್ಟಾಗಿ ಇಷ್ಟಪಡದ ಸ್ವಲ್ಪ ಘಾಟಿ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ’ ಎಂದು ಅವರು ತಮ್ಮ ಪಾತ್ರವನ್ನು ವಿವರಿಸುತ್ತಾರೆ. ಸಿನಿಮಾ ಸೆಳೆತಕ್ಕೆ ಸಿಕ್ಕವರು ಅಭಿನಯ, ನೃತ್ಯ ಸೇರಿದಂತೆ ಅಗತ್ಯವಾದ ತರಬೇತಿಗಳನ್ನು ನಿದ್ದೆಗೆಟ್ಟು ಕಲಿತು ಅಣಿಯಾಗುತ್ತಾರೆ. ಆದರೆ, ನಿಧಿಗೆ ಈ ಮಾತು ಅನ್ವಯವಾಗುವುದಿಲ್ಲ.

ಅವರೇ ಹೇಳುವಂತೆ, ‘ಶಾಲಾ– ಕಾಲೇಜು ದಿನಗಳಿಂದಲೂ ನಾನು ವೇದಿಕೆ ಹತ್ತಿದ್ದೇನೆ. ಹಾಗಾಗಿ, ವೇದಿಕೆ ಭಯ ಇಲ್ಲ. ಪತ್ರಿಕೋದ್ಯಮ ವಿದ್ಯಾರ್ಥಿಯಾದ್ದರಿಂದ ಕ್ಯಾಮೆರಾಗೆ ಕಾಣಿಸಿಕೊಳ್ಳುವಾಗ ಇರಬೇಕಾದ ಪ್ರಜ್ಞೆ ಮತ್ತು ಸೌಂದರ್ಯಪ್ರಜ್ಞೆ  ತಕ್ಕಮಟ್ಟಿಗೆ ಇದೆ. ಈ ಎಲ್ಲಾ ಹಿನ್ನೆಲೆ ಇದ್ದಿದ್ದರಿಂದ ಅಭಿನಯ ತರಬೇತಿ ಇಲ್ಲದಿದ್ದರೂ ನಟನೆ ಕಷ್ಟವೆನಿಸಲಿಲ್ಲ’ ಎನ್ನುತ್ತಾರೆ ನಿಧಿ.

ನಟನೆಯ ಜೊತೆಜೊತೆಗೆ...
‘ಪ್ರೀತಿ–ಪ್ರೇಮ’ದ ಬೆನ್ನಲ್ಲೇ ಅವರು, ‘ಕುಮಾರ್ 21ಎಫ್‌’ ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ನಟ ದೇವರಾಜ್ ಅವರ ಎರಡನೇ ಪುತ್ರ ಪ್ರಣಾಮ್ ಅವರನ್ನು ನಾಯಕ ನಟನಾಗಿ ಪರಿಚಯಿಸಲಾಗುತ್ತಿರುವ ಈ ಚಿತ್ರದಲ್ಲಿ, ‘ತಮಗೆ ಬೋಲ್ಡ್ ಪಾತ್ರ ಸಿಕ್ಕಿದೆ’ ಎಂದು ನಿಧಿ ಖುಷಿ ವ್ಯಕ್ತಪಡಿಸುತ್ತಾರೆ.

‘ಸಿನಿಮಾ ನನಗೆ ಫ್ಯಾಶನ್. ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳುವಾಗ, ನಾಯಕಿ ಬೇಕೆಂಬ ಕಾರಣಕ್ಕೆ ಆ ಪಾತ್ರವನ್ನು ಸೃಷ್ಟಿಸಿದ್ದರೆ ನಾನು ಒಪ್ಪಿಕೊಳ್ಳಲಾರೆ. ಕೆಲವೇ ನಿಮಿಷ ಕಾಣಿಸಿಕೊಂಡರೂ ಪಾತ್ರಕ್ಕೆ ಮಹತ್ವವಿರಬೇಕು. ಅಲ್ಲದೆ, ನನ್ನಿಂದ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯ ಎನಿಸಿದರಷ್ಟೆ ಒಪ್ಪಿಕೊಳ್ಳುತ್ತೇನೆ’ ಎಂದು ತಾವು ಸಿನಿಮಾ ಒಪ್ಪಿಕೊಳ್ಳಲು ಅನುಸರಿಸುವ ಮಾನದಂಡ ಕುರಿತು ಹೇಳುತ್ತಾರೆ.

ನಟನೆಯ ಜೊತೆಗೆ ನಿರ್ದೇಶಕಿಯ ಕನಸನ್ನೂ ಪೋಷಿಸಿಕೊಂಡು ಬರುತ್ತಿರುವ ನಿಧಿ, ‘ಸಮಯ ಸಿಕ್ಕಾಗಲೆಲ್ಲಾ ಎಲ್ಲಾ ಭಾಷೆಯ ಉತ್ತಮ ಚಿತ್ರಗಳನ್ನು ನೋಡುತ್ತೇನೆ. ಮುಖ್ಯವೆನಿಸಿದ್ದನ್ನು ಟಿಪ್ಪಣಿ ರೂಪದಲ್ಲಿ ಬರೆದಿಡುತ್ತೇನೆ. ಭವಿಷ್ಯದಲ್ಲಿ ಸಿನಿಮಾ ನಿರ್ದೇಶಿಸಬೇಕೆಂಬ ಕನಸಿಗೆ ಸದ್ಯ ಇದೇ ನನ್ನ ಪೂರ್ವತಯಾರಿ’ ಎಂದು ನಗು ಚೆಲ್ಲುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT