ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜುತ್ತ ಉಜ್ಜುತ್ತ ಜೀವಸ್ಪರ್ಶ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಉಪ್ಪಿನ ಕಾಗದ’ ಎಂದರೆ ನನಗೆ ನೆನಪಾಗುವುದು ನನ್ನ ಕಾಲೇಜು ದಿನಗಳು. ಎಂಜಿನಿಯರಿಂಗ್ ಓದುವಾಗ ಮರಗೆತ್ತನೆಯ ಪಾಠ ಮಾಡಲು ಒಬ್ಬ ಶಿಕ್ಷಕರಿದ್ದರು. ಅವರಿಗೆ ಇಂಗ್ಲಿಷ್ ದೂರ. ಅವರು ನಮ್ಮಿಂದ ಉಪ್ಪಿನ ಕಾಗದದಲ್ಲಿ ಮರವನ್ನು ಉಜ್ಜುವ ಕೆಲಸ ಮಾಡಿಸುತ್ತಿದ್ದರು. ನಾವು ಹಾಗೆ ಉಜ್ಜುವಾಗ ಅವರು ‘ಡೋಂಟ್ ಡು ಗುರ್ ಗುರ್ ಗುರ್ (ವೇಗವಾಗಿ ಮಾಡಬೇಡಿ), ಡು ಇಟ್ ಗುರ್sss... ಗುರ್sss... (ನಿಧಾನವಾಗಿ ಮಾಡಿ)’ ಎಂದು ಹೇಳುತ್ತಿದ್ದರು.

***
ಹತ್ತು ಹನ್ನೆರಡು ವರ್ಷಗಳ ಹಿಂದೆ ಮುಂಬೈಗೆ ಹೋಗಿದ್ದಾಗ ಕೇಳಿದ ಆಫ್ಘಾನಿಸ್ತಾನದ ಕಥೆಯೊಂದು ತಲೆಯಲ್ಲಿ ಕುಳಿತಿತ್ತು. ಅದಾದ ನಂತರ 2008–09ರಲ್ಲಿ ಬಾಗಲಕೋಟೆಯಿಂದ ಅಫಜಲ್‌ಪುರಕ್ಕೆ ಹೋಗುವಾಗ, ಆ ಪ್ರದೇಶದದಲ್ಲಿ ನಡೆದ ಒಂದು ನೈಜ ಘಟನೆ ನನ್ನ ಅರಿವಿಗೆ ಬಂತು. ಇವೆರಡೂ ಕಥೆಗಳನ್ನು ಹೇಗಾದರೂ ಬಳಸಿಕೊಳ್ಳಬೇಕು ಎಂಬ ಹಂಬಲ ನನಗಿತ್ತು. ಅದಕ್ಕಾಗಿ ಬರೆದೆ, ಮತ್ತೆ ಮತ್ತೆ ಬರೆದೆ. ಬರೆಯುತ್ತ ಕಥೆ ಸಾಕಷ್ಟು ಬೆಳೆಯಿತು.

ಚಿತ್ರಕಥೆ ಮಾಡುತ್ತಲೇ ಚಿತ್ರೀಕರಣಕ್ಕೆ ಸ್ಥಳ ಹುಡುಕುತ್ತಿದ್ದೆ. ಬೇರೆ ಬೇರೆ ಜಾಗಗಳನ್ನು ನೋಡುವಾಗಲೆಲ್ಲ ಚಿತ್ರಕಥೆಯಲ್ಲೂ ಬದಲಾವಣೆ ಆಗುತ್ತಿತ್ತು. ಸೂಕ್ತ ಸ್ಥಳ ಹುಡುಕುವುದು ಸವಾಲಾಗಿತ್ತು. ಮೊದಲು ಕಾಳಿ ನದಿ ತೀರಕ್ಕೆ ಹೋದೆ.

ಆ ಅರಣ್ಯ ಎಷ್ಟು ಭಯಂಕರವಾಗಿತ್ತು ಎಂದು ಬಣ್ಣಿಸುವುದೇ ಕಷ್ಟ. ಮತ್ತೆ ಕಾರ್ಕಳ ಸಮೀಪದ ದುರ್ಗ ಪ್ರದೇಶ ನೋಡಿದೆ. ಕೊನೆಗೆ ಆ ಸ್ಥಳವನ್ನೇ ಆಯ್ಕೆ ಮಾಡಿಕೊಂಡೆವು. ಚಿತ್ರೀಕರಣದುದ್ದಕ್ಕೂ ಮಳೆ. ಜಾರಿಕೊಂಡು ಜಾರಿಕೊಂಡೇ ಚಿತ್ರೀಕರಣ ಮಾಡಿದ್ದೆವು.

ಒಮ್ಮೆ ಪ್ರಕಾಶ್ ರೈ ಸಿನಿಮಾದ ಕೆಲಸಕ್ಕಾಗಿ ಇಳಯರಾಜ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆಗ ಅವರ ಕೂದಲು, ಗಡ್ಡವನ್ನು ನೋಡಿದಾಕ್ಷಣ ‘ಉಪ್ಪಿನ ಕಾಗದ’ ಸಿನಿಮಾದ ಬಡಗಿ ಪಾತ್ರಧಾರಿ ಹೀಗೇ ಇರಬೇಕು ಎಂದು ನಿರ್ಧರಿಸಿದೆ. ನನಗೇನಾದರೂ ಸಾದ್ಯವಿದ್ದರೆ ಈ ಪಾತ್ರಕ್ಕೆ ಇಳಯರಾಜ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅದು ಸಾಧ್ಯವಿಲ್ಲ.

ಗೆಳೆಯ ಟಿ.ಎಸ್. ನಾಗಾಭರಣನಿಂದ ಈ ಪಾತ್ರ ಮಾಡಿಸಿದೆ. ಮೊದಲು ಅವನಿಗೆ ಉದ್ದ ಕೂದಲು ಬಿಡಲು ಹೇಳಿದ್ದೆ. ಆದರೆ ಇಳಯರಾಜ ಅವರನ್ನು ನೋಡಿದಾಗ ನಿರ್ಧಾರ ಬದಲಾಗಿದ್ದರಿಂದ ಕೂದಲೆಲ್ಲ ಚಿಕ್ಕದು ಮಾಕೊಳ್ಳಲು ಸೂಚಿಸಿದೆ.

ನಾಗಾಭರಣ ನದಿ ಮಧ್ಯೆ ನಿಂತುಕೊಳ್ಳುವ ಒಂದು ದೃಶ್ಯವಿದೆ. ಆ ದೃಶ್ಯದ ಚಿತ್ರೀಕರಣ ನಮ್ಮಲ್ಲಿ ಭಯ ಹುಟ್ಟಿಸಿತ್ತು. ಆತ ನೀರಿನಲ್ಲಿ ಕೊಚ್ಚಿಹೋಗುವಷ್ಟು ಸೆಳೆತವಿತ್ತು. ಹಗ್ಗ ಕಟ್ಟಿದೆವು, ನದಿ ಪಕ್ಕದಲ್ಲಿ ಈಜುಗಾರರನ್ನು ನಿಲ್ಲಿಸಿದೆವು. ಅಷ್ಟೆಲ್ಲ ಮಾಡಿ ಚಿತ್ರೀಕರಣ ಮುಗಿಸಿದ ನಂತರ ಭರಣ ಹೇಳಿದ – ‘ನನಗೆ ಈಜು ಬರುವುದಿಲ್ಲ’.

ಚಿತ್ರೀಕರಣ ನಡೆಯುವಷ್ಟೂ ದಿನ ನಾವು ಉಳಿದುಕೊಂಡ ಸ್ಥಳದಿಂದ ಚಿತ್ರೀಕರಣದ ಜಾಗಕ್ಕೆ ಬರಲು ವಾಹನಗಳನ್ನು ಬಳಸಲೇ ಇಲ್ಲ. ನಡೆದುಕೊಂಡು ಓಡಾಡುತ್ತಲೇ ಕೇಳಿಸುವ ಕಾಡಿನ ಶಬ್ದ, ಆ ಜಾಗವನ್ನು ಕಲಾವಿದರು ಅನುಭವಿಸಬೇಕು, ಅದರಿಂದಾಗಿ ಆ ಜಾಗ ಅವರಿಗೆ ಹತ್ತಿರವಾಗುತ್ತದೆ ಎಂಬುದು ನನ್ನ ಉದ್ದೇಶವಾಗಿತ್ತು.

ರಾತ್ರಿ ಮೊಬೈಲ್ ಬೆಳಕಿನಲ್ಲೇ ಓಡಾಡುತ್ತಿದ್ದೆವು. ಇವೆಲ್ಲವೂ ಖಂಡಿತ ಈ ಸಿನಿಮಾಕ್ಕೆ ಸಹಾಯವಾಗಿದೆ. ಸಾಮಾನ್ಯವಾಗಿ ಸಿನಿಮಾ ಮಾಡಬೇಕಾದರೆ ನಿರ್ದೇಶಕನಿಗೆ ಇಂಥ ಅನುಭವ ಸಿಗುವುದು ಕಷ್ಟ. ಆದರೆ ನನಗೆ ಅವೆಲ್ಲವೂ ಒದಗಿಬಂತು.

**
ರಂಗಭೂಮಿ ಕಲಾವಿದರಿಂದ ಸಿನಿಮಾ ನಟನೆ ಮಾಡಿಸುವುದು ಕಷ್ಟವೇ. ಆದರೂ ರಂಗಭೂಮಿಯವರೊಂದಿಗೆ ನನ್ನ ಅವರಿಗೂ ಸಂವಹನ ಸುಲಭವಾಗುತ್ತದೆ ಎಂದು ಅವರನ್ನೇ ಆಯ್ದುಕೊಂಡೆ. ಅವರಿಗೆ ಪಾತ್ರದ ಭಾವವನ್ನು ವಿವರಿಸುವ ಅಗತ್ಯವಿಲ್ಲ. ಒಂದು ಸನ್ನಿವೇಶ ಹೇಳಿದರೆ ಸಾಕಾಗುತ್ತದೆ. ಈ ಕಲಾವಿದರು ಒಬ್ಬರಿಗೊಬ್ಬರು ಹತ್ತಿರವಾಗಲಿ ಎಂದು ಚಿತ್ರೀಕರಣಕ್ಕೂ ಮುನ್ನ ಹತ್ತು ದಿನಗಳ ಕಾರ್ಯಾಗಾರ ಮಾಡಿದೆ.

ಒಂದು ದಿನ ‘ಯುಟ್ಯೂಬ್‌’ನಲ್ಲಿ ಒಂದು ವಿಡಿಯೊ ನೋಡಿದೆ. ಅದರಲ್ಲಿ ಅಪೂರ್ವ ನಟಿಸಿದ್ದರು. ಅವರ ಅಭಿನಯ ಇಷ್ಟವಾಗಿ ಈ ಸಿನಿಮಾಕ್ಕೆ ಅವರನ್ನು ಕರೆದೆವು. ಮತ್ತೊಬ್ಬ ನಟ ಮುರುಳಿ ಶೃಂಗೇರಿ ಬಹುಕಲಾವಲ್ಲಭ. ಕೊಳಲು, ತಬಲಾ ನುಡಿಸುತ್ತಾನೆ, ಹಾಡುತ್ತಾನೆ, ಚಿತ್ರ ಬರೆಯುತ್ತಾನೆ.

**
ಪ್ರತಿ ಬಾರಿ ಬೇರೆ ಬೇರೆ ರೀತಿಯ ಸಿನಿಮಾ ಮಾಡುವುದು ನಿರ್ದೇಶಕನ ಹಂಬಲ. ಆ ನಿಟ್ಟಿನಲ್ಲೇ ಈ ಸಿನಿಮಾ ಮಾಡಿದ್ದೇನೆ. ನನ್ನ ಹಿಂದಿನ ಕೆಲವು ಸಿನಿಮಾಗಳಲ್ಲಿ ತುಂಬಾ ಮಾತುಗಳಿದ್ದವು. ‘ಪುಟ್ಟಕ್ಕನ ಹೈವೆ’ಯಂತೂ ಬೀದಿ ನಾಟಕದಿಂದ ಪ್ರೇರಿತವಾಗಿತ್ತು. ಈ ಸಿನಿಮಾದಲ್ಲಿ ತುಂಬಾ ಸೈಲೆನ್ಸ್ ಇದೆ.

ಇಂಥ ಸಿನಿಮಾವನ್ನು ಈವರೆಗೆ ನಾನು ಮಾಡಿರಲಿಲ್ಲ. ಈವರೆಗಿನ ನನ್ನ ಸಿನಿಮಾಗಳಲ್ಲಿ ಕರಪತ್ರದ ಗುಣವಿರುತ್ತಿತ್ತು. ಅಂತ್ಯದಲ್ಲಿ ಏನೋ ಒಂದು ಘೋಷಣೆ ಇರುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಅಂಥ ಪ್ರಯತ್ನ ಇಲ್ಲ. ಹಾಗಂತ ಅದನ್ನು ಬಿಟ್ಟಿದ್ದೇನೆ ಎಂದಲ್ಲ. ಚಳ್ಳಕೆರೆಯ ಸುತ್ತಮುತ್ತ ನೀರಿನ ಸಮಸ್ಯೆಯ ಕುರಿತು ಮಾಡುತ್ತಿರುವ ಮುಂದಿನ ಸಿನಿಮಾದಲ್ಲಿ ಈ ಲಕ್ಷಣವನ್ನು ಕಾಣಬಹುದು.

ಒಂದು ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದರೆ, ಚರಿತ್ರೆಯನ್ನು ಹೀಗೇ ಹೇಳಬೇಕು ಎಂದು ಆಗ್ರಹಿಸುವ, ಚರಿತ್ರೆಗೆ ಇನ್ನೊಂದು ಮಗ್ಗಲು ಇದೆ ಎಂದು ಹೇಳಲೂ ಬಿಡದ ಸದ್ಯದ ಸಂದರ್ಭಲ್ಲಿ, ಬಹುತ್ವದಿಂದಲೇ ಈ ದೇಶ, ಈ ಜಗತ್ತನ್ನು ಒಟ್ಟಾಗಿ ಕಟ್ಟಲು ಸಾಧ್ಯ ಎಂದು ಭಾವಿಸಿ ಈ ಸಿನಿಮಾ ಮಾಡಿದ್ದೇವೆ. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಸಪಾಟು ಮಾಡಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ಈ ಸಿನಿಮಾ ಹೇಳುತ್ತದೆ.

ಒಂದು ಬಂಡೆಗಲ್ಲಿನಲ್ಲಿ ಯಾವುದೋ ಮೂರ್ತಿಯನ್ನು ಕಂಡುಕೊಳ್ಳುವವನು ಬಡಗಿ. ಹಾಗೆ ಸಮಾಜದಲ್ಲಿ ಒಳ್ಳೆಯದನ್ನು ಕಾಣುವ ಕೆಲಸ ಪ್ರತಿಯೊಬ್ಬನಿಂದಲೂ ಆಗಬೇಕು. ಅದೇ ಪ್ರತಿಮೆಯನ್ನು ಚಿತ್ರದಲ್ಲಿನ ಬಡಗಿ ಪಾತ್ರ ಸಾರುತ್ತದೆ.

**
ಸಂಗೀತ ಸಂಯೋಜನೆ ಯಾರಿಂದ ಮಾಡಿಸುವುದು ಎಂದು ಯೋಚಿಸುತ್ತ ಅನುಮಾನದಿಂದಲೇ ವಿ.ಹರಿಕೃಷ್ಣ ಅವರನ್ನು ಕೇಳಿದೆ. ಆತನನ್ನು ಚಿಕ್ಕಂದಿನಿಂದಲೇ ಬಲ್ಲೆ. ಈ ಸಿನಿಮಾ ಆತ ಒಪ್ಪಿಕೊಳ್ಳುತ್ತಾನಾ ಎಂಬ ಪ್ರಶ್ನೆ ನನ್ನಲ್ಲಿತ್ತು. ಮೊದಲೇ ಬರೆದ ಹಾಡುಗಳಿಗೆ ಸಂಗೀತ ಸಂಯೋಜಿಸುವ ಸವಾಲು ಹರಿಕೃಷ್ಣಗೆ ಈ ಚಿತ್ರದಲ್ಲಿತ್ತು.

**
ಸಿನಿಮಾ ಈ ವರ್ಷದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಬೇರೆ ಪ್ರಮುಖ ಚಿತ್ರೋತ್ಸವಗಳಿಗೂ ಚಿತ್ರವನ್ನು ಕಳುಹಿಸಿದ್ದೇವೆ. ಕೆಲವು ಚಿತ್ರೋತ್ಸವಗಳಿಗೆ ಸಿನಿಮಾ ಆಯ್ಕೆ ಆಗಬೇಕಾದರೆ ಅದು ಎಲ್ಲೂ ಅಧಿಕೃತವಾಗಿ ಬಿಡುಗಡೆ ಆಗಿರಬಾರದು. ಹಾಗಾಗಿ ಆ ಚಿತ್ರೋತ್ಸವಗಳಿಗೆ ಸಿನಿಮಾ ಆಯ್ಕೆ ಆದರೆ ಬಿಡುಗಡೆ ಮುಂದೆ ಹೋಗಬಹುದು. ಆಯ್ಕೆ ಆಗದಿದ್ದರೆ ಸದ್ಯದಲ್ಲೇ ಬಿಡುಗಡೆ ಆಗುತ್ತದೆ.

ಈ ಚಿತ್ರವನ್ನು ಸಾದಾ ಚಿತ್ರಮಂದಿರದಲ್ಲಿ ನೋಡಲು ಚೆನ್ನಾಗಿರುವುದಿಲ್ಲ. ಹಾಗಾಗಿ ಮಲ್ಟಿಪ್ಲೆಕ್ಸ್‌ಗಳಲ್ಲೇ ಸಿನಿಮಾ ಬಿಡುಗಡೆ ಮಾಡುತ್ತೇವೆ. ನಮ್ಮ ಪ್ರೇಕ್ಷಕರ ಸಂಖ್ಯೆ ಹದಿನೈದು ಇಪ್ಪತ್ತು ಸಾವಿರ ಮಾತ್ರ. ನಾವು ಅಷ್ಟು ಜನರನ್ನು ತಲುಪಿದರೂ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT