ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಳಿನ ಬಾಂಧವ್ಯ ಬಿಂಬಿಸುವ ಆಲ್ಬಂ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಗು ಅಳುತ್ತಿತ್ತು ಆದರೆ ತಾಯಿಯ ಕಣ್ಣಲ್ಲಿ ಆನಂದಭಾಷ್ಪ. ಅರೆ, ಮಗು ಅತ್ತೆ ತಾಯಿಗೆ ದುಃಖವಾಗಬೇಕು. ಇದೇನಿದು ಖುಷಿ ಎಂದು ಆಶ್ಚರ್ಯಪಡುತ್ತಿದ್ದೀರಾ? ಅದು ಆಗ ತಾನೆ ಹುಟ್ಟಿದ ಮಗು. ಹುಟ್ಟಿದ ತಕ್ಷಣ ಮಗು ಅಳುವ ಧ್ವನಿ  ಕೇಳಿ ತಾಯಿ ಖುಷಿ ಪಡುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ತಾನೆ? ‘ಈ ವಿಷಯ ಈಗೇಕೆ’ ಎಂಬುದು ನಿಮ್ಮ ಪ್ರಶ್ನೆಯೇ?

ನೆಲಮಂಗಲದ ಆದಿಚುಂಚನಗಿರಿ ಐಟಿಐ ಕಾಲೇಜು ಮೈದಾನದಲ್ಲಿ ಈಚೆಗೆ ಬಿಡುಗಡೆಯಾದ ‘ತಾಯಿಯ ಸೀರೆ’ ವಿಡಿಯೊ ಆಲ್ಬಂನ ಮೊದಲ ದೃಶ್ಯ ಇದು.
10 ನಿಮಿಷದ ವಿಡಿಯೊ ಆಲ್ಪಂನಲ್ಲಿ ಹಾಡು ಮತ್ತು ಕಥೆಗೆ ಪೂರಕವಾದ ಸಂಭಾಷಣೆ ಇದೆ. ಹೆಸರಿಗೆ ತಕ್ಕಂತೆ ಇಡೀ ಆಲ್ಬಂನಲ್ಲಿ ತಾಯಿಯ ಸೀರೆ ಮಗುವನ್ನು ಮನುಷ್ಯನನ್ನಾಗಿ ಮಾಡುವಲ್ಲಿ ಎಂಥ ಪಾತ್ರ ವಹಿಸುತ್ತದೆ ಎಂಬುದನ್ನು ಯುವ ನಿರ್ದೇಶಕ ಲಕ್ಷ್ಮಣ.ಎ.ಗಾಣಿಗೇರ  ಮನಮುಟ್ಟುವಂತೆ ತೋರಿಸಿದ್ದಾರೆ.

ಹಿರಿಯ ರಂಗ ಕಲಾವಿದೆ ಮಾಲತಿಶ್ರೀ ಮೈಸೂರು ಮನೋಜ್ಞ ಅಭಿನಯದ ಮೂಲಕ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಗನಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ (ಲೊಟ್ಟೆ ನ್ಯೂಸ್‌) ಮಹೇಂದ್ರ ಪ್ರಸಾದ್‌ (ಬಾಲ್ಯ) ಮತ್ತು ಲಕ್ಷ್ಮಣ ಗಾಣಿಗೇರ (ಯೌವನ) ನಟಿಸಿದ್ದಾರೆ. ಸ್ನೇಹಿತರಾಗಿ ಚೇತನ್‌ ಮತ್ತು ಮಂಜುನಾಥ್‌ ಹೀಗೆ ಬಂದು ಹಾಗೆ ಹೋದರೂ ಕಥೆಯನ್ನು ಪೋಷಿಸಿದ್ದಾರೆ.

ಮಗು ಹುಟ್ಟಿದಾಗ ತಾಯಿ ತನ್ನ ಸೀರೆಯನ್ನು ಜೋಲಿಯಾಗಿ ಬಳಸುತ್ತಾಳೆ. ಬೆಳೆದ ಮಗು ಆಡುವಾಗ ಬಿದ್ದು, ಮಂಡಿಗೆ ಗಾಯ ಮಾಡಿಕೊಂಡಾಗ ಸೀರೆಯನ್ನೇ ಹರಿದು ಗಾಯಕ್ಕೆ ಕಟ್ಟುತ್ತಾಳೆ. ಹರಿದ ಸೀರೆಗಳಿಂದ ಮಾಡಿದ ಕೌದಿ ಹಾಸಲು– ಹೊದೆಯಲು ಬಳಕೆಯಾಗುತ್ತದೆ. ಮಗ ಶಾಲೆಯಿಂದ ಶರ್ಟ್ ಹರಿದುಕೊಂಡು ಬಂದಾಗ ಸೀರೆಯಿಂದಲೇ ತಾಯಿ ತೇಪೆ ಹಾಕುತ್ತಾಳೆ.

ಇಡೀ ಆಲ್ಪಂನಲ್ಲಿ ಸೀರೆ ಎಂಬುದು ದೃಶ್ಯ ಕಾವ್ಯದಂತೆ ಮೂಡಿ ಬಂದಿದೆ. ತಂದೆ ಇಲ್ಲದ ಮಗನಿಗೆ ತಾಯಿಯೆ ಜಗತ್ತಾಗಿರುವುದನ್ನು ಸೂಚಿಸುತ್ತದೆ.
ಮನೆ ನಡೆಸುತ್ತಿದ್ದ ತಾಯಿ ಉಬ್ಬಸ ಬಂದು ಹಾಸಿಗೆ ಹಿಡಿದಾಗ ಮಗ ಶಾಲೆಯನ್ನು ಬಿಟ್ಟು ಹೂ ಮಾರಲು ಆರಂಭಿಸುತ್ತಾನೆ. ಹನುಮಂತನ ದೇವಸ್ಥಾನಕ್ಕೆ ಹೂ ಕೊಡಲು ಹೋದಾಗ ನಡೆಯುತ್ತಿದ್ದ ಸಂಗೀತ ಕಛೇರಿ ಕೇಳಿಸಿಕೊಳ್ಳುವ ಹುಡುಗ ತಬಲಾದತ್ತ ಆಕರ್ಷಿತನಾಗುತ್ತಾನೆ.

ಆದರೆ ಕೊನೆಗೊಮ್ಮೆ ಅದೇ ತಬಲಾ ಮಾರಿ ಹೊಸ ಸೀರೆ ಖರೀದಿಸಿ ಮನೆಗೆ ಓಡಿ ಬರುತ್ತಾನೆ. ಅಷ್ಟರಲ್ಲಿ ತಾಯಿಯ ಉಸಿರೇ ನಿಂತಿರುತ್ತದೆ. ತಾಯಿಯ ಜೊತೆಗೆ ಆಕೆಯ ಸೀರೆಯೂ ಭೂಗರ್ಭ ಸೇರುತ್ತದೆ. ತಾನು ತಂದ ಸೀರೆಯನ್ನು ತಾಯಿ ಉಡಲಿಲ್ಲವಲ್ಲ ಎಂಬ ವಿಷಾದಭಾವ ಮಗನಲ್ಲಿ ಮೂಡುತ್ತದೆ.

ಆಲ್ಬಂಗಾಗಿ ಎಸ್‌.ಹರೀಶ್, ರಾಧಾ ಎ.ಗಾಣಿಗೇರ (ನಿರ್ಮಾಣ), ಎಂ.ಜಿ.ರಂಗಧಾಮಯ್ಯ  (ಪ್ರಾಯೋಜಕರು), ವಿ.ಎಸ್‌.ಗೋಪಾಲ್‌ (ಗಾಯನ ಮತ್ತು ಸಂಗೀತ ನಿರ್ದೇಶನ), ವೆಂಕಟೇಶ್‌ ಚೌಥಾಯಿ (ಸಾಹಿತ್ಯ), ಶಿವಕುಮಾರ್‌ (ಛಾಯಾಗ್ರಹಣ ಮತ್ತು ಸಂಕಲನ), ಲಕ್ಷ್ಮಣ್ ಎ.ಗಾಣಿಗೇರ್ (ನಿರ್ದೇಶನ) ಆಲ್ಬಂಗಾಗಿ ಶ್ರಮಿಸಿದ್ದಾರೆ.

ಆಸಕ್ತರು ಮೊ– 9886508746 ಸಂಪರ್ಕಿಸಿ.
ಮಹಾಂತೇಶ್‌ ನೆಗಳೂರ

ವಿಡಿಯೊ ನೋಡಲು ಕೋಡ್ ಲಿಂಕ್‌:  http://bit.ly/2lOf4nW

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT