ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಕೆ ಮುದ ನೀಡುವ ಹಸಿರು

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಉದ್ಯಾನನಗರಿ ಐಟಿ ರಾಜಧಾನಿ ಎನಿಸಿಕೊಳ್ಳುವುದಕ್ಕೂ ಮುನ್ನ ಇಷ್ಟೊಂದು ಕಟ್ಟಡಗಳು, ಫ್ಲೈ ಓವರ್‌, ಅಪಾರ್ಟ್‌ಮೆಂಟ್‌ಗಳು ಇರಲಿಲ್ಲ. ಮನೆಯಿಂದಾಚೆ ಬಂದರೆ ಸಾಕು ಕಾಣುತ್ತಿದ್ದುದು ಮುಗಿಲೆತ್ತರ ಕತ್ತು ಚಾಚಿದ್ದ   ಮರಗಳು.
ಆದರೆ, ಈಗ ನಗರದ ಚಿತ್ರಣವೇ ಬದಲಾಗಿದೆ. ಗಗನಚುಂಬಿ ವಸತಿ ಸಂಕೀರ್ಣಗಳು ಬಂದಿವೆ. ಮನೆ ನಿರ್ಮಾಣ, ರಸ್ತೆ ವಿಸ್ತರಣೆ, ಮೆಟ್ರೊ ಸೇತುವೆ ನಿರ್ಮಾಣ ಹೆಸರಿನಲ್ಲಿ ಮರಗಳೆಲ್ಲ ನಾಶವಾಗಿವೆ. ಉಷ್ಣತೆ ಹೆಚ್ಚಿದೆ. ನಗರ ವಾಸಿಗಳು ಇದೀಗ ಮತ್ತೆ ಮನೆ ಮುಂದೆ ಒಂದಿಷ್ಟು ಗಿಡಮರಗಳನ್ನು ಬೆಳೆಸುವ ಮನಸು ಮಾಡುತ್ತಿದ್ದಾರೆ. ಅದಕ್ಕೆ ಲ್ಯಾಂಡ್‌ಸ್ಕೇಪಿಂಗ್ ವಿನ್ಯಾಸದ ಮೆರುಗು ನೀಡುತ್ತಿದ್ದಾರೆ.
ಕಟ್ಟಡಗಳ ಮುಂದೆ ಪುಟ್ಟದೊಂದು ಉದ್ಯಾನ ನಿರ್ಮಿಸುವುದು ಈಗ ಸಾಮಾನ್ಯ ಸಂಗತಿ. ಬರೇ ಹೂತೋಟದ ಬದಲು ಅಲ್ಲೊಂದು ಕೆರೆ, ದಿಬ್ಬ ಕಟ್ಟಿ ನಿಸರ್ಗದ ಸೌಂದರ್ಯ ಕಟ್ಟಿಕೊಡುವುದು ಲ್ಯಾಂಡ್‌ಸ್ಕೇಪಿಂಗ್‌ ಪರಿಕಲ್ಪನೆ. ಇದಕ್ಕೆ ಖಾಸಗಿ ಕಂಪೆನಿಗಳು, ಸರ್ಕಾರಿ ಕಟ್ಟಡಗಳೂ ಹೊರತಾಗಿಲ್ಲ.
‘ಹೊಸ ಮನೆ ಕಟ್ಟುವವರು ಕನಿಷ್ಠ ಶೇ 10 ಭಾಗವನ್ನು ಲ್ಯಾಂಡ್‌ಸ್ಕೇಪಿಂಗ್‌ಗೆ ಮೀಸಲಿಟ್ಟರೆ ಸುಂದರವಾದ ಉದ್ಯಾನ ನಿರ್ಮಾಣ ಮಾಡಬಹುದು’ ಎನ್ನುತ್ತಾರೆ ಉದ್ಯಾನ ವಿನ್ಯಾಸಕಾರ ಶ್ರೀಧರ್. 
‘30/40 ನಿವೇಶನದಲ್ಲಿ ಮನೆ ಕಟ್ಟುವವರೂ ಮನೆಯ ಯೋಜನೆ ಸಿದ್ಧಪಡಿಸುವಾಗಲೇ ಲ್ಯಾಂಡ್‌ಸ್ಕೇಪಿಂಗ್‌ಗೆ  ಸ್ಥಳ ಮೀಸಲಿಟ್ಟರೆ ತಾವೇ ನಿರ್ವಹಣೆ ಮಾಡಬಹುದಾದ ಪುಟ್ಟ ಉದ್ಯಾನ ನಿರ್ಮಿಸಿಕೊಳ್ಳಬಹುದು’ ಎನ್ನುವುದು ಅವರ ಸಲಹೆ.
‘ಬೆಂಗಳೂರಿನಲ್ಲಿ ದೊಡ್ಡ ಮನೆ ಕಟ್ಟುವವರು  ಲ್ಯಾಂಡ್‌ಸ್ಕೇಪಿಂಗ್‌ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಲಾನ್, ಪುಟ್ಟ ಕೊಳ, ಸೇತುವೆ, ಪುಟ್ಟ ಮರಗಳು, ನಿತ್ಯ ಹೂಬಿಡುವ ಗಿಡಗಳನ್ನು   ಬೆಳೆಸುವುದು  ಸಾಮಾನ್ಯ.  ಪೆಬೆಲ್‌ ಗಾರ್ಡನ್‌ ಈಗ ಹೆಚ್ಚು ಚಾಲ್ತಿಯಲ್ಲಿದೆ. ಉದ್ಯಾನದ ನಡುವೆ ಪುಟ್ಟ ಕಲ್ಲುಗಳನ್ನು ಜೋಡಿಸಿ ಕಾಲುದಾರಿ ನಿರ್ಮಿಸಿದರೆ  ಉದ್ಯಾನದ ಅಂದ ಹೆಚ್ಚುತ್ತದೆ. ಹಾಗೆಯೇ ಶಿಲ್ಪ, ಮರ, ಸಿಮೆಂಟಿನ ಕಲಾಕೃತಿಗಳನ್ನು  ಉದ್ಯಾನದ ಅಲ್ಲಲ್ಲಿ ಸ್ಥಾಪಿಸುವುದು ಚಾಲ್ತಿಯಲ್ಲಿದೆ. ಹೂ ಕುಂಡಗಳೂ ಈಗ ಚಂದದ ವಿನ್ಯಾಸಗಳಲ್ಲಿ ಲಭ್ಯವಿದೆ’ ಎನ್ನುತ್ತಾರೆ ಅವರು.
ಏಜೆನ್ಸಿಗಳ ಮೂಲಕ ದೊಡ್ಡ ಮಟ್ಟದಲ್ಲಿ ಲ್ಯಾಂಡ್‌ಸ್ಕೇಪಿಂಗ್‌ ಮಾಡಿಸುವವರು   ಅದರ ನಿರ್ವಹಣೆಯ ಜವಾಬ್ದಾರಿಯನ್ನೂ  ಏಜೆನ್ಸಿಗಳಿಗೆ ನೀಡಿರುತ್ತಾರೆ. ತಿಂಗಳಿಗೊಮ್ಮೆ  ಮಾಲಿಗಳು ಬಂದು ಕಳೆ ಕೀಳುವುದು, ಕೀಟನಾಶಕ ಸಿಂಪಡಿಸುವುದು ಮತ್ತು ಪ್ರೂನಿಂಗ್ ನಿರ್ವಹಿಸುತ್ತಾರೆ.
‘ಕುಂಡಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸುವವರು ತಾವೇ ನಿರ್ವಹಣೆ ಮಾಡಬಹುದು. ಆದರೂ ಹತ್ತು ದಿನಗಳಿಗೊಮ್ಮೆ ಕ್ರಿಮಿನಾಶಕಗಳನ್ನು ಸಿಂಪಡಿಸುವುದು, ಗೊಬ್ಬರ ಹಾಕುವುದು  ಅಗತ್ಯ’ ಎಂದು ಶ್ರೀಧರ್‌ ಸಲಹೆ ನೀಡುತ್ತಾರೆ.
ಬಗೆ ಬಗೆ ಲಾನ್‌: ಹೆಚ್ಚು ಬಿಸಿಲು ಬೀಳುವ ಜಾಗವಾಗಿದ್ದರೆ ಮೆಕ್ಸಿಕನ್‌, ಬರ್ಮುಡಾ ಲಾನ್‌ ಹಾಕಬಹುದು. ಕಡಿಮೆ ಬಿಸಿಲು ಬೀಳುವ ಜಾಗಗಳಿಗೆ ತಕ್ಕುದಾದ ಶೇಡ್‌ಗ್ರಾಸ್‌ಗಳು ಸಿಗುತ್ತದೆ. ಕಡಿಮೆ ಬೆಳಕು ಬೀಳುವ ಪುಟ್ಟ ಜಾಗಗಳಿಗೆ ಕಾರ್ಪೆಟ್‌ ಲಾನ್‌ ಸಿಗುತ್ತದೆ. ಇವುಗಳು ಬೆಂಗಳೂರಿನ ವಾತಾವರಣಕ್ಕೆ  ಸೂಕ್ತವಾಗಿದೆ.
ಬಾಡಿಗೆಗೂ ಸಿಗುತ್ತದೆ ಹೂ ಕುಂಡ: ಕಚೇರಿಯ ಒಳಗೆ ಇಡಬಹುದಾದ ಒಳಾಂಗಣ ಸಸ್ಯಗಳ ಕುಂಡಗಳನ್ನು ಬಾಡಿಗೆಗೆ ನೀಡುವ ಏಜೆನ್ಸಿಗಳೂ ನಗರದಲ್ಲಿವೆ. ಒಂದೇ  ಬಗೆಯ ಗಿಡಗಳನ್ನು ಇಟ್ಟುಕೊಳ್ಳುವ ಬದಲು ವಾರ ಅಥವಾ ಎರಡು ವಾರಕ್ಕೊಮ್ಮೆ ಕುಂಡಗಳನ್ನು ಬದಲಾಯಿಸಬಹುದು. ದಿನಕ್ಕೆ ಇಂತಿಷ್ಟು ಎಂದು ಬಾಡಿಗೆ ನಿಗದಿಪಡಿಸಲಾಗುತ್ತದೆ.
(ಶ್ರೀಧರ್ ಅವರ ಸಂಪರ್ಕ ಸಂಖ್ಯೆ: 9740085412) v

*
ಬೆಂಗಳೂರಿನಲ್ಲಿ ಐಟಿ ಕಂಪೆನಿಗಳು ಲ್ಯಾಂಡ್‌ಸ್ಕೇಪಿಂಗ್‌ಗೆ ಹೆಚ್ಚಿನ ಮಹತ್ವ ನೀಡಲಾರಂಭಿಸಿದ ಎಲ್ಲರೂ ಅತ್ತ  ಚಿತ್ತ ಹರಿಸಿದ್ದಾರೆ.  ಅಪಾರ್ಟ್‌ಮೆಂಟ್‌ಗಳಲ್ಲಿ ಲ್ಯಾಂಡ್‌ಸ್ಕೇಪಿಂಗ್‌ ಸಾಮಾನ್ಯ ಸಂಗತಿ ಎನಿಸಿದೆ.

–ಶ್ರೀಧರ್,
ಉದ್ಯಾನ ವಿನ್ಯಾಸಕರು, ಅಕ್ಷಯ್‌  ಗಾರ್ಡನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT