ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರುಣ್ಯದಲ್ಲಿ ನಾದ ಸಾಕ್ಷಾತ್ಕಾರ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮೃದಂಗ ನಾದದ ಸೆಳೆತಕ್ಕೆ ಒಳಗಾಗಿ ಅದರಲ್ಲಿ ಹೆಸರು ಗಳಿಸಿದವರು ಕೆ.ವಿ.ರವಿಶಂಕರ್‌ ಶರ್ಮಾ. ಕಲಾರಾಧಕ ಕುಟುಂಬದಲ್ಲಿ ಬೆಳೆದಿದ್ದರೂ, ಅವಕಾಶದ ಕೊರತೆಯಿಂದಾಗಿ ಮೃದಂಗ ಕಲಿಕೆಯನ್ನು ಆರಂಭಿಸಿದ್ದು, ಕಾಲೇಜು ಮೆಟ್ಟಿಲೇರಿದ ನಂತರ. ನೆಲಮಂಗಲದಲ್ಲಿ ಬಾಲ್ಯವನ್ನು ಕಳೆದ ಇವರಿಗೆ, ಸೂಕ್ತ ಗುರುಗಳು ಸಿಗದೆ ತಡವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡವರು.

‘ಆಗೆಲ್ಲ ಬೆಂಗಳೂರು ಇಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ. ಹಾಗಾಗಿ ನೆಲಮಂಗಲವು ನಗರದಿಂದ ಪ್ರತ್ಯೇಕ ಪ್ರದೇಶವೆಂಬಂತೆ ಇತ್ತು. ನಾನು ಎಸ್ಸೆಸ್ಸೆಲ್ಸಿ ಅಂತಿಮ ವರ್ಷದಲ್ಲಿದ್ದಾಗ ನಮ್ಮ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಅಲ್ಲಿಂದ ನನ್ನ ಮೃದಂಗ ಕಲಿಕೆ ಪ್ರಾರಂಭವಾಯಿತು’ ಎಂದು ಮೃದಂಗದ ನಂಟು ಬೆಳೆದ ಬಗೆಯನ್ನು ಅವರು ವಿವರಿಸುತ್ತಾರೆ.

ಬಿ.ಕಾಂ ಪದವಿ ಜೊತೆಗೆ ಸಿಎಐಐಬಿ ಮಾಡಿರುವ ಇವರು, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಉದ್ಯೋಗಿ. ವೃತ್ತಿ ಮತ್ತು ಪ್ರವೃತ್ತಿ ನಡುವೆ ಸಮತೋಲನ ಮಾಡುತ್ತಿದ್ದಾರೆ. ಎಷ್ಟೇ ಒತ್ತಡದಲ್ಲಿದ್ದರೂ, ದಿನದಲ್ಲಿ ನಾಲ್ಕು ಗಂಟೆ ಮೃದಂಗ ಅಭ್ಯಾಸಕ್ಕೆ ಮೀಸಲಿಟ್ಟಿದ್ದಾರೆ.

‘ಮನೆಯಲ್ಲಿ ಟೀವಿ ಇಲ್ಲ. ಮಕ್ಕಳು ಓದುತ್ತಿರುವುದರಿಂದ ಟೀವಿ ತಂದಿಲ್ಲ. ಇದರಿಂದ ಸಾಕಷ್ಟು ಸಮಯ ಉಳಿಯುತ್ತದೆ. ಮಕ್ಕಳು ಸಂಗೀತ ಕಲಿಯುತ್ತಿದ್ದಾರೆ. ಹಾಗಾಗಿ ಬಿಡುವು ಸಿಕ್ಕಾಗಲೆಲ್ಲ  ಮನೆ ತುಂಬ ಸಂಗೀತದ ನಾದ ತುಂಬಿಕೊಳ್ಳುತ್ತದೆ’ ಎನ್ನುತ್ತಾರೆ ಇವರು.

ಇವರ ತಂದೆ ವೆಂಕಟಾದ್ರಿ ಶರ್ಮಾ, ಗಮಕ ಕಲಾವಿದರು. ಅವರು ಗಮಕ ವಾಚನದಲ್ಲಿ ಮಾಡಿದ ಸಾಧನೆಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಕೂಡ ಒಲಿದಿತ್ತು. ಇವರ ತಾಯಿ ನಾಗವೇಣಿ ಶರ್ಮಾ ಗಮಕದಲ್ಲಿ ವಿಶೇಷ ಅಭಿರುಚಿ ಬೆಳೆಸಿಕೊಂಡವರು. ಅಮ್ಮನ ಬಳಿಯೇ  ಬಾಲ್ಯದಲ್ಲಿ ಗಮಕ ಕಲಿತರು.

‘ನನ್ನ ತಂದೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದಿದ್ದರೂ, ಅದರ ಬಗ್ಗೆ ಅತೀವ ಆಸಕ್ತಿ. ತಂದೆಯ ಬಳಿ ಒಂದು ಘಟ ಇತ್ತು. ಅವರು ಹಾಡುತ್ತಾ ತೋಚಿದ ಹಾಗೆ ಅದನ್ನು ಬಾರಿಸುತ್ತಿದ್ದರು. ನನ್ನ ಪತ್ನಿ ಸಹ ಸಂಗೀತ ಶಿಕ್ಷಕಿಯಾಗಿದ್ದಾರೆ. ಮಗ ಮೃದಂಗ ಕಲಾವಿದ, ಮಗಳು ನೃತ್ಯ ಮತ್ತು ಗಾಯನ ಕಲಾವಿದೆ’ ಎಂದು ಮನೆಯಲ್ಲಿ ಸಂಗೀತದ ಘಮ ಹರಡಿದ ರೀತಿಯನ್ನು ವಿವರಿಸುತ್ತಾರೆ ರವಿಶಂಕರ್‌.

ಜನಪ್ರಿಯ ಮೃದಂಗ ಕಲಾವಿದ ಎನಿಸಿಕೊಂಡಿರುವ ಇವರು, ಹತ್ತು ವರ್ಷ ಸಂಗೀತಾಭ್ಯಾಸವನ್ನು ಮಾಡಿದ್ದಾರೆ.  ಕುನ್ನಕ್ಕುಡಿ ವೈದ್ಯನಾಥನ್‌ ಅವರು ಮೃದಂಗ ಕಲಿಕೆಗೆ ಪ್ರೇರಣೆ. ಅವರ ಪರಮಾನಂದಕರವೆನ್ನಿಸಿದ ಮೃದಂಗವೇ ತಮ್ಮನ್ನು ಮೃದಂಗದತ್ತ ಸೆಳೆದಿದ್ದು ಎನ್ನುತ್ತಾರೆ ಅವರು.

ಟಿ.ಎನ್‌. ಶಶಿಕುಮಾರ್‌ ಅವರಲ್ಲಿ ಆರಂಭಿಕ ಶಿಕ್ಷಣ ಪಡೆದ ರವಿಶಂಕರ್‌ ನಂತರ ಎಂ. ವಾಸುದೇವರಾವ್‌ ಅವರ ಬಳಿ ವಿದ್ವತ್‌ ಹಾಗೂ ಉನ್ನತ ಅಧ್ಯಯನವನ್ನು ಗುರುವಾಯೂರ್‌ ಶ್ರೀದೊರೈ ಅವರ ಬಳಿ ಮಾಡಿದ್ದಾರೆ. ದೇಶದ ಹಲವು ರಾಜ್ಯಗಳ ಜೊತೆಗೆ ಬ್ರಿಟನ್‌, ಸಿಂಗಪುರದಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ರವಿಶಂಕರ್‌ ಅವರಿಗೆ ಈಗ 49 ವರ್ಷ. ಮೃದಂಗ ಕಲಿಕೆಯ ಆಗಿನ ಸ್ಥಿತಿಗೂ, ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವನ್ನು ಅವರು ಗುರುತಿಸುತ್ತಾರೆ. ‘ಆಗ ಕಲಿಕೆಗೆ ಅವಕಾಶ ತುಂಬಾ ಕಡಿಮೆಯಿತ್ತು. ಆದರೆ ಈಗ ಕಲಿಯಲು ಅವಕಾಶ ಹೆಚ್ಚು. ಜೊತೆಗೆ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಗಳೂ  ಸಿಗುತ್ತಿವೆ’ ಎನ್ನುವುದು ಅವರ ಅನುಭವದ ಮಾತು.

ಇಪ್ಪತ್ತೈದು ಗಂಟೆ ಸತತವಾಗಿ ಮೃದಂಗ ನುಡಿಸಿದ ಕಾರಣ ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌’ ಮನ್ನಣೆ ಗಳಿಸಿದ್ದಾರೆ. ‘ಶ್ರುತಿ ಸಿಂಧೂರ ಅಕಾಡೆಮಿ ಆಫ್‌ ಮ್ಯೂಸಿಕ್‌’ ಮೂಲಕ ಹಲವರಿಗೆ ಸಂಗೀತ ತರಬೇತಿಯನ್ನು ನೀಡುತ್ತಿದ್ದಾರೆ.

‘ನಮ್ಮ ಯುವಕರಿಗೆ ಎಲ್ಲೋ ಹುಟ್ಟಿದ ಮೈಕಲ್‌ ಜಾಕ್ಸನ್‌, ಮಡೋನಾ ಬಗ್ಗೆ ಗೊತ್ತಿರುತ್ತದೆ. ಆದರೆ ನಮ್ಮ ಪುರಂದರದಾಸರು, ತ್ಯಾಗರಾಜರು, ಕನಕದಾಸರ ಬಗ್ಗೆ ತಿಳಿದಿರುವುದಿಲ್ಲ’ ಎಂಬ ಬೇಸರ ಅವರಿಗಿದೆ.

ಸಂಗೀತದ ಬಗ್ಗೆ ಯುವಜನರಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌, ಕೆ.ಎಸ್‌.ನರಸಿಂಹ ಸ್ವಾಮಿ ಪಾರ್ಕ್‌, ಬಿಡಿಎ ಪಾರ್ಕ್‌ ಸೇರಿದಂತೆ ನಗರದ ಹಲವು ಉದ್ಯಾನವನಗಳಲ್ಲಿ ಪ್ರತಿ ತಿಂಗಳ ಮೊದಲನೇ ಭಾನುವಾರ ಅವರು ಕಾರ್ಯಕ್ರಮ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 80 ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. 

‘ವಿಶೇಷ ಕಲಾಚೇತನ’ ಪ್ರಶಸ್ತಿ ಪ್ರದಾನ
ಫೆ.19ರಂದು  ‘ವಿಶೇಷ ಉತ್ಸವ–2017 ’ ಕಾರ್ಯಕ್ರಮದಲ್ಲಿ ಕೆ.ವಿ.ರವಿಶಂಕರ್‌ ಶರ್ಮಾ ಅವರಿಗೆ ‘ವಿಶೇಷ ಕಲಾಚೇತನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಶೇಷ ಫೈನ್‌ ಆರ್ಟ್ಸ್‌ ಈ ಕಾರ್ಯಕ್ರಮ ಆಯೋಜಿಸಿದೆ. ಸ್ಥಳ: ಎಂಎಲ್‌ಆರ್‌ ಕನ್ವೆನ್ಷನ್‌ ಸೆಂಟರ್‌, ಬ್ರಿಗೇಡ್‌ ಮಿಲೇನಿಯಂ ಆವರಣ, ಜೆಪಿ ನಗರ.  ಬೆಳಿಗ್ಗೆ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT