ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಆಡಳಿತಕ್ಕೆ ರಾಜೀನಾಮೆ ಪೆಟ್ಟು

ಸಂಪಾದಕೀಯ
Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಅಮೆರಿಕ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್‌ ಫ್ಲಿನ್ ಮಂಗಳವಾರ ತಮ್ಮ ಹುದ್ದೆಗೆ  ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ 24 ದಿನಗಳಲ್ಲೇ ರಾಜೀನಾಮೆ ನೀಡುವಂತಹ ಬೆಳವಣಿಗೆಗಳಾಗಿದ್ದು ಟ್ರಂಪ್ ಆಡಳಿತಕ್ಕೆ ದೊಡ್ಡ ಹೊಡೆತ ಎನ್ನಬಹುದು. ಶ್ವೇತಭವನದ ಮೇಲೆ ಕ್ರೆಮ್ಲಿನ್ ಕರಿನೆರಳನ್ನು ಇದು ಬಯಲುಗೊಳಿಸಿದಂತಾಗಿದೆ. ಟ್ರಂಪ್‌ ಅವರ ವಾಣಿಜ್ಯ ಹಿತಾಸಕ್ತಿಯ ಆಡಳಿತದ ಮೇಲೆ ಮಾಸ್ಕೊದ ಪ್ರಭಾವವನ್ನು ಅಲ್ಲಗಳೆಯಲಾಗದು ಎಂಬಂಥ ಶಂಕೆಗಳಿಗೆ ಇದರಿಂದ  ಮತ್ತೆ ಬಲ ಬಂದಿದೆ. ಆದರೆ ರಾಷ್ಟ್ರದ ವಿದೇಶಾಂಗ ನೀತಿ ಹಾಗೂ ಮಿಲಿಟರಿ ವಿಚಾರಗಳಲ್ಲಿ ಮುಗ್ಗರಿಸುವುದು ಸಲ್ಲದು. ಟ್ರಂಪ್ ಕಾರ್ಯಸೂಚಿಯ ಒಡಕುಗಳನ್ನು ಅರ್ಥ ಮಾಡಿಕೊಳ್ಳಲು ಈ ಪ್ರಕರಣ ಪಾಠವಾಗಬೇಕು.
 
ಅಮೆರಿಕದಲ್ಲಿನ ರಷ್ಯಾದ ರಾಯಭಾರಿ ಸರ್ಜೈ ಕಿಸ್ಲಿಯಾಕ್‌ ಜತೆ ಫ್ಲಿನ್ ಅವರು ರಹಸ್ಯ ಮಾತುಕತೆಯನ್ನು ನಡೆಸಿದ್ದರು. ಬಳಿಕ ಆ ಮಾತುಕತೆ ವಿವರಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎಂಬಂಥ ಆರೋಪ ಗಂಭೀರವಾದದ್ದು. ‘ಫ್ಲಿನ್ ಅವರ ಗೋಪ್ಯ ಮಾತುಕತೆಯು ಬ್ಲ್ಯಾಕ್‌ಮೇಲ್‌ ನಡೆಸಲು ಪೂರಕವಾದ ಮಾಹಿತಿಗಳನ್ನು ರಷ್ಯನ್ನರಿಗೆ ಒದಗಿಸಿದೆ. ಆದರೆ ಈ ಬಗ್ಗೆ ಅವರು ಆಡಳಿತಾಧಿಕಾರಿಗಳ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ’ ಎಂದು ನ್ಯಾಯಾಂಗ ಇಲಾಖೆಯು ಟ್ರಂಪ್‌ ಆಡಳಿತಕ್ಕೆ ನೀಡಿದ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸುವಂತಹದ್ದೂ ಅಲ್ಲ. ಹೀಗಿದ್ದೂ ಕ್ರಮ ಜರುಗಿಸಲು ಟ್ರಂಪ್ ಆಡಳಿತ ವಿಳಂಬ ಮಾಡಿತು. ಈ ವಿಚಾರದಲ್ಲಿ ‘ವಾಷಿಂಗ್ಟನ್‌ ಪೋಸ್ಟ್‌’ನಲ್ಲಿ ಸ್ಫೋಟಕ ವಿವರಗಳು ಪ್ರಕಟವಾದ ನಂತರ ಟ್ರಂಪ್ ಅವರಿಗೆ ಬೇರೆ ದಾರಿ ಇರಲಿಲ್ಲ ಎಂಬ ಮಾಹಿತಿ ಇದೆ. ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾದ ನಂತರವಷ್ಟೇ ಕ್ರಮ ಕೈಗೊಳ್ಳಲಾಯಿತು. ಇದಕ್ಕೆ ಪೂರಕ ಎಂಬಂತೆ ಟ್ರಂಪ್ ಅವರು ಈಗ ಮತ್ತೆ ಮಾಧ್ಯಮಗಳ ವಿರುದ್ಧ ಅಸಹನೆ ಪ್ರದರ್ಶಿಸಿದ್ದಾರೆ. ‘ಫ್ಲಿನ್ ಅವರು ಅದ್ಭುತ ಮನುಷ್ಯ. ಅವರನ್ನು ಮಾಧ್ಯಮಗಳು ಕೆಟ್ಟದಾಗಿ ಬಿಂಬಿಸಿವೆ’ ಎಂದು ಟ್ರಂಪ್ ಹೇಳಿದ್ದಾರೆ. ಜೊತೆಗೆ ರಹಸ್ಯ ಮಾಹಿತಿಯನ್ನು  ಗುಪ್ತಚರ ವಿಭಾಗ  ಅಕ್ರಮವಾಗಿ ಸೋರಿಕೆ ಮಾಡಿದೆ ಎಂದೂ ಕೆಂಡ ಕಾರಿದ್ದಾರೆ. ಆದರೆ ರಷ್ಯನ್ ರಾಯಭಾರಿ ಜೊತೆ ತಾವು ನಡೆಸಿದ ಮಾತುಕತೆಯ ಸ್ವರೂಪದ ಬಗ್ಗೆ ಅಮೆರಿಕದ ಉಪಾಧ್ಯಕ್ಷ ಮೈಕೆಲ್ ಪೆನ್ಸ್ ಅವರಿಗೆ ಅಪೂರ್ಣ ಮಾಹಿತಿ ನೀಡಿದ್ದನ್ನು ಸ್ವತಃ ಫ್ಲಿನ್ ಅವರೇ ಒಪ್ಪಿಕೊಂಡಿದ್ದಾರೆ. ಕಾನೂನಿಗೆ ವಿರುದ್ಧವಾದ ಈ ನಡೆ ಕ್ಷಮಾರ್ಹವಾದುದಂತೂ ಅಲ್ಲ. ತನಿಖೆಗೆ ಒಳಪಡಬೇಕಾದ ಗಂಭೀರವಾದ ಸಂಗತಿ. 
 
ರಾಷ್ಟ್ರದ ಉಪಾಧ್ಯಕ್ಷರಿಗೇ ತಪ್ಪು ಮಾಹಿತಿ ನೀಡಿದವರು ರಾಷ್ಟ್ರದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮುಂದುವರಿಯುವುದು ಹೇಗೆ ಸಾಧ್ಯ?  ಮಿಲಿಟರಿ ಕ್ಷೇತ್ರದಲ್ಲಿ ಅನುಭವ ಉಳ್ಳವರು ಫ್ಲಿನ್.  ನಿವೃತ್ತ ಸೇನಾಧಿಕಾರಿ ಅವರು. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಮಯ ಕಳೆದಿರುವ ಅವರಿಗೆ ಸೂಕ್ಷ್ಮ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಅನುಭವ ಇದ್ದಿರಲೇಬೇಕು. ಅಮೆರಿಕಕ್ಕೆ ರಷ್ಯಾ ಸೂಕ್ಷ್ಮ ವಿಷಯ ಎಂಬುದೂ ಗೊತ್ತಿರಬೇಕು. ಅದೂ ರಷ್ಯಾ ಅಧ್ಕ್ಷಕ್ಷ  ವ್ಲಾಡಿಮಿರ್ ಪುಟಿನ್ ಜೊತೆ ಅಧ್ಯಕ್ಷ ಟ್ರಂಪ್ ಅವರ ನಿಕಟ ಬಾಂಧವ್ಯ ಹಾಗೂ ಮಾಸ್ಕೊ ಜೊತೆ ನಿಕಟ ಸಹಕಾರ ಮುಂದುವರಿಸಲು ಟ್ರಂಪ್‌ ಅವರು ನಿರ್ಧರಿಸಿರುವುದು ಟೀಕೆಗೆ ಒಳಗಾಗಿದೆ. ಜೊತೆಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರ ವೇಳೆ ರಷ್ಯದ ಹಸ್ತಕ್ಷೇಪ ಕುರಿತಾದ ಆರೋಪವೂ ವಿವಾದವಾಗಿರುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ತಮ್ಮ ಸರ್ಕಾರದ ಪ್ರಮುಖ ವ್ಯಕ್ತಿಯ ರಾಜೀನಾಮೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಒಪ್ಪಿಕೊಂಡಿದ್ದಾರೆ ಎಂಬುದು ಈ ವಿಷಯದ ಗಂಭೀರತೆಯನ್ನು ಸೂಚಿಸುತ್ತದೆ. ಅಧ್ಯಕ್ಷೀಯ ಚುನಾವಣಾ ಪ್ರಚಾರದ ಉದ್ದಕ್ಕೂ ಫ್ಲಿನ್ ಅವರು ಟ್ರಂಪ್‌ ಬೆಂಬಲಿಗರಾಗಿದ್ದರು. ಹೀಗಾಗಿ ಫ್ಲಿನ್ ನಿರ್ಗಮನ ಟ್ರಂಪ್ ಆಡಳಿತಕ್ಕೆ ಮುಜುಗರದ ಸಂಗತಿ. 
 
ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆ ಅತ್ಯಂತ ಜವಾಬ್ದಾರಿಯುತವಾದುದು. ಸಡಿಲ ಹಾಗೂ ಹಗುರ ಧೋರಣೆಯಿಂದ ಈ ಹುದ್ದೆ ನಿಭಾಯಿಸಲಾಗದು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗವಾಗಿಯೇ ಟೀಕಿಸಿ ಈ ಹಿಂದೆ ಮೈಕೆಲ್ ಫ್ಲಿನ್ ವಿವಾದ ಸೃಷ್ಟಿಸಿದ್ದರು. ಜೊತೆಗೆ ಇಸ್ಲಾಮಿಕ್ ಸಿದ್ಧಾಂತವನ್ನು ಬಹಿರಂಗವಾಗಿ  ಸಾಮಾಜಿಕ ಮಾಧ್ಯಮಗಳಲ್ಲಿ ಕಠೋರವಾಗಿ ಟೀಕಿಸಿಯೂ ಫ್ಲಿನ್‌ ಅವರು ವಿವಾದ ಸೃಷ್ಟಿಸಿಕೊಂಡಿದ್ದರು. ಈಗ ಮತ್ತೊಂದು  ವಿವಾದ ಸೃಷ್ಟಿಸಿ ರಾಜೀನಾಮೆಯನ್ನೂ ನೀಡಿದ್ದಾರೆ.  ಹೀಗಾಗಿ ಸಂಪುಟಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಟ್ರಂಪ್‌ ಅವರು ಎಚ್ಚರ ವಹಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT