ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಸದೆ ಬಂದ ಭಾಗ್ಯ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ತಾವು ತಮಿಳುನಾಡಿನ ಮುಖ್ಯಮಂತ್ರಿ ಆಗಬಹುದು ಎಂಬುದನ್ನು ಎಡಪ್ಪಾಡಿ ಕೆ. ಪಳನಿಸ್ವಾಮಿ (62) ಅವರು ಕಲ್ಪಿಸಿಕೊಂಡೂ ಇರಲಿಲ್ಲ. ಯಾಕೆಂದರೆ ಜಯಲಲಿತಾ ಅವರು ನಿಧನರಾದ ನಂತರ, ಮುಖ್ಯಮಂತ್ರಿ ಸ್ಥಾನವನ್ನು ಶಶಿಕಲಾ ವಹಿಸಿಕೊಳ್ಳಬೇಕು ಎಂದು ಹೇಳಿದ ಮೊದಲ ಮುಖಂಡ ಪಳನಿಸ್ವಾಮಿ.

ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಶಶಿಕಲಾ ಜೈಲಿಗೆ ಹೋಗುವುದು ಅನಿವಾರ್ಯವಾದಾಗ ಪಳನಿಸ್ವಾಮಿ ಅವರಿಗೆ ಅದೃಷ್ಟ ಕೂಡಿ ಬಂತು.

ಕೊಂಗು ವೆಲ್ಲಾಲ ಗೌಂಡರ್‌ ಸಮುದಾಯದ ಪಳನಿಸ್ವಾಮಿ ವೃತ್ತಿಯಲ್ಲಿ ಕೃಷಿಕ. 1989, 1991, 2011 ಮತ್ತು 2016ರಲ್ಲಿ ಅವರು ಎಡಪ್ಪಾಡಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1998ರಲ್ಲಿ ಅವರು ತಿರುಚ್ಚಿನಗೋಡ್‌ ಲೋಕಸಭಾ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು.

ಚಿಕ್ಕ ವಯಸ್ಸಿನಲ್ಲಿ (1972ರಲ್ಲಿ) ಎಐಎಡಿಎಂಕೆ ಸೇರಿದ ಪಳನಿಸ್ವಾಮಿ, ಜಯಲಲಿತಾ ರಾಜಕೀಯ ಪ್ರವೇಶಿಸಿದ ನಂತರ ಅವರ ಕಟ್ಟಾ ಬೆಂಬಲಿಗರಾಗಿದ್ದರು. 1987ರಲ್ಲಿ ಪಕ್ಷದ ಸ್ಥಾಪಕ ಎಂಜಿಆರ್‌ ನಿಧನರಾದಾಗ ಪಕ್ಷದಲ್ಲಿ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಬಿಕ್ಕಟ್ಟು ಉಂಟಾಗಿತ್ತು. ಆಗ ಜಯಲಲಿತಾ ಪರ ಪಳನಿಸ್ವಾಮಿ ಗಟ್ಟಿಯಾಗಿ ನಿಂತಿದ್ದರು.

1989 ಮತ್ತು 1991ರ ಚುನಾವಣೆ ಗೆದ್ದ ನಂತರ ಹಲವು ವರ್ಷ ಅವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. 2011 ಮತ್ತು 2016ರಲ್ಲಿ ಚುನಾವಣೆ ಗೆದ್ದ ನಂತರ ಅವರ ಪ್ರಾಬಲ್ಯ ಹೆಚ್ಚಾಯಿತು.

2011ರಲ್ಲಿ ಮೊದಲ ಬಾರಿಗೆ ಜಯಲಲಿತಾ ಸಂಪುಟದಲ್ಲಿ ಸ್ಥಾನ ಪಡೆದ ಪಳನಿಸ್ವಾಮಿಗೆ ಲೋಕೋಪಯೋಗಿ, ಹೆದ್ದಾರಿ ಮತ್ತು ಕಿರು ಬಂದರುಗಳ ಖಾತೆ ದೊರೆಯಿತು. ಈ ಅವಕಾಶ ಉಪಯೋಗಿಸಿಕೊಂಡ ಅವರು ಜಯಲಲಿತಾ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು. 2011ರ ನಂತರದ ಐದು ವರ್ಷಗಳ ಅವಧಿಯಲ್ಲಿ ಜಯಲಲಿತಾ ಅವರು ಹಲವು ಬಾರಿ ಸಂಪುಟ ಪುನರ್‌ರಚನೆ ಮಾಡಿದರೂ ಪಳನಿಸ್ವಾಮಿ ಖಾತೆ ಬದಲಾಗಿರಲಿಲ್ಲ.

ಜಯಲಲಿತಾ ಸಂಪುಟದಲ್ಲಿ ಪಳನಿಸ್ವಾಮಿ ನಾಲ್ಕನೇ ಸ್ಥಾನದಲ್ಲಿದ್ದರು. ಮುಖ್ಯಮಂತ್ರಿಯಾಗುವ ಕನಸನ್ನೂ ಕಾಣದಿದ್ದ ಅವರು ಈಗ ಮುಖ್ಯಮಂತ್ರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT