ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್ ನಾಯಕತ್ವದ ಯುವಪಡೆಗೆ ಪರೀಕ್ಷೆ

ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ನಡುವಣ ಅಭ್ಯಾಸ ಪಂದ್ಯ ಇಂದು
Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಮುಂಬೈ: ಭಾರತ ಕ್ರಿಕೆಟ್‌ನ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಶುಕ್ರವಾರ ನಡೆಯುವ ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯವು ವೇದಿಕೆಯಾಗಲಿದೆ. 
 
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಮೂರು ದಿನಗಳ ಪಂದ್ಯದಲ್ಲಿ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ. 
ಕರ್ನಾಟಕದ ಭರವಸೆಯ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಸೇರಿದಂತೆ ಬೇರೆ ಬೇರೆ ತಂಡಗಳ ಪ್ರತಿಭಾನ್ವಿತ ಆಟಗಾರರಿಗೆ ಸ್ಟೀವನ್ ಸ್ಮಿತ್ ಬಳಗದ ಮುಂದೆ ಆಡುವ ಅನುಭವ ದೊರೆಯಲಿದೆ. 
 
ಫೆಬ್ರುವರಿ 23ರಿಂದ ಭಾರತದ ಎದುರು ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಸ್ಪಿನ್ನರ್ ಕುಲದೀಪ್ ಯಾದವ್ ಇದ್ದಾರೆ. ಅಭ್ಯಾಸ ಪಂದ್ಯದಲ್ಲಿ ಉತ್ತಮವಾಗಿ ಆಡಿ ಟೆಸ್ಟ್‌ ಪದಾರ್ಪಣೆಯ ಅವಕಾಶ ಗಿಟ್ಟಿಸುವ ಛಲದಲ್ಲಿ ಇಬ್ಬರೂ ಆಟಗಾರರಿದ್ದಾರೆ. 
 
ಇತ್ತೀಚೆಗಷ್ಟೇ ದೆಹಲಿ ತಂಡದ ನಾಯಕನಾಗಿ ನೇಮಕವಾಗಿರುವ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರಿಷಭ್ ಪಂತ್, ರಣಜಿ ಚಾಂಪಿಯನ್ ಗುಜರಾತ್ ತಂಡದ ಪ್ರಿಯಾಂಕ್ ಪಾಂಚಾಲ್,  ಮುಂಬೈ ತಂಡದ ಶ್ರೇಯಸ್ ಅಯ್ಯರ್, ಅಖಿಲ್ ಹೆರ್ವಾಡ್ಕರ್,  ಜಾರ್ಖಂಡ್ ತಂಡದ ಇಶಾನ್ ಕಿಶನ್,  ಬಂಗಾಳದ ಅಶೋಕ್ ದಿಂಡಾ ಅವರು ತಂಡದಲ್ಲಿದ್ದಾರೆ. 
 
 ಮಧ್ಯಮವೇಗಿಗಳಾದ ದೆಹಲಿಯ ನವದೀಪ್ ಸೈನಿ ಮತ್ತು ಹೈದರಾಬಾದಿನ ಮೊಹಮ್ಮದ್ ಸಿರಾಜ್   ಅವರಿಗೂ ಸಾಮರ್ಥ್ಯ ಮೆರೆಯುವ ಅವಕಾಶ ಸಿಗಬಹುದು.  ಸಿರಾಜ್ ಅವರು ಇರಾನಿ ಕಪ್ ಟೂರ್ನಿಯ ಫೈನಲ್‌ನಲ್ಲಿ ಇತರೆ ಭಾರತದ ಪರವಾಗಿ ಉತ್ತಮ ಬೌಲಿಂಗ್ ಮಾಡಿದ್ದರು. ಅಶೋಕ ದಿಂಡಾ ಮತ್ತು ಹಾರ್ದಿಕ್ ಅವರೂ ಮಧ್ಯಮವೇಗದ ವಿಭಾಗದ ಸಾರಥ್ಯ ವಹಿಸುವುದರಿಂದ ಸಿರಾಜ್ ಅಥವಾ ಸೈನಿ ಅವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಏಕೆಂದರೆ, ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿರುವು ದರಿಂದ  ಯಾದವ್  ಅವರ ಜತೆಗೆ ಗೌತಮ್  ಅವಕಾಶ ಪಡೆಯಬಹುದು. 
 
ವಾತಾವರಣಕ್ಕೆ ಹೊಂದಿಕೊಳ್ಳುವ ಅವಕಾಶ
ಟೆಸ್ಟ್‌ ಸರಣಿಯ ಆರಂಭಕ್ಕೆ ಮುನ್ನ ಇಲ್ಲಿಯ ವಾತಾವರಣದಲ್ಲಿ  ಆಡಿದ ಅನುಭವ ಪಡೆದುಕೊಳ್ಳಲು ಪ್ರವಾಸಿ ಬಳಗಕ್ಕೆ ಅವಕಾಶ ಸಿಗಲಿದೆ. ನಾಲ್ಕು ದಿನಗಳಿಂದ ಇಲ್ಲಿ ತಾಲೀಮು ನಡೆಸು ತ್ತಿರುವ ಕಾಂಗರೂ ತಂಡವು ಇಲ್ಲಿಯ ಪಿಚ್‌ನ ಗುಣ ಅರಿಯುವ ನಿಟ್ಟಿನಲ್ಲಿ ಈ ಪಂದ್ಯ ಸಹಕಾರಿ ಯಾಗಲಿದೆ. 
 
ಬ್ಯಾಟಿಂಗ್ ಕ್ರಮಾಂಕವು ಬಲಾಢ್ಯ ವಾಗಿರುವ ತಂಡದಲ್ಲಿ ನಾಯಕ ಸ್ಮಿತ್, ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್,  ಜೋಶ್ ಹೇಜಲ್‌ವುಡ್,  ಉಸ್ಮಾನ್ ಖ್ವಾಜಾ ಅವರು  ಉತ್ತಮ ಫಾರ್ಮ್‌ನಲ್ಲಿದ್ದಾರೆ.  
 
ಆಸ್ಟ್ರೇಲಿಯಾ ತಂಡದಲ್ಲಿರುವ ಬಹುತೇಕ ಆಟಗಾರರಿಗೆ ಭಾರತದಲ್ಲಿ ಆಡಿದ ಅನುಭವ ಇದೆ. ಐಪಿಎಲ್‌ನ ಬೇರೆ ಬೇರೆ ತಂಡಗಳಲ್ಲಿ ಆಡಿದ್ದಾರೆ. ಅದರಲ್ಲೂ ಹೋದ ವರ್ಷ ಐಪಿಎಲ್ ಟ್ರೋಫಿ ಗೆದ್ದುಕೊಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್‌ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಭಾರತದ ಯುವ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡುವುದು ಖಚಿತ. 
 
 ವೇಗಿ ಮಿಷೆಲ್ ಸ್ಟಾರ್ಕ್ ಅವರು ಬೌಲಿಂಗ್ ಸಾರಥ್ಯ ವಹಿಸುವರು. ಅವರೊಂದಿಗೆ ಆಫ್‌ಸ್ಪಿನ್ನರ್ ನಾಥನ್ ಲಿಯಾನ್ ಮತ್ತು ರೆನ್‌ಷಾ ಅವರು ಕೂಡ ಕಣಕ್ಕಿಳಿಯುವುದು ಬಹುತೇಕ ಖಚಿತ.  ಭಾರತದ ಪಿಚ್‌ಗಳಲ್ಲಿ ಸ್ಪಿನ್ನರ್‌ ಗಳ ಪಾತ್ರವೇ ಪ್ರಮುಖವಾಗುವುದ ರಿಂದ ಪ್ರವಾಸಿ ಬಳಗವು ತನ್ನ ಸ್ಪಿನ್ ಬೌಲರ್‌ಗಳಿಗೆ ಅಭ್ಯಾಸ ಪಂದ್ಯದಲ್ಲಿ ಹೆಚ್ಚು ಅವಕಾಶ ಕೊಡುವ ಸಾಧ್ಯತೆ ಇದೆ. 
 
**
ತಂಡಗಳು 
ಭಾರತ ‘ಎ’: ಹಾರ್ದಿಕ್ ಪಾಂಡ್ಯ (ನಾಯಕ), ಅಖಿಲ ಹೆರ್ವಾಡ್ಕರ್, ಪ್ರಿಯಾಂಕ್ ಕಿರಿಟ್ ಪಾಂಚಾಲ್, ಶ್ರೇಯಸ್ ಅಯ್ಯರ್, ಅಂಕಿತ್ ಭಾವ್ನೆ,  ರಿಷಭ್ ಪಂತ್, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಶಹಬಾಜ್ ನದೀಂ, ಕೆ. ಗೌತಮ್, ಕುಲದೀಪ್ ಯಾದವ್, ನವದೀಪ್ ಸೈನಿ, ಅಶೋಕ್ ದಿಂಡಾ,  ಮೊಹಮ್ಮದ್ ಸಿರಾಜ್, ರಾಹುಲ್ ಸಿಂಗ್, ಬಾಬಾ ಇಂದ್ರಜೀತ್. 
 
ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಆ್ಯಷ್ಟನ್ ಅಗರ್, ಜಾಕ್ಸನ್ ಬರ್ಡ್, ಪೀಟರ್ ಹ್ಯಾಂಡ್ಸ್‌ಕಂಬ್, ಜೋಶ್ ಹೇಜಲ್‌ವುಡ್, ಉಸ್ಮಾನ್ ಖ್ವಾಜಾ, ನಥಾನ್ ಲಿಯಾನ್, ಮಿಷೆಲ್ ಮಾರ್ಚ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟಿಫನ್ ಒಕೀಫ್, ಮ್ಯಾಥ್ಯೂ ರೆನ್‌ಷಾ, ಮಿಷೆಲ್ ಸ್ಟಾರ್ಕ್, ಮಿಷೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT