ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕ್ಲಸ್ಟರ್‌ ಯೋಜನೆ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಕಲ ಮೂಲಸೌಕರ್ಯಗಳನ್ನು ಒದಗಿಸಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ   ರಾಷ್ಟ್ರೀಯ ಮಹಾಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಕೈಗಾರಿಕಾ ಕ್ಲಸ್ಟರ್‌ಗಳ ಮೂಲಸೌಕರ್ಯ  ಪೂರ್ಣ ಪ್ರಮಾಣದಲ್ಲಿ ಫಲ ನೀಡುವಂತಾಗಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಮಹಾಯೋಜನೆ ರೂಪಿಸಲಾಗುತ್ತಿದೆ ಎಂದು ಇಲಾಖೆಯ ಕಾರ್ಯದರ್ಶಿ ರಮೇಶ್‌ ಅಭಿಷೇಕ್‌ ತಿಳಿಸಿದ್ದಾರೆ. ‘ಮೇಕ್‌ ಇನ್‌ ಕರ್ನಾಟಕ’ ಸಮ್ಮೇಳನದ ವೇಳೆ ಅವರು ‘ಪ್ರಜಾವಾಣಿ’ ಜೊತೆ   ಮಾತನಾಡಿದರು.

‘ಮೇಕ್‌ ಇನ್ ಇಂಡಿಯಾ’ ಯೋಜನೆಗೆ ಚಾಲನೆ ನೀಡಿದ ಬಳಿಕ ಕೇಂದ್ರ ಸರ್ಕಾರವು ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಕೈಗಾರಿಕಾ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಲು ವಿಶೇಷ ಆದ್ಯತೆ ನೀಡುತ್ತಿದೆ. ಅನೇಕ ಕಡೆ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವೆಡೆ ರಾಜ್ಯ ಸರ್ಕಾರಗಳೂ ಕೈಗಾರಿಕಾ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುತ್ತಿವೆ.  ನಿರ್ದಿಷ್ಟ ಮಾನದಂಡ ಇಲ್ಲದ ಕಾರಣ ಈ ಸೌಕರ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಕೈಗಾರಿಕಾ ಕ್ಲಸ್ಟರ್‌ಗಳಿಂದ ಗರಿಷ್ಠ ಪ್ರಯೋಜನ ಪಡೆಯುವಂತಾಗಬೇಕು.    ರಾಷ್ಟ್ರೀಯ ಮಟ್ಟದಲ್ಲಿ ಮಹಾಯೋಜನೆ ರೂಪಿಸುವುದರಿಂದ ಇದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ  ಸಿದ್ಧತೆಗಳು  ಆರಂಭವಾಗಿವೆ. ನೀತಿ ಆಯೋಗ, ಕೈಗಾರಿಕೆಗೆ ಸಂಬಂಧಪಟ್ಟ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳ ಸಲಹೆ ಪಡೆದು ಇದನ್ನು ಕಾರ್ಯಗತಗೊಳಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಇನ್ನು ಕೆಲವೇ ತಿಂಗಳಲ್ಲಿ ಈ ಯೋಜನೆ ಜಾರಿ ಆಗಲಿದೆ. ಈ ಯೋಜನೆಯಿಂದ ವಿವಿಧ ಕೈಗಾರಿಕಾ ಕ್ಲಸ್ಟರ್‌ಗಳ ನಡುವೆ ಸಮನ್ವಯ ಸಾಧಿಸುವುದು ಸುಲಭವಾಗಲಿದೆ’ ಎಂದರು.

‘ಇಂತಹ ಕಡೆಯೇ ಬಂಡವಾಳ ಹೂಡಿಕೆ ಮಾಡಬೇಕು ಎಂದು ನಾವು ಯಾರ ಮೇಲೂ ಒತ್ತಡ ಹೇರುವುದಿಲ್ಲ. ಒತ್ತಡಕ್ಕೆ ಮಣಿಯಲು ಉದ್ಯಮಿಗಳು ಸಹ ದಡ್ಡರೇನಲ್ಲ. ರಾಜ್ಯ ಸರ್ಕಾರಗಳು ಒದಗಿಸುವ ಸೌಕರ್ಯ ಹಾಗೂ ನೀಡುವ ರಿಯಾಯ್ತಿಗಳನ್ನು ಆಧರಿಸಿ, ಹೂಡಿಕೆಗೆ ಉತ್ತಮ ವಾತಾವರಣ ಇರುವಲ್ಲಿ ಉದ್ಯಮಿಗಳು ಹೂಡಿಕೆ ಮಾಡುತ್ತಾರೆ. ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ವಾಹನ ಪೂಲಿಂಗ್‌ ನಿರ್ಬಂಧ ಬೇಡ’
‘ಕರ್ನಾಟಕದಲ್ಲಿ ನವೋದ್ಯಮಗಳಿಗೆ ಉತ್ತೇಜನ ಸಿಗುತ್ತಿದೆ.  ಓಲಾ, ಉಬರ್‌ನಂತಹ ಆ್ಯಪ್‌ ಆಧಾರಿತ ಸಾರಿಗೆ ಸಂಸ್ಥೆಗಳು ಕೈಗೊಂಡ ವಾಹನ ಪೂಲಿಂಗ್‌ನಂತಹ ವಿನೂತನ ಪ್ರಯತ್ನಗಳಿಗೂ ಉತ್ತೇಜನ ಸಿಗಬೇಕು. ಅದನ್ನು ಬಿಟ್ಟು ಈ ಪ್ರಯತ್ನವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಬಾರದು’ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್‌ ಕಾಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT