ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ಸಾಧನೆಗೆ ಚೀನಾ ಮೆಚ್ಚುಗೆ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೀಜಿಂಗ್: ಒಂದೇ ರಾಕೆಟ್‌ನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆ ನಿರ್ಮಿಸಿರುವ ಇಸ್ರೊ ಸಾಧನೆ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದೆ ಎಂದು ಚೀನಾದ ಪ್ರಮುಖ ಪತ್ರಿಕೆ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್‌ ಗುರುವಾರ ವಿಶ್ಲೇಷಿಸಿದೆ.
 
ಸಣ್ಣ ಬಜೆಟ್‌ನಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ಯಶಸ್ವಿಗೊಳಿಸುವ ಸಾಧ್ಯತೆಗಳ ಕುರಿತು ಇತರೆ ದೇಶಗಳು ಯೋಚಿಸಲು ಭಾರತದ ಬಾಹ್ಯಾಕಾಶ ಯೋಜನೆ ಪ್ರೇರಣೆ ನೀಡಿದೆ ಎಂದು ಪತ್ರಿಕೆ ಸಂಪಾದಕೀಯದಲ್ಲಿ ಹೇಳಿದೆ.
 
ಬಹುಶಃ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ಭಾರತದ ವಿಶ್ವದಾಖಲೆಯ ಸಾಧನೆಯು ಇಷ್ಟು  ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ ಎಂದು ಟೈಮ್ಸ್‌ ಹೇಳಿದೆ.
 
‘2008ರಲ್ಲಿ ಚಂದ್ರನ ಅಧ್ಯಯನ ಪ್ರಾರಂಭಿಸಿದ ಭಾರತ, 2013ರಲ್ಲಿ ಏಷ್ಯಾದ ದೇಶಗಳಲ್ಲಿಯೇ ಉನ್ನತ ಶ್ರೇಣಿಯ ಮಾನವರಹಿತ ರಾಕೆಟ್‌ಅನ್ನು ಮಂಗಳ ಗ್ರಹಕ್ಕೆ ಉಡಾವಣೆ ಮಾಡಿತು. ಭಾರತದಿಂದ ನಾವು ಅನೇಕ ಪಾಠಗಳನ್ನು ಕಲಿಯಬಹುದು. ಶಕ್ತಿಶಾಲಿ ದೇಶವಾಗಿ ಬೆಳೆಯುತ್ತಿರುವ ಅದು ಮಹತ್ತರ ಕಾರ್ಯ ನಿರ್ವಹಿಸಿದೆ. ಭಾರತದ ರಾಜಕೀಯ ಮತ್ತು ಸಾಮಾಜಿಕ ತತ್ವಚಿಂತನೆ ಗಮನಾರ್ಹ ಎಂದು ಅದು ವಿಶ್ಲೇಷಿಸಿದೆ.
 
ಆದರೆ, ಇಸ್ರೊದ ಈ ಸಾಧನೆ ಮಿತಿಗಳನ್ನು ಹೊಂದಿದೆ. ಬಾಹ್ಯಾಕಾಶ ತಂತ್ರಜ್ಞಾನ ಪೈಪೋಟಿಯಲ್ಲಿ ಎಷ್ಟು ಸಂಖ್ಯೆಯ ಉಪಗ್ರಹಗಳನ್ನು ಉಡಾವಣೆ ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಈ ಸಾಧನೆಯ ಮಹತ್ವ ಸೀಮಿತವಾಗಿದೆ ಎಂದು ಹೇಳುವುದು ನ್ಯಾಯಸಮ್ಮತವೂ ಹೌದು ಎಂದು ಅದು ಹೇಳಿದೆ.
 
ಏನೇ ಇದ್ದರೂ, ದೇಶದ ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಯನ್ನು ಅದರ ಹೂಡಿಕೆ ಗಾತ್ರದ ಆಧಾರದಲ್ಲಿಯೇ ನಿರ್ಧರಿಸಲಾಗುತ್ತದೆ ಎಂದಿರುವ ಪತ್ರಿಕೆ, ಉಳಿದ ಮುಂಚೂಣಿ ದೇಶಗಳಿಗಿಂತ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಹೂಡಿಕೆ ಕಡಿಮೆ ಇರುವುದನ್ನು ಅಂಕಿಅಂಶಗಳ ಸಹಿತ ವಿವರಿಸಿದೆ. 
 
ಚೀನಾ ಮತ್ತು ಭಾರತ ಬಾಹ್ಯಾಕಾಶ ಯೋಜನೆಗಳಿಗೆ ವಿನಿಯೋಗಿಸುತ್ತಿರುವ ಮೊತ್ತ ಬಹುಪಾಲು ಸಮನಾಗಿದೆ ಎಂದು ಹೇಳಿದೆ. ಜಿಡಿಪಿ ಅನುಪಾತದಲ್ಲಿ ಚೀನಾಕ್ಕೆ ಹೋಲಿಸಿದರೆ ಭಾರತ  ರಕ್ಷಣಾ ವಲಯಕ್ಕೆ  ಅತಿ ಹೆಚ್ಚು ಹಣ ವಿನಿಯೋಗಿಸುತ್ತಿದೆ ಎಂದು ಪತ್ರಿಕೆಯ ಸಂಪಾದಕೀಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT