ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

125 ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ: ಸಿ.ಎಂ

Last Updated 16 ಫೆಬ್ರುವರಿ 2017, 20:17 IST
ಅಕ್ಷರ ಗಾತ್ರ
ಬೆಂಗಳೂರು: ‘ರಾಜ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ 125 ವಸತಿ ಶಾಲೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
 
ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯ ಅಂಗವಾಗಿ  ಸಮಾಜ ಕಲ್ಯಾಣ ಇಲಾಖೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘40 ಎಕರೆ ಪ್ರದೇಶದಲ್ಲಿ ₹ 110 ಕೋಟಿ ವೆಚ್ಚದ ‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ನಾಲ್ಕು ವರ್ಷದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  (ಎಸ್‌ಸಿ, ಎಸ್‌ಟಿ) 151 ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸರ್ಕಾರ ನೆರವು ನೀಡಿದೆ’ ಎಂದರು. 
 
‘ಎಸ್‌ಸಿ, ಎಸ್‌ಟಿಯ ವಸತಿಹೀನರಿಗೆ 4 ಲಕ್ಷ ಮನೆಗಳನ್ನು ಕಟ್ಟಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು. 
 
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರು ಮಾತನಾಡಿ, ‘ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಂದಿನ ಆರು ತಿಂಗಳ ಕಾಲ ರಾಜ್ಯದಾದ್ಯಂತ ಎಲ್ಲ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಹಾಗೂ ವಸತಿ ನಿಲಯಗಳಲ್ಲಿ ಅಂಬೇಡ್ಕರ್ ಚಿಂತನೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ’ ಎಂದರು.
 
‘ಅಂಬೇಡ್ಕರ್ ಕೊಡುಗೆ, ಅವರಿಂದ ಆಗಿರುವ ಪ್ರಯೋಜನೆಗಳು ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಆಳವಾದ ಅಧ್ಯಯನ ಕೈಗೊಳ್ಳುವ ಪ್ರತಿ ಜಿಲ್ಲೆಯ ಇಬ್ಬರಿಗೆ ತಲಾ ಒಂದು ಲಕ್ಷ ರೂಪಾಯಿ ಫೆಲೋಶಿಪ್ ನೀಡಲಾಗುವುದು. ಜುಲೈ 21ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಅಂಬೇಡ್ಕರ್ ಬಗೆಗಿನ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಸಲಾಗುತ್ತದೆ’ ಎಂದರು. 
 
**
ಆತ್ಮಹತ್ಯೆ ಬೆದರಿಕೆ ಹಾಕಿದ ವ್ಯಕ್ತಿ
‘ನಾನು 1993ರಲ್ಲಿ ಕೆಎಎಸ್‌ ಪರೀಕ್ಷೆ ಬರೆದಿದ್ದು, ಕೆಪಿಎಸ್‌ಸಿ ಅನ್ಯಾಯ ಮಾಡಿದ್ದು, ನನ್ನ ಉತ್ತರ ಪತ್ರಿಕೆಗಳನ್ನೇ ನಾಪತ್ತೆ ಮಾಡಲಾಗಿದೆ. ನ್ಯಾಯ ಸಿಗದಿದ್ದರೆ ಸಭಾಂಗಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಪರುಶುರಾಮ ಎಂಬ ವ್ಯಕ್ತಿ ತನ್ನ ಬ್ಯಾಗ್‌ನಲ್ಲಿದ್ದ ಸೀಮೆ ಎಣ್ಣೆ ತುಂಬಿದ್ದ ಕ್ಯಾನ್‌ ಅನ್ನು ತೋರಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆಯೂ ಕಾರ್ಯಕ್ರಮದಲ್ಲಿ ನಡೆಯಿತು.

ವೇದಿಕೆ ಮೇಲಿದ್ದ ಸಚಿವ ಎಚ್.ಆಂಜನೇಯ ಅವರು ಪರುಶುರಾಮ ಅವರ ಬಳಿಗೆ ತೆರಳಿ ಮನವಿ ಸ್ವೀಕರಿಸಿದರು. ಬಳಿಕ ಪೊಲೀಸರು ಪರುಶುರಾಮ ಅವರನ್ನು ವಾಹನದಲ್ಲಿ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT