ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಿಯುತಾ ಕಲಿಯುತಾ...

ಮನ ಮಂಥನ
Last Updated 17 ಫೆಬ್ರುವರಿ 2017, 10:07 IST
ಅಕ್ಷರ ಗಾತ್ರ

ಮನ ಮಂಥನ
ಕಥೆ, ನಿರ್ಮಾಣ: ಡಾ.ಕೆ.ಎ. ಅಶೋಕ ಪೈ
ನಿರ್ದೇಶನ: ಸುರೇಶ ಹೆಬ್ಳೀಕರ್‌
ತಾರಾಗಣ: ರಮೇಶ ಭಟ್‌, ಸುರೇಶ ಹೆಬ್ಳೀಕರ್‌, ಸಂಗೀತ

ಬದುಕಿನಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ, ಆಸೆಗಳನ್ನು ಇಟ್ಟುಕೊಂಡಿರುತ್ತೇವೆ. ಅವೆಲ್ಲವೂ ಭಗ್ನವಾದಾಗ ಏನಾಗುತ್ತದೆ?
ಬದುಕೇ ವ್ಯರ್ಥ ಎನಿಸುತ್ತದೆ. ಹೀಗೆ ವ್ಯರ್ಥವೆನಿಸುವ ಬದುಕನ್ನು ಮತ್ತೆ ಚಿಗುರಿಸಿಕೊಳ್ಳಲು ಸಾಧ್ಯವೇ?

ಮನೋವಿಜ್ಞಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆತ್ಯಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಸುರೇಶ ಹೆಬ್ಳೀಕರ್‌ ನಿರ್ದೇಶನದ ‘ಮನ ಮಂಥನ’ ಹೇಳಹೊರಟಿರುವುದೂ ಇದನ್ನೇ. ಇದು ಖ್ಯಾತ ಮನೋವೈದ್ಯ ಡಾ. ಕೆ.ಎ. ಅಶೋಕ ಪೈ ಅವರು ಕಥೆ ಬರೆದು, ನಿರ್ಮಾಣ ಮಾಡಿರುವ ಕೊನೆಯ ಸಿನಿಮಾ.

ಮಲೆನಾಡಿನ ಹಳ್ಳಿಯೊಂದರಲ್ಲಿ ಕೃಷಿಯ ಜೊತೆಗೆ ಸಿಮೆಂಟು–ಕಬ್ಬಿಣದ ವ್ಯಾಪಾರವನ್ನೂ ಮಾಡುತ್ತಿರುವ ಜಗದೀಶರಾಯರ ಒಬ್ಬನೇ ಮಗ ಅಜಯ್‌. ಆತನಿಗೆ ಸಂಗೀತದಲ್ಲಿ ಆಸಕ್ತಿ. ಮಗ ಗಣಿತದಲ್ಲಿ ಪಾರಂಗತನಾಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಕೀರ್ತಿ ಪಡೆಯಬೇಕು ಎನ್ನುವುದು ತೀರಿಕೊಂಡ ಅಮ್ಮನ ಕನಸು. ಅಪ್ಪನಿಗೆ ಮಗ ಸಿ.ಎ. ಕಲಿತು ತನ್ನ ವ್ಯವಹಾರವನ್ನೇ ನೋಡಿಕೊಂಡು ಮನೆಯಲ್ಲಿಯೇ ಇರಲಿ ಎಂಬ ಹಂಬಲ. ಈ ಮೂರು ಬಿಂದುಗಳ ನಡುವೆ ಉಂಟಾಗುವ ಘರ್ಷಣೆ, ಅದರಿಂದ ಕುಟುಂಬದ ಉಳಿದ ಸದಸ್ಯರ ಮೇಲೆ ಆಗುವ ಪರಿಣಾಮಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಬೆಂಗಳೂರಿನಿಂದ ತಿರುಗಿ ಮನೆಗೆ ಬರುವ ಅಜಯ್‌ಗೆ ಮಾಧುರಿಯ ಪರಿಚಯವಾಗುತ್ತದೆ. ಭಗ್ನ ಕನಸುಗಳೇ ತುಂಬಿದ್ದ ಅವನ ಬದುಕಿನಲ್ಲಿ ಮಾಧುರಿ ಪ್ರೇಮದ ಝರಿ ಹರಿಸುತ್ತಾಳೆ. ಆದರೆ ಅಜಯ್‌ ತಂದೆಗೂ ತನ್ನ ಅಮ್ಮನಿಗೂ ವಿವಾಹೇತರ ಸಂಬಂಧ ಇದೆ ಎಂಬುದನ್ನು ತಿಳಿದನಂತರ ಅವನಿಂದ ದೂರವಾಗುತ್ತಾಳೆ. ನಿರಾಸೆಯ ಬೆಂಗಾಡಿನಲ್ಲಿ ಓಯಸಿಸ್‌ನಂತೆ ಬಂದ ಗೆಳತಿ ದೂರವಾದ ಮೇಲೆ ಅಜಯ್‌, ಆತ್ಯಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆ ಸೇರುತ್ತಾನೆ.

‘ಮನ ಮಂಥನ’ದಲ್ಲಿ ನಿರ್ದೇಶಕರಿಗೆ ತಮ್ಮ ಸಿನಿಮಾ ಬರೀ ರಂಜನೆಯ ಕಥೆಯಷ್ಟೇ ಆಗಬಾರದು ಎನ್ನುವ ಸ್ಪಷ್ಟತೆಯಿದೆ. ಅದು ಶಿಕ್ಷಣದ ಮಾಧ್ಯಮವೂ ಆಗಬೇಕು ಎಂಬ ಉದ್ದೇಶವೂ ಇದೆ. ಇದಕ್ಕಾಗಿ ಅವರು ಆ ಮಾಧ್ಯಮದ ವ್ಯಾಕರಣ ನಿಯಮಗಳನ್ನು ಮುರಿಯಲೂ ಹಿಂಜರಿದಿಲ್ಲ.

ಇದೊಂದು ಬಗೆಯ ‘ನಲಿ–ಕಲಿ’ ಸಿನಿಮಾ. ಸಿನಿಮಾದ ಮೊದಲರ್ಧ ನಲಿಯುವ ಕಥನವಿದ್ದರೆ, ದ್ವಿತೀಯಾರ್ಧ ಮನೋವೈಜ್ಞಾನಿಕ ಸಮಸ್ಯೆಗಳು ಮತ್ತು ಚಿಕಿತ್ಸೆಯ ವಿವಿಧ ಆಯಾಮಗಳ ಕಲಿಯುವಿಕೆಗೆ ಮೀಸಲು. ಕೊನೆಯ ಅರ್ಧ ಗಂಟೆ ಮನೋವಿಜ್ಞಾನದ ಸ್ವರೂಪ, ಚಿಕಿತ್ಸೆಯ ವಿಧಾನಗಳನ್ನು ತೋರಿಸಿರುವುದು ನಿರ್ದೇಶಕರ ಸಾಮಾಜಿಕ ಕಳಕಳಿಗೆ ನಿದರ್ಶನವಾಗಿದೆ.

ಈ ಭಾಗದಲ್ಲಿ ಬರೀ ಮಾನಸಿಕ ಸಂಬಂಧಿ ಸಮಸ್ಯೆಗಳ ಬಗ್ಗೆಯಷ್ಟೇ ಅಲ್ಲ, ಅದನ್ನು ನಿಭಾಯಿಸುವಾಗ ಮನೋವೈದ್ಯರು ಅನುಸರಿಸಬೇಕಾದ ಎಚ್ಚರಿಕೆಗಳ ಬಗ್ಗೆಯೂ ಬೆಳಕು ಚೆಲ್ಲುವುದರ ಮೂಲಕ, ವೈದ್ಯರಿಗೂ ಶಿಕ್ಷಣದ ಅಗತ್ಯವಿರುವುದನ್ನು ಮನಗಾಣಿಸಿದ್ದಾರೆ.

ರಮೇಶ್‌ ಭಟ್‌, ಕೆ.ಎಸ್‌. ಶ್ರೀಧರ್‌, ಸುರೇಶ್‌ ಹೆಬ್ಳೀಕರ್‌ ಅವರಂಥ ಅನುಭವಿಗಳ ಜತೆಗೆ ವಯಸ್ಸಿನಲ್ಲಿಯೂ ಅಭಿನಯದಲ್ಲಿಯೂ ಎಳೆಯರಾದ ಅನೇಕರಿಗೂ ಇಲ್ಲಿ ಅವಕಾಶ ನೀಡಲಾಗಿದೆ.

ಮನೋಸಂಬಂಧಿ ಸಮಸ್ಯೆಯಿಂದ ಗುಣಮುಖನಾಗುವ ಅಜಯ್‌, ಡಾಕ್ಟರ್‌ಗೆ ಕೃತಜ್ಞತೆಯಿಂದ ಹೇಳುವ ಮಾತು ‘ಥ್ಯಾಂಕ್ಸ್‌ ಫಾರ್‌ ಯುವರ್ ಅಡ್ವೈಸ್‌’. ಇದು ಸಿನಿಮಾ ಮುಗಿದು ಹೊರಬರುವಾಗ ಪ್ರೇಕ್ಷಕನ ಮನದಲ್ಲಿ ಮೂಡಿನಿಲ್ಲುವ ಭಾವವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT