ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನ್ಹೇಗೆ ಮರೆಯಲಿ!

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017
Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹಸಿ ಹಸಿರಾಗಿರುವ ಮಲೆನಾಡ ಕಾಡಿನ ನಡುವೆ ಮಂಗಳೂರು ಹಂಚಿನ ನಾಲ್ಕೇ ಮನೆ. ಹತ್ತಿರದ ಶೃಂಗೇರಿಯಲ್ಲಿರುವ ಪೇಟೆಗೆ ನಾಲ್ಕು ಕಿ.ಮೀ. ಕಾಲು ನಡಿಗೆಯಲ್ಲೇ ಸಾಗಬೇಕು. ಬೇಸಿಗೆಯಲ್ಲಿ ಅಲ್ಲಲ್ಲೇ ಜಿನುಗುವ ಭುವಿಯ ವರ್ತೆ ನೀರಿನ ಸಣ್ಣ ಹಳ್ಳ. ಆ ಓಣಿ ಈಗೀಗ ಒಂಚೂರು ಬೈಕು-ಆಟೋ ಓಡಾಡುವಷ್ಟು ಅಗಲವಾಗ್ತಾ ಇದೆ. ಹೀಗಿರುವಾಗ ಒಂದು ದಿನ.

ಕಾರಣ ನೆನಪಿಗೆ ಬರುತ್ತಿಲ್ಲ. ನನ್ನ ಜೊತೆ ಅವಳಿರಲಿಲ್ಲ. ಜೋರಾದ ಮಳೆ. ಶಾಲೆಗೆ ತಡವಾದ ಕಾರಣ ಸಮವಸ್ತ್ರವನ್ನು ಧರಿಸಿಕೊಂಡು ನೀಲಿಬಣ್ಣದ ರಿಬ್ಬನ್‌ನಿಂದ ಕಟ್ಟಿದ ಜುಟ್ಟೇರಿಸಿಕೊಂಡು, ಶಾಲೆಯ ಬ್ಯಾಗಿಗೆ ದಿನದ ದಿನಚರಿಯಂತೆ ಅಮ್ಮನ ಕೈ ತುತ್ತು ತಿನ್ನುತ್ತಾ ಬಿರಬಿರನೆ ಪುಸ್ತಕಗಳನ್ನು ಹಾಕಿಕೊಂಡು ಚಪ್ಪಲಿ ಏರಿಸಿಕೊಳ್ಳುತ್ತಿರುವಾಗ, ಆ ಕಡೆಯಿಂದ ‘ಒಬ್ಳೇ ಹೋಗ್ಬೇಡ್ವೇ.. ನಿಧಾನ ಹೋಗು ನಾನೂ ಅಲ್ಲಿ ತನಕ ಬರ್ತೀನಿ’ ಎನ್ನುವ ಅಮ್ಮನ ಕೂಗು ಕೇಳಿಸಿಕೊಳ್ಳುವಷ್ಟು ಪುರುಸೊತ್ತು ಸಹ ಇಲ್ಲದಂತೆ ಹೊರಟೇ ಬಿಟ್ಟೆ. ಅವಳೂ ಕೈ ಎತ್ತಿ ಟಾಟ ಮಾಡುತ್ತಾ ಮನೆ ಕಡೆ ಹೊರಟಳು.

ಕೊಚ್ಚೆಯ ಕಾಲಿಂದ ಇನ್ನೇನು ಸಂಕ(ಅಡಕೆ ಮರದಿಂದ ಮಾಡಿದ ಕಾಲ್ಸೇತುವೆ)ವನ್ನು ದಾಟಿ ಮೆಲ್ಲನೆ ರಸ್ತೆಗೆ ಹತ್ತುತ್ತಿದ್ದ ನೀರಿಗೆ ಇಳಿಯಬೇಕೆನ್ನುವಷ್ಟರಲ್ಲಿ ಪಾಚಿ ಕಟ್ಟಿದ್ದನ್ನು ನೋಡದೆ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹೊತ್ತು ತರುತ್ತಿದ್ದ ಕೆಂಪುನೀರಿಗೆ ಸಂಕದಿಂದ ಜಾರಿ ಬಿದ್ದೆ. ಆ ನೀರಿನ ರಭಸಕ್ಕೆ ಭಯವಿರಲಿ, ನನ್ಗೇನೋ ಆಗ್ತಾ ಇದೆ ಎಂಬ ಅರಿವು ಬರುವುದಕ್ಕೂ ಮುಂಚೆ, ಅಪ್ಪ-ಚಿಕ್ಕಪ್ಪ ಸೇರಿ ಕಟ್ಟಿದ್ದ ಬೇಲಿಗೆ ಬಂದು ಸಿಕ್ಕಿ ಹಾಕಿಕೊಂಡೆ.

ಆಗಾಗ್ಗೆ ನೀರಿನ ರಭಸಕ್ಕೆ ಮುಳುಗಿ ಏಳುತ್ತಿದ್ದ ಕಾಫಿಗಿಡದ ಹರೆ(ಕೊಂಬೆ)ಯ ಸಹಾಯದಿಂದ ಅಂತೂ ಇಂತು ಮೇಲೆ ಬಂದು ಮನೆಗೆ ಓಡಿಹೋಗಿ ಸಮವಸ್ತ್ರ ಬದಲಿಸಿ, ಇನ್ನೊಂದು ಕಾಲುದಾರಿಯಿಂದ ಶಾಲೆಗೆ ತಲುಪಿದೆ. ಅಮ್ಮನಿಗೆ ಏನಾಯಿತು - ಅಂತ ವಿವರಿಸುವಷ್ಟು ಸಮಯವಿರಲಿಲ್ಲ. ಶಾಲೆಗೆ ತಡವಾಗುತ್ತದಲ್ಲ ಎಂಬ ಭಯವೊಂದನ್ನು ಬಿಟ್ಟರೆ ಇನ್ಯಾವ ಆತಂಕವಿದ್ದಂತೆ ನನ್ನಲ್ಲಿ ಕಂಡುಬಂದಿಲ್ಲ.

ಅಪ್ಪ-ಅಮ್ಮ ಕೇಳಿದ್ದಕ್ಕೆ ‘ಕೆಸರಲ್ಲಿ ಜಾರಿ ಬಿದ್ದೆ’ ಎಂದು ಮಾತ್ರ ಹೇಳಿ ಶಾಲೆಯ ಬೆಳಗ್ಗಿನ ಪ್ರಾರ್ಥನೆ ಮುಗಿದ ಬಳಿಕ ತರಗತಿಯ ಒಳಗೆ ಹೋಗಿ ಕೂತು ಏದುಸಿರು ಬಿಡುತ್ತಾ ಸುಧಾರಿಸಿಕೊಂಡೆ. ನೆನಸಿಕೊಂಡರೆ ಈ ಹೊತ್ತಿಗೂ ಮೈ ಝುಂ ಎನ್ನುವ ಆ ಕ್ಷಣ ಕಣ್ಣಂಚಲ್ಲಿ ಬಂದುಹೋಗುತ್ತಿರುತ್ತದೆ.

ಬಿದ್ದು ಎದ್ದ ಸಂಗತಿಗಳನ್ನೆಲ್ಲಾ ಮೆಲುಕು ಹಾಕುತ್ತಾ ಪಿ.ಯು.ಸಿ ತನಕ ಮುಗಿಸಿ, ತೀರ್ಥಹಳ್ಳಿಗೆ ಡಿಗ್ರೀ ಮಾಡಲು ಅಡ್ಮೀಷನ್‌ಗೆ ಅಪ್ಪನ ಜೊತೆ ಬಂದಿಳಿದೆ. ಬಸ್ ಇಳಿಯುತ್ತಿದ್ದಂತೆ ಊರು ಪಕ್ಕದ್ದೇ ಆದರೂ ಏನೋ ದುಗುಡ. ಆಡ್ಮೀಷನ್ನೂ ಆಯಿತು. ಅಲ್ಲೇ ಬಸ್ ಸ್ಟಾಂಡ್‌ನ ಬಳಿಯಿದ್ದ ಲೇಡಿಸ್ ಪಿ.ಜಿ.ಗೆ ಸಂಪರ್ಕಿಸಿ ಅನ್ನುವ ಸ್ಟೇಷನರಿ ಶಾಪ್ ಬಳಿ ನೇತಾಡುವ ಬೋರ್ಡ್‌ನಲ್ಲಿದ್ದ ನಂಬರ್‌ಗೆ ಕರೆಮಾಡಿ, ಪಿ.ಜಿ.ಗೆ ಅಡ್ವಾನ್ಸ್ ಕೊಟ್ಟು ಬಸ್ ಏರಿ ವಾಪಾಸ್ ಹೊರಟೆವು.

10–12 ದಿನಗಳಲ್ಲಿ ಕಾಲೇಜು ಶುರುವಾಯಿತು. ಮನೆಯಿಂದ ಹೊರಡುವಾಗ ಚಿಕ್ಕಮ್ಮ-ಚಿಕ್ಕಪ್ಪ, ದೊಡ್ಡಮ್ಮ-ದೊಡ್ಡಪ್ಪ  – ಹೀಗೆ ನನ್ನ ಪೋಷಿಸಿದ ಎಲ್ಲರ ಕಣ್ಣಲ್ಲೂ ಬೇಡ ಎಂದರೂ ತುಂಗೆ ಉಕ್ಕಿ ಹರಿಯುತ್ತಿರುವುದನ್ನು ತಡೆಯಲಾಗುತ್ತಿರಲಿಲ್ಲ. ಅಪ್ಪ-ಅಮ್ಮ ಅಂತೂ ಬಾತ್ ರೂಮ್ ಗೆ ಹೋಗಿ ಮನಸ್ಸುಪೂರ್ತಿ ಅತ್ತು, ಮುಖ ತೊಳೆದುಕೊಂಡು ಬಂದು ‘ಕಣ್ಣಿಗೇನೋ ಬಿತ್ತು ಕಣೆ’ ಎಂದುಹೇಳಿ ನನ್ನನ್ನು ಆಶೀರ್ವದಿಸುವಾಗ ದುಃಖ ಇನ್ನೂ ಇಮ್ಮಡಿಸುತ್ತಿತ್ತು. ಈಗಲೂ ಅವರು ಹಾಗೆಯೇ.

ಕಾಲೇಜಿಗಿಂತ ಇಷ್ಟ ಪಟ್ಟಿದ್ದು ಪಿ.ಜಿ.ಗೆಳತಿಯರನ್ನು. ಯಾವಾಗ ಅತ್ತರೂ, ಎಲ್ಲಿ ಹೋದರೂ ಜೊತೆಗಿರುತ್ತಿದ್ದರು ಹಾಗೆಯೇ ಸಮಾಧಾನವನ್ನೂ ಮಾಡುತ್ತಿದ್ದರು ಇದ್ದ ನಾಲ್ವರೂ ಮನೆಯವರಂತೆ ಜೊತೆಯಾದೆವು. ಸರ್ವೇ-ಸಾಮಾನ್ಯವಾಗಿದ್ದ ಸಣ್ಣ-ಪುಟ್ಟ ಕಲಹಗಳು ಆಗಾಗ ಮುತ್ತಿಡುತ್ತಿದ್ದವು.

ಅದಿರಲಿ! ಮಜ-ಮಜವಾಗಿ ಎಷ್ಟೂ ಸಲ ಆಂಟಿ ಬೈಯುತ್ತಾರೆ ಎಂಬ ಒಂದೇ ಕಾರಣಕ್ಕೆ ಪಾರ್ಸಲ್ ತಂದ ಪಾನಿ ಪೂರಿ, ಗೋಬಿ ಮಂಚೂರಿಯನ್ನು ಎಲ್ಲರೂ ಒಂದೇ ರೂಮೊಳಕ್ಕೆ ಬಂದು ಕದ್ದು ತಿಂದ, ಅದರ ವಾಸನೆ ಹೊರಗೆ ಹೋಗದಂತೆ  ಊದುಬತ್ತಿ-ಫರ್‌ಫ್ಯೂಮ್‌ಗಳಿಂದ ನೋಡಿಕೊಳ್ಳುವ ದೊಡ್ಡ ಕಸರತ್ತೂ ನಡೆಯುತ್ತಿತ್ತು. ಪಾಪ! ಆಂಟಿಗೆ ಕೊಟ್ಟರೆ ಅವರೂ ತಿಂದು ಸುಮ್ಮನಾಗುತ್ತಿದ್ದರು ಎಂದು ಈಗ ಅನಿಸುತ್ತಿದೆ.

ಆದರೂ ನಮಗೇನೋ ಅದರಲ್ಲಿ ಒಂಥರಾ ಖುಷಿ. ಇದ್ದ ಮೂರು ರೂಮ್‌ಗಳಲ್ಲಿ ಒಂದು ರೂಮ್ ಸ್ಕೂಲ್ ಟೀಚರ್‌ಗಳಿಗೆಂದೇ ಫಿಕ್ಸ್ ಆಗಿತ್ತು. ಇನ್ನೆರಡು ಕೊಠಡಿಯಲ್ಲಿ ಒಂದು ಪಿ.ಯು.ಸಿ. ತನಕ ಓದುವ ಹುಡುಗಿಯರಿಗಾದರೆ ಇನ್ನುಳಿದ ರೂಮ್ ನಮ್ದು. 12–13 ಜನರಿಗಿದ್ದಿದ್ದು ಒಂದೇ ಬಾತ್ ರೂಮ್. ಬೆಳಿಗ್ಗೆ ಎಚ್ಚರವಾದೊಡನೆ ದಬಕ್ಕನೆ ಎದ್ದು, ಬಕೇಟ್ ಇಟ್ಟು, ನಿನ್ ಸ್ನಾನ ಆದ್ಮೇಲೆ  ಎಬ್ಸೇ ಎಂದು ಹೇಳಿದ ಮೇಲೇನೇ ಇವತ್ತಿನ ಸ್ನಾನ ಕನ್‌ಫರ್ಮ್‌. ಎರಡು ನಿಮಿಷ ಏಳೋದು ತಡವಾದರೆ ಸ್ನಾನ ನಮ್ ಲಿಸ್ಟ್‌ನಿಂದ ಕಟ್; ಒಂದ್ರಾಶಿ ಸೆಂಟ್ ಹಾಕಿಕೊಂಡು ಹೊರಟು ಬಿಡುತ್ತಿದ್ದೆವು.

ಕಾಲೇಜು ಮುಗಿದ ಮೇಲೇಯೇ ತಣ್ಣೀರಿನಿಂದ ಸ್ವಚ್ಛತಾಕಾರ್ಯ. ಒಂದೆರಡು ಬಾರಿ ಬಿಸಿನೀರಿಗಾಗಿ ಕಾಯ್ಲ್ ಹಾಕಿಕೊಂಡು ಸಿಕ್ಕಿ ಬಿದ್ದಿದ್ದೂ ಇದೆ. ಅದಕ್ಕೆ ಪ್ರತಿಸಲ ಕಾಯ್ಲ್ ಹಾಕುವ ಧೈರ್ಯ ಮಾಡುತ್ತಿರಲಿಲ್ಲ. ಕಾಲೇಜಿನಿಂದ ಬರುವುದು ತಡವಾಗುವುದಾದರೆ ಪಿ.ಜಿ. ಅಂಕಲ್ಗೊಂದು ಫೋನ್ ಹಚ್ಚಿ ಆರಾಮಾಗಿ ಮಾತಾಡ್ಕೊಂದು ಬರುತ್ತಿದ್ದೆವು. ಮೂರು ವರ್ಷ ಕಳೆದಿದ್ದೇ ತಿಳಿಯಲಿಲ್ಲ.

ಇನ್ನೇನು ಪರೀಕ್ಷೆಗೆ ನಾಲ್ಕು ಪೇಪರ್‌ಗಳಿವೆ ಎಂದಾಗ ಆ ಸಮಯದಲ್ಲೇ ಪಿ.ಜಿ.ಯಲ್ಲೇನೋ ಹಿಂಸೆಗೆ ಶುರುವಾಗತೊಡಗಿತು. ಸ್ಟಡಿ ಹಾಲಿಡೇಗೆ ಊರಿಗೆ ಹೋದಾಗ ಪಿ.ಜಿ. ಓನರ್ ಹಾಗೂ ಅಲ್ಲಿದ್ದ ಹುಡುಗಿಯರಿಗೆ ನಡೆದ ಏನೋ ಕಿರಿಕಿರಿ ಗಲಾಟೆಯಲ್ಲಿ ತಿಳಿಯದೇ ಇರೋ ವಿಷಯದಲ್ಲಿ ನನ್ನನ್ನೂ ಸಹ ಸಿಲುಕಿಸಿದರು.

ಏನೋ ಹೇಳ್ತಾರಲ್ಲ –  ಕೋತಿ ತಾನ್ ತಿಂದು ಬೇರೆಯವರ ಬಾಯಿಗೆ ಒರೆಸ್ತು ಅಂತ – ಆ ಟೈಮಲ್ಲಿ ಹಾಗಾಯ್ತು ನನ್ಕಥೆ! ನನ್ನ ಮೇಲಿದ್ದ ಆಪಾದನೆಯಿಂದ ಹೊರಬಂದ ಕ್ಷಣವೇ ಅಪ್ಪನನ್ನು ಪಿ.ಜಿ.ಗೆ ಕರೆಸಿಕೊಂಡು, ಲಗೇಜ್ ಪ್ಯಾಕ್ ಮಾಡಿ ತಕ್ಷಣವೇ ಅಲ್ಲಿಂದ ಅಜ್ಜಿ ಊರಿಗೆ ಹೊರಟೇಬಿಟ್ಟೆ, ಅಲ್ಲಿಂದಲೇ ಉದ ಪರೀಕ್ಷೆಗಳಿಗೆ ಓಡಾಡಿದೆ.

ಬೆಳಿಗ್ಗೆ ಸರಿಯಾಗಿ ಏಳು ಗಂಟೆಗೆ ಬರುತ್ತಿದ್ದ ಮೂಕಾಂಬಿಕ ಬಸ್ ತಪ್ಪಿಸಿಕೊಂಡರೆ ಪರೀಕ್ಷೆಗೆ ಹೋಗಲಾಗುತ್ತಿರಲಿಲ್ಲ. ಎರಡು ನಿಮಿಷ ನನಗಾಗಿ ಬಸ್ ಡ್ರೈವರ್ ಹಾರನ್ ಹಾಕಿ ಬೈಕೊಂಡೇ ಕಾಯುತ್ತಿದ್ದರು. ನಮ್ಮಜ್ಜಿ ಕೂಡ ನಾಳೆ ಪರೀಕ್ಷೆ ಇದೆ ಎಂದರೆ ಸಾಕು, ಬೆಳಿಗ್ಗೆ ಬೇಗ ಎಬ್ಬಿಸುತ್ತಿದ್ದರು. ನಮ್ಮ ಅತ್ತೆನೂ ಟೈಮಿಗೆ ಸರಿಯಾಗಿ ತಿಂಡಿ ಮಾಡಿ ನಾನು ರೆಡಿ ಆಗಿ ಬರುವುದರೊಳಗೆ ಬಾಳೆಎಲೆ ಹಾಕಿಕೊಂಡು ಕಾಯುತ್ತಿರುತ್ತಿದ್ದರು. (ಮಲೆನಾಡಾದ್ದರಿಂದ ತಟ್ಟೆ ಬಳಸುವುದು ಬಹಳ ವಿರಳ).

ಮಾವ ಬಸ್ ಸ್ಟಾಪ್ ಹತ್ತಿರ ನನಗಿಂತ ಮುಂಚೆನೇ ಹೋಗಿ ಬಸ್ ನಿಲ್ಲಿಸಿ, ಕಂಡಕ್ಟರ್ ಬಳಿ 1–2 ನಿಮಿಷ ಹರಟೆ ಹೊಡೆಯುವಷ್ಟರಲ್ಲಿ ನಾ ಬಂದು ಬಸ್ ಏರುತ್ತಿದ್ದೆ. ಒಂದೂವರೆ ಗಂಟೆ ಪಯಣ. ಬಸ್‌ನಲ್ಲೇ ಓದಿದ್ದನ್ನು ಮೆಲುಕು ಹಾಕಿ ಹಾಗೇ ಬೀಸುತ್ತಿದ್ದ ತಣ್ಣನೆ ಗಾಳಿಗೆ ನಿದ್ದೆಗೆ ಜಾರಬೇಕು ಅನ್ನುವಷ್ಟರಲ್ಲಿ ಕಾಲೇಜು ಬಂದೇ ಬಿಡುತ್ತಿತ್ತು. ಪರೀಕ್ಷೆಗಳೂ ಮುಗಿದವು. ಫಲಿತಾಂಶ ಬರುವುದ್ದಕ್ಕೂ ಮುಂಚೆ ಮಾವನ ಮಗನ ಮದುವೆಯ ನೆಪ ಮಾಡಿಕೊಂಡು ಅಣ್ಣನ ಮನೆಯ ಸೂರನ್ನವಲಂಬಿಸಿ, ಈ ಹೊತ್ತಿಗೂ ಮೂರು ಹೊತ್ತಿನ ಅನ್ನವನ್ನು ಚಾಚೂ ತಪ್ಪದೆ ಕೊಡುತ್ತಿರುವ ಸಿಲಿಕಾನ್ ಸಿಟಿಗೆ ಕಾಲಿಟ್ಟೆ.

ಕಡಲೆಕಾಳು ಹುರಿದಂತೆ ಇಂಗ್ಲೀಷ್ ಮಾತನಾಡುವವರೊಡನೆ ಕೆಲಸ ಸಿಕ್ಕಿತು. ಸ್ವಲ್ಪ ದಿನ ಕಷ್ಟವಾದರೂ ನಂತರ ಅದೇ ಇಷ್ಟವಾಯಿತು. ಒಂದು ವರ್ಷ ಕೆಲಸ ಮಾಡಿದ ಬಳಿಕ ನಂಗೇನೋ ಎರಡು ಕೋಡು ಬಂದಂತಾಗಿ ಗೆಳತಿಯೊಡನೆ ಸೇರಿ ಪೀಣ್ಯ ಬಳಿ ಜಾಬ್ ಕನ್ಸ್‌ಲ್ಟೆಂಸಿ ಶುರು ಮಾಡಿದೆವು.

ಚೆನ್ನಾಗೇನೋ ನಡೆಯುತ್ತಿತ್ತು; ಅದ್ಯಾವ ದೃಷ್ಟಿ ಬಿತ್ತೋ... ? ಆ ಒಂದು ರಾತ್ರಿ ನನಗರಿವಿಲ್ಲದೆ ಬಂದ ಸಂಪತ್ತನ್ನೆಲ್ಲಾ ಬಾಚಿ ನನಗೆ ಚಿಪ್ಪು ಕೊಟ್ಟು ಹೊರಟೇ ಹೋದಳು. ಸದ್ಯ ನನ್ನದೃಷ್ಟಕ್ಕೆ ನಾವು ತಂಗಿದ್ದ ಮನೆ ಹಾಗೂ ಆಫೀಸ್ ಬಾಡಿಗೆಯನ್ನು ಕಟ್ಟಿಯಾಗಿತ್ತು. ಈಗ ನನಗದರ ಚಿಂತೆ ಇಲ್ಲ. ಹಳೆ ಕಂಪನಿಯ ಪಿ.ಎಫ್. ಹಣ ನನ್ನ ಬಳಿಯಿತ್ತು. ಮತ್ತೆ ಪಿ.ಜಿ.ಯೇ ನನ್ನನ್ನು ‘ಬಾ’ ಎಂದು ಬಾಚಿತು.

ನಾನಾಗ ಕಳೆದುಕೊಂಡ ನಷ್ಟ-ಮೋಸಕ್ಕೆ ಆರೇಳು ತಿಂಗಳು ಕೆಲಸಕ್ಕೆ ಅಲೆಯುವಂತಾಗಿ, ಎಷ್ಟೋ ಸಲ ತಂಗಿದ್ದ ಪಿ.ಜಿ.ಯಿಂದ ಮೆಜೆಸ್ಟಿಕ್‌ಗೆ ಬರಿಗಾಲಿನಲ್ಲಿ ಓಡಾಡಿದ್ದೂ ಇದೆ. ಇದ್ದೊಂದು ಚಪ್ಪಲಿಯೂ ಹರಿದರೆ ಸಂದರ್ಶನದಲ್ಲಿ ರೆಜೆಕ್ಟ್ ಆಗುತ್ತೀನಿ ಎಂಬ ಭಯದಿಂದ ಅದನ್ನೂ ಬ್ಯಾಗ್ನಲ್ಲಿಟ್ಟುಕೊಂಡು ಮೆಜೆಸ್ಟಿಕ್ ಬಂದ ನಂತರ ಬ್ಯಾಗಿಂದ ತೆಗೆದು ಕಾಲಿಗೆ ಹಾಕಿಕೊಳ್ಳುತ್ತಿದ್ದೆ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದುದು ನನ್ನ ಗಮನಕ್ಕೆ ಬಂದರೂ ನಾನು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ದಿನವೊಂದಕ್ಕೆ 2–3 ಸಂದರ್ಶನಗಳನ್ನು ಅಟೆಂಡ್ ಮಾಡುತ್ತಿದ್ದೆ. ಅದರಲ್ಲಿ ಎಷ್ಟೋ ಸಲ ದಾರಿ ತಪ್ಪಿಸಿಕೊಂಡು ಮಿಸ್ ಮಾಡಿಕೊಂಡ ಸಂದರ್ಶನಗಳೇ ಹೆಚ್ಚು. ನೀರಿನ ಬಾಟಲ್ ಕೂಡ ಬ್ಯಾಗಲ್ಲಿ ಕಾಲಿಯಾಗದ ಹಾಗೇಯೇ ಇರುತ್ತಿತ್ತು. ಕೊನೆಗೂ ನನ್ನ ಪಿ.ಜಿ. ಗೆಳತಿಯ ಸಹಾಯದಿಂದ ಕೆಲಸ ಸಿಕ್ಕಿತು. ಮೂರು ವರ್ಷ ಆರಾಮವಾಗಿ ಖುಷಿಯಿಂದ ಕೆಲಸ ಮಾಡಿದೆ. ಅಲ್ಲಿರುವವರೆಲ್ಲ ನನ್ನ ಓರೆಗೆಯವರಾದ್ದರಿಂದ ಬೇಗನೆ ಪರಿಚಯವಾದರು.

ಮರೆಯಲು ಬಿಡದ ಬಾಚಿ ಬಿಗಿಯಪ್ಪುಗೆಯಿಂದ ಕರೆಯುವ ಪಿ.ಜಿ.ಗೆ ನನ್ನ ಅನಂತಾನಂತ ಧನ್ಯವಾದಗಳು. ಮನಸ್ಸಿಗೆ ಕಷ್ಟವೆನೆಸಿದಾಗ ನೆನಪಾಗುವುದಿದೇ ಪಿ.ಜಿ. ಗೆಳತಿಯರು. ಅವರು ಬಂದು ಒಂದೆರಡು ಮಾತನಾಡಿದರೆ ಅದೇ ನೆಮ್ಮದಿಯ ಉಸಿರು.

ಯಾರ ಬಳಿಯೂ ಹೇಳಿಕೊಳ್ಳಲಾಗದ ಗುಟ್ಟನ್ನು ಅವರೊಂದಿಗೆ ಯಾವುದೇ ಸಂಕೋಚವಿಲ್ಲದೆ ಹಂಚಿಕೊಂಡರೆ ಮನಃರ್ವಕವಾದ ತೃಪ್ತಿಯೊಂದಿಗೆ ಉತ್ಸಾಹವೂ ಇಮ್ಮಡಿಯಾಗುವುದಕ್ಕೆ ನಾನೇ ದೊಡ್ಡ ಉದಾಹರಣೆ. ಪಿ.ಜಿ. ಶುರು ಮಾಡಿ ಅಂತಹ ಹುಡುಗಿಯರ ಕನಸನ್ನು ನನ್ನಲ್ಲಿ ಕಾಣುವ ಹಂಬಲ ಇನ್ನೂ ಕಾಡುತ್ತಿದೆ. ನಾನಂದುಕೊಂಡಂತೆ ಎಲ್ಲ ಸನ್ನಿವೇಷಗಳೂ ನಡೆದಿದ್ದರೆ, ಈ ಅನುಭವಗಳಿಂದ ವಂಚಿತಳಾಗುತ್ತಿದ್ದೆನೇನೋ ಎಂದನಿಸುತ್ತಿದೆ.

ಮನಸ್ಸಿನ ಪುಟ್ಟ ಬೊಗಸೆಯಲಿ ಇಂದಿಗೂ ಕಚಗುಳಿ ಇಡುವ ಅಪ್ಪನ ಜೋರು, ಸ್ಕೂಲ್ ಮೇಷ್ಟ್ರ ಹೊಡೆತ, ಮೂಗೊಳಗೆ ತೂರಿಸಿಕೊಂಡ ಬಳಪ, ಶಾಲೆಯಲ್ಲಿ ನಡೆಯುವ ಶುಕ್ರವಾರದ ಸರಸ್ವತೀಪೂಜೆ, ಕನ್ನಡಪರೀಕ್ಷೆಯಲ್ಲಿ ನೇಗಿಲಯೋಗಿ ಪದ್ಯವನ್ನು ಕಾಪಿ ಮಾಡುತ್ತಿದ್ದವರಿಗೆ ಸಹಾಯ ಮಾಡಲು ಹೋಗಿ ನೇರವಾಗಿ ಸಿಕ್ಕಿಹಾಕಿಕೊಂಡಾಗಿನ ಶಿಕ್ಷೆಯಿಂದ ಹಿಡಿದು ಅಂಗನವಾಡಿ ಟೀಚರ್ ಮನೆಯಿಂದ 25 ಪೈಸೆಯನ್ನು ಕದ್ದು ಚಾಕಲೇಟ್ ಜೊತೆಗೆ ಏಟನ್ನೂ ತಿಂದ ಹಲವಾರು ತುಣಿಕುಗಳು... ಅಬ್ಬಬ್ಬಾ!! ಇವೆಲ್ಲಾ ನನ್ನಲ್ಲಿ ಆಗಾಗ್ಗೆ ಬಂದು ಇಣುಕಿಣಕಿ ಮಾಯವಾಗುತ್ತಿರುತ್ತವೆ.

ಅ ಆ ಇ ಈ, ಎ ಬಿ ಚಿ ಡಿ, ಕನ್ನಡ-ಇಂಗ್ಲಿಷ್ ಮಗ್ಗಿಗಳೊಂದಿಗೆ ಅಮ್ಮನ ಸೊಂಟದ ಮೇಲೆ ಏರಿ ಮನೆಯಂಗಳವನ್ನು ಸುತ್ತು ಹೊಡೆಯುತ್ತಾ ಬಾಯಿಪಾಠ ಹೇಳಿಸಿಕೊಂಡಿದ್ದನ್ನು ನಾನ್ಹೇಗೆ ತಾನೆ ಮರೆಯಲಿ!?
–ಅಭಿಜ್ಞಾ ಸತೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT