ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಮುರಿಯಲು ಸಾಬಕ್ಕಿ ರೆಸಿಪಿ...

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸಾಬಕ್ಕಿ ವಡೆ
ಬೇಕಾಗುವ ಸಾಮಗ್ರಿಗಳು

200ಗ್ರಾಂ ಸಾಬಕ್ಕಿ, 200 ಗ್ರಾಂ ಆಲೂಗಡ್ಡೆ, 4 ಬ್ರೆಡ್‌, 2 ಹಸಿಮೆಣಸಿನಕಾಯಿ, 2 ಚಮಚ ಖಾರದ ಪುಡಿ, ಚಿಟಿಕೆ ಇಂಗು, ಅರ್ಧ ಹೋಳು ಶುಂಠಿ, ರುಚಿಗೆ ಉಪ್ಪು, ಒಂದು ಬಟ್ಟಲು ತುಪ್ಪ, 1 ನಿಂಬೇಹಣ್ಣು.

ತಯಾರಿಸುವ ವಿಧಾನ: ಸಾಬಕ್ಕಿಯನ್ನು ಒಂದು ಗಂಟೆ ಮುಂಚೆ ನೆನೆಯಲು ಇಡಿ. ಆಲೂಗಡ್ಡೆಯನ್ನು ಕುದಿಸಿ, ಸಿಪ್ಪೆ ತೆಗೆದುಕೊಳ್ಳಿ. ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಚಿಕ್ಕಚಿಕ್ಕದಾಗಿ ಪುಡಿ ಮಾಡಿಕೊಳ್ಳಿ. ನಂತರ ಬ್ರೆಡ್ಡನ್ನು ತುಂಡು ಮಾಡಿ, ಪುಡಿ ಮಾಡಿಕೊಂಡಿರುವ ಆಲೂಗಡ್ಡೆಯ ಜೊತೆ ಮಿಕ್ಸ್‌ ಮಾಡಿ.

ನೆನೆದಿರುವ ಸಾಬೂದಾನಿಯನ್ನೂ ಇದರ ಜೊತೆ ಸೇರಿಸಿ. ಇದಕ್ಕೆ ತುಪ್ಪ ಬಿಸಿ ಮಾಡಿ ಹಾಕಿ. ಜೊತೆಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ, ಖಾರದ ಪುಡಿ, ಇಂಗು, ನಿಂಬೆರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಇದನ್ನು ಒಂದು ಗಂಟೆ  ಹಾಗೆಯೇ ಬಿಟ್ಟು ನಂತರ ಹಿಟ್ಟಿನ ಉಂಡೆ ಮಾಡಿ ಎಣ್ಣೆಯಲ್ಲಿ ಕರಿಯಬೇಕು.

*


ಸಾಬಕ್ಕಿ ತಾಳೀಪಿಟ್ಟು
ಬೇಕಾಗುವ ಸಾಮಗ್ರಿಗಳು: 
1 ಕಪ್‌ ಸಾಬಕ್ಕಿ, ಅರ್ಧ ಕಪ್‌ ಅಕ್ಕಿಹಿಟ್ಟು, ಅರ್ಧ ಕಪ್‌ ತುರಿದ ಕ್ಯಾರೆಟ್‌, ಕರಿಬೇವು ಸ್ವಲ್ಪ, ಒಂದು ಹಸಿಮೆಣಸಿನಕಾಯಿ, ರುಚಿಗೆ ಉಪ್ಪು, ಒಂದು ಚಮಚ ಜೀರಿಗೆ, ಕಾಯಿಸಲು ಎಣ್ಣೆ.

ತಯಾರಿಸುವ ವಿಧಾನ: ಸಾಬಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ನೆನೆಸಿಡಿ.  ನೆನೆದ ಸಬ್ಬಕ್ಕಿಗೆ ಕರಿಬೇವು, ಜೀರಿಗೆ ಹಾಗೂ ಹಸಿಮೆಣಸಿನಕಾಯಿಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಪುಡಿಮಾಡಿಕೊಳ್ಳಿ. ಪುಡಿ ಮಾಡಿಕೊಳ್ಳುವಾಗ ನೀರನ್ನು ಬೆರೆಸಬಾರದು.

ಪುಡಿಮಾಡಿಕೊಂಡ ಮಿಶ್ರಣವನ್ನು ಒಂದು ಪ್ಯಾನ್‌ಗೆ ಹಾಕಿ. ಇದಕ್ಕೆ ತುರಿದ ಕ್ಯಾರೆಟ್, ಅಕ್ಕಿಹಿಟ್ಟು ಹಾಗೂ ಉಪ್ಪನ್ನು ಸೇರಿಸಿಕೊಳ್ಳಿ. ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ರೊಟ್ಟಿಯ ಹದಕ್ಕೆ ಮೃದುವಾಗಿ ಕಲಸಿಕೊಳ್ಳಿ.

ಹತ್ತು ನಿಮಿಷ ಬಿಟ್ಟು ಕಾವಲಿಯನ್ನು ಬಿಸಿಮಾಡಿ ಎಣ್ಣೆ ಹಾಕಿ. ಕಾದ ನಂತರ ರೊಟ್ಟಿಯನ್ನು ಹಾಕಿ. ಎಣ್ಣೆ ಹಾಕಿ ಎರಡು ಕಡೆ  ಚಿಕ್ಕ ಉರಿಯಲ್ಲಿ ಕೆಂಪಗೆ  ಬೇಯಿಸಿದರೆ ರುಚಿಕರವಾದ ತಾಳೀಪಿಟ್ಟು ರೆಡಿ. ಇದನ್ನು ರವೆಯ ತಾಳೀಪಿಟ್ಟು ಮಾಡುವಂತೆ ಬಾಳೆ ಎಲೆಯಲ್ಲಿ ತಟ್ಟಿಯೂ ಕಾವಲಿಗೆ ಹಾಕಬಹುದು.

*


ಸಾಬಕ್ಕಿ ಇಡ್ಲಿ
ಬೇಕಾಗುವ ಸಾಮಗ್ರಿಗಳು

ಕಾಲು ಕಪ್‌ ಸಾಬಕ್ಕಿ, 4 ಚಮಚ ಚಿರೋಟಿ ರವೆ, 2 ಚಿಕ್ಕ ಟೊಮೆಟೊ, 2 ಚಿಕ್ಕ ಈರುಳ್ಳಿ, ಒಂದೂವರೆ ಕಪ್ ಮಜ್ಜಿಗೆ ಅಥವಾ ಮೊಸರು, ಕಾಲು ಕಪ್‌ ಶೇಂಗಾ ಬೀಜ, ಅರ್ಧ ಚಮಚ ಜೀರಿಗೆ, ಚಿಕ್ಕ ಶುಂಠಿ, ಒಂದು ಹಸಿಮೆಣಸು, ಉಪ್ಪು ರುಚಿಗೆ, ಸ್ವಲ್ಪ ಒಣದ್ರಾಕ್ಷಿ, ಗೋಡಂಬಿ, ಒಂದು ಬಟ್ಟಲು ಹಸಿ ಬಟಾಣಿ, ಕ್ಯಾರೆಟ್, ಕಾರ್ನ್, ಸ್ವಲ್ಪ ಕೊತ್ತಂಬರಿಸೊಪ್ಪು

ತಯಾರಿಸುವ ವಿಧಾನ: ಸಾಬಕ್ಕಿ, ಶೇಂಗಾಬೀಜ, ಶುಂಠಿ, ಜೀರಿಗೆ ಹಾಗೂ ರವೆಯನ್ನು ರಾತ್ರಿ ಮೊಸರು ಅಥವಾ ಮಜ್ಜಿಗೆಯಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಮಿಶ್ರಣಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿಸೊಪ್ಪು, ಹಸಿ ಬಟಾಣಿ, ಕಾರ್ನ್, ದ್ರಾಕ್ಷಿ, ಗೋಡಂಬಿ, ಉಪ್ಪು ಎಲ್ಲವನ್ನು ಸೇರಿಸಿ ಮಿಕ್ಸ್‌ ಮಾಡಿಕೊಳ್ಳಿ. ಇಡ್ಲಿಪಾತ್ರೆಗೆ ಇದನ್ನು ಹಾಕಿ 15 ನಿಮಿಷಗಳ ಕಾಲ ಇಡ್ಲಿಯ ಹದಕ್ಕೆ ಬೇಯಿಸಿ.

*


ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿಗಳು

ಅರ್ಧ ಕಪ್ ಸಾಬಕ್ಕಿ, ಒಂದೂವರೆ ಕಪ್ ಹಾಲು, 6-7 ಚಮಚ ಸಕ್ಕರೆ, ಒಂದು ಕಪ್ ಇಷ್ಟದ ಐಸ್‌ಕ್ರೀಂ, ಒಂದು ಚಮಚ ಏಲಕ್ಕಿ ಪುಡಿ.

ತಯಾರಿಸುವ ವಿಧಾನ: ಮೊದಲಿಗೆ ಸಾಬಕ್ಕಿಯನ್ನು ನೆನೆಸಿಟ್ಟು ಇದನ್ನು ಬೇಯಿಸಿಕೊಳ್ಳಿ. ಹಾಲು, ಐಸ್‌ಕ್ರೀಂ, ಸಕ್ಕರೆ ಮತ್ತು ಏಲಕ್ಕಿ ಪುಡಿ ಮಿಕ್ಸಿಯಲ್ಲಿ ತಿರುಗಿಸಿ. ಬೇಯಿಸಿಕೊಂಡಿರುವ  ಸಾಬಕ್ಕಿಯನ್ನು ಇದಕ್ಕೆ ಸೇರಿಸಿ. ಹಾಗೆಯೇ ತಿನ್ನಬಹುದು; ಇಲ್ಲವೇ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಟ್ಟು ಸವಿಯಲೂಬಹುದು.

*


ಫ್ರೂಟ್‌ ಮಿಕ್ಸ್‌
ಬೇಕಾಗುವ ಸಾಮಗ್ರಿಗಳು

4 ಕಪ್‌ ಸಾಬಕ್ಕಿ, 2 ಚಮಚ ಸಕ್ಕರೆ, ಒಂದೂವರೆ ಕಪ್ ಹಾಲು, ಒಂದೂವರೆ ಕಪ್ ತುರಿದ ತೆಂಗಿನ ತುರಿ,  2 ಬಾಳೆಹಣ್ಣು , 2 ಚಮಚ ದಾಳಿಂಬೆ, ಅರ್ಧ ಸೇಬು, 10-12 ದ್ರಾಕ್ಷಿಹಣ್ಣು.

ತಯಾರಿಸುವ ವಿಧಾನ:  ಸಾಬಕ್ಕಿಯನ್ನು 10 ಗಂಟೆ ನೆನೆಸಿಡಿ. ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ. ಕುದಿಯುತ್ತಿರುವ ಹಾಲಿಗೆ ನೆನೆಸಿಟ್ಟ ಸಾಬಕ್ಕಿ ಹಾಕಿ ಐದು ನಿಮಿಷ ಕುದಿಸಿ.

ಕುದ್ದ ನಂತರ ಉರಿಯನ್ನು ಆರಿಸಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಅದಕ್ಕೆ ಸಕ್ಕರೆ, ಬಾಳೆಹಣ್ಣು, ತುರಿದು ತೆಂಗಿನ ಕಾಯಿ ಸೇರಿಸಿ ಸೌಟಿನಿಂದ ತಿರುಗಿಸಿ. ನಂತರ ಅದಕ್ಕೆ ಸೇಬು, ದ್ರಾಕ್ಷಿ ಮತ್ತು ದಾಳಿಂಬೆಹಣ್ಣು ಸೇರಿಸಿದರೆ ರುಚಿಕರವಾಗಿರುವ ಫ್ರೂಟ್‌ ಸಾಬಕ್ಕಿ ಮಿಕ್ಸ್‌ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT