ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ‘ನಿರಂತರಂ’ ಉತ್ಸವ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಶನಿವಾರದಿಂದ (ಫೆ. 18) ಪ್ರಾರಂಭವಾಗುವ ‘ನಿರಂತರಂ’ ಸಾಂಸ್ಕತಿಕ ಉತ್ಸವದ ರೂವಾರಿ ವಿದುಷಿ ಪಿ.ರಮಾ. ಸಂಗೀತ-ನೃತ್ಯ ಶ್ರೋತೃಗಳಿಗೆ ಪಿ.ರಮಾ ಚಿರಪರಿಚಿತರು. ಅವರ ಸಿರಿಕಂಠದ ಹಾಡುಗಾರಿಕೆಯಲ್ಲಿ ದೇವರನಾಮಗಳನ್ನು ಕೇಳುವುದೇ ಒಂದು ಸೊಗಸು. ರಮಾ ಅವರ ಗಾಯನದಿಂದ ನೃತ್ಯದ ಪರಿಣಾಮ ಇಮ್ಮಡಿಗೊಳ್ಳುವುದೂ ಅನುಭವ ವೇದ್ಯವೇ ಸರಿ.

ಇವರು ಮೈಸೂರಿನ ಪ್ರಸಿದ್ಧ ‘ಪುಸ್ತಕಂ’ ಮನೆತನಕ್ಕೆ ಸೇರಿದವರು. ತಾಯಿ ಸ್ವತಃ ಗಾಯಕಿಯಾಗಿದ್ದರಿಂದ ಬಾಲ್ಯದಿಂದಲೂ ಸಂಗೀತದ ವಾತಾವರಣದಲ್ಲೇ ರಮಾ ಬೆಳೆದರು. ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಗಳಿಕೆ. ಪ್ರೊ.ನಾಗಮಣಿ ಶ್ರೀನಾಥ್ ಹಾಗೂ ಡಾ. ಆರ್.ಕೆ.ಶ್ರೀಕಂಠನ್ ಅವರಲ್ಲಿ ಶಿಷ್ಯತ್ವ. ಗಾಯನದಲ್ಲಿ ಪರಿಣತಿ. ಮೈಸೂರಿನ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತೆ.

ಆ ಮಧ್ಯೆ ಹಿರಿಯ ನರ್ತಕಿ ವಸುಂಧರಾ ದೊರೆಸ್ವಾಮಿ ಅವರ ನೃತ್ಯಕ್ಕೆ ಗಾಯನ. ಅದಕ್ಕಾಗಿ ವಿಶೇಷ ಸಾಧನೆ. ಮುಂದೆ ಕೇಳುಚರಣ್ ಮಹಾಪಾತ್ರ, ಸ್ವಪ್ನ ಸುಂದರಿ, ಪ್ರತಿಭಾ ಪ್ರಹ್ಲಾದ, ಹೇಮಮಾಲಿನಿ - ಮುಂತಾದ ಖ್ಯಾತರಿಗೂ ಹಿಮ್ಮೇಳ ಗಾಯನ. ರಮಾ ಹಿನ್ನೆಲೆಯಲ್ಲಿ ಹಾಡಿದರೆ ಆ ನೃತ್ಯಕ್ಕೇ ಸೊಬಗು. ಮೇಳದ ಇತರ ವಾದ್ಯಗಳನ್ನೂ ಕೂಡಿಸಿಕೊಂಡು ರಮಾ ನಿರೂಪಿಸುವ ಬಗೆಯೇ ಆಹ್ಲಾದಕರ. ಭರತನಾಟ್ಯವಲ್ಲದೆ ಕೂಚುಪುಡಿ, ಒಡಿಸ್ಸಿ - ಹೀಗೆ ಭಿನ್ನ ಪ್ರಕಾರಗಳಿಗೆ ಗಾಯನದ ಮೆರುಗು.

ಹೊರ ರಾಜ್ಯ ಅಷ್ಟೇ ಅಲ್ಲ, ಹೊರ ದೇಶಗಳಲ್ಲೂ ರಮಾ ಅವರ ನೃತ್ಯಗಾಯನಕ್ಕೆ ಬಹು ಬೇಡಿಕೆ! ಚಿತ್ರಾಂಗದಾ (ನಿರ್ದೇಶನ– ವೀಣಾ ಮೂರ್ತಿ), ಶ್ರೀಕೃಷ್ಣ ತುಲಾಭಾರ (ವಸುಂಧರಾ ದೊರೆಸ್ವಾಮಿ), ಅಷ್ಟಪದಿ (ದೀಪಕ್ ಮಜುಂದಾರ್) - ಮುಂತಾದ ಪ್ರಸಿದ್ಧರ ನೃತ್ಯ ಸಂಯೋಜನೆಗೆ ರಮಾ ಅವರ ಗಾಯನದ ಮೇಲೋಗರ.

ವಿದೇಶಗಳಲ್ಲಿರುವ ಅನೇಕ ಕಲಾವಿದರೂ ರಮಾ ಅವರನ್ನು ಪ್ರತಿ ವರ್ಷ ಕರೆಸಿಕೊಂಡು ನೃತ್ಯಕ್ಕೆ ಸಂಗೀತ ಸಂಯೋಜನೆ ಮಾಡಿಸಿಕೊಳ್ಳುತ್ತಾರೆ. ಹೀಗಾಗಿ ರೇವತಿ ಸತ್ಯು, ಅಖಿಲಾ ಅಯ್ಯರ್ (ಕೃಷ್ಣಾಯ ತುಭ್ಯಂ), ವಿನೀತಾ ಸುಬ್ರಹ್ಮಣ್ಯಂ, ಪದ್ಮಿನಿ ಚಾರಿ, ಗೌರೀ ಅಗಶ್ (ಮರಾಠಿ ವರ್ಣ), ಓಂಕಾರ್ ಮಾಕಾರ (ಶಿವ ಶಂಭೊ) - ಹೀಗೆ ಹತ್ತಾರು ನೃತ್ಯ ತಂಡಗಳಿಗೆ ಸಂಗೀತ ಸಂಯೋಜನೆ ಮಾಡಿ ತಮ್ಮ ಇನಿದನಿಯನ್ನೂ ಸೇರಿಸಿ, ನೃತ್ಯ ರೂಪಕಗಳ ಸ್ವಾದ ಹೆಚ್ಚಿಸಿದ್ದಾರೆ.

ವಿದೇಶಗಳಲ್ಲೂ ಕನ್ನಡ ಕಂಠ ಮಾರ್ದನಿಗೊಳ್ಳುವಂತೆ ಮಾಡಿದ್ದಾರೆ. ಶ್ರಮ ವಹಿಸಿ, ಮಾಧುರ್ಯದ ರಾಗ ಸಂಯೋಜಿಸಿ, ಭಾವಪೂರ್ಣವಾಗಿ ಸ್ವತಹ ಹಾಡಿ, ನೃತ್ಯದ ಯಶಸ್ಸಿನಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ಕಲಾವಿದರು, ಕೇಳುಗರು ಇಬ್ಬರಿಗೂ ರಮಾ ಮೆಚ್ಚುಗೆಯಾಗಿದ್ದಾರೆ.

ಶಾಸ್ತ್ರೀಯ ಸಂಗೀತ ವೇದಿಕೆಯಲ್ಲೂ ಪಿ.ರಮಾ ಜನಪ್ರಿಯರು. ಬೆಂಗಳೂರು ಬಾನುಲಿಯ ನಿಲಯದ ಕಲಾವಿದೆಯಾಗಿ ಅನೇಕ ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿರುವರಲ್ಲದೆ ಆಕಾಶವಾಣಿಯ ‘ಎ-ಟಾಪ್’ ಗ್ರೇಡ್ ಗಾಯಕಿಯಾಗಿ, ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ರಾಜ್ಯದ ಪ್ರಮುಖ ಸಭೆ-ಸಮ್ಮೇಳನಗಳಲ್ಲೂ ಹಾಡಿ ಗೌರವಾನ್ವಿತರಾಗಿದ್ದಾರೆ.

ತ್ರಿಮೂರ್ತಿಗಳ ಕೀರ್ತನೆಗಳಲ್ಲದೆ ದಾಸರ ಪದಗಳು, ವಚನಗಳು, ದಿವ್ಯ ಪ್ರಬಂಧ, ಭಾವಗೀತೆ ಸೇರಿದಂತೆ ದೊಡ್ಡ ಕೃತಿ ಭಂಡಾರವೇ ಅವರಲ್ಲಿದೆ. ಸಂದರ್ಭೋಚಿತವಾಗಿ ಹಾಡಿ, ಕೇಳುಗರನ್ನು ಸಂತೋಷಗೊಳಿಸುವ ಕಲೆಗಾರಿಕೆಯೂ ಅವರಲ್ಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯ ಜೊತೆಗೆ ‘ಕರ್ನಾಟಕ ಕಲಾಶ್ರೀ’ ಬಿರುದು, ‘ಗಾನವಾರಿಧಿ’ ಪುರಸ್ಕಾರ, ಲೂಯಿಸ್‍ವಿಲ್ಲೆ ನಗರದ ‘ಗೌರವ ಪ್ರಜೆ’, ಡ್ಯೂಕ್ ಯೂನಿವರ್ಸಿಟಿಯ ಗೌರವ ಡಾಕ್ಟೊರೇಟ್ ಗೌರವಗಳು ಅವರಿಗೆ ಸಂದಿವೆ.

‘ಸಂಗೀತ ಸಂಭ್ರಮ’ ಸಂಸ್ಥೆಯು ಪಿ.ರಮಾ ಅವರ ಕನಸಿನ ಕೂಸು. ಅದರ ಆಶ್ರಯದಲ್ಲಿ ಅವರು ಪ್ರತಿ ವರ್ಷ ‘ನಿರಂತರಂ’ ಎಂಬ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ.

ಈ ವರ್ಷದ ಉತ್ಸವದಲ್ಲಿ (ಫೆ. 18ರಿಂದ 26) ಸಂಗೀತ (ಕರ್ನಾಟಕ ಗಾಯನ, ವೀಣೆ, ಭಕ್ತಿಗೀತೆ, ನಾಗಸ್ವರ, ಲಯವಾದ್ಯ ಗೋಷ್ಠಿ, ಚಿತ್ರಗೀತೆ), ನೃತ್ಯ (ಸಮಕಾಲೀನ ನೃತ್ಯ, ಭಾಮಾ ಕಲಾಪ, ‘ನಾಟ್ಯರಾಣಿ ಶಾಂತಳಾ’ ನೃತ್ಯ ರೂಪಕ, ಭರತನಾಟ್ಯ, ಕಥಕ್, ಗೊಂಬೆ ನೃತ್ಯ) ಹಾಗೂ ನಾಟಕಗಳೂ ಸೇರಿ ಉತ್ಸವವನ್ನು ವರ್ಣರಂಜಿತವಾಗಿಸಲಿವೆ. ರಾಮಾನುಜಾಚಾರ್ಯರ ಸಹಸ್ರ ವರ್ಷದ ವಿಶೇಷವಾಗಿ ‘ಶ್ರೀ ರಾಮಾನುಜ ವೈಭವಂ’ ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT