ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಂಧತಿ ಆಲಾಪದಲ್ಲಿ ರಂಗಾಲಂಕಾರದ ಲೇಪ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟ’ ಹವ್ಯಾಸಿ ರಂಗಭೂಮಿ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ‘ಆರುಂಧತಿ ಆಲಾಪ’ ನಾಟಕವು  ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ತಲ್ಲಣ ತಳಮಳ ಹಾಗೂ ಹೊಸ ಬದುಕನ್ನು ಕಟ್ಟುವ ಕಾತರಗಳನ್ನು ಅನಾವರಣಗೊಳಿಸಲು ಯತ್ನಿಸಿತು.

ಕುಡಿತದ ಚಟಕ್ಕೆ ಪತಿ ಬಲಿಯಾದ ನಂತರ ಅರುಂಧತಿ ವಿಧವೆಯಾಗುತ್ತಾಳೆ. ಬಾಲ್ಯ ಸ್ನೇಹಿತ ಚಿದಂಬರ್ ಜೊತೆಗೆ ಸಖ್ಯ ಬೆಳೆಸುತ್ತಾಳೆ. ಹಾದಿತಪ್ಪಿದ ಮಗ ಅಚ್ಯುತ ಊರು ತೊರೆದಾಗ ಆತನ ಪ್ರಿಯತಮೆ ಕನಕ ಆತ್ಮಹತ್ಯೆ ಮಾಡಿಕೊಂಡು, ಆತ್ಮ ರೂಪದಲ್ಲಿ ಬಂದು ಅರುಂಧತಿ ಜೊತೆಗೆ ತನ್ನ ತಲ್ಲಣಗಳನ್ನು ಹಂಚಿಕೊಳ್ಳುತ್ತಾಳೆ.

ಊರವರ ಕೊಂಕು ಮಾತುಗಳನ್ನು ಕೇಳಿ ಕೆರಳುವ ಅಚ್ಯುತ, ತಾಯಿಯನ್ನು ಚುಚ್ಚು ಮಾತುಗಳಿಂದ ನಿಂದಿಸುತ್ತಾನೆ. ನೊಂದ ಆರುಂಧತಿ, ಚಿದಂಬರ್ ಜೊತೆಗೆ ಹೋಗುವ ಮೂಲಕ ವಿಮೋಚನೆ ಕಂಡುಕೊಳ್ಳುತ್ತಾಳೆ.

ಇದು ನಾಟಕದ ಕಥಾಹಂದರ. ಇದಕ್ಕೆ ರಂಗತಂತ್ರಗಳ ಅಲಂಕಾರ ಮಾಡುವ ಮೂಲಕ ನಾಟಕವನ್ನು ಆಕರ್ಷಣೀಯವಾಗಿಸುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ. ಶೀಲದ ಗಡಿಯನ್ನು ದಾಟಿದ ಹೆಣ್ಣು ಸಮಾಜದ ದೃಷ್ಟಿಯಲ್ಲಿ, ಮನೆಯವರ ಮನಸಲ್ಲೂ ಕೀಳಾಗಿ ಕಾಣತೊಡಗುತ್ತಾಳೆ ಎನ್ನುವುದನ್ನು

ನಾಟಕದಲ್ಲಿ  ಬಿಂಬಿಸಲಾಗಿದೆ. ಮಹಿಳೆಯ ಮೇಲೆ ಹೇರಲಾದ ಕಟ್ಟುಪಾಡುಗಳು ಹಾಗೂ ಅದನ್ನು ಮೀರಬಯಸುವ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಈ ನಾಟಕದ ಆಶಯ. ಆದರೆ ಅದು ಎಲ್ಲಿಯೂ ಸಮರ್ಥವಾಗಿ ಮೂಡಿಬರಲಾರದೇ ಇಡೀ ನಾಟಕ ಪೇಲವವಾಗಿದೆ. ಹೆಣ್ಣಿನ ಗಟ್ಟಿ ದ್ವನಿಯಾಗಬೇಕಾಗಿದ್ದ ನಾಟಕದ ವಸ್ತು ವಿಷಯ ಸೊರಗಿಹೋಗಿದೆ.

ರಂಗತಂತ್ರಗಳ ಬಳಕೆಯು ನೋಡುಗರ ಮನಸು ಸೆಳೆಯುವಂತಿದೆ. ಶಶಿಧರ್ ಅಡಪ ಅವರ ರಂಗಸಜ್ಜಿಕೆ ನಾಟಕದ ಕಳೆ ಹೆಚ್ಚಿಸಿದೆ. ಅದಕ್ಕೆ ಪೂರಕವಾಗಿ ಜೀವನಕುಮಾರ್ ಹೆಗ್ಗೋಡು ಅವರ ಬೆಳಕಿನ ವಿನ್ಯಾಸ ಮಾಂತ್ರಿಕ ಸ್ಪರ್ಶ ಕೊಟ್ಟಿದೆ. ಮೈಸೂರಿನ ಕಿಶೋರ್ ಸಂಗೀತ ನಿರ್ದೇಶನ ನಾಟಕದ ದೃಶ್ಯಕ್ಕೆ ಅಗತ್ಯ ಮೂಡ್ ಒದಗಿಸಿದೆ. ‘ಕನಸುಗಳು ಕವಲೊಡೆಯುತ್ತಿವೆ ಒಡಲಾಳದಲ್ಲಿ’ ಸೇರಿದಂತೆ ಹಲವು ಹಾಡುಗಳು ಮಧುರವಾಗಿವೆ.

ಪ್ರಮಿಳಾ ಬೇಂಗ್ರೆಯವರು ಮಾಡಿದ ಪ್ರತಿ ಪಾತ್ರದ ವಸ್ತ್ರವಿನ್ಯಾಸ ಬಣ್ಣದ ಚಿತ್ತಾರ ಬಿಡಿಸಿದಂತಿದೆ. ನಾಟಕದ ಪ್ರತಿ ಫ್ರೇಮ್ ಪೇಂಟಿಂಗ್ ರೀತಿಯಲ್ಲಿ ಮೂಡಿ ಬಂದಿದೆ. ಆದರೆ ಅಭಿನಯ ಇನ್ನಷ್ಟು ಸುಧಾರಿಸಬೇಕಿತ್ತು ಎನಿಸುತ್ತದೆ. ನಾಟಕದ ನಿರ್ದೇಶನ ಮಾಡಿ ಚಿದಂಬರ ಎನ್ನುವ ಪ್ರಮುಖ ಪಾತ್ರದಲ್ಲೂ ಅಭಿನಯಿಸಿದ ಅಡ್ಡಂಡ ಕಾರ್ಯಪ್ಪನವರಿಗೆ ಪಾತ್ರದ ಒಳಗೆ ಸಂಪೂರ್ಣ ಇಳಿಯಲು ಸಾಧ್ಯವಾಗಿಲ್ಲ.

ನಿರ್ದೇಶಕರು, ಆರುಂಧತಿಯನ್ನು ಸಂದರ್ಭದ ಅನಿವಾರ್ಯತೆಗೆ ಒಗ್ಗಿಸುವ ಬದಲಾಗಿ ಮಹಿಳೆಯರ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಗಟ್ಟಿ ದ್ವನಿಯಾಗಿ ಬಿಂಬಿಸಿದ್ದರೆ ದಮನಿತ ಮಹಿಳೆಯರಿಗೆ ಮಾದರಿಯಾಗಬಹುದಾಗಿತ್ತು. ತಮ್ಮ ಇಚ್ಛೆಗೆ ವಿರುದ್ಧವಾಗಿ ಬದುಕು ಸವೆಸುತ್ತಿರುವ ಹೆಣ್ಣು ಮಕ್ಕಳಿಗೆ ಆರುಂಧತಿಯನ್ನು ಪ್ರೇರಣೆಯಾಗಿಸಬಹುದಾಗಿತ್ತು.ನಾಟಕ:  ‘ಅರುಂಧತಿ ಆಲಾಪ’

ತಂಡ: ಕೊಡಗಿನ ರಂಗಭೂಮಿ ಪ್ರತಿಷ್ಠಾನ
ನಿರ್ದೇಶನ: ಕಾರ್ಯಪ್ಪ
ರಚನೆ: ಎಸ್.ರಾಮನಾಥ
ತಂತ್ರಜ್ಞರು: ನಿನಾದ (ಸಂಗೀತ), ಶ್ರೀನಿವಾಸ್ (ಬೆಳಕು), ಶಶಿಧರ (ರಂಗ ವಿನ್ಯಾಸ)
ತಂತ್ರಜ್ಞರು:  ಶಶಿಧರ ಅಡಪ(ವಿನ್ಯಾಸ),  ಜೀವನಕುಮಾರ್ (ಬೆಳಕು), ಕಿಶೋರ್ (ಸಂಗೀತ), ಪ್ರಮಿಳಾ ಬೇಂಗ್ರೆ (ವಸ್ತ್ರ ವಿನ್ಯಾಸ)
ಕಲಾವಿದರು:  ಅನಿತಾ ಕಾರ್ಯಪ್ಪ, ಅಡ್ಡಂಡ ಕಾರ್ಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT