ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ: ಕಾಳಜಿ, ಕಳವಳ

ಅಜ್ಞಾನ ತೊಲಗಲಿ...
Last Updated 17 ಫೆಬ್ರುವರಿ 2017, 20:20 IST
ಅಕ್ಷರ ಗಾತ್ರ
ಮಕ್ಕಳಿಗೆ ಮೀಸಲ್ಸ್ (ದಡಾರ) ಮತ್ತು ರುಬೆಲ್ಲಾ (ಜರ್ಮನ್ ದಡಾರ) ಲಸಿಕೆ ಹಾಕುವ ಅಭಿಯಾನದ ಆರಂಭದಲ್ಲೇ ಹಲವೆಡೆಗಳಿಂದ ಹಲತರದ ಅಪಸ್ವರಗಳು ಎದ್ದಿವೆ. ಕೇಂದ್ರ ಸರ್ಕಾರದ ಇರಾದೆಗಳ ಬಗ್ಗೆ ಕೆಲವು ಜನವಿಭಾಗಗಳಲ್ಲಿ ಆಳವಾದ ಸಂದೇಹಗಳಿರುವುದು, ಈ ಅಭಿಯಾನದ ಅಗತ್ಯದ ಬಗ್ಗೆ ಜನಸಾಮಾನ್ಯರಿಗಷ್ಟೇ ಅಲ್ಲ, ತಜ್ಞ ವೈದ್ಯರಿಗೂ ಸರಿಯಾದ ಮಾಹಿತಿಯನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿರುವುದು, ಲಸಿಕೆಗಳ ಬಗ್ಗೆ ಮತ್ತು ವೈದ್ಯಕೀಯ ವ್ಯವಸ್ಥೆಯ ಖಾಸಗಿ ಹಿತಾಸಕ್ತಿಗಳ ಬಗ್ಗೆ ಸಂಶಯ ಹಾಗೂ ಭಯವಿರುವುದು, ಮತೀಯ ಹಾಗೂ ವಿಚ್ಛಿದ್ರಕಾರಿ ಶಕ್ತಿಗಳ ಉಪದ್ರವ ಈ ಅಭಿಯಾನಕ್ಕೆ ತೊಡರಾಗಿ ಪರಿಣಮಿಸಿವೆ. ಇವೆಲ್ಲವನ್ನೂ ಕೂಡಲೇ ತೊಡೆದು ಹಾಕದಿದ್ದರೆ ಈಗಿನ ಮಕ್ಕಳ ಆರೋಗ್ಯಕ್ಕೆ ಮಾತ್ರವಲ್ಲ, ಅವರಿಗೆ ಹುಟ್ಟಲಿರುವ ಮಕ್ಕಳಿಗೂ ತೊಡಕಾಗುವ ಅಪಾಯವಿದೆ.
 
ಈ ಲಸಿಕೆ ಹೊಸತಲ್ಲ, ಇಂತಹ ಅಭಿಯಾನವೂ ಹೊಸತಲ್ಲ. ಆದರೆ ಲಸಿಕೆಗಳ ವಿರುದ್ಧ ಅಪಪ್ರಚಾರ, ಆಧಾರರಹಿತ ಸಂಶಯ, ಮತೀಯವಾದಿಗಳ ಬೆದರಿಕೆ, ಇವಕ್ಕೆ ಮಾಧ್ಯಮಗಳ ಪೋಷಣೆ ಹೊಸತು. ಇದು ನಾಲ್ಕು ಸಾಲಿನ ಸಂದೇಶಗಳೆಲ್ಲವನ್ನೂ ಪರಮಸತ್ಯವೆಂದು ಒಪ್ಪಿ ಹಂಚಿಕೊಳ್ಳುವ ಕಾಲವಾಗಿದೆ; ವಿವರಗಳನ್ನು ಓದಿ ಅರಿತುಕೊಳ್ಳುವುದಕ್ಕೆ ಪುರುಸೊತ್ತಾಗಲೀ, ಆಸಕ್ತಿಯಾಗಲೀ ಇಲ್ಲವಾಗಿದೆ. ಯೋಚಿಸಿ ಪ್ರಶ್ನಿಸುವುದೆಂದರೆ ಬಹು ದೊಡ್ಡ ಕಷ್ಟವೇ ಆಗಿಬಿಟ್ಟಿದೆ. ಅಂತಲ್ಲಿ, ನಮ್ಮ ಮುಂದಿನ ಜನಾಂಗವನ್ನು ರಕ್ಷಿಸಬೇಕಿದ್ದರೆ ಲಸಿಕೆಗಳ ಬಗೆಗಿನ ವೈಜ್ಞಾನಿಕ ಸತ್ಯಗಳು ಹಾಗೂ ಅದರ ವಿರೋಧದ ಟೊಳ್ಳುತನಗಳನ್ನು ಅರಿಯುವ ವೈಚಾರಿಕತೆ ಬೆಳೆಯಬೇಕಾದ ತುರ್ತಿದೆ.
 
ಎಡ್ವರ್ಡ್ ಜೆನ್ನರ್ 1796ರಲ್ಲಿ ಸಿಡುಬಿಗೆ ಲಸಿಕೆಯನ್ನು ಚುಚ್ಚಲಾರಂಭಿಸಿದ ಬಳಿಕ ಸುಮಾರು 25 ಮಾರಣಾಂತಿಕ ಸೋಂಕುಗಳ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ 220 ವರ್ಷಗಳ ಶ್ರಮದಿಂದಾಗಿ ವರ್ಷಕ್ಕೆ 25 ಲಕ್ಷ ಜೀವಗಳು ಉಳಿಯುತ್ತಿವೆ, ಕೋಟಿಗಟ್ಟಲೆ ಮಕ್ಕಳಲ್ಲೂ, ವಯಸ್ಕರಲ್ಲೂ ಈ ಸೋಂಕುಗಳ ಗಂಭೀರ ಸಮಸ್ಯೆಗಳನ್ನು ತಡೆಯಲಾಗುತ್ತಿದೆ.
 
ನಾಲ್ಕೈದು ದಶಕಗಳ ಹಿಂದೆ ನಮ್ಮೆಲ್ಲರಿಗೂ ಸಿಡುಬಿನ ಲಸಿಕೆಯನ್ನು ಹಾಕಿದ್ದರಿಂದಾಗಿ, ವರ್ಷಕ್ಕೆ 20-30 ಲಕ್ಷ ಜನರನ್ನು ಕೊಲ್ಲುತ್ತಿದ್ದ ಈ ಸೋಂಕನ್ನು 1977ರ ಅಂತ್ಯಕ್ಕೆ ಭೂಲೋಕದಿಂದಲೇ ಹೊಡೆದಟ್ಟುವುದಕ್ಕೆ ಸಾಧ್ಯವಾಯಿತು, ಈಗ ಲಸಿಕೆಯೂ ಬೇಡವಾಗಿದೆ! ಪೋಲಿಯೊ ಲಸಿಕೆ ಬಂದು 60 ವರ್ಷಗಳಾಗುವಾಗ ಪೋಲಿಯೊ ಪ್ರಕರಣಗಳ ಸಂಖ್ಯೆಯು ವರ್ಷಕ್ಕೆ 3-4 ಲಕ್ಷಗಳಿಂದ ಕೇವಲ 70ಕ್ಕೆ ಇಳಿಯಿತು, ಸಾವಿರಾರು ಜನರ ಅಂಗವೈಕಲ್ಯವು ತಪ್ಪಿ ಹೋಯಿತು. 
 
ಭಾರತದಲ್ಲಿ 1995-96ರಿಂದ ಪಲ್ಸ್ ಪೋಲಿಯೊ ಅಭಿಯಾನದಡಿಯಲ್ಲಿ ಸತತವಾಗಿ ವರ್ಷಕ್ಕೆರಡು ಬಾರಿ ಹೆಚ್ಚುವರಿಯಾಗಿ ಲಸಿಕೆಯನ್ನು ನೀಡಿದ್ದರಿಂದಾಗಿ 2014ರ ವೇಳೆಗೆ ಪೋಲಿಯೊದಿಂದ ಮುಕ್ತಿ ದೊರೆಯಿತು. ನಮ್ಮಲ್ಲಿ 1980ರಲ್ಲಿ ವರ್ಷಕ್ಕೆ 46 ಸಾವಿರ ಜನರನ್ನು ಕೊಲ್ಲುತ್ತಿದ್ದ ಧನುರ್ವಾತವು ಲಸಿಕೆಯಿಂದಾಗಿಯೇ ನಿಯಂತ್ರಣಕ್ಕೆ ಬಂದಿದ್ದು, 2015ರ ವೇಳೆಗೆ ಸಾವಿನ ಸಂಖ್ಯೆಯು ಕೇವಲ 2,268ಕ್ಕೆ ಇಳಿದಿದೆ. ಈ ಸೋಂಕುಗಳನ್ನು ಮಾರಿ-ದೆವ್ವ-ಸೈತಾನರ ಮೇಲೆ ಆರೋಪಿಸುತ್ತಿದ್ದವರಿಗೆ ಆಧುನಿಕ ವೈದ್ಯ ವಿಜ್ಞಾನದ ಈ ಮಹತ್ಸಾಧನೆಗಳೇ ಉತ್ತರವಲ್ಲವೇ?
 
ಈಗ ನಮ್ಮ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿಯಲ್ಲಿ ಕ್ಷಯ (ಬಿಸಿಜಿ), ಧನುರ್ವಾತ, ಡಿಫ್ತೀರಿಯಾ, ನಾಯಿಕೆಮ್ಮು (ಡಿಪಿಟಿ), ಪೋಲಿಯೊ, ಹೆಪಟೈಟಿಸ್ ಬಿ, ದಡಾರ, ಹಿಮೋಫಿಲಸ್ ಸೋಂಕುಗಳ ವಿರುದ್ಧ ಲಸಿಕೆಗಳನ್ನು ನೀಡಲಾಗುತ್ತಿದೆ. ದಡಾರದ ವಿರುದ್ಧ ಮಗುವಿಗೆ 9-12 ತಿಂಗಳಿರುವಾಗ ಮೊದಲ ಬಾರಿಗೆ ಹಾಗೂ 16-24ನೇ ತಿಂಗಳಲ್ಲಿ ಎರಡನೇ ಬಾರಿಗೆ ಲಸಿಕೆ ನೀಡುವ ಕ್ರಮವಿದ್ದರೂ, ಹಲವು ಮಕ್ಕಳು ಈ ಎರಡನೇ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. 
 
ಭಾರತೀಯ ಶಿಶುವೈದ್ಯರ ಸಂಘಟನೆಯ ಶಿಫಾರಸಿನನ್ವಯ ಕೆಲವು ಶಿಶು ತಜ್ಞರು ಮತ್ತು ಕೆಲವು ರಾಜ್ಯಗಳು ಮೀಸಲ್ಸ್ ಲಸಿಕೆಯ ಬದಲಿಗೆ ಮೀಸಲ್ಸ್, ಮಂಪ್ಸ್ (ಕೆನ್ನೆಬಾವು) ಹಾಗೂ ರುಬೆಲ್ಲಾ ಸೋಂಕುಗಳ ವಿರುದ್ಧ ಲಸಿಕೆಯನ್ನು ನೀಡುತ್ತಿದ್ದರೂ, ಆ ಲಸಿಕೆಯನ್ನು ಪಡೆದಿರುವ ಮಕ್ಕಳ ಪ್ರಮಾಣವು ಅತ್ಯಲ್ಪವಿದೆ.
 
ದೇಶದಲ್ಲಿ ಒಟ್ಟಾರೆಯಾಗಿ ಲಸಿಕೆ ಪಡೆಯುವ ಮಕ್ಕಳ ಪ್ರಮಾಣವು ಶೇ 65ರಷ್ಟೇ ಇದೆಯೆನ್ನುವುದನ್ನು ಮನಗಂಡು, 2020ರೊಳಗೆ ಎಲ್ಲಾ ಮಕ್ಕಳಿಗೆ ಎಲ್ಲಾ ಲಸಿಕೆಗಳನ್ನು ತಲುಪಿಸುವ ಉದ್ದೇಶದಿಂದ 2014ರ ಡಿಸೆಂಬರ್ 25ರಂದು ‘ಇಂದ್ರಧನುಷ್’ ಅಭಿಯಾನವನ್ನು ಆರಂಭಿಸಲಾಯಿತು. ಎಂ.ಆರ್ ಲಸಿಕೆ ಹಾಕುವ ಈ ಹೊಸ ಅಭಿಯಾನವು 2020ರ ವೇಳೆಗೆ ದೇಶದಿಂದ ದಡಾರವನ್ನು ನಿರ್ಮೂಲಗೊಳಿಸಿ, ರುಬೆಲ್ಲಾವನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ.
 
ಈ ಎಂ.ಆರ್ ಲಸಿಕೆಯ ಅಭಿಯಾನವನ್ನು ರಾತ್ರಿ ಬೆಳಗಾಗುವುದರೊಳಗೆ ಆರಂಭಿಸಿದ್ದಲ್ಲ. ದೇಶದೊಳಗಿನ ಹಾಗೂ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮುಂತಾದ ಸಂಸ್ಥೆಗಳ ತಜ್ಞರ ನೇತೃತ್ವದಲ್ಲಿ 2005ರಿಂದಲೇ ವ್ಯಾಪಕ ಅಧ್ಯಯನಗಳನ್ನು ನಡೆಸಲಾಗಿದೆ. ಕರ್ನಾಟಕದಲ್ಲಿ ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್‌ ಅವರ ವಿಶೇಷ ಮುತುವರ್ಜಿಯಿಂದಾಗಿ 2014ರ ಬಳಿಕ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಬಲ ಬಂದಿತು (ಈ ಅಭಿಯಾನದಲ್ಲಿ ಕರ್ನಾಟಕಕ್ಕೆ ಆದ್ಯತೆ ನೀಡಿರುವುದಕ್ಕೆ ಇದೇ ಕಾರಣವೆನ್ನಬಹುದು). ದೇಶದಲ್ಲಿ ದಡಾರ ಸೋಂಕು ಹೆಚ್ಚುತ್ತಿರುವುದು ಮತ್ತು ಅದಾಗಲೇ ಲಸಿಕೆಯನ್ನು ಪಡೆದ ಮಕ್ಕಳಲ್ಲೂ ದಡಾರ ಸಂಭವಿಸುತ್ತಿರುವುದು ಈ ಅಧ್ಯಯನಗಳಲ್ಲಿ ದೃಢಗೊಂಡಿದೆ. ದಡಾರದ ಸೋಂಕುಳ್ಳವರಲ್ಲಿ ಶ್ವಾಸಕಾಂಗ, ಮೆದುಳು, ಯಕೃತ್ತು ಮುಂತಾದ ಅಂಗಗಳಿಗೆ ತೊಂದರೆಯಾಗಿ, ಸಾವಿರಕ್ಕಿಬ್ಬರು ಸಾವನ್ನಪ್ಪುವ ಸಾಧ್ಯತೆಯಿದೆ. ಭಾರತದಲ್ಲಿ  2015ರಲ್ಲಿ ಅಂತಹ 49,200 ಸಾವುಗಳಾಗಿರುವುದನ್ನು ಗುರುತಿಸಲಾಗಿದೆ. 
 
ರುಬೆಲ್ಲಾದಿಂದ ಸೋಂಕಿತರಾದವರಿಗೆ ತೀವ್ರತರದ ಸಮಸ್ಯೆಗಳಾಗುವುದು ತೀರಾ ಅಪರೂಪ; ಆದರೆ, ಗರ್ಭಿಣಿಯಿದ್ದಾಗ ರುಬೆಲ್ಲಾ ತಗುಲಿದರೆ ಬೆಳೆಯುತ್ತಿರುವ ಮಗುವಿಗೆ ಹೃದಯದ ಸಮಸ್ಯೆ, ಕಿವುಡುತನ, ಅಂಧತ್ವ, ಬುದ್ಧಿಮಾಂದ್ಯತೆ, ಯಕೃತ್ತಿನ ಸಮಸ್ಯೆಗಳೆಲ್ಲ ಉಂಟಾಗಬಹುದು. ನಮ್ಮ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ರುಬೆಲ್ಲಾ ಲಸಿಕೆಯು ಸೇರಿರದೇ ಇರುವುದರಿಂದ, ಶೇ 10-20ರಷ್ಟು ಹೆಣ್ಣು ಮಕ್ಕಳು  ರುಬೆಲ್ಲಾ ಸೋಂಕಿಗೆ ತುತ್ತಾಗುವ ಅಪಾಯವಿದೆ ಹಾಗೂ ಅಂಥವರು ಗರ್ಭಿಣಿಯರಾದಾಗ ರುಬೆಲ್ಲಾ ತಗುಲಿದರೆ, ಮಗುವಿಗೆ ಸಮಸ್ಯೆಗಳಾಗುತ್ತವೆ. ಇವೆಲ್ಲವನ್ನು ಗಮನಿಸಿಯೇ ದಡಾರ ಲಸಿಕೆಯನ್ನು ಹೆಚ್ಚುವರಿಯಾಗಿ ನೀಡುವುದರ ಜೊತೆಗೆ, ರುಬೆಲ್ಲಾ ಲಸಿಕೆಯನ್ನೂ ನೀಡುವ ಈ ಎಂ.ಆರ್ ಲಸಿಕೆಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 
 
ಆಫ್ರಿಕಾದ ಕೆಲವು ದೇಶಗಳಲ್ಲಿ, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನದಲ್ಲಿ  ಈಗಾಗಲೇ ಎಂ.ಆರ್ ಲಸಿಕೆ ಹಾಕುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಅಭಿಯಾನವನ್ನು ವಿರೋಧಿಸುತ್ತಿರುವವರಿಗೆ ಇಂತಹ ವಾಸ್ತವಾಂಶಗಳ ಅರಿವಿಲ್ಲ ಎನ್ನುವುದು ಸುಸ್ಪಷ್ಟವಿದ್ದು, ಅಂಥವರು ತಮ್ಮ ಅಜ್ಞಾನ- ಅಹಂಕಾರ-ಮತಾಂಧತೆಗಳಿಂದ ಇಂದಿನ ಮಕ್ಕಳನ್ನು ಮಾತ್ರವಲ್ಲ, ಮುಂದೆ ಹುಟ್ಟಲಿರುವ ಮೊಮ್ಮಕ್ಕಳನ್ನೂ ಅಪಾಯಕ್ಕೆ ತಳ್ಳುತ್ತಾರೆ. 
 
ದಡಾರವನ್ನು ಹೊಡೆದೋಡಿಸಿ, ರುಬೆಲ್ಲಾವನ್ನು ನಿಯಂತ್ರಿಸಬಯಸುವ ಈ ಅಭಿಯಾನವು ಯಶಸ್ವಿಯಾಗಬೇಕಿದ್ದರೆ ಶೇ 95ಕ್ಕೂ ಹೆಚ್ಚು ಮಕ್ಕಳಿಗೆ ಈ ಎಂ.ಆರ್ ಲಸಿಕೆಯನ್ನು ಹಾಕಬೇಕಾಗುತ್ತದೆ. ಈ ಮೊದಲೇ ಲಸಿಕೆಯನ್ನು ಹಾಕಿಸಿಕೊಂಡಿರುವ ಮಕ್ಕಳಿಗೂ ಹೆಚ್ಚುವರಿ ಲಸಿಕೆಯನ್ನು ನೀಡಬೇಕಾಗುತ್ತದೆ. ಆಗ ಮಾತ್ರ ಈ ಸೋಂಕುಗಳು ಯಾರಿಗೂ ತಗುಲದಂತೆ ರಕ್ಷಣೆ ದೊರೆಯುತ್ತದೆ, ಸೋಂಕಿನ ಹರಡುವಿಕೆಯೇ ಇಲ್ಲವಾಗುತ್ತದೆ. ಆದ್ದರಿಂದ ಅತ್ಯಂತ ಗಂಭೀರ ಕಾಯಿಲೆಗಳುಳ್ಳ ಮಕ್ಕಳನ್ನುಳಿದು ಮಿಕ್ಕೆಲ್ಲ ಮಕ್ಕಳೂ ಈ ಎಂ.ಆರ್ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು. ಲಸಿಕೆ ಹಾಗೂ ಅದನ್ನು ಚುಚ್ಚುವ ವಿಧಾನಗಳ ಸುರಕ್ಷತೆಯ ಬಗ್ಗೆ ಸಂದೇಹಿಸುವ ಅಗತ್ಯವಿಲ್ಲ; ರಾಷ್ಟ್ರೀಯ ಅಭಿಯಾನದಡಿಯಲ್ಲಿ ಎಲ್ಲ ಜಾತಿ-ಮತಗಳ ಎಲ್ಲ ಮಕ್ಕಳಿಗೆ ಅದನ್ನು ಉಚಿತವಾಗಿ ನೀಡಲಾಗುತ್ತಿರುವುದರಿಂದ ಯಾವುದೇ ಕಾಣದ ಕೈಗಳ ಕೈವಾಡದ ಶಂಕೆಯೂ ಬೇಕಿಲ್ಲ. 
 
ರಾಜ್ಯದಲ್ಲಿ ಎಂ.ಆರ್ ಲಸಿಕೆಯನ್ನು ನೀಡುವ ಗುರಿ ಸಾಧನೆಗಾಗಿ ದಾಪುಗಾಲಿಡಬೇಕಿದ್ದು, ವೈದ್ಯರು, ಸೇವಾಸಂಸ್ಥೆಗಳು ಮತ್ತು ಜನಸಾಮಾನ್ಯರೆಲ್ಲರೂ ಕೈಜೋಡಿಸುವ ಅಗತ್ಯವಿದೆ. ಯಾವುದೇ ಕಾರಣಕ್ಕೆ ಶಾಲೆಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಲಾಗದವರು ಸಮೀಪದ ಅಂಗನವಾಡಿ, ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 1ರೊಳಗೆ ಲಸಿಕೆಯನ್ನು ಹಾಕಿಸಿಕೊಳ್ಳಬಹುದು.
 
ಈ ಅಭಿಯಾನವನ್ನು ವಿರೋಧಿಸುತ್ತಿರುವವರು ಪೋಲಿಯೊ ಲಸಿಕೆಯನ್ನು ವಿರೋಧಿಸಿದ ಪಾಕಿಸ್ತಾನದ ಕೆಲ ಭಾಗಗಳಲ್ಲಿ ಮಕ್ಕಳು ಪೋಲಿಯೊ ಪೀಡಿತರಾಗಿ ಅಂಗವಿಕಲರಾಗುತ್ತಿರುವುದನ್ನು, ಡಿಪಿಟಿ ಲಸಿಕೆಯನ್ನು ವಿರೋಧಿಸಿದ ಕಾರಣಕ್ಕೆ ನಮ್ಮ ರಾಜ್ಯವೂ ಸೇರಿದಂತೆ ದೇಶದ ಕೆಲವೆಡೆ ಡಿಫ್ತೀರಿಯಾ ಮರುಕಳಿಸುತ್ತಿರುವುದನ್ನು ತಿಳಿದುಕೊಳ್ಳಬೇಕು; ಅಂಥವರ ಅಜ್ಞಾನ-ಅಹಂಕಾರಗಳಿಂದ ಅವರ ಮಕ್ಕಳಾಗಲೀ, ಇತರರ ಮಕ್ಕಳಾಗಲೀ ನರಳಲು ಅಥವಾ ಸಾಯಲು ಬಿಡಬಾರದು.
 
**
ಪ್ರಸಕ್ತ ಅಭಿಯಾನ 
9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ದಡಾರ, ರುಬೆಲ್ಲಾ (ಎಂ.ಆರ್) ಲಸಿಕೆ
 
**
3 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭಿಯಾನ
* ಕರ್ನಾಟಕ
* ತಮಿಳುನಾಡು
* ಗೋವಾ
* ಪುದುಚೇರಿ
* ಲಕ್ಷದ್ವೀಪ
 
**
ಒಟ್ಟು 3.6 ಕೋಟಿ
ಮಕ್ಕಳಿಗೆ ಪ್ರಸಕ್ತ ಅಭಿಯಾನದಲ್ಲಿ ಎಂ.ಆರ್ ಲಸಿಕೆ ನೀಡುವ ಗುರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT