ಡೆಬಿಟ್ ಕಾರ್ಡ್ ಮೂಲಕ ನಡೆಯುವ ವಹಿವಾಟು ಮೊತ್ತದ ಶೇ 0.70ರ ಬದಲು ಇನ್ನು ಮುಂದೆ ಶೇ 0.40 ರಷ್ಟನ್ನು ಮಾತ್ರ ವರ್ತಕರಿಂದ ಸೇವಾಶುಲ್ಕ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಆರ್‌ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಸದ್ಯ ಡೆಬಿಟ್ ಕಾರ್ಡ್ ಮೂಲಕ ನಡೆಯುವ ₹2 ಸಾವಿರದವರೆಗಿನ ವಹಿವಾಟಿಗೆ ಶೇ 0.75ರಷ್ಟು ಮತ್ತು ₹2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟಿಗೆ ಶೇ 1ರಷ್ಟು ಸೇವಾಶುಲ್ಕ ಸಂಗ್ರಹಿಸಲಾಗುತ್ತಿದೆ. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಮೊತ್ತದ ಮೇಲಿನ ಎಂಡಿಆರ್‌ಗೆ ಆರ್‌ಬಿಐ ಮಿತಿ ವಿಧಿಸಿಲ್ಲ.
ವಾರ್ಷಿಕ ₹20 ಲಕ್ಷದೊಳಗೆ ವಹಿವಾಟು ನಡೆಸುವ ಸಣ್ಣ ವರ್ತಕರು, ವಿಮೆ, ಮ್ಯೂಚುವಲ್ ಫಂಡ್ಸ್, ಶೈಕ್ಷಣಿಕ ಸಂಸ್ಥೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಡೆಬಿಟ್ ಕಾರ್ಡ್ ವಹಿವಾಟಿಗೆ ಶೇ 0.40ರಷ್ಟು ಎಂಡಿಆರ್ ಅನ್ವಯಿಸಲಿವೆ.