ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿಯಾದ ಹಾರ್ಟಿ ಬಜಾರ್

ಕಸ್ತೂರಿನಗರದಲ್ಲಿ ದ್ರಾಕ್ಷಿ–ಕಲ್ಲಂಗಡಿ ಮೇಳಕ್ಕೆ ಚಾಲನೆ
Last Updated 17 ಫೆಬ್ರುವರಿ 2017, 19:19 IST
ಅಕ್ಷರ ಗಾತ್ರ
ಬೆಂಗಳೂರು: ‘ಕಸ್ತೂರಿನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲಾದ ಆಧುನಿಕ ಸೌಲಭ್ಯಗಳುಳ್ಳ ಹಾರ್ಟಿ ಬಜಾರ್‌ ಯಶಸ್ವಿಯಾಗಿದೆ’ ಎಂದು ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್‌. ಶ್ರೀನಿವಾಸನ್‌ ತಿಳಿಸಿದರು. 
 
ಶುಕ್ರವಾರ ಕಸ್ತೂರಿ ನಗರದಲ್ಲಿ ಹಾಪ್‌ಕಾಮ್ಸ್‌ ಹಮ್ಮಿಕೊಂಡಿದ್ದ ಹಾರ್ಟಿ ಬಜಾರ್ ಯಶೋಗಾಥೆ ಹಾಗೂ ಸ್ಥಳೀಯವಾಗಿ ದ್ರಾಕ್ಷಿ– ಕಲ್ಲಂಗಡಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘ಹಾರ್ಟಿ ಬಜಾರ್‌ನಿಂದ ನಾವು ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭ ಬಂದಿದೆ. ಈಗಿರುವ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ತಿಂಗಳಲ್ಲಿ ಐದಾರು ದಿನಗಳಲ್ಲಿ ₹20 ಸಾವಿರದಿಂದ ₹30 ಸಾವಿರ ವ್ಯಾಪಾರ ಆಗುತ್ತದೆ. ಹಾರ್ಟಿ ಬಜಾರ್‌ನಲ್ಲಿ ಜನವರಿ ತಿಂಗಳಲ್ಲಿ ₹10.16 ಲಕ್ಷ ವಹಿವಾಟು ನಡೆದಿದೆ. ಇದರಿಂದ ಹಾಪ್‌ಕಾಮ್ಸ್‌ಗೆ ₹1.50 ಲಕ್ಷ ಲಾಭ ಬಂದಿದೆ’ ಎಂದರು. 
 
‘ಅರಕೆರೆ, ಇಟ್ಟುಮಡು, ಬನ್ನೇರುಘಟ್ಟ ರಸ್ತೆ, ಇನ್ಫೊಸಿಸ್‌ ಕ್ಯಾಂಪಸ್‌ ಸೇರಿ ಒಟ್ಟು ಎಂಟು ಕಡೆ ಹಾರ್ಟಿ ಬಜಾರ್‌ ತೆರೆಯಲು ಚಿಂತಿಸಲಾಗಿದೆ. ಮುಂದಿನ ತಿಂಗಳಲ್ಲಿ ಸದಾಶಿವನಗರದಲ್ಲಿ ಹಾರ್ಟಿ ಬಜಾರ್‌ ಆರಂಭವಾಗಲಿದೆ’ ಎಂದರು. 
 
ಕಸ್ತೂರಿ ನಗರ ವಾರ್ಡ್‌ನ ಬಿಬಿಎಂಪಿ ಸದಸ್ಯೆ ಮೀನಾಕ್ಷಿ ಲಕ್ಷ್ಮೀಪತಿ ಮಾತನಾಡಿ, ‘ಈ ಯೋಜನೆಯಿಂದ ನಮ್ಮ ನಗರದಲ್ಲಿ ತಾಜಾ ಹಣ್ಣು ತರಕಾರಿಗಳು ದೊರೆಯುತ್ತಿವೆ. ಇನ್ನೆರಡು ಹಾರ್ಟಿ ಬಜಾರ್‌ ನಿರ್ಮಿಸಲು ಕೋರಿದ್ದೇವೆ’ ಎಂದು ತಿಳಿಸಿದರು.
 
‘ಹಾರ್ಟಿ ಬಜಾರ್‌ನಿಂದ ಈ ಭಾಗದಲ್ಲಿ ತಾಜಾ ತರಕಾರಿ, ಹಣ್ಣು, ಸಿರಿಧಾನ್ಯಗಳು ಒಂದೆಡೆ ದೊರೆಯುತ್ತಿವೆ. ಇದಕ್ಕೂ ಮೊದಲು ಆನ್‌ಲೈನ್‌ ಮೂಲಕ ಸಿರಿಧಾನ್ಯಗಳನ್ನು ತರಿಸಿಕೊಳ್ಳುತ್ತಿದ್ದೆ. ಗುಣಮಟ್ಟ ಸರಿ ಇಲ್ಲದೆ ಕಿರಿಕಿರಿಯಾಗುತ್ತಿತ್ತು. ಈಗ ನೇರವಾಗಿ ಅವುಗಳನ್ನು ಕೊಳ್ಳಬಹುದು’ ಎಂದು ಸ್ಥಳೀಯರಾದ ಸುಮಾ ತಿಳಿಸಿದರು.
 
ಖಾಸಗಿ ಸಹಭಾಗಿತ್ವ: ‘ಖಾಸಗಿಯವರಲ್ಲಿ ಸುಮಾರು 1200 ಚದರ ಅಡಿ ವಿಸ್ತೀರ್ಣದ ಕಟ್ಟಡವಿದ್ದು, ಹಾರ್ಟಿ ಬಜಾರ್‌ ತೆಗೆಯಲು ಆಸಕ್ತಿ ಇದ್ದರೆ ಸಂಸ್ಥೆಯನ್ನು ಸಂಪರ್ಕಿಸಬಹುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬೆಳ್ಳೂರು ಕೃಷ್ಣ ತಿಳಿಸಿದರು.
 
**
ನಗರದ 15 ಬಡಾವಣೆಗಳಲ್ಲೂ ಮಳಿಗೆ ತೆರೆಯಲು ಹಾಪ್‌ಕಾಮ್ಸ್‌ ಸಿದ್ಧವಿದೆ. ಕಟ್ಟಡ ಮಾಲೀಕರಿಗೆ ಮತ್ತು ಗ್ರಾಹಕರಿಗೂ ಇದರಿಂದ ಉಪಯೋಗವಾಗಲಿದೆ
-ಜಿ.ಆರ್‌. ಶ್ರೀನಿವಾಸನ್‌
ಹಾಪ್‌ಕಾಮ್ಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT