ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ ನೀರು ಶುದ್ಧೀಕರಣ ಕಾರ್ಯ ಆರಂಭ

ಬೆಳ್ಳಂದೂರು ಕೆರೆಗೆ ಸದನ ಸಮಿತಿಯ ಉಪಸಮಿತಿ ಭೇಟಿ
Last Updated 17 ಫೆಬ್ರುವರಿ 2017, 19:35 IST
ಅಕ್ಷರ ಗಾತ್ರ
ಬೆಂಗಳೂರು: ‘ಮಲಿನಗೊಂಡಿರುವ ಬೆಳ್ಳಂದೂರು ಕೆರೆಯ ನೀರನ್ನು ಶುದ್ಧೀಕರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಟೆಂಡರ್‌ ಕರೆದಿದೆ. 2–3 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಕೆರೆ ಒತ್ತುವರಿ ಪತ್ತೆ ಸದನ ಸಮಿತಿಯ ಉಪಸಮಿತಿ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ತಿಳಿಸಿದರು.
 
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಶುಕ್ರವಾರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
 
ಬಳಿಕ ಮಾತನಾಡಿದ ಅವರು, ‘ಬೆಳ್ಳಂದೂರು ಕೆರೆಯ ನೀರನ್ನು ಶುದ್ಧೀಕರಿಸಿ ಕಾಲುವೆ ಮೂಲಕ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆ ಇದೆ. ಇದಕ್ಕಾಗಿ ವಿದೇಶಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. 2020ರ ವೇಳೆಗೆ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ’ ಎಂದರು.
 
‘ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಗುರಿ ಮಾಡಲು ಸಾಧ್ಯವಿಲ್ಲ.  ಕಳೆದ 20–25 ವರ್ಷಗಳಿಂದ ಈ ಕೆರೆಗೆ ಕಲುಷಿತ ನೀರನ್ನು ಹರಿಸಲಾಗಿದೆ. ಇದರಿಂದ ಕೆರೆ ಸಂಪೂರ್ಣ ಹಾಳಾಗಿದೆ. ಇದನ್ನು ಶುದ್ಧೀಕರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸಬೇಕಿದೆ’ ಎಂದು ಹೇಳಿದರು.
 
‘ಸಮಿತಿಯು ನಗರದಲ್ಲಿರುವ ಎಲ್ಲ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಪರಿಶೀಲನೆ ನಡೆಸಿದೆ. ಈ ಘಟಕಗಳ ಸ್ಥಿತಿಗತಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದರು.
 
 ಸರ್ವೇ ಮಾಡಲು ಸೂಚನೆ: ಇದಕ್ಕೂ ಮುನ್ನ ಹ್ಯಾರಿಸ್‌ ಅವರು ಅಗರ ಕೆರೆಯ ರಾಜಕಾಲುವೆಯನ್ನು ಪರಿಶೀಲಿಸಿದರು.
 
‘ರಾಜಕಾಲುವೆಯ ಮಾರ್ಗ ಬದಲಿಸಿ ಅದ್ವೈತ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಸ್ಥಳ ಪರಿಶೀಲನೆ ನಡೆಸಿದೆವು’ ಎಂದರು.
 
‘ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಾಥಮಿಕ, ದ್ವಿತೀಯ ಹಂತ ಹಾಗೂ ತೃತೀಯ ಹಂತದ ರಾಜಕಾಲುವೆ ಎಂದು ವಿಭಾಗಿಸಲಾಗುತ್ತದೆ. ಆದರೆ, ಅಧಿಕಾರಿಗಳು ಈ ಕಾಲುವೆಯನ್ನು ದ್ವಿತೀಯ ಹಂತದ ರಾಜಕಾಲುವೆ ಎಂದು ನಮೂದಿಸಿದ್ದಾರೆ. ಇದರಿಂದ ಕೆರೆ ಮೀಸಲು ಪ್ರದೇಶ ಕಡಿಮೆ ಆಗಿದೆ’ ಎಂದು ಅವರು ­ಹೇಳಿದರು.
 
‘ರಾಜಕಾಲುವೆ ಅಕ್ಕಪಕ್ಕ ದೊಡ್ಡ ಕಟ್ಟಡಗಳು ನಿರ್ಮಾಣಗೊಂಡಿವೆ. ಈ ಕಟ್ಟಡಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿರುತ್ತದೆ. ಇವುಗಳನ್ನು ಕೆಡವಲು ಸಾಧ್ಯವಿಲ್ಲ. ದ್ವಿತೀಯ ಹಂತದ ರಾಜಕಾಲುವೆ ಎಂದು ನಮೂದಿಸಿದ ಅಧಿಕಾರಿಗಳನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು. ಈ ರಾಜಕಾಲುವೆಯನ್ನು ಸರ್ವೇ ಮಾಡಿ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಅವರಿಗೆ ಸೂಚಿಸಲಾಗಿದೆ. ಬಳಿಕವಷ್ಟೇ ರಾಜಕಾಲುವೆ ಒತ್ತುವರಿ ಮಾಹಿತಿ ತಿಳಿಯಲಿದೆ’ ಎಂದರು.
 
22ರಂದು ಸಭೆ: ‘ಅಗರ ಕೆರೆ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಇದೇ 22ರಂದು ಮಧ್ಯಾಹ್ನ 3.30ಕ್ಕೆ ಸಭೆ ಕರೆಯಲಾಗಿದೆ. ಬಿಬಿಎಂಪಿ, ಬಿಡಿಎ ಆಯುಕ್ತರ ಜತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.
 
ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆಯ ನಿರ್ದೇಶಕ ಕೆ.ಯು. ರಮೇಶ್‌  ಅವರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 
 
**
ಕೆರೆಯಲ್ಲಿ ಬೆಂಕಿ ತನಿಖೆಗೆ ಆದೇಶ
ನವದೆಹಲಿ: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯ ಶುಕ್ರವಾರ ತನಿಖೆಗೆ ಆದೇಶಿಸಿದೆ.
‘ಒಂದೆರಡು ದಿನಗಳಲ್ಲಿ ತನಿಖಾ ವರದಿ ಬರಲಿದೆ. ಕೆರೆಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿಯಲಿದೆ’ ಎಂದು ಇಲಾಖೆಯ ರಾಜ್ಯ ಸಚಿವ ಅನಿಲ್ ಮಾಧವ್ ದವೆ ತಿಳಿಸಿದ್ದಾರೆ.
 
**
ಪ್ರಯೋಗಾಲಯಕ್ಕೆ ಕಲುಷಿತ ನೀರು 
‘ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಪ್ರದೇಶದ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಕರ್ನಾಟಕ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.
 
‘ಕೆರೆಯ ನೀರಿನಲ್ಲಿ ಮಿಥೇನ್‌ ಹಾಗೂ ಸಲ್ಫರ್‌ ಪ್ರಮಾಣ ಹೆಚ್ಚಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಪ್ರಯೋಗಾಲಯದಿಂದ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ’ ಎಂದು ಹೇಳಿದರು.
 
‘ಈ ಸಂಬಂಧ ಬಿಡಿಎ, ಬಿಬಿಎಂಪಿ, ಜಲಮಂಡಳಿಗೆ ನೋಟಿಸ್ ನೀಡುತ್ತೇನೆ.  ಕೆರೆಯ ಪಕ್ಕದಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ತೆರವುಗೊಳಿಸಲು ಸೂಚಿಸಲಾಗಿದೆ’ ಎಂದರು.
 
‘ಕೆರೆಯ ಸುತ್ತಮುತ್ತ ಇರುವ ಕಟ್ಟಡಗಳಲ್ಲಿ 640 ಎಸ್‌ಟಿಪಿ ಘಟಕಗಳಿದ್ದು, ಈ ಪೈಕಿ 130 ಎಸ್‌ಟಿಪಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. 14 ಘಟಕಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕೆಲ ಘಟಕಗಳಿಗೆ ನೋಟಿಸ್‌ ನೀಡಲಾಗಿದೆ’ ಎಂದು ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT