ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ಗೆ ಅರ್ಹತೆ ಪಡೆದ ಭಾರತ ತಂಡ

ಮಿಥಾಲಿ, ಮೆಷ್ರಮ್ ಜತೆಯಾಟಕ್ಕೆ ಒಲಿದ ಜಯ, ಬಾಂಗ್ಲಾದೇಶಕ್ಕೆ ಸೋಲು
Last Updated 17 ಫೆಬ್ರುವರಿ 2017, 19:36 IST
ಅಕ್ಷರ ಗಾತ್ರ

ಕೊಲಂಬೊ : ಮೋನಾ ಮೆಷ್ರಮ್‌ (78) ಹಾಗೂ ಮಿಥಾಲಿ ರಾಜ್‌ (73) ಅವರ ಅಜೇಯ ಜತೆಯಾಟದಿಂದಾಗಿ ಭಾರತ ಮಹಿಳೆಯರ ತಂಡ ಒಂದೂ ಪಂದ್ಯದಲ್ಲಿ ಸೋಲು ಅನುಭವಿಸದೆ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿದೆ.

ಶುಕ್ರವಾರ ನಡೆದ ವಿಶ್ವಕಪ್‌ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿದೆ.
ಅರ್ಹತಾ ಟೂರ್ನಿಯಲ್ಲಿ ಇದುವರೆಗೂ ಆಡಿದ ಆರೂ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿದೆ. ಅಂತಿಮ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್ ಕಲೆಹಾಕಿತು.

ಇದಕ್ಕೆ ಉತ್ತರವಾಗಿ ಭಾರತ 33.3 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಮಿಥಾಲಿ, ಮೆಷ್ರಮ್‌ ಜತೆಯಾಟ: ಸುಲಭ ಗುರಿಯನ್ನು ಬೆನ್ನಟ್ಟಿದ ಮಿಥಾಲಿ ಪಡೆ ಆರಂಭದಲ್ಲೇ ಟೂರ್ನಿಯ ಯಶಸ್ವಿ ಬ್ಯಾಟ್ಸ್‌ವುಮನ್ ದೀಪ್ತಿ ಶರ್ಮಾ (1) ಅವರ ವಿಕೆಟ್ ಕಳೆದುಕೊಂಡಿತು.

ಖದಿಜಾ ತಲ್‌ ಖುಬ್ರಾ ಅವರ ಬೌಲಿಂಗ್‌ನಲ್ಲಿ ದೀಪ್ತಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಬಳಿಕ ತಾಳ್ಮೆಯ ಇನಿಂಗ್ಸ್ ಕಟ್ಟಿದ ಮೋನಾ ಮೆಷ್ರಮ್ ಹಾಗೂ ನಾಯಕಿ ಮಿಥಾಲಿ ರಾಜ್‌  ಎರಡನೇ ವಿಕೆಟ್‌ಗೆ 136 ರನ್‌ಗಳ ಮುರಿಯದ ಜತೆಯಾಟ ನೀಡಿದರು.

ಈ ಜೋಡಿ ಒಟ್ಟು 24 ಬೌಂಡರಿಗಳನ್ನು ಸಿಡಿಸುವ ಮೂಲಕ ಭಾರತ ತಂಡಕ್ಕೆ ಗೆಲುವಿನ ಹಾದಿ ಸುಗಮ ಮಾಡಿದರು. ಇದರಲ್ಲಿ ಮೆಷ್ರಮ್ 12 ಬೌಂಡರಿ ಸಿಡಿಸಿದರು. ಮಿಥಾಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.

ಮಾನಸಿ ಜೋಷಿ ದಾಳಿ: ಸ್ಫೋಟಕ ಬ್ಯಾಟ್ಸ್‌ವುಮನ್‌ ಫ್ರಗ್ನಾ ಹಕ್ (50) ಅವರ ವಿಕೆಟ್ ಪಡೆದ ಮಾನಸಿ ಜೋಷಿ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಶಕ್ತಿಯನ್ನು ಕುಗ್ಗಿಸಿದರು.

ಟೂರ್ನಿಯಲ್ಲಿ ಬಾಂಗ್ಲಾ ಪರ ಹೆಚ್ಚು ರನ್ ಗಳಿಸಿರುವ ಫ್ರಗ್ನಾ ಈ ತಂಡದ ಅಪಾಯಕಾರಿ ಬ್ಯಾಟ್ಸ್‌ವುಮನ್ ಎನಿಸಿದ್ದಾರೆ. 
ಮಾನಸಿ ಜೋಷಿ 25 ರನ್‌ಗಳಿಗೆ 3 ವಿಕೆಟ್‌ ಕಬಳಿಸಿದರೆ, ದೇವಿಕಾ ವೈದ್ಯ 17ಕ್ಕೆ2 ವಿಕೆಟ್ ಪಡೆದು ಮಿಂಚಿದರು.
ಜಯದ ಒತ್ತಡ:   ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತದ ನಂತರದ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಕೂಡ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಆದರೆ ಬಾಂಗ್ಲಾದೇಶ ಅರ್ಹತೆ ಗಿಟ್ಟಿಸ ಬೇಕಾದರೆ ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 155 (ಫ್ರಗ್ನಾ ಹಕ್ 50; ಮಾನಸಿ ಜೋಷಿ 25ಕ್ಕೆ 3, ದೇವಿಕಾ ವೈದ್ಯ 17ಕ್ಕೆ2). ಭಾರತ: 33.3 ಓವರ್‌ಗಳಲ್ಲಿ 158 (ಮೋನಾ ಮೆಷ್ರಮ್‌ ಔಟಾಗದೆ 78, ಮಿಥಾಲಿ ರಾಜ್‌ ಔಟಾಗದೆ 73; ಖದಿಜಾ ತಲ್‌ ಖುಬ್ರಾ 37ಕ್ಕೆ1). ಫಲಿತಾಂಶ: ಭಾರತಕ್ಕೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT