ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಒಲಿಂಪಿಕ್ಸ್‌ ಕೂಟದಲ್ಲಿ ಅವ್ಯವಹಾರ ಆರೋಪ

Last Updated 17 ಫೆಬ್ರುವರಿ 2017, 19:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಅವಳಿ ನಗರ ಮತ್ತು ಬೆಂಗಳೂರಿನಲ್ಲಿ ಈ ತಿಂಗಳ ಮೊದಲ ವಾರ ನಡೆದ ರಾಜ್ಯ ಒಲಿಂಪಿಕ್ಸ್‌ನಲ್ಲಿ ಕೋಟ್ಯಂತರ ಮೊತ್ತದ ಅವ್ಯವಹಾರ ಆಗಿದೆ’ ಎಂದು ಆರೋಪಿಸಿದ ಸಂಸದ ಪ್ರಹ್ಲಾದ ಜೋಶಿ ‘ಈ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ರಾಜ್ಯ ಒಲಿಂಪಿಕ್ಸ್ ಕೂಟದ ಹೆಸರಿನಲ್ಲಿ ಬೆಂಗಳೂರಿನ ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾರೆ. ಹುಬ್ಬಳ್ಳಿ –ಧಾರವಾಡ ಅವಳಿ ನಗರದ ಹೋಟೆಲ್ ಮಾಲೀಕರಿಂದ ಸಂಘಟಕರು ಹಣ ಸಂಗ್ರಹ ಮಾಡಿದ್ದಾರೆ. ₹ 30,000 ಅಥವಾ ಉಚಿತವಾಗಿ ಐದು ಕೊಠಡಿ ನೀಡಬೇಕು ಎಂದು ಬೆದರಿಸಿದ್ದಾರೆ. ಅನೇಕರು ಹಣ ಕೊಟ್ಟು ಸುಮ್ಮನಾಗಿದ್ದಾರೆ’ ಎಂದು ಜೋಶಿ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

‘ರಾಜ್ಯ ಒಲಿಂಪಿಕ್ಸ್‌ಗೆ ಪ್ರತಿಭಾವಂತ ಪೈಲ್ವಾನ್‌ ಸಂತೋಷ ಹೊಸಮನಿ ಬಲಿಯಾಗಿದ್ದಾರೆ. ಅವರಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ನೀಡಿದ್ದರೆ ಬದುಕಿ ಉಳಿಯುತ್ತಿದ್ದರು. ಈ ವಿಷಯದಲ್ಲಿ ಜಿಲ್ಲಾಡಳಿತ ಪೂರ್ಣ ನಿಷ್ಕಾಳಜಿ ತೋರಿದೆ. ಆಟಗಾರರಿಗೆ ಸಮರ್ಪಕ ವಿಮೆ ಮಾಡಿಸದೇ ಇರುವುದು ಅಕ್ಷಮ್ಯ ಅಪರಾಧ. ಇಡೀ ಪ್ರಕರಣವನ್ನು ಬಿಜೆಪಿ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸಲಿದೆ’ ಎಂದು ಜೋಶಿ ಹೇಳಿದರು.

‘ಪುರಾವೆ ಸಮೇತ ಸಾಬೀತು ಮಾಡಲಿ’
ಪ್ರಹ್ಲಾದ ಜೋಶಿ ಮಾಡಿರುವ ಆರೋಪಗಳಲ್ಲಿ ನಿಜಾಂಶವಿಲ್ಲ. ಕೆಒಎ ಬೆಂಗಳೂರಿನಲ್ಲಿ ಹಣ ವಸೂಲಿ ಮಾಡಿದ್ದರೆ ಅದನ್ನು ಪುರಾವೆ ಸಮೇತ ಸಾಬೀತು ಮಾಡಲಿ.
ಸಂತೋಷ ಹೊಸಮನಿ ವಿಷಯ ದಲ್ಲಿ ಸಂಘಟಕರು ನಿರ್ಲಕ್ಷ್ಯ ಮಾಡಿಲ್ಲ. ಗಾಯಗೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸೂಕ್ತ ಚಿಕಿತ್ಸೆ ಯನ್ನೂ ನೀಡಲಾಗಿದೆ. ಆದರೂ ಅವರು ಸಾವಿಗೀಡಾದದ್ದು ದುರದೃಷ್ಟಕರ.
–ಅನಂತರಾಜು,
ಮಹಾ ಕಾರ್ಯದರ್ಶಿ, ಕೆಒಎ

‘ಕೆಒಎನಲ್ಲಿ ಎಲ್ಲವೂ ಪಾರದರ್ಶಕ’

ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಕರ್ನಾಟಕ ಒಲಿಂಪಿಕ್‌ ಸಂಸ್ಥೆ(ಕೆಒಎ)ಯ ಯಾವುದೇ ಚಟುವಟಿಕೆಯಲ್ಲಿ ಮುಚ್ಚುಮರೆ ಇಲ್ಲ. ಎಲ್ಲವೂ ಪಾರದರ್ಶಕ. ಕೆಒಎಗೆ ಸಂಬಂಧಿಸಿದ ಯಾವ ಲೆಕ್ಕಪತ್ರವನ್ನು ಯಾರು ಬೇಕಿದ್ದರೂ ನೋಡಬಹುದು. ನಮ್ಮದು ತೆರೆದ ಪುಸ್ತಕ’ ಎಂದು ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್‌ ಹೇಳಿದ್ದಾರೆ.

ಪ್ರಹ್ಲಾದ್‌ ಜೋಶಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ರಾಜ್ಯ ಒಲಿಂಪಿಕ್ಸ್‌ನಲ್ಲಿ ಆಹಾರ, ವಸತಿ ಮತ್ತು ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಧಾರವಾಡ ಜಿಲ್ಲಾಡಳಿತವೇ ನೋಡಿ ಕೊಂಡಿದೆ. ನಾವು ಅದರಲ್ಲಿ ಹಸ್ತಕ್ಷೇಪ ನಡೆಸುವಂತಿಲ್ಲ. ನಡೆಸಿಯೂ ಇಲ್ಲ’ ಎಂದರು.
‘ಸರ್ಕಾರ ಕೊಟ್ಟ ಹಣವನ್ನಷ್ಟೇ ಸಂಘಟಕರು ಖರ್ಚು ಮಾಡಿದ್ದಾರೆ. ಇನ್ನು ನಾನೇಕೆ ಕೋಟ್ಯಂತರ ಹಣ ಸಂಗ್ರಹಿಸಬೇಕು. ಸುಳ್ಳು ಆರೋಪ ಗಳನ್ನು ಮಾಡಿ ಕ್ರೀಡಾ ಲೋಕದ ಮೇಲೆ ಕೆಸರು ಎರಚುವವರ ಬಗ್ಗೆ ಅಸಹ್ಯ ಎನಿಸುತ್ತಿದೆ’ ಎಂದೂ ಅವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.

ಕೆಒಎಯಿಂದ ₹ 2 ಲಕ್ಷ ಪರಿಹಾರ
ಬೆಂಗಳೂರು: ಹೋದ ವಾರ ನಡೆದ ರಾಜ್ಯ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯ ವೇಳೆ ತೊಡೆಯ ಎಲುಬು ಮುರಿತಕ್ಕೆ ಒಳಗಾಗಿ ಮೃತಪಟ್ಟಿರುವ ಪೈಲ್ವಾನ್‌ ಸಂತೋಷ ಹೊಸಮನಿ ಅವರ ಕುಟುಂಬಕ್ಕೆ ಕೆಒಎ ₹ 2 ಲಕ್ಷ ಪರಿಹಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT