ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದರ್ಶನಕ್ಕೆ ಹರಿದುಬಂತು ಜನಸಾಗರ

Last Updated 17 ಫೆಬ್ರುವರಿ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಣು ಕಿರಿದಾಗಿಸಿ ಆಕಾಶದತ್ತ ದೃಷ್ಟಿ ನೆಟ್ಟರೂ ವಿಮಾನ ಕಾಣುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ ಪುಟಾಣಿ. ‘ಲೋಹದ ಹಕ್ಕಿ’ಯ ಮೇಲಿನಿಂದ ‘ಆಕಾಶ ಕನ್ನಿಕೆ’ ಕೈಬೀಸಿದ್ದಕ್ಕೆ ಪ್ರತಿಯಾಗಿ ಕೈಯಲ್ಲಿ ಐಸ್‌ಕ್ರೀಂ ಇದ್ದುದನ್ನೂ ಮರೆತು ಮರು ಕೈಬೀಸಿದ ಯುವಜೋಡಿ. ‘ಈ ಭಯಂಕರ ಸದ್ದನ್ನು ನಾನು ಕೇಳಲಾರೆ’ ಎಂದು ಕಿವಿ ಮುಚ್ಚಿಕೊಂಡ ಅಜ್ಜಿ...

ಯಲಹಂಕದ ವಾಯುನೆಲೆಯಲ್ಲಿ ಶುಕ್ರವಾರ ಎತ್ತ ಕಣ್ಣು ಹಾಯಿಸಿದರೂ ಇಂತಹದ್ದೇ ನೋಟಗಳು. ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ನೋಡಲು ಜನಸಾಗರವೇ ಸೇರಿತ್ತು.

ಸೇನೆಯ ಪೋಷಾಕು ತೊಟ್ಟರೂ ಕರ್ತವ್ಯದ ಹೊಣೆಯಿಂದ ಮುಕ್ತರಾಗಿದ್ದ ಸೇನಾನಿಗಳು ತಮ್ಮ ಪರಿವಾರದೊಂದಿಗೆ ವೈಮಾನಿಕ ಕಸರತ್ತು ನೋಡಲು ಬಂದಿದ್ದರು.

ಅಮ್ಮಂದಿರು ಕಂದಮ್ಮಗಳಿಗೆ ಚಂದಿರನನ್ನು ತೋರಿಸುವಂತೆ ತೋಳಿನಲ್ಲಿದ್ದ ಮಕ್ಕಳಿಗೆ ಅವರು ವಿಮಾನ ತೋರಿಸುತ್ತಿದ್ದರು. ಆದರೆ, ಶರವೇಗದಲ್ಲಿ ಅತ್ತಿಂದಿತ್ತ ಹಾರುತ್ತಿದ್ದ ವಿಮಾನದ ಮೇಲೆ ದೃಷ್ಟಿ ಇಡಲಾಗದೆ ಪುಟಾಣಿಗಳು ‘ಪಾಪ್‌ಕಾರ್ನ್‌ ಮಾಮ’ನತ್ತ ಮುಖ ಹೊರಳಿಸುತ್ತಿದ್ದವು. 
ಆಕಾಶದಲ್ಲಿ ವಿಮಾನಗಳು ಲಗಾಟೆ ಹೊಡೆಯುವುದು ದೊಡ್ಡವರಿಗೂ ಬೆರಗಾಗಿ ಕಂಡಿತು. ಅದಕ್ಕೆ ಸಾಕ್ಷಿ ಎಂಬಂತೆ ‘ಓಹ್‌’ ಎಂಬ ಉದ್ಗಾರ ಆಗಾಗ ಪ್ರತಿಧ್ವನಿಸುತ್ತಿತ್ತು. ‘ಯುದ್ಧ ಪೀಪಾಸುಗಳ ಆಟ ನೋಡೋದಕ್ಕೆ ಬಲು ಸೊಗಸಾಗಿದೆ. ಆದರೆ, ಆ ರಣಕೇಕೆಯನ್ನೇ ಕೇಳೋದಕ್ಕೆ ಆಗುವುದಿಲ್ಲ’ ಎನ್ನುವಂತೆ ಸಾವಿರಾರು ಮಂದಿ ಕಿವಿ ಮುಚ್ಚಿಕೊಂಡು ಆಕಾಶದತ್ತ ಕಣ್ಣು ನೆಟ್ಟಿದ್ದರು.

ಸ್ಮಾರ್ಟ್‌ ಫೋನ್‌ಗಳಲ್ಲಿ ವಿಡಿಯೊ ಮಾಡುವುದು, ಚಿತ್ರ ತೆಗೆಯುವುದು, ಸೆಲ್ಫಿ ತೆಗೆದುಕೊಳ್ಳುವುದು –ಈ ಖಯಾಲಿಗೆ ಅಲ್ಲಿ ಮಿತಿಯೇ ಇರಲಿಲ್ಲ. ಗಸ್ತು ತಿರುಗುತ್ತಿದ್ದ ಸಶಸ್ತ್ರ ಪಡೆಯ ಯೋಧರೊಂದಿಗೆ ಫೋಟೊ ತೆಗೆಸಿಕೊಳ್ಳಲು ಜನ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರದರ್ಶನಕ್ಕೆ ಇಟ್ಟಿದ್ದ ವಿಮಾನಗಳ ಪ್ರತಿಕೃತಿಗಳ ಮೇಲೆ ಮಕ್ಕಳನ್ನು ನಿಲ್ಲಿಸಿ ಫೋಟೊ ತೆಗೆಯಲು ಜನ ಉದ್ದನೆಯ ಸರದಿಯಲ್ಲಿ ಕಾಯುತ್ತಿದ್ದರು.
ಸ್ಕೈ ಕ್ಯಾಟ್‌ಗಳು ತಮ್ಮ ಸೌಂದರ್ಯದಿಂದ ಮಾತ್ರವಲ್ಲದೆ ಹಾರುವ ವಿಮಾನದ ಮೇಲೆ ನೃತ್ಯ ಮಾಡುವ ಎದೆಗಾರಿಕೆ ಮೂಲಕವೂ ನೋಡುಗರ ಹೃದಯಕ್ಕೆ ಲಗ್ಗೆ ಇಟ್ಟರು. ಗಗನದಲ್ಲಿ ಕಸರತ್ತು ತೋರಿದ ಸ್ಕೈ ಕ್ಯಾಟ್‌ಗಳು ಧರೆಗಿಳಿದು ಬಂದಾಗ ಅವರಿಗೆ ಹಸ್ತಲಾಘವ ನೀಡಲು ಜನ ಪೈಪೋಟಿಗಿಳಿದರು.
ಅಮೆರಿಕದ ವಿಶೇಷ ಕಾರ್ಯಪಡೆ ಯೋಧರ ‘ಗಗನ ಜಿಗಿತ’ ಪ್ರೇಕ್ಷಕರಿಗೆ ಖುಷಿ ಕೊಟ್ಟಿತು. ಭಾರತದ ‘ಸೂರ್ಯಕಿರಣ’ ಹಾಗೂ ‘ಸಾರಂಗ’ ತಂಡಗಳು ತಮ್ಮ ವಿಶಿಷ್ಟ ಕಸರತ್ತಿನ ಮೂಲಕ ಕಚಗುಳಿ ಇಟ್ಟವು. ವಾಯುಪಡೆ ಯೋಧರು ಪ್ರದರ್ಶನ ನೀಡಿ, ಹೊರಬಂದಾಗ ಮೆಚ್ಚುಗೆಯ ಚಪ್ಪಾಳೆ ಅವರಿಗಾಗಿ ಕಾದಿರುತ್ತಿತ್ತು.

ಕಸರತ್ತು ಮಾಡುವ ವಿಮಾನಗಳಿಗೆ ಆಕಾಶವೇ ಆಟದ ಮೈದಾನವಾದರೆ, ಟಿಕೆಟ್‌ ಇಲ್ಲದೆ ಬಂದಿದ್ದ ಜನರಿಗೆ ಹೆದ್ದಾರಿಯೇ ವೀಕ್ಷಣಾ ಗ್ಯಾಲರಿಯಾಯಿತು. ದುಡ್ಡು ಕೊಟ್ಟು ಟಿಕೆಟ್‌ ಖರೀದಿಸಿದವರು, ಪಾಸ್‌ ಪಡೆದವರು ರನ್‌ವೇ ಉದ್ದಕ್ಕೂ ನಿಂತು ‘ಆಕಾಶದ ಆಟ’ ವೀಕ್ಷಿಸಿದರೆ, ಹುಣಸಮಾರನಹಳ್ಳಿಯ ಏರಿಯ ಮೇಲೆ ನಿಂತವರು ಹಣವನ್ನೇ ವ್ಯಯಿಸದೆ ಪ್ರದರ್ಶನ ಕಂಡ ಖುಷಿ ಅನುಭವಿಸಿದರು.


ಕಟ್ಟುನಿಟ್ಟಿನ ತಪಾಸಣೆ

ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಶುಕ್ರವಾರ ಜನಸಾಮಾನ್ಯರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸೇನಾ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರನ್ನೂ ಪರಿಶೀಲಿಸಿಯೇ ಒಳಗಡೆ ಬಿಡುತ್ತಿದ್ದರು. ಗುರುತಿನ ಚೀಟಿ ತರಲು ಮರೆತವರನ್ನು ವಾಪಸ್‌ ಕಳುಹಿಸಲಾಗುತ್ತಿತ್ತು. ಬ್ಯಾಗ್‌ಗಳ ತಪಾಸಣೆಗೆ ಸ್ಕ್ಯಾನಿಂಗ್‌ ಮೆಷಿನ್‌ಗಳ ಜತೆ, ಜತೆಗೆ ಶ್ವಾನದಳವನ್ನೂ ಬಳಕೆ ಮಾಡಿಕೊಳ್ಳಲಾಯಿತು. ‘ಪಠಾಣ್‌ಕೋಟ್‌ ಸೇನಾಶಿಬಿರದ ಮೇಲೆ ನಡೆದ ಉಗ್ರರ ದಾಳಿಯ ಬಳಿಕ ಭದ್ರತೆಯಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯಿದೆ’ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT