ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ

ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಮಧು ಬಂಗಾರಪ್ಪ ವಿಶ್ವಾಸ
Last Updated 18 ಫೆಬ್ರುವರಿ 2017, 4:51 IST
ಅಕ್ಷರ ಗಾತ್ರ
ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಸರ್ಕಾರ ರಚನೆ ಮಾಡುವ ಅವಕಾಶವಿದ್ದು, ಅದಕ್ಕಾಗಿ ಪಕ್ಷ ಬಲವರ್ಧನೆಗೆ ನಾಲ್ಕು ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಸೊರಬ ಶಾಸಕರೂ ಆದ ಸಮಿತಿ ಸದಸ್ಯ ಮಧು ಬಂಗಾರಪ್ಪ ತಿಳಿಸಿದರು.
 
ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಮಿತಿ ಸದಸ್ಯರು ಆಯಾ ವಲಯ ಮಟ್ಟದಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಇದಕ್ಕೆ ಜಿಲ್ಲಾ ಅಧ್ಯಕ್ಷರ ಸಹಕಾರ ಅಗತ್ಯವಾಗಿದ್ದು, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಳನ್ನು ರಚಿಸಿ ಪಕ್ಷದ ಶಕ್ತಿ ಕೇಂದ್ರದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
 
ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಖ್‌ ನೇತೃತ್ವದಲ್ಲಿ ದಾವಣಗೆರೆ, ಶಿವಮೊಗ್ಗ ಸೇರಿದಂತೆ 9 ಜಿಲ್ಲೆಗಳಲ್ಲಿ ಸಮಿತಿ ಪ್ರವಾಸ ಕೈಗೊಳ್ಳಲಿದೆ. ಈ ಸಮಿತಿಯಲ್ಲಿ ಶಾಸಕರಾದ ಬಿ.ಬಿ.ನಿಂಗಯ್ಯ, ಶಾರದಾ ಪೂರ್‍ಯನಾಯ್ಕ ಇರಲಿದ್ದಾರೆ. ಪಕ್ಷದಲ್ಲಿನ ಗೊಂದಲಗಳನ್ನು ನಿವಾರಿಸಿ, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಸಮಿತಿ ಬದ್ಧವಾಗಿದೆ ಎಂದರು.
 
ರಾಜ್ಯದ ಉತ್ತಮ ಭವಿಷ್ಯಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂಬುದು ದೇವೇಗೌಡರ ಆಶಯವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳ ಭ್ರಷ್ಟ ಆಡಳಿತದಿಂದ ಜನರು ರೋಸಿ ಹೋಗಿದ್ದು, ಪ್ರಾದೇಶಿಕ ಪಕ್ಷದ ಮೇಲೆ ಒಲವು ತೋರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವೈಮನಸ್ಸುಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
’ಅಲ್ಪಸಂಖ್ಯಾತರ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದು ಹೇಳುವ ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ. ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತ ಹಾಕುವ ಮೂಲಕ ಫಾರೂಖ್‌ ಅವರ ಸೋಲಿಗೆ ಹುನ್ನಾರ ಮಾಡಿತ್ತು. ಇದನ್ನು ಅಲ್ಪಸಂಖ್ಯಾತರು ಎಂದೂ ಮರೆಯು ವುದಿಲ್ಲ’ ಎಂದ ಅವರು, ಪಕ್ಷದಲ್ಲೇ ಇದ್ದು, ಅಧಿಕಾರ ಅನುಭವಿಸಿ  ಪಕ್ಷಕ್ಕೆ ದ್ರೋಹ ಮಾಡಿದವರು ಅನೇಕರಿದ್ದಾರೆ. ಅಂಥವರ ಅಗತ್ಯ ಪಕ್ಷಕ್ಕೆ ಬೇಕಾಗಿಲ್ಲ ಎಂದು ಖಾರವಾಗಿ ನುಡಿದರು.
 
ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಖ್‌ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮುಳುಗುವ ಹಡಗು ಆಗಿದ್ದು, ಆ ಪಕ್ಷದ ಹಿರಿಯ ಮುಖಂಡರೇ ಅಸಮಾಧಾನಗೊಂಡಿದ್ದಾರೆ. ಅಲ್ಪ ಸಂಖ್ಯಾತ ಮುಖಂಡರನ್ನು ಮೂಲೆಗುಂಪು ಮಾಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಯಡಿಯೂರಪ್ಪ ಅವರ ಭ್ರಷ್ಟ ಆಡಳಿತಕ್ಕೆ ಮತ್ತೆ ಅವಕಾಶ ನೀಡದೇ ಜನ ಜೆಡಿಎಸ್‌ಗೆ 
ಬೆಂಬಲ ನೀಡಲಿದ್ದಾರೆ’ ಎಂದು ಹೇಳಿದರು.
 
ಇತ್ತೀಚಿನ ಕೆಲವು ಸಮೀಕ್ಷೆಗಳ ಪ್ರಕಾರ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ 75ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿ ಸುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸ್ಪಷ್ಟ ಬಹುಮತದ ಸರ್ಕಾರ ರಚನೆಗೆ ಬದ್ಧರಾಗಿರುವ ಅವರಿಗೆ ಕಾರ್ಯಕರ್ತರ ಸಹಕಾರ ಅಗತ್ಯವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸ ಬೇಕು. ಇದಕ್ಕಾಗಿ ಬೂತ್‌ಮಟ್ಟದಲ್ಲಿ ಸಂಘಟನೆ ಬಲಪಡಿಸಬೇಕು ಎಂದರು.
 
ಹರಿಹರ ಶಾಸಕ ಎಚ್‌.ಎಸ್. ಶಿವಶಂಕರ್ ಮಾತನಾಡಿ, ಹರಿಹರ ಕ್ಷೇತ್ರದಲ್ಲಿ 30ರಿಂದ 40 ಸಾವಿರ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ. ಒಬ್ಬ ಸದಸ್ಯರಿಗೆ ₹5 ನಿಗದಿಪಡಿಸಲಾಗಿದೆ. ಈ ಹಣವನ್ನು ಪಕ್ಷದ ಕಚೇರಿ ಅಭಿವೃದ್ಧಿಗೆ ಹಾಗೂ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದರು.
 
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಬಲಗೊಳ್ಳುತ್ತಿದೆ. ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸವಿದೆ. ಮಾರ್ಚ್‌ನಲ್ಲಿ ನಡೆಸಬೇಕೆಂದಿರುವ ರಾಜ್ಯಮಟ್ಟದ ಸಮಾವೇಶವನ್ನು ಜಿಲ್ಲೆಯಲ್ಲಿ ನಡೆಸಿದರೆ ಪಕ್ಷದ ಶಕ್ತಿಪ್ರದರ್ಶನಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
 
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲಮನ್ನಾ ಮಾಡಲು ಮುಂದಾಗುತ್ತಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ರೈತರ ಸಂಕಷ್ಟ ಕೊನೆಗೊಳ್ಳಲಿದೆ’ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಚಿದಾನಂದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಕುಮಾರಿ, ಮುಖಂಡರಾದ ಸೈಯದ್‌ ರೋಷನ್ ಸಾಬ್, ಜೆ.ಅಮನುಲ್ಲಾ ಖಾನ್, ಖಾದರ ಬಾಷಾ ಮತ್ತಿತರರು ಇದ್ದರು.  
 
* ಬಂಗಾರಪ್ಪ ಅವರಿಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಮತ್ತು ನನಗೆ ರಾಜಕೀಯದಲ್ಲಿ ಹೇಗೆ ಕೆಲಸ ಮಾಡಬೇಕೆಂದು ಕಲಿಸಿಕೊಟ್ಟಿದ್ದು ದಾವಣಗೆರೆ.
– ಮಧು ಬಂಗಾರಪ್ಪ, ಶಾಸಕರು, ಸೊರಬ
 
‘ಗೊಂದಲ ಇಲ್ಲ’
ಹರಿಹರ ಶಾಸಕ ಎಚ್‌.ಎಸ್.ಶಿವಶಂಕರ್ ಮಾತನಾಡಿ, ‘ಜಿಲ್ಲೆಯ ಮುಖಂಡರಲ್ಲಿ ಯಾವುದೇ ಗೊಂದಲವಿಲ್ಲ. ಕೆಲವು ಮುಖಂಡರು ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದಿಂದಲೇ ಗೆದ್ದವರು ಪಕ್ಷಕ್ಕೆ ದ್ರೋಹ ಮಾಡುವುದು ಸರಿಯಲ್ಲ. ಪಕ್ಷದ ನಾಯಕರ ಕೆಲ ನಿರ್ಧಾರಗಳಿಂದ ಗೊಂದಲ ಸೃಷ್ಟಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT