ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆಗೆ ಕರೆದಿಲ್ಲ, ಫೋಟೊ ಹಾಕಿಲ್ಲ..

ಶಾಸಕರು–ಅಧಿಕಾರಿಗಳ ಧೋರಣೆಗೆ ಸಾಮಾನ್ಯಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರ ಆಕ್ಷೇಪ
Last Updated 18 ಫೆಬ್ರುವರಿ 2017, 5:02 IST
ಅಕ್ಷರ ಗಾತ್ರ

ದಾವಣಗೆರೆ: ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಕಾಮಗಾರಿಗಳ ಪೂಜೆಗೆ ಕರೆದಿಲ್ಲ, ಫೋಟೊ ಹಾಕಿಲ್ಲ, ಹೆಸರು ಹಾಕಿಸಿಲ್ಲ. ಈ ವಿಷಯಗಳೇ ಶುಕ್ರವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಚರ್ಚೆಗೆ ಒಳಗಾದವು. ಪಕ್ಷಭೇದ ಮರೆತ ಸದಸ್ಯರು ಅರ್ಧ ಕಲಾಪಕ್ಕೂ ಹೆಚ್ಚು ಕಾಲ ಇವೇ ವಿಷಯಗಳ ಕುರಿತು ಅಭಿಪ್ರಾಯ ಮಂಡಿಸಿದರು.

ವಿಷಯ ಪ್ರಸ್ತಾಪಿಸಿದ ಹರಿಹರ ತಾಲ್ಲೂಕು ಭಾನುವಳ್ಳಿ ಕ್ಷೇತ್ರದ ಸದಸ್ಯ ಬಿ.ಎಂ.ವಾಗೀಶ ಸ್ವಾಮಿ, ‘ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಲು ನಾವು ಬೇಕು. ಕಾಮಗಾರಿ ಪೂಜೆಗೆ ನಾವು ಬೇಡ? ಸ್ಥಳೀಯ ಶಾಸಕರ ದೌರ್ಜನ್ಯ ಮಿತಿ ಮೀರಿದ್ದು, ಅಧಿಕಾರಿಗಳು ಅವರ ತಾಳಕ್ಕೆ ಕುಣಿಯುತ್ತಿದ್ದಾರೆ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಾಗೀಶ ಸ್ವಾಮಿ ಬೆಂಬಲಿಸಿ ಸದಸ್ಯರಾದ ಸುವರ್ಣ ಆರುಂಡಿ, ಓಬಳಪ್ಪ, ಲೋಕೇಶ್ವರಪ್ಪ, ಮಂಜುನಾಥ್, ಎಂ.ಆರ್‌.ಮಹೇಶ್, ದೀಪಾ, ಟಿ.ವಾಗೀಶ್ ಮತ್ತಿತರರು ಮಾತ ನಾಡಿ, ‘ಇದು ಹರಿಹರ ಕ್ಷೇತ್ರದ ಪ್ರಶ್ನೆಯಲ್ಲ, ಇಡೀ ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಶಾಸಕರ ಮಾತು ಕೇಳುತ್ತಿದ್ದಾರೆ. ಜನ ಕುಡಿಯುವ ನೀರಿನ ಸಮಸ್ಯೆಯಾದರೆ ನಮ್ಮನ್ನು ಕೇಳುತ್ತಾರೆ’ ಎಂದು ಕುಡಿಯುವ ನೀರಿನ ಸರಬರಾಜು ವಿಭಾಗದ ಎಂಜಿನಿಯರ್‌ ಗಳನ್ನು ತರಾಟೆ ತೆಗೆದುಕೊಂಡರು.

‘ಹರಿಹರ ಕ್ಷೇತ್ರದಲ್ಲಿ ಶಾಸಕರು ಕಾಮಗಾರಿ ಪೂಜೆ ನಡೆಸಲು ಮುಂದಾಗಿದ್ದು ಬೆಳಿಗ್ಗೆ ಅಷ್ಟೇ ಗಮನಕ್ಕೆ ಬಂದಿದೆ. ದಿಢೀರ್ ಆಗಿ ಸ್ಥಳಕ್ಕೆ ಸೆಕ್ಷನ್ ಆಫೀಸರ್‌ ಅವರನ್ನು ಕಳುಹಿಸಲಾಗಿದೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸ್ಪಷ್ಟನೆ ನೀಡಲು ಮುಂದಾದರು. ಈ ಉತ್ತರದಿಂದ ತೃಪ್ತರಾಗದ ಸದಸ್ಯರು, ಸ್ಪಷ್ಟ ಉತ್ತರ ಬೇಕು ಎಂದು ಅಧ್ಯಕ್ಷೆ, ಸಿಇಒ ಅವರ ಬಳಿ ಪಟ್ಟುಹಿಡಿದರು.

ಮುಂದೆ ಕಾಮಗಾರಿ ನಡೆಯುವಾಗ ನಿಮ್ಮ ಗಮನಕ್ಕೆ ತರಲು ಸೂಚನೆ ನೀಡಲಾಗುವುದು ಎಂದು ಸಿಇಒ ಉತ್ತರಿಸಿದರು. ಇದರಿಂದ ತೃಪ್ತರಾಗದ ವಾಗೀಶ ಸ್ವಾಮಿ, ‘ಈ ರೀತಿ ಅಗೌರವ ನೀಡುವ ಸದಸ್ಯತ್ವ ನಮಗೆ ಬೇಡ, ಹಣ ಕೊಟ್ಟು ಈ ಸ್ಥಾನ ಖರೀದಿಸಿಲ್ಲ; ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಇಂತಹ ಸ್ಥಾನಕ್ಕೆ ಗೌರವ ಇಲ್ಲ ಎಂದಾದರೆ ಈ ಸ್ಥಾನಕ್ಕೆ ಧಿಕ್ಕಾರ’ ಎಂದು ಫೈಲ್ ಕೆಳಗೆ ಎಸೆದು ಸಭೆಯಿಂದ ಹೊರನಡೆದರು. ಸದಸ್ಯರಾದ ಓಬಳಪ್ಪ, ಬಸವಂತಪ್ಪ ಅವರನ್ನು ಸಮಾಧಾನ ಮಾಡಿ ಸಭೆಗೆ ಕರೆದುಕೊಂಡು ಬಂದರು.

ಪಂಚಾಯತ್‌ರಾಜ್‌ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್, ‘ಒಂದು ಕಡೆ ಶಾಸಕರ ಒತ್ತಡ, ಮತ್ತೊಂದು ಕಡೆ ನಿಮ್ಮ ಒತ್ತಡ. ಸಮನ್ವಯ ಕಷ್ಟವಾಗುತ್ತಿದೆ. ಇಬ್ಬರೂ ಸೇರಿ ಸಭೆ ಮಾಡಿ ತೀರ್ಮಾನ ಕೈಗೊಳ್ಳಿ, ನಮಗೂ ಕೆಲಸ ಸುಲಭವಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌ ಅವರಿಗೆ ಸಲಹೆ ನೀಡಿದರು. ಇದಕ್ಕೂ ಸದಸ್ಯರಿಂದ ಆಕ್ಷೇಪಗಳು ವ್ಯಕ್ತವಾದವು.
‘ಕಾಮಗಾರಿ ಆರಂಭಿಸುವಾಗ ಸದಸ್ಯರಿಗೂ ಮಾಹಿತಿ ನೀಡಿ, ಮುಂದೆ ಹೀಗಾಗದಂತೆ ನೋಡಿಕೊಳ್ಳಿ’ ಎಂದು ಸಿಇಒ ಮತ್ತೊಮ್ಮೆ ಎಂಜಿನಿಯರ್‌ಗೆ ತಾಕೀತು ಮಾಡುವ ಮೂಲಕ ಈ ಚರ್ಚೆ ಅಂತ್ಯಗೊಳಿಸಿದರು.

ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ: ಹೊನ್ನಾಳಿಯ ಸೂರಗೊಂಡನಕೊಪ್ಪ ದಲ್ಲಿ ಈಚೆಗೆ ನಡೆದ ಸೇವಾಲಾಲ್‌ ಜಯಂತ್ಯುತ್ಸವದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರ ಹೆಸರು ಹಾಕದಿರುವುದಕ್ಕೆ ಸದಸ್ಯ ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ಹರಪನಹಳ್ಳಿಯ ತೆಲಿಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಆದರೆ, ಇದುವರೆಗೂ ಈ ಬಗ್ಗೆ ಕ್ರಮ ವಹಿಸದಿರುವುದಕ್ಕೆ ಕಾರಣ ಏನು? ಎಂದು ಸದಸ್ಯೆ ಜಯಶೀಲಾ, ಸಿಇಒ ಅವರನ್ನು ಪ್ರಶ್ನಿಸಿದರು.
ಈ ಬಗ್ಗೆ ಕಾರಣ ಕೇಳಿ ಸಂಬಂಧಪಟ್ಟ ಎಂಜಿನಿಯರ್‌ಗೆ ನೋಟಿಸ್‌ ನೋಡಿ ಎಂದು ಸಿಇಒ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಕ್ಷರಪ್ಪ ಅವರಿಗೆ ಸೂಚಿಸಿದರು.

ಸದಸ್ಯೆ ಸುಶೀಲಮ್ಮ ದೇವೇಂದ್ರ ಮಾತನಾಡಿ, ಹರಪನಹಳ್ಳಿಯ ಅರಸೀಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಈಚೆಗೆ ಮಕ್ಕಳಿಗೆ ಸಿಡುಬು ಕಾಣಿಸಿ ಕೊಂಡಿದ್ದು ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ಪರದಾಡಬೇಕಾಯಿತು. ಇಲ್ಲಿನ ಆಸ್ಪತ್ರೆಗೆ ವೈದ್ಯರ ನೇಮಿಸಿ ಎಂದು ಸಿಇಒ ಹಾಗೂ ಅಧ್ಯಕ್ಷರನ್ನು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಡಿ.ಸಿದ್ದಪ್ಪ, ಮುಖ್ಯ ಯೋಜನಾ ನಿರ್ದೇಶಕ ಬಸವನಗೌಡ ಉಪಸ್ಥಿತರಿದ್ದರು.

ನೀರಿನ ಘಟಕದಲ್ಲಿ ಅರಸು ಫೋಟೊ

ಶುದ್ಧ ಕುಡಿಯುವ ನೀರಿನ ಘಟಕ ಕೇಂದ್ರದ ನಾಮಫಲಕದಲ್ಲಿ ಇನ್ನು ಮುಂದೆ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಫೋಟೊ ಬಿಟ್ಟು ಬೇರೆ ಯಾರ ಚಿತ್ರವನ್ನೂ ಹಾಕುವಂತಿಲ್ಲ ಎಂದು ಸಿಇಒ ಎಸ್‌.ಅಶ್ವತಿ ಹೇಳಿದರು.

ಕೆಲವು ನಾಮಫಲಕಗಳಲ್ಲಿ ಶಾಸಕರು, ಮುಖ್ಯಮಂತ್ರಿಗಳ ಚಿತ್ರಗಳನ್ನು ಹಾಕಲಾಗುತ್ತಿತ್ತು. ಜಿಲ್ಲಾ ಪಂಚಾಯ್ತಿ ಸದಸ್ಯರೂ ತಮ್ಮ ಫೋಟೊ ಹಾಕುವಂತೆ ಒತ್ತಡ ಹಾಕುತ್ತಿದ್ದರು. ಆದರೆ, ಕಳೆದ ಡಿಸೆಂಬರ್‌ನಲ್ಲಿ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ದೇವರಾಜ್ ಅರಸು ಅವರ ಫೋಟೊ ಮಾತ್ರ ಬಳಸಲು ಸೂಚಿಸಿದೆ ಎಂದು ಸಭೆಗೆ ಅವರು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಸದಸ್ಯೆ ಆರುಂಡಿ ಸುವರ್ಣ, ‘ಈ ಹಿಂದೆ ಅನುಮತಿ ಪಡೆದು ಸ್ಥಾಪನೆಯಾದ ಘಟಕಗಳಲ್ಲಿ ನಮ್ಮ ಫೋಟೊ ಹಾಕಬೇಕು’ ಎಂದು ಒತ್ತಾಯಿಸಿದರು.

7 ಕಾಯಿನ್‌ಗೆ ₹20 ಲೀಟರ್!

ದಾವಣಗೆರೆ ತಾಲ್ಲೂಕಿನ ಗಂಗನಕಟ್ಟೆಯ ಶುದ್ಧ ನೀರಿನ ಘಟಕದ ನಿರ್ವಹಣೆ ಆ ಊರಿನ ಖಾಸಗಿ ವ್ಯಕ್ತಿಯೊಬ್ಬರು ವಹಿಸಿಕೊಂಡಿದ್ದು, ಅಲ್ಲಿ 7 ಕಾಯಿನ್‌ ಹಾಕಿದರೆ ಮಾತ್ರ ನೀರು ಪಡೆಯಬಹುದಾಗಿದೆ. ₹5ಕ್ಕೆ 20 ಲೀಟರ್‌ ಸಿಗಬೇಕಾಗಿದ್ದು, ₹30ಗೆ 20 ಲೀಟರ್‌ ನೀಡಲಾಗುತ್ತಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಘಟಕದ ನಿರ್ವಹಣೆಯನ್ನು ಆಯಾ ಪಂಚಾಯ್ತಿ ಪಿಡಿಒ ಅವರಿಗೇ ನೀಡಬೇಕು ಎಂದು ಸದಸ್ಯ ಬಸವಂತಪ್ಪ ಒತ್ತಾಯಿಸಿದರು.

‘ತೋಳಹುಣಸೆಯಲ್ಲಿ ಸ್ಥಾಪನೆಯಾದ ಶುದ್ಧ ನೀರಿನ ಘಟಕದ ನಾಮಫಲಕದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರ ಫೋಟೊ ಹಾಕಲಾಗಿದೆ. ನನ್ನ ಫೋಟೊವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಇದರಲ್ಲಿಯೂ ಜಾತಿಯತೆ ಅಡಗಿದೆಯೇ?’ ಎಂದು ಪ್ರಶ್ನಿಸಿದರು.

‘ಈ ಘಟಕದ ಉದ್ಘಾಟನೆಯನ್ನು ಶಾಸಕರ ಮಗಳು ನೆರವೇರಿಸಿದ್ದಾರೆ. ಹೀಗೆ ಮಾಡಬಹುದೇ? ಸ್ಪಷ್ಟನೆ ನೀಡಿ’ ಎಂದು ಕೇಳಿದರು. ಭೂಸೇನೆ ನಿಗಮದ ಎಂಜಿನಿ ಯರ್ ಮಾತನಾಡಿ, ‘ಸ್ಥಳಕ್ಕೆ ಭೇಟಿ ನೀಡಿ ತಕ್ಷಣವೇ ವರದಿ ನೀಡಲಾ ಗುವುದು’ ಎಂದು ಹೇಳಿದರು.

‘ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ನಾಲ್ಕನೇ ಹಂತ ಜಾರಿಗೆ ಬರಲಿದ್ದು, ಅದರಲ್ಲಿ ಜಿಲ್ಲೆಯ 28 ಗ್ರಾಮಗಳು ಆಯ್ಕೆಯಾಗಿವೆ. ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಲ್ಲಿ ಮಾತ್ರ ನೀರಿನ ಘಟಕ ಸ್ಥಾಪಿಸಲಾಗುವುದು’ ಎಂದು ಎಂಜಿನಿಯರ್‌ ಹೇಳಿದರು.

* ಕಾಮಗಾರಿ ನಡೆಸುವಾಗ ಆಯಾ ಕ್ಷೇತ್ರದ ಸದಸ್ಯರ ಗಮನಕ್ಕೆ ತರಬೇಕು ನಿಜ. ಆದರೆ,ಇದು ಒಂದು ಗಂಟೆ ಚರ್ಚಿಸುವ ವಿಷಯವೇ?–---ಎಸ್‌.ಅಶ್ವತಿ, ಸಿಇಒ, ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT