ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ತಡೆಗೆ ನಿಯಮ ಪಾಲನೆ ದಾರಿ

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಪ್ರಥಮ ಚಿಕಿತ್ಸಾ ಕಾರ್ಯಾಗಾರ ಉದ್ಘಾಟಿಸಿ ಬಸ್ರೂರು ರಾಜೀವ ಶೆಟ್ಟಿ
Last Updated 18 ಫೆಬ್ರುವರಿ 2017, 5:12 IST
ಅಕ್ಷರ ಗಾತ್ರ
ಶಿವಮೊಗ್ಗ: ‘ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ಕಾನೂನು ಪಾಲಿಸಿದರೆ ರಸ್ತೆ ಅಪಘಾತಗಳು ಗಣನೀಯವಾಗಿ ಕಡಿಮೆಯಾಗುತ್ತವೆ’ ಎಂದು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ರಾಜ್ಯ ಶಾಖೆಯ ಸಭಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಕಿವಿಮಾತು ಹೇಳಿದರು.
 
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಜಿಲ್ಲಾ ಪೊಲೀಸ್, ಸಾರಿಗೆ ಇಲಾಖೆ, ಜಿಲ್ಲಾಡಳಿತವು  ವಿಶ್ವವಿದ್ಯಾಲಯ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ರಸ್ತೆ ಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಾಗಾರ’  ಉದ್ಘಾಟಿಸಿ ಅವರು ಮಾತನಾಡಿದರು.
 
‘ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಇದ್ದಾರೆ. ಅವರೇ ಹೆಚ್ಚು ರಸ್ತೆ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಅತಿ ವೇಗವಾಗಿ ವಾಹನ ಚಲಾಯಿಸುವಾಗ ಅವರಿಗೆ ರಸ್ತೆ ನಿಯಮಗಳು ಕಾಣಿಸುವುದಿಲ್ಲ. ಯುವ ಜನರು ಜೀವ ಕಳೆದುಕೊಂಡರೆ ದೇಶಕ್ಕೆ ನಷ್ಟ. ಹಾಗಾಗಿ ಎಲ್ಲರೂ ರಸ್ತೆ ನಿಯಮ ಪಾಲಿಸಬೇಕು. ಅಪಘಾತ ತಡೆಯಬೇಕು. ವಾಹನ ಚಲಾಯಿಸುವಾಗ  ಕುಟುಂಬದ ಬಗ್ಗೆಯೂ ಯೋಚನೆ ಇರಲಿ’ ಎಂದರು.
 
‘ಅಪಘಾತದಲ್ಲಿ ಜನರ ಜೀವ ಉಳಿಸಿದವರಿಗೆ ಸರ್ಕಾರ ‘ಜೀವ ರಕ್ಷಕ’ ಪ್ರಶಸ್ತಿ ನೀಡುತ್ತಿದೆ. ರಸ್ತೆಗಳಲ್ಲಿ ಅಪಘಾತವಾದ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಬೇಕು. ಆ ಸಂದರ್ಭದಲ್ಲಿ ಪ್ರಕರಣ ದಾಖಲಾಗುತ್ತದೆ ಎಂದು ಭಯಪಡಬಾರದು. ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
 
ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್ ಮಾತನಾಡಿ, ‘ಪ್ರಕೃತಿ ವಿಕೋಪಗಳು ದಿಢೀರ್‌ ಆಗಿ ಸಂಭವಿಸುತ್ತವೆ.  ಅದು ಹೇಗೆ ಬೇಕಾದರೂ ಬರಬಹುದು. ಆದರೆ, ಮನುಷ್ಯ ಸ್ವತಃ ಮಾಡುವ ಅವಘಡಗಳು ಮಾತ್ರ ಅಕ್ಷಮ್ಯ’ ಎಂದರು.
 
‘ವಿಶ್ವದಲ್ಲಿ ಅಪಘಾತಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.  ಶೇ 70 ರಷ್ಟು ಸಾವು ರಸ್ತೆ ಅಪಘಾತದಿಂದಲೇ ಸಂಭವಿಸುತ್ತಿದೆ. ಇದರಲ್ಲಿ ಶೇ 40ರಷ್ಟು ಯುವಜನರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಹಾಗಾಗಿ ಸುರಕ್ಷಿತವಾದ ಚಾಲನೆಗೆ ಒತ್ತು ನೀಡಬೇಕು. ಅಪಘಾತ ತಡೆಯಬೇಕು’ ಎಂದು ಮನವಿ ಮಾಡಿದರು. 
 
‘ಪಾದಚಾರಿಗಳು ರಸ್ತೆ ದಾಟುವಾಗ ಎಚ್ಚರಿಕೆ ಕ್ರಮ ಪಾಲಿಸುತ್ತಿಲ್ಲ. ರಸ್ತೆ ನಿಯಮ ಪಾಲಿಸಿದರೆ ಮಾತ್ರ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ. ಅತಿವೇಗದಿಂದ ವಾಹನ ಚಾಲನೆ ಮಾಡದೆ, ಜೀವ ರಕ್ಷಣೆ ಮಾಡಿಕೊಳ್ಳಬೇಕು’ ಎಂದರು. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಮುಖ್ಯಸ್ಥ ಅಶ್ವತ್ಥನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
 
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಡಾ.ವಿ.ಎಲ್.ಎಸ್.ಕುಮಾರ್, ಕುವೆಂಪು ವಿಶ್ವ ವಿದ್ಯಾಲಯದ ಯುವ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ಅಪ್ಪಣ್ಣ ಗಸ್ತಿ, ಭಾರತಿ ಶೆಟ್ಟಿ, ಧರಣೇಂದ್ರ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT