ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೆರಡು ತಿಂಗಳಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ

ಜೆಡಿಎಸ್ ಪದಾಧಿಕಾರಿಗಳ ಸಭೆ ಉದ್ಘಾಟಿಸಿದ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ
Last Updated 18 ಫೆಬ್ರುವರಿ 2017, 5:24 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಮುಂದಿನ ಇನ್ನೆರಡು ತಿಂಗಳಲ್ಲಿ ಆಯ್ಕೆ ಮಾಡಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ರಾಜ್ಯದ ಎಲ್ಲೆಡೆ ಪ್ರವಾಸ, ಕೋರ್‌ ಕಮಿಟಿ, ವರಿಷ್ಠರೊಂದಿಗೆ ಸಭೆಗಳು ನಡೆಯುತ್ತಿವೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಜೆಡಿಎಸ್ ಘಟಕಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
 
ಪಕ್ಷದ ವರಿಷ್ಠರು, ಮುಖಂಡರು, ವೀಕ್ಷಕರು ರಾಜ್ಯದಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ಕುಂದುಕೊರತೆ ಆಲಿಸುತ್ತಿದ್ದಾರೆ. ಅವೆಲ್ಲವನ್ನು ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು, ಕೋರ್‌ಕಮಿಟಿ ಹಾಗೂ ಪಕ್ಷದ ಸಂಸದೀಯ ಮಂಡಳಿಗೆ ಕೊಂಡೊಯ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಕೋರ್‌ ಕಮಿಟಿ ಸಭೆ ನಡೆದಿದೆ’ ಎಂದರು. ‘ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಐದು ಜಿಲ್ಲೆಗಳ ಪ್ರಜ್ಞಾವಂತ ಮತದಾರರು ಜೆಡಿಎಸ್‌್ ಅಭ್ಯರ್ಥಿ ರಮೇಶ್ ಬಾಬು ಅವರನ್ನು ಗೆಲ್ಲಿಸುವ ಮೂಲಕ, ವಿಧಾನಸಭಾ ಚುನಾವಣೆಗೆ ಶುಭ ದಿಕ್ಸೂಚಿ ಸಿಕ್ಕಿದೆ’ ಎಂದರು
 
‘ಮಾಜಿ  ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಶಕ್ತಿ ತುಂಬಿದ ಜಿಲ್ಲೆ ಚಿತ್ರದುರ್ಗ. ಅದನ್ನು ಎಂದೂ ಮರೆಯುವಂತಿಲ್ಲ. ಜೆಡಿಎಸ್ ಉಳಿದಿರು­ವುದೇ ಕಾರ್ಯಕರ್ತರಿಂದ. ನಮ್ಮದು ನಾಯಕರನ್ನು ಸೃಷ್ಟಿ ಮಾಡುವ ಪಕ್ಷ. ನಾವು ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಎಷ್ಟು ಗೆಲ್ಲುತ್ತೇವೆ ಎನ್ನುವುದಕ್ಕಿಂತ, ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಗುರಿ ಮುಟ್ಟುವುದು ಬಹಳ ಮುಖ್ಯ’ ಎಂದರು. 
 
‘ಜೆಡಿಎಸ್‌ ಅನ್ನು ಅಪ್ಪ ಮಕ್ಕಳ ಪಕ್ಷ ಎಂದು ವಿರೋಧಿಸಿ, ಹಾಸ್ಯ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಲಾಭ ಪಡೆದು, ಅಮ್ಮ–ಮಗನ ಪಕ್ಷ ಸೇರಿಕೊಂಡಿದ್ದಾರೆ’ ಎಂದು ಟೀಕಿಸಿದರು. ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ‘ಪಕ್ಷ ಸಂಕಷ್ಟದಲ್ಲಿದ್ದಾಗ ಮುಖಂಡರೊಬ್ಬರು ಪಕ್ಷ ತೊರೆದರು. ಅನಿವಾರ್ಯವಾಗಿ ಪಕ್ಷ ಸಂಘಟಿಸುವ ಜವಾಬ್ದಾರಿ ಹೊರಬೇಕಾಯಿತು. ಬೆಂಬಲಿಗರು, ಅಭಿಮಾನಿಗಳ ಒತ್ತಾಯದಂತೆ ಕ್ಷೇತ್ರವೊಂದರ ನಾನೂ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಇದು ನನ್ನತೀರ್ಮಾನವಲ್ಲ.
ನನ್ನೊಡನೆ ಮೂರು ದಶಕಗಳ ಒಡನಾಟಇಟ್ಟುಕೊಂಡಿರುವ ಪಕ್ಷದ ಅಭಿಮಾನಿಗಳ ಒತ್ತಾಯ’ ಎಂದರು.
 
‘ಯಡಿಯೂರಪ್ಪ ಅವರು ಆಗ್ನೇಯ ಶಿಕ್ಷಕರ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಸತ್ಯ ನುಡಿದಿದ್ದಾರೆ. ಅದರಂತೆ ಜೆಡಿಎಸ್ ಜಯಗಳಿಸಿದೆ. ಜೆಡಿಎಸ್ ಭವಿಷ್ಯವನ್ನು ಅವರೇ ಹೇಳಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ಯಾವ ಜ್ಯೋತಿಷಿಯೂ ಹೇಳಬೇಕಿಲ್ಲ. ಜನರೇ ಹೇಳುತ್ತಿದ್ದಾರೆ’ ಎಂದರು. 
 
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಗೊಳ್ಳುತ್ತಿದೆ. ಪಕ್ಷದಲ್ಲಿ ವಿವಿಧ ಘಟಕಗಳನ್ನು ರಚಿಸಲಾಗಿದೆ. ಎಲ್ಲಾ ಜಾತಿಯವರಿಗೂ ಅಧಿಕಾರ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಇದೇ ಮೊದಲ ಬಾರಿಗೆ ಮಂಗಳಮುಖಿಯರ ಘಟಕ ರಚಿಸಲಾಗಿದೆ’ ಎಂದು ಹೇಳಿದರು.
 
ಜೆಡಿಎಸ್ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಫಾರೂಕ್, ಶಾಸಕಿ ಶಾರದಾ ಪೂರ್ಯಾನಾಯ್ಕ್, ಕಾಶಾಮಯ್ಯ, ಮುಖಂಡರಾದ ಬಿ.ಟಿ.ಸಿದ್ದೇಶ್, ಮೀನಾಕ್ಷಿ ನಂದೀಶ್, ಎಚ್.ವೀರಣ್ಣ, ಮಹಾದೇವಪ್ಪ, ಭೀಮಣ್ಣ, ರಾಜಣ್ಣ, ತಿಮ್ಮಣ್ಣ, ಶೇಖರಣ್ಣ, ತಿಪ್ಪೇ
ಸ್ವಾಮಿ, ದೇವಯ್ಯ, ಎತ್ತನ್ನಟ್ಟಿಗೌಡ, ಶಿವಪ್ರಸಾದ್‌ ಗೌಡ, ನಂದೀಶ್, ಮಹಮದ್ ಸಾದತ್, ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ಪ್ರತಾಪ್‌ಜೋಗಿ, ನಗರಸಭೆ ಉಪಾಧ್ಯಕ್ಷ ಕೆ.ಮಲ್ಲೇಶಪ್ಪ, ಸದಸ್ಯರಾದ ಮಲ್ಲಿಕಾರ್ಜುನ್, ನಸ್ರುಲ್ಲಾ, ತಿಪ್ಪೇಸ್ವಾಮಿ, ಫಕ್ರುದ್ದೀನ್ ವೇದಿಕೆಯಲ್ಲಿದ್ದರು. 
 
‘ಪಕ್ಷಗಳ ಕಚ್ಚಾಟದ ಲಾಭ ನಮಗೆ ಬೇಡ’
 
‘ಜಿಲ್ಲೆಯಿಂದ ಹಿಡಿದು ರಾಜ್ಯಮಟ್ಟದವರೆಗೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಕಚ್ಚಾಡುತ್ತಿದ್ದಾರೆ. ಆದರೆ, ಅವರ ಕಚ್ಚಾಟದ ಲಾಭವನ್ನು ನಾವು ಪಡೆಯುವುದಿಲ್ಲ. ಮತದಾರರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
 
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮುಖಂಡ ಯಡಿಯೂರಪ್ಪ ಅವರು ಈಗಾಗಲೇ 150 ಸೀಟು ಗೆದ್ದಿದ್ದೇವೆ ಎಂದು ಬೀಗುತ್ತಿದ್ದಾರೆ. ಆದರೆ ಜನ, ಮುಂದಿನ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ನಾವು ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೇವೆ’ ಎಂದು ಹೇಳಿದರು.

‘ನಾವು ಅಧಿಕಾರ ಹಿಡಿಯುತ್ತೇವೆ, ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡುತ್ತೇವೆ ಎನ್ನುತ್ತಾ ಹೇಳಿಕೊಂಡು ಓಡಾಡುವುದನ್ನು ಬಿಟ್ಟು, ಸಂಘಟನೆ ಕಡೆ ಗಮನಹರಿಸುತ್ತಿದ್ದೇವೆ. ವರಿಷ್ಠ ದೇವೇಗೌಡರ ಸಲಹೆ ಮೇರೆಗೆ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಸ ಆರಂಭಿಸಿದ್ದೇವೆ. ಮಾರ್ಚ್‌ ತಿಂಗಳಲ್ಲಿ ನಡೆಯುವ ಕೋರ್‌ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ತೀರ್ಮಾನಿಸಲಿದ್ದೇವೆ’ ಎಂದರು.
 
* ಮಾರ್ಚ್ 15ರಂದು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಉದ್ಘಾಟನೆ ಹಾಗೂ ಸಮಾವೇಶ ನಡೆಯಲಿದೆ. ಜಿಲ್ಲೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಮಧು ಬಂಗಾರಪ್ಪ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT