ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ಅಮಾನ್ಯೀಕರಣದಿಂದ ಆರ್ಥಿಕತೆ ಕುಸಿತ

ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ವಾಸುದೇವ ಸೇಡಂ
Last Updated 18 ಫೆಬ್ರುವರಿ 2017, 5:46 IST
ಅಕ್ಷರ ಗಾತ್ರ
ಕಲಬುರ್ಗಿ: ‘ಕೇಂದ್ರ ಸರ್ಕಾರ ಹಳೆಯ ₹500, ₹1,000 ನೋಟುಗಳನ್ನು ರದ್ದುಗೊಳಿಸಿದ ನಂತರ ಭಾರತದ ಅರ್ಥ ವ್ಯವಸ್ಥೆ ಕುಸಿತ ಕಂಡಿದೆ. ಆರ್ಥಿಕ ಅಸ್ಥಿರತೆಯಿಂದಾಗಿ ವಿದೇಶಿ ಬಂಡವಾಳವೂ ಹರಿದು ಬರುತ್ತಿಲ್ಲ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಾಸುದೇವ ಸೇಡಂ ಹೇಳಿದರು.
 
ಹೈದರಾಬಾದ್‌ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ ಹಾಗೂ ಹೈದರಾಬಾದ್‌  ಕರ್ನಾಟಕ ಅರ್ಥಶಾಸ್ತ್ರ ಸಂಘದ ಸಹಯೋಗದಲ್ಲಿ ಶುಕ್ರವಾರ ಇಲ್ಲಿನ ಹಿಂಗುಲಾಂಬಿಕಾ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಹಣದ ಅಮಾನ್ಯೀಕರಣ: ಸಾಧ್ಯತೆ ಹಾಗೂ ಸವಾಲುಗಳು’ ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 
 
‘ಉದ್ಯೋಗ, ಉತ್ಪಾದನೆ, ಹೂಡಿಕೆ, ಆದಾಯ, ಸಂಪನ್ಮೂಲದ ಹಂಚಿಕೆ ಹಾಗೂ ಅನುಭೋಗ ಮುಂತಾದ ಆರ್ಥಿಕ ಚಟುವಟಿಕೆಗಳಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಇದರಿಂದಾಗಿ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅಧಿಕ ಮುಖ ಬೆಲೆಯ ನೋಟುಗಳ ಜಾರಿಯಿಂದಾಗಿ ಕಪ್ಪುಹಣ ಹಾಗೂ ಭ್ರಷ್ಟಾಚಾರ ತೀವ್ರಗತಿಯಲ್ಲಿ ಬೆಳೆಯುತ್ತಿದೆ’ ಎಂದು ಹೇಳಿದರು.
 
ಮುಖ್ಯ ಅತಿಥಿಯಾಗಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ.ರಮೇಶ ಲಂಡನಕರ್ ಮಾತನಾಡಿ, ‘ಪೂರ್ವ ತಯಾರಿ ಇಲ್ಲದೆ ಏಕಾಏಕಿ ಹಣದ ಅಮಾನ್ಯೀಕರಣ ಮಾಡಿರುವುದು ಆತಂಕಕಾರಿ ಬೆಳವಣಿಗೆ. ದೇಶದ ಸಾರ್ವಭೌಮತೆಯ ಸಂಕೇತವಾದ ಸಂಸತ್ತಿನ ಅನುಮೋದನೆ ಪಡೆಯದೆ ಕೈಗೊಂಡಿರುವ ಈ ನಿರ್ಧಾರ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿದೆ’ ಎಂದು ಹೇಳಿದರು.
 
‘ರೈತರು, ಕೃಷಿ ಕೂಲಿಕಾರರು, ಮಹಿಳೆಯರು ಹಾಗೂ ಅಸಂಘಟಿತ ಕಾರ್ಮಿಕರು ತೀವ್ರ ತೊಂದರೆಗೀಡಾಗಿದ್ದಾರೆ.  ಬಡವರು ಮತ್ತು ಶ್ರೀಮಂತರ ಮಧ್ಯೆ ಆರ್ಥಿಕ ಅಂತರ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ’ ಎಂದರು.
 
ಸಂಪನ್ಮೂಲ ವ್ಯಕ್ತಿಯಾಗಿದ್ದ ಬೆಂಗಳೂರಿನ ಸಮಾಜವಿಜ್ಞಾನಿ ಕೆ.ಪ್ರಕಾಶ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ವರ್ಷದ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚಲು ಹಾಗೂ ಜನರ ಗಮನ ಬೇರೆಡೆ ಸೆಳೆಯಲು ಹಣದ ಅಮಾನ್ಯೀಕರಣದ ತಂತ್ರ ಹೂಡಿದ್ದಾರೆ.  ಪ್ರಧಾನಿ ಅನುಸರಿಸುತ್ತಿರುವುದು ವಿನಾಶಕಾರಿ ಆರ್ಥಿಕ ನೀತಿ. ಲಾಭದಲ್ಲಿರುವ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಖಾಸಗಿ ಬಂಡವಾಳಶಾಹಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ದೂರಿದರು.
 
ಕಾಲೇಜಿನ ಪ್ರಾಚಾರ್ಯೆ ಡಾ.ಶಿಲ್ಪಾ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಹೈದರಾಬಾದ್‌ ಕರ್ನಾಟಕ ಅರ್ಥಶಾಸ್ತ್ರ ಸಂಘದ ಅಧ್ಯಕ್ಷ ಡಾ. ದಶರಥ ಮೇತ್ರೆ, ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಭಾಷ ಧಗೆ, ಜಂಟಿ ಕಾರ್ಯದರ್ಶಿ ಡಾ.ಅನಂತ ಚಿಂಚೂರೆ ಇದ್ದರು. ಡಾ.ಶರಣಪ್ಪ ಸೈದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ನಾಗಪ್ಪ ಗೋಗಿ ಸ್ವಾಗತಿಸಿದರು. ಡಾ.ಶ್ರೀಮಂತ ಹೋಳ್ಕರ್ ನಿರೂಪಿಸಿದರು. ಕುಮಾರಿ ನಾಗಮ್ಮ ಹೊಸ್ಮನಿ ವಂದಿಸಿದರು. 
 
* ಭಾರತದಲ್ಲಿ 30 ಕೋಟಿ ಅನಕ್ಷರಸ್ಥರು ಇರುವಾಗ ಡಿಜಿಟಲ್ ಇಂಡಿಯಾ ಸಾಧಿಸುವುದು ಹೇಗೆ ಸಾಧ್ಯ?  ನೋಟಿನ ಅಮಾನ್ಯೀಕರಣದಿಂದ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ.
-ಡಾ.ರಮೇಶ ಲಂಡನಕರ್‌, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT