ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಭಿಮಾನ ಮೂಡಿಸಿದ ಖಾತರಿ ಯೋಜನೆ’

ಬರಗಾಲದಲ್ಲಿ ಆಸರೆ ಉದ್ಯೋಗ ಖಾತರಿ
Last Updated 18 ಫೆಬ್ರುವರಿ 2017, 5:53 IST
ಅಕ್ಷರ ಗಾತ್ರ
ಕಲಬುರ್ಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಜನರೇ ಕಾಪಾಡಿಕೊಳ್ಳಬೇಕು ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
 
ತಾಲ್ಲೂಕಿನ ಸೈಯದ್‌ ಚಿಂಚೋಳಿಯಲ್ಲಿ ಖಾತರಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕೆಲಸವನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಮಾತನಾಡಿದರು.
 
ದೇಶದಲ್ಲಿ ಉದ್ಯೋಗ ಖಾತರಿ ಯೋಜನೆ ಯಶಸ್ವಿಯಾಗಿ ನಡೆಸಲು ಒಟ್ಟು ₹1.2 ಲಕ್ಷ ಕೋಟಿ ಅಗತ್ಯವಾಗುತ್ತದೆ ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಕೇಂದ್ರವು ಕೇವಲ ₹48 ಸಾವಿರ ಕೋಟಿ ಮೀಸಲಿಟ್ಟಿದೆ. ಕಲಬುರ್ಗಿ ಜಿಲ್ಲೆಗೆ ಅಂದಾಜು ಪ್ರತಿವರ್ಷ ₹250 ಕೋಟಿ ಅಗತ್ಯ. ರಾಜ್ಯಕ್ಕೆ ₹5 ಸಾವಿರ ಕೋಟಿ ಒದಗಿಸಬೇಕಾಗುತ್ತದೆ. ವಾಸ್ತವದಲ್ಲಿ ಸಾಕಷ್ಟು ಹಣ ದೊರೆಯುತ್ತಿಲ್ಲ. ಬಡವರ ಕಷ್ಟ ಏನೆಂದು ಅರ್ಥವಾಗದವರು ರಾಜ್ಯಭಾರ ಮಾಡಿದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
 
ಮುಖ್ಯವಾಗಿ ಬರಗಾಲ ಹಾಗೂ ಬೇಸಿಗೆ ಕಾಲದಲ್ಲಿ ಬಡವರು ಶ್ರೀಮಂತರ ಮನೆ ಎದುರು ಉದ್ಯೋಗಕ್ಕಾಗಿ ಕೈಚಾಚಿ ನಿಲ್ಲಬಾರದು. ಕಡಿಮೆ ಹಣದಲ್ಲಿ ಕೂಲಿ ಮಾಡಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ವಿಶೇಷ ಆಸಕ್ತಿ ವಹಿಸಿದ್ದರಿಂದ ದೇಶದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಯೋಜನೆಯನ್ನು ಕಾನೂನುಬದ್ಧ ಮಾಡಿರುವುದರಿಂದ ಅದನ್ನು ಸ್ಥಗಿತಗೊಳಿಸಲು ಸಾಧ್ಯವಾಗುವುದಿಲ್ಲ. ಆದರೂ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
 
ಬರಗಾಲ ಅಥವಾ ಎಂತಹ ಕಷ್ಟ ಪರಿಸ್ಥಿತಿಯಲ್ಲೂ ಸಣ್ಣ ರೈತರು ಹಾಗೂ ಬಡವರು ತಮ್ಮ ಜಮೀನು ಮಾರಾಟ ಮಾಡಬಾರದು. ಊರಲ್ಲಿ ಮನೆ ಕಟ್ಟಿಸಿಕೊಳ್ಳಲು ಆಗಲಿಲ್ಲ ಅಂದರೂ ಜಮೀನಿನಲ್ಲಿ ಮನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಜೀವನಕ್ಕೆ ಜಮೀನು ಆಧಾರ ಆಗಿರುತ್ತದೆ ಎಂದು ಕಿವಿಮಾತು ಹೇಳಿದರು.
 
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯಾರೂ ಕೆಲಸ ಕೇಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಾರೆಯೋ ಅವರಿಗೆಲ್ಲ ಕೆಲಸ ಕೊಡುವುದಕ್ಕೆ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಧ್ಯವಿದೆ. ಪ್ರಸಕ್ತ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಗೆ ಒಟ್ಟು ₹60 ಕೋಟಿ ಖರ್ಚಾಗಿದೆ ಎಂದರು.
 
ನಮ್ಮ ಜಿಲ್ಲೆ ಜನ್ರು ಕೆಲಸಾ ಮಾಡಾಕ್ ಶುರು ಮಾಡಿದ್ರ ಮಾಡೇ ಮಾಡ್ತಾರ್‌. ನಿಲ್ಲಿಸಿದ್ರು ಅಂದ್ರ, ಯಾವ ಕೆಲಸಾನೂ ಮಾಡಾಕ್‌ ಮುಂದ್‌ ಬರೋದಿಲ್ಲ. ಸ್ವಲ್ಪ ಮೈಗಳ್ಳತನ ಬಿಟ್ಟು ಕೆಲಸಾ ಮಾಡೋದು ಕಲೀಬೇಕು ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಕೂಲಿ ಕಾರ್ಮಿಕರಿಗೆ ಸಲಹೆ ನೀಡಿದರು.
 
ಮೈಗಳ್ಳತನ ಬಿಡಿ: ಕೆಟ್ಟ ಪರಿಸ್ಥಿತಿ ಇರಲಿ, ಒಳ್ಳೆಯ ಪರಿಸ್ಥಿತಿ ಇರಲಿ, ದುಡಿದು ಬದುಕಬೇಕು ಅನ್ನೋ ಛಲ ಮಾತ್ರ ಬಿಡಬಾರದು.
ಸೈಯದ್‌ ಚಿಂಚೋಳಿ ಕೆರೆಯಲ್ಲಿ ಮೆತ್ತಗ ಎರೀ ಮಣ್ಣ ಐತಿ, ಕೆಲಸಾ ಬೇಗ ಮುಗಿತೈತಿ. ಕಲ್ಲು ಇರೋ ಗಟ್ಟಿ ನೆಲ ಇದ್ದಿದ್ರ್‌ ಇಷ್ಟೊಂದು ಜನ್ರು ಕೂಲಿ ಕೆಲಸಕ್ಕ ಬರ್ತಿರಲಿಲ್ಲ. ನೆಲ ಹ್ಯಾಂಗಾರ ಇರಲಿ ಕೆಲಸ ಮಾಡ್ತೀನಿ ಅನ್ನೋ ಛಲ ಇಟ್ಕೊಬೇಕು
ಎಂದು ಹೇಳಿದರು.
 
ವೇತನ ಹೆಚ್ಚಿಸಲು ಮನವಿ: ಉದ್ಯೋಗ ಖಾತರಿ ಯೋಜನೆ ಕೂಲಿ ದರವನ್ನು ₹400ಕ್ಕೆ ಹೆಚ್ಚಿಸಬೇಕು. 200 ಕ್ಕೆ ಕೂಲಿ ಕೊಡುವ ದಿನಗಳನ್ನು ಏರಿಕೆ ಮಾಡಬೇಕು ಎಂದು ಕಾರ್ಮಿಕರು ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
 
ಕೆರೆಗೆ ಮರುಜೀವ
 
18 ಲಕ್ಷ ಲೀ. ಕಳೆದ ವರ್ಷ ಹೂಳೆತ್ತಿದ್ದ ರಿಂದ ಸಂಗ್ರಹಿಸುವ  ನೀರು
ನೀರು ಸಂಗ್ರಹ ಸುತ್ತಮುತ್ತ ಜಮೀನಿನಿಂದ ಕೆರೆಗೆ ನೀರು ಹರಿದು ಬರುವುದಕ್ಕೆ ಇಳಿಜಾರುಗಳ ನಿರ್ಮಾಣ
22ಲಕ್ಷ ಲೀ.ನೀರು ಸಂಗ್ರಹಿಸುವ ಗುರಿ
 
* ಸೋನಿಯಾ ಗಾಂಧಿ ಅವರೇ ಉದ್ಯೋಗ ಖಾತರಿ ಯೋಜನೆ ರೂವಾರಿ ಎಂಬುದನ್ನು ಯಾರೂ ಮರೆಯಬಾರದು. ಬಡವರಿಗೆ ಸ್ವಾಭಿಮಾನ ಮೂಡಿಸಿದ ಯೋಜನೆ ಇದು
- ಡಾ.ಶರಣಪ್ರಕಾಶ್‌ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT