ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರನ್ನು ಗೌರವಿಸಿ: ನ್ಯಾಯಾಧೀಶ

ಮಹಿಳಾ, ಮಕ್ಕಳ ಹಕ್ಕುಗಳಲ್ಲಿ ಇತ್ತೀಚಿನ ಬದಲಾವಣೆ: ವಿಚಾರ ಸಂಕಿರಣ
Last Updated 18 ಫೆಬ್ರುವರಿ 2017, 6:00 IST
ಅಕ್ಷರ ಗಾತ್ರ
ಬೀದರ್: ಸಂಸ್ಕಾರದ ಪ್ರತಿರೂಪದಂತೆ ಇರುವ ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಅದನ್ನು ಉಳಿಸಿಕೊಂಡು ಹೋಗುವುದು ನಾಡಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಜೆಎಂಎಫ್‌ಸಿ ಎರಡನೆಯ ನ್ಯಾಯಾಲಯದ ನ್ಯಾಯಾಧೀಶ ಆರ್‌. ರಾಘವೇಂದ್ರ ತಿಳಿಸಿದರು.
 
ನಗರದ ಮಂಗಲಪೇಟ್‌ನ ಮೆಥೋಡಿಸ್ಟ್‌ ಆರ್ಟ್ಸ್‌ ಕಾಲೇಜು ಸಭಾಂಗಣದಲ್ಲಿ ‘ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳಲ್ಲಿ ಇತ್ತೀಚಿನ ಬದಲಾವಣೆ’ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
 
ಪಾಶ್ಚಿಮಾತ್ಯ ಸಂಸ್ಕೃತಿಯ ಪರಿಣಾಮದಿಂದಾಗಿ ಯುವಜನರು ದಾರಿ ತಪ್ಪುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿವೆ. ನ್ಯಾಯಾಲಯಗಳು ಅಪರಾಧಿಗಳಿಗೆ ಶಿಕ್ಷೆಯನ್ನೂ ಕೊಡುತ್ತಿವೆ. ಆದರೆ, ನೈತಿಕ ಮೌಲ್ಯಗಳನ್ನು  ಪ್ರತಿಪಾದಿಸುವ ಮೂಲಕ ಇಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
 
ಮಹಿಳೆಯರಿಗೆ ಗೌರವ ಕೊಡುವ ಸಂಸ್ಕಾರ ಮನೆಯಿಂದಲೇ ಶುರುವಾಗಬೇಕು. ಜನಪದ ಸಂಸ್ಕೃತಿಯಲ್ಲಿ ಇದು ಹಾಸುಹೊಕ್ಕಿದೆ. ವರದಕ್ಷಿಣೆ ಪಡೆಯುವುದಷ್ಟೇ ಅಲ್ಲ, ಕೊಡುವುದೂ ಅಪರಾಧ. ಮೊದಲು ವರದಕ್ಷಿಣೆ ಪಡೆಯುವವರಿಗೆ ಮಾತ್ರ ಶಿಕ್ಷೆ ವಿಧಿಸಲಾಗುತ್ತಿತ್ತು. ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ ಈಗ ವರದಕ್ಷಿಣೆ ಕೊಡುವವರಿಗೂ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
 
ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಬಲಪಡಿಸಲಾಗಿದೆ. ಬಾಲ್ಯ ವಿವಾಹ ಮಾಡುವುದಷ್ಟೇ ಅಲ್ಲ, ಅದನ್ನು ಬೆಂಬಲಿಸುವುದು ಕೂಡ ಅಪರಾಧವಾಗಿದೆ. ಬಾಲ್ಯ ವಿವಾಹಗಳು ನಡೆಯದಂತೆ ನೋಡಿಕೊಳ್ಳುವುದು ಎಲ್ಲ ಹೊಣೆಯಾಗಿದೆ ಎಂದು ತಿಳಿಸಿದರು.
 
ಗಂಡು ಮಗುವಿಗಾಗಿ ಹರಕೆ ಹೊರುವವರ ಸಂಖ್ಯೆ ಅಧಿಕ ಇದೆ. ಆದರೆ, ಹೆಣ್ಣು ಮಗುವಿಗಾಗಿ ಹರಕೆ ಹೊರುವವರು ತೀರಾ ವಿರಳ. ಈ ಮನೋಭಾವ ಬದಲಾದರೆ ಮಾತ್ರ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳ ಗೌರವ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.
 
ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಪರೋಪಕಾರಿಯಾಗಿ ಜೀವನ ನಡೆಸಬೇಕು. ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಮೆಥೋಡಿಸ್ಟ್‌ ಚರ್ಚ್‌ ಜಿಲ್ಲಾ ಮೇಲ್ವಿಚಾರಕ ಎ. ಸಿಮಿಯೋನ್‌ ಸಲಹೆ ಮಾಡಿದರು.
 
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಸಂಯೋಜಕ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿದರು. ಡಾ. ಅರುಣಾ ಸುಲ್ತಾನಪುರೆ ಉಪಸ್ಥಿತರಿದ್ದರು. ಪ್ರಾಚಾರ್ಯೆ ಡಾ. ಪರಿಜಾತಾ ಜೆ. ಸ್ವಾಗತಿಸಿದರು.
 
* ಪರೋಪಕಾರದ ಕಾರ್ಯಗಳನ್ನು ಕೈಗೊಳ್ಳುವುದರಿಂದ ಮಾತ್ರ ಬದುಕು ಸಾರ್ಥಕ ಆಗುತ್ತದೆ. ಸಮಾಜದಲ್ಲಿ ಗೌರವ ಕೂಡ ಲಭಿಸುತ್ತದೆ.
- ಎ. ಸಿಮಿಯೋನ್‌, ಮೆಥೋಡಿಸ್ಟ್‌ ಚರ್ಚ್‌ ಜಿಲ್ಲಾ ಮೇಲ್ವಿಚಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT