ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋ ಫೈನಾನ್ಸ್ ಕಿರುಕುಳ: ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಸಾಲಗಾರರ ಹೋರಾಟ
Last Updated 18 ಫೆಬ್ರುವರಿ 2017, 6:35 IST
ಅಕ್ಷರ ಗಾತ್ರ
ಕೊಪ್ಪಳ: ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ದೌರ್ಜನ್ಯ ನಡೆಸಿ ಸಾಲ ವಸೂಲು ಮಾಡುವುದನ್ನು ಖಂಡಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.
 
ಮೈಕ್ರೋ ಫೈನಾನ್ಸ್ ಸಾಲಗಾರರ ಹೋರಾಟ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಾಲಗಾರರು, ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಹಾವಳಿ ಮಿತಿಮೀರಿ ಹೋಗಿದೆ. ಬಡ ಮಹಿಳಾ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸುವ ಹೆಸರಿನಲ್ಲಿ ಸಾಲ ನೀಡಿ ಈಗ ದೌರ್ಜನ್ಯದ ಕ್ರಮಗಳ ಮೂಲಕ ಸಾಲ ವಸೂಲಿಗೆ ಮುಂದಾಗಿದ್ದಾರೆ.
 
ಕಳೆದ ಹತ್ತಾರು ವರ್ಷಗಳಿಂದ ಈ ಮೈಕ್ರೋ ಫೈನಾನ್ಸ್ ಕಂಪೆನಿಗಳ ದುಬಾರಿ ಬಡ್ಡಿ ದರಗಳನ್ನು ಸಹಿಸಿಕೊಂಡು, ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಸಾಲ ಮರುಪಾವತಿ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಮಹಿಳೆಯರಿಗೆ ದುಡಿಮೆ ಇಲ್ಲದಂತಾಗಿ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದೆ. ಕೂಲಿ ಕೆಲಸ ಸಿಗದಂತಾಗಿದೆ. ಇಂತಹ ಸಮಯದಲ್ಲಿ ಬಲವಂತದ ಸಾಲವಸೂಲಿಯಿಂದಾಗಿ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಳಲು ತೋಡಿಕೊಂಡರು.
 
ಮೈಕ್ರೋ ಫೈನಾನ್ಸ್ ಕಂಪೆನಿ ಸಿಬ್ಬಂದಿ ಸಾಲ ಪಡೆದ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಇದರಿಂದ ನೊಂದ ಕೆಲವರು ಆತ್ಮಹತ್ಯೆಗೂ ಮುಂದಾಗಿದ್ದಾರೆ. ಆದ್ದರಿಂದ ಇಂಥ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 
ಪರವಾನಗಿರಹಿತ ಹಣಕಾಸು ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪರವಾನಗಿ ಹೊಂದಿದ್ದರೂ ಬಲವಂತದ ಸಾಲ ವಸೂಲಿ ಮಾಡುವ ಕಂಪೆನಿಗಳ ಲೈಸನ್ಸ್ ರದ್ದು ಮಾಡಬೇಕು ಮತ್ತು ಅವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
 
ಮಹಿಳಾ ಗುಂಪುಗಳ ಎಲ್ಲಾ ಸಾಲವನ್ನು ಸರ್ಕಾರ ವಹಿಸಿಕೊಂಡು ಒಂದು ಬಾರಿ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ನೀಡುವ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಜಿ.ನಾಗರಾಜ, ತಿಪ್ಪಣ್ಣ ಆರತಿ, ಕಾಸೀಂ ಸರದಾರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಶ್ರೀರಾಮರೆಡ್ಡಿ, ಶಶಿಕಲಾ ಗಿಣಿಗೇರಾ, ಗೀತಾ ಮಂಗಳೂರ, ಕರಿಯಮ್ಮ ಬೂದಗುಂಪಾ, ಶಾರಮ್ಮ ಕಿನ್ನಾಳ              ಹುಲಿಗೆಮ್ಮ ಗಾಂಧಿನಗರ ಇದ್ದರು.
 
* ಎನ್‌ಜಿಒಗಳು ತಾವಾಗಿಯೇ ಸಾಲ ಕೊಡಲು ಮುಂದಾಗುವಾಗಲೇ ನಾವು ಎಚ್ಚರಗೊಳ್ಳಬೇಕಿತ್ತು. ಈಗ ಅವು ಆಳವಾಗಿ ಬೇರೂರಿಬಿಟ್ಟಿವೆ.
-ಜಿ. ಶ್ರೀರಾಮರೆಡ್ಡಿ, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT