ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಮೋಹ ಪಾಷದಲ್ಲಿ ಯುವಪೀಳಿಗೆ

ಎಸ್‌ಡಿಯುಎಎಚ್‌ಇಆರ್‌ ಕಾರ್ಯದರ್ಶಿ ನಾಗರಾಜ್‌ ಅಭಿಪ್ರಾಯ
Last Updated 18 ಫೆಬ್ರುವರಿ 2017, 7:17 IST
ಅಕ್ಷರ ಗಾತ್ರ
ಕೋಲಾರ: ‘ಮೊಬೈಲ್‌ ಮೋಹ ಪಾಷಕ್ಕೆ ಸಿಲುಕಿರುವ ಯುವಪೀಳಿಗೆಯನ್ನು ಓದಿನತ್ತ ಸೆಳೆಯುವ ಕೆಲಸ ಆಗಬೇಕು’ ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಅಭಿಪ್ರಾಯಪಟ್ಟರು.
 
ಕರ್ನಾಟಕ ಆರೋಗ್ಯ ವಿಜ್ಞಾನ ಗ್ರಂಥಾಲಯಗಳ ಸಂಘ (ಕೆಎಚ್‍ಎಸ್‍ಎಲ್‍ಎ) ಹಾಗೂ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಓಪನ್ ಸೋರ್ಸ್ ಸಾಫ್ಟ್‌ವೇರ್‌ ಅಂಡ್ ಓಪನ್ ಆಕ್ಸೆಸ್ ಸೈಂಟಿಪಿಕ್ ಲಿಟರೇಚರ್‌ ಫಾರ್‌ ಹೆಲ್ತ್‌ ಸೈನ್ಸ್ ಲೈಬ್ರರೀಸ್ ವಿಷಯ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು. 
 
ಹಲವು ಮಹನೀಯರು ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದಿ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅಲ್ಲದೇ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಪುಸ್ತಕಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿಗಳು ಇಂತಹ ಮಹನೀಯರ ಪುಸ್ತಕಗಳನ್ನು ಓದಿ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
 
ಮಧ್ಯಕಾಲಿನ ಯುಗದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಿರದ ಕಾರಣ ಮಹನೀಯರು ಪುಸ್ತಕಗಳಿಂದ ಪ್ರಭಾವಿತರಾಗಿ ಓದಿನ ಮೂಲಕ ಜ್ಞಾನ ಸಂಪಾದಿಸಿದರು. ಈ ಹಿಂದೆ ರಚನೆಯಾಗಿರುವ ಪುಸ್ತಕಗಳು ಅಪಾರ ಜ್ಞಾನ ಸಂಪತ್ತು ಹೊಂದಿವೆ. ಇಂಟರ್‌ನೆಟ್‌ನಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸಿಗುತ್ತದೆ. ಯುವ ಪೀಳಿಗೆಯು ಇಂಟರ್‌ನೆಟ್‌ನಿಂದಲೇ ಸಾಕಷ್ಟು ಮಾಹಿತಿ ಪಡೆಯುತ್ತಿದೆ. ಇಂಟರ್‌ನೆಟ್‌ಗಿಂತ ಗ್ರಂಥಾಲಯಗಳಲ್ಲಿನ ಪುಸ್ತಕಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದು ಎಂದರು.
 
ಟಿ.ವಿ, ಇಂಟರ್‌ನೆಟ್, ರೇಡಿಯೊ ಹಾಗೂ ಸಾಮಾಜಿಕ ಜಾಲಾತಾಣಗಳ ಮೂಲಕ ಮಕ್ಕಳಲ್ಲಿ ಜ್ಞಾನ ಹೆಚ್ಚಿಸಲು ಸಾಧ್ಯವಿಲ್ಲ. ಬದಲಿಗೆ ಇವುಗಳಿಂದ         ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವಿಸ್ತಾರವಾಗಿ ಭವಿಷ್ಯ ಉಜ್ವಲವಾಗುತ್ತದೆ ಎಂದರು. 
 
ಹೃದಯವಿದ್ದಂತೆ: ಕೆಎಚ್‍ಎಸ್‍ಎಲ್‍ಎ ಅಧ್ಯಕ್ಷ ಪಿ.ಎಸ್‌.ಮಹೇಶ್‌ ಮಾತನಾಡಿ, ‘ಶಾಲಾ ಕಾಲೇಜುಗಳಿಗೆ ಗ್ರಂಥಾಲಯ ಹೃದಯ ಭಾಗವಿದ್ದಂತೆ. ವಿದ್ಯಾರ್ಥಿಗಳಿಗೆ ಪುಸ್ತಕಗಳ ಅಗತ್ಯ ಹೆಚ್ಚಿದ್ದು, ಪ್ರತಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳನ್ನು ಓದಿನತ್ತ ಸೆಳೆಯುವುದು ಶಿಕ್ಷಕರ ಜವಾಬ್ದಾರಿ’ ಎಂದರು.
 
ಅನುಭವಿ ಗ್ರಂಥಪಾಲಕ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು. ರಾಜ್ಯದ ವಿವಿಧ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಗ್ರಂಥಪಾಲಕರು ಪಾಲ್ಗೊಂಡಿದ್ದು, ಶನಿವಾರ (ಫೆ.18) ಕಾರ್ಯಾಗಾರ ಮುಕ್ತಾಯಗೊಳ್ಳಲಿದೆ.
 
ಕೆಎಚ್‍ಎಸ್‍ಎಲ್‍ಎ ಕಾರ್ಯದರ್ಶಿ ಡಾ.ವೆಂಕಟೇಶ್, ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕುಲಪತಿ ಡಾ.ಸಿ.ವಿ.ರಘುವೀರ್, ನಿರ್ದೇಶಕ ಜೆ.ರಾಜೇಂದ್ರ, ಕುಲಸಚಿವ ಡಾ.ಎ.ವಿ.ಎಂ ಕುಟ್ಟಿ, ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್, ಗ್ರಂಥಪಾಲಕ ಪ್ರಕಾಶ್ ಮೊದಲ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT