ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶದಲ್ಲಿ ರಸ್ತೆ ಕಾಮಗಾರಿ: ಆರೋಪ

ಕರ್ನಾಟಕ ಸರ್ಕಾರದ ಹಣ: ಚಂದ್ರಬಾಬು ನಾಯ್ಡು ಕ್ಷೇತ್ರದಲ್ಲಿ ರಸ್ತೆ ಕಾಮಗಾರಿ
Last Updated 18 ಫೆಬ್ರುವರಿ 2017, 7:25 IST
ಅಕ್ಷರ ಗಾತ್ರ
ಕೆಜಿಎಫ್‌: ಪಂಚಾಯತ್‌ ರಾಜ್‌ ಇಲಾಖೆ, ಆಂಧ್ರಪ್ರದೇಶಕ್ಕೆ ಸೇರಿದ ಗ್ರಾಮದಲ್ಲಿ ನಕಾಶೆ ನೆರವಿಲ್ಲದೆ ರಸ್ತೆ ಕಾಮಗಾರಿ ನಡೆಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
 
ರಾಜ್ಯದ ಪಂಚಾಯತ್‌ ರಾಜ್‌ ಅಧಿಕಾರಿಗಳು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿನಿಧಿಸುತ್ತಿರುವ ಕುಪ್ಪಂ ಕ್ಷೇತ್ರದ ಅಟ್ರಪಲ್ಲಿ ಗ್ರಾಮಕ್ಕೆ ಸೇರಿದ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿಯನ್ನು ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಪರರಾಜ್ಯದಲ್ಲಿ ತನ್ನ ಅನುದಾನದಿಂದ ರಸ್ತೆ ಕಾಮಗಾರಿ ನಡೆಸುತ್ತಿರುವುದು ಗೊಂದಲಕ್ಕೆ ಈಡಾಗಿದೆ. ಕಳೆದ ಎರಡು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಸುಮಾರು 30 ಅಡಿ ಅಗಲವುಳ್ಳ ರಸ್ತೆಯ ಎರಡೂ ಬದಿಯಲ್ಲಿ ಜೆಸಿಬಿ ಮೂಲಕ ಚರಂಡಿ ನಿರ್ಮಾಣ ಮಾಡಿ, ರಸ್ತೆಯನ್ನು ಸಮತಟ್ಟು ಮಾಡಲಾದ ದೃಶ್ಯ ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಗೋಚರಿಸಿದೆ.
 
ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ತೊಂಗಲಕುಪ್ಪ ಗ್ರಾಮದಿಂದ ಆಂಧ್ರಗಡಿ ಅಟ್ರಪಲ್ಲಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ₹ 1.50 ಲಕ್ಷ ಮೀಸಲು ಎಂದು ಕ್ರಿಯಾ ಯೋಜನೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆ ಅನುಮೋದಿಸಿದೆ. ಇದು ಇಲಾಖೆಯ ವೆಬ್‌ಸೈಟಿನಲ್ಲಿ ಕೂಡ ಪ್ರಕಟವಾಗಿದೆ. 
 
ತೊಂಗಲಕುಪ್ಪ ಗ್ರಾಮದ ಹೊರಭಾಗದಲ್ಲಿರುವ ಪಾಲಾರ್ ನದಿಯ ಸೇತುವೆಯೇ ಕರ್ನಾಟಕದ ಗಡಿಯಾಗಿದೆ. ಅದರ ಆಚೆ ಇರುವುದು ಆಂಧ್ರಪ್ರದೇಶ ಎಂದು ಸ್ಥಳೀಯರು ಹೇಳುತ್ತಾರೆ. ಆಂಧ್ರದ ಅಟ್ರಪಲ್ಲಿ ಗ್ರಾಮ ದಲ್ಲಿ ರಸ್ತೆ ನಿರ್ಮಾಣಕ್ಕೆಂದು ದಾನಿಯೊಬ್ಬರು ತಮ್ಮ ಖಾಸಗಿ ಜಮೀನನ್ನು ಬಿಟ್ಟುಕೊಟ್ಟಿದ್ದು, ಈ ಜಮೀನಿನಲ್ಲಿ ಪಂಚಾಯಿತಿ ಸದಸ್ಯರೊಬ್ಬರು ರಸ್ತೆ ನಿರ್ಮಾಣ ಮಾಡುತ್ತಿರುವುದು ಎಷ್ಟು ಸರಿ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
 
ಗಡಿಯಲ್ಲಿ ರಸ್ತೆ ನಿರ್ಮಾಣವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಸೇತುವೆಯೇ ಕರ್ನಾಟಕದ ಗಡಿಯಾಗಿದೆ. ನಂತರದ ಪ್ರದೇಶ ಆಂಧ್ರಪ್ರದೇಶಕ್ಕೆ ಸೇರಿದ್ದು, ಎಂದು ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟಪ್ಪ ನಾಯ್ಡು ಹೇಳಿದ್ದಾರೆ.
 
ಈ ಭಾಗದಲ್ಲಿ ಒಳ್ಳೆ ರಸ್ತೆಯಿರಲಿಲ್ಲ. ನಮ್ಮ ಕುಟುಂಬದ ಜಾಗವನ್ನು ನೀಡಿ ರಸ್ತೆ ಮಾಡುವುದಕ್ಕೆ ಬಿಟ್ಟುಕೊಟ್ಟಿದ್ದೇವೆ. ಆಂಧ್ರಪ್ರದೇಶದ ನಮ್ಮ ಶಾಸಕರಿಗೂ ಮನವಿ ಮಾಡಿದ್ದೇವೆ. ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ. ರಸ್ತೆಯಾದರೆ ವಿ.ಕೋಟೆವರೆವಿಗೂ ಸಂಪರ್ಕ ರಸ್ತೆ ಸಿಗುತ್ತದೆ ಎಂದು ತೊಂಗಲಕುಪ್ಪದ ಪಂಚಾಯಿತಿ ಸದಸ್ಯರು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ರಸ್ತೆಗೆ ಜಾಗಬಿಟ್ಟು ಕೊಟ್ಟ ಕುಟುಂಬದ ಸದಸ್ಯ ಪ್ರವೀಣ್‌ ತಿಳಿಸಿದರು.
 
ಇಲ್ಲಿ ಗಡಿ ಗೊಂದಲ ಇದೆ. ರಸ್ತೆ ಮಾಡುತ್ತಿರುವುದು ಕರ್ನಾಟಕದ ಪ್ರದೇಶದಲ್ಲಿಯೇ. ಜನರಿಗೆ ರಸ್ತೆ ಸಿಗಲಿ ಎಂಬ ಸದುದ್ದೇಶದಿಂದ ಕಾಮಗಾರಿ ನಡೆಸಲಾಗುತ್ತಿದೆ. ಇದರಲ್ಲಿ ವೈಯಕ್ತಿಕ ಲಾಭವೇನೂ ಇಲ್ಲ ಎಂದು ಕಾಮಗಾರಿಯ ಉಸ್ತುವಾರಿ ವಹಿಸಿರುವ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ನಾಯ್ಡು ತಿಳಿಸಿದ್ದಾರೆ.
–ಕೃಷ್ಣಮೂರ್ತಿ
 
* ಈ ರಸ್ತೆ ಕಾಮಗಾರಿ ಪಂಚಾಯಿತಿ ಗಮನಕ್ಕೆ ಬಂದಿಲ್ಲ. ಎನ್‌ಒಸಿಗೆ ಬಂದಾಗಲೇ ಕಾಮಗಾರಿ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ.
-ವಸಂತ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT