ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿ ವರ್ಗಾವಣೆಗೆ ವಕೀಲರ ಆಗ್ರಹ

ಅಮಾನಿಕೆರೆ ಒತ್ತುವರಿ ತೆರವು: ತಿಪಟೂರು, ತುರವೇಕೆರೆಯಲ್ಲಿ ಪ್ರತಿಭಟನೆ
Last Updated 18 ಫೆಬ್ರುವರಿ 2017, 7:28 IST
ಅಕ್ಷರ ಗಾತ್ರ
ತಿಪಟೂರು: ಎ.ಸಿ ನ್ಯಾಯಾಲಯದಲ್ಲಿ ವಕೀಲರನ್ನು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ ಅಗೌರವದಿಂದ ಕಾಣುವರು. ಆದ್ದರಿಂದ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
 
 ವಕೀಲರ ಸಂಘದ ಅಧ್ಯಕ್ಷ ಬಸಪ್ಪ ಮಾತನಾಡಿ, ‘ಉಪವಿಭಾಗಾಧಿಕಾರಿ ವಕೀಲರಿಗೆ ಅಗೌರವ ತೋರಿಸುತ್ತಿದ್ದಾರೆ. ಪ್ರಕರಣ ದಾಖಲು ವೇಳೆ ಅವರು ಕಚೇರಿಯಲ್ಲಿ ಇರುವುದಿಲ್ಲ. ಪ್ರಕರಣಗಳಿಗೆ ನಿಗದಿತ ದಿನಾಂಕ ನೀಡುವುದಿಲ್ಲ. ತಿಪಟೂರು ಉಪವಿಭಾಗದ ಎಸಿ ನ್ಯಾಯಾಲಯದಲ್ಲಿ ಎರಡು ಸಾವಿರ ಪ್ರಕರಣಗಳು ಬಾಕಿ ಇವೆ. ಈ ಬಗ್ಗೆ ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುವರು’ ಎಂದು ಆರೋಪಿಸಿದರು. 
 
‘ಪ್ರಜ್ಞಾ ಅಮ್ಮೆಂಬಳ ಅವರ ವರ್ಗಾವಣೆಗೆ ಈ ಹಿಂದೆಯೇ ಹೋರಾಟ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ವಕೀಲರ ಸಂಘದ ಪ್ರತಿಭಟನೆಗೆ ಸರ್ಕಾರ ಮನ್ನಣೆ ನೀಡಿಲ್ಲ. ಈ ನಿಟ್ಟಿನಲ್ಲಿ ಸಂಘದಿಂದ ಮತ್ತೊಮ್ಮೆ ಪ್ರತಿಭಟನೆ ನಡೆಸಬೇಕಾಯಿತು’ ಎಂದು ತಿಳಿಸಿದರು. 
 
ಜೆಡಿಎಸ್ ಮುಖಂಡ ಲೋಕೇಶ್ವರ, ‘ಉಪ ವಿಭಾಗಾಧಿಕಾರಿಯ ಕರ್ತವ್ಯ ಲೋಪ ಹೆಚ್ಚಾಗಿದೆ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದ, ಕರ್ತವ್ಯ ನಿರ್ವಹಿಸದ ಅವರನ್ನು ವರ್ಗಾಯಿಸಬೇಕು’ ಎಂದು ಆಗ್ರಹಿಸಿದರು. ಜೆಡಿಎಸ್ ಮುಖಂಡ ರೇಣುಕಾರ್ಯ, ವಕೀಲರಾದ ಶೇಖರ್, ದಕ್ಷಿಣಾಮೂರ್ತಿ, ಮಲ್ಲೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 
ನನ್ನ ವಿರುದ್ಧ ಷಡ್ಯಂತ್ರ
ತುರುವೇಕೆರೆ: ‘ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡುತ್ತಿದ್ದೇನೆ. ಇದನ್ನು ಸಹಿಸದ ಕೆಲ ಪಟ್ಟಭದ್ರರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದು ನಾನು ಜಗ್ಗುವುದಿಲ್ಲ’ ಎಂದು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ ತಿಳಿಸಿದರು.
 
ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಮಾನಿಕೆರೆ ಒತ್ತವರಿ ತೆರವುಗೊಳಿಸುವ ಸಂಬಂಧ ಕೆಲ ರೈತರಿಗೆ ನೋಟಿಸ್‌ ನೀಡಿದ್ದೆ. ಎ.ಸಿ.ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ದಾಖಲಾತಿಗಳನ್ನು ನೀಡುವಂತೆ ತಿಳಿಸಲಾಗಿತ್ತು. ಈ ವಿಚಾರವಾಗಿ ಪ್ರತಿವಾದಿ ವೆಂಕಟರಾಮಯ್ಯ ಅವರ ಬದಲಿಗೆ ಅವರ ಮಗ ಕಾಂತರಾಜು ಬಂದು ಗಲಾಟೆ ಮಾಡಿ ಅಸಂಬದ್ಧ ಪದ ಬಳಸಿದ್ದರಿಂದ ಸರ್ಕಾರಿ ನೌಕರರ  ಸೇವಾ ನಿಯಮದಡಿ ಪ್ರಕರಣ ದಾಖಲಿಸಿದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ’ ಎಂದರು.
 
‘ನಾನು ಯಾವುದೇ ದುಂಡಾವರ್ತನೆ ನಡೆಸಿಲ್ಲ. ಕಾನೂನು ಚೌಕಟ್ಟಿನಲ್ಲಿ ಪ್ರಕರಣ ನಿರ್ವಹಿಸಿದ್ದೇನೆ. ಒತ್ತುವರಿದಾರನ ವಕಾಲತ್ ಅರ್ಜಿ ಕಡತದಲ್ಲೇ ಇದೆ. ಅದನ್ನು ನಾಶಪಡಿಸಿಲ್ಲ. ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿಯ ರೈತರು ತಿಪಟೂರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಕಂದಾಯ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿರುವುದು ಕೆಲವರಿಗೆ ನುಂಗಲಾರದ ತುತ್ತಾಗಿದೆ’ ಎಂದು ದೂರಿದರು. 
 
ಎ.ಸಿ ನಿಂದನೆ ಆರೋಪ: ರೈತ ಬಂಧನ
ತುರುವೇಕೆರೆ: ಇಲ್ಲಿನ ಅಮಾನಿಕೆರೆ ಒತ್ತುವರಿ ತೆರವಿಗೆ ಸಂಬಂಧ ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ ಅವರನ್ನು ತೊರೆಮಾವಿನಹಳ್ಳಿಯ ರೈತ ಕಾಂತರಾಜು ನಿಂದಿಸಿದ್ದಾರೆ ಎಂಬ ಆರೋಪದ ಮೇಲೆ ಗುರುವಾರ ರಾತ್ರಿ ಪೊಲೀಸರು ಕಾಂತರಾಜು ಅವರನ್ನು ಬಂಧಿಸಿದ್ದಾರೆ.
 
ಅಮಾನಿಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕೆಲ ರೈತರಿಗೆ ಇತ್ತೀಚೆಗೆ ನೋಟಿಸ್ ನೀಡಲಾಗಿತ್ತು. ಫೆ.16 ರಂದು ತಾಲ್ಲೂಕು ಕಚೇರಿಯಲ್ಲಿ  ಇದೇ ವಿಚಾರವಾಗಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಜ್ಞಾ ಅಮ್ಮೆಂಬಳ ಮತ್ತು ಕಾಂತರಾಜು ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕಾಂತರಾಜು ಈ ವೇಳೆ ನನ್ನ ನಿಂದಿಸಿದರು ಎಂದು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಾಂತರಾಜು ಅವರನ್ನು  ತಿಪಟೂರಿನ ಕಾರಾಗೃಹದಲ್ಲಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT