ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಶೌಚ ಬಾಧೆ ತೀರಿಸುವುದು ಸುಲಭವಲ್ಲ!

ಬೊಮ್ಮಲದೇವಿಪುರ ಪದವಿ ಪೂರ್ವ ಕಾಲೇಜಿನ ಸ್ಥಿತಿ: ಶೌಚಾಲಯ ಬೇಡವೆಂದ ಮುಖ್ಯ ಶಿಕ್ಷಕ
Last Updated 18 ಫೆಬ್ರುವರಿ 2017, 7:33 IST
ಅಕ್ಷರ ಗಾತ್ರ
ಕೊರಟಗೆರೆ: ತಾಲ್ಲೂಕಿನ ಗಡಿ ಗ್ರಾಮ ಬೊಮ್ಮಲದೇವಿಪುರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭವಾಗಿ 10 ವರ್ಷವಾದರೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಶೌಚಾಲಯದ ಸಮಸ್ಯೆ ತಪ್ಪಿಲ್ಲ. ಬಯಲಿನಲ್ಲಿಯೇ ಶೌಚ ಬಾಧೆ ತೀರಿಸುವ ಸ್ಥಿತಿ ಇದೆ! 
 
 ಗ್ರಾಮದಲ್ಲಿ 2007ರಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಆರಂಭವಾದವು. ಕಟ್ಟಡದ ಸಮಸ್ಯೆಯಿಂದ ದೇವಸ್ಥಾನದಲ್ಲಿ 4 ವರ್ಷಗಳ ತರಗತಿಗಳು ನಡೆದವು. ನಂತರ ಪ್ರೌಢಶಾಲೆ ವಿಭಾಗಕ್ಕೆ 15 ಹಾಗೂ ಕಾಲೇಜು ವಿಭಾಗಕ್ಕೆ ಸರ್ಕಾರ 2 ಕೊಠಡಿಗಳನ್ನು ನಿರ್ಮಿಸಿತು. ಪ್ರೌಢಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾಲೇಜಿನಲ್ಲಿ 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರೌಢಶಾಲೆಗೆ ಶೌಚಾಲಯ ಇದ್ದರೂ ಉತ್ತಮವಾಗಿಲ್ಲ. ಕೇವಲ ಎರಡು ಶೌಚದ ಕೋಣೆಗಳಿದ್ದು ನೀರಿನ ಸಮಸ್ಯೆಯಿಂದ ಅವುಗಳನ್ನೂ ಬಳಸುತ್ತಿಲ್ಲ. 
 
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ (ಆರ್‌ಎಂಎಸ್‌ಎ) ಪ್ರೌಢಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ.  ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕು ಎಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ನಿಯಮವಿದೆ. ಆದರೆ ಇಲ್ಲಿನ ಮುಖ್ಯ ಶಿಕ್ಷಕರು  ಶೌಚಾಲಯ ಬೇಡ, ಅವಶ್ಯಕತೆ ಇಲ್ಲ ಎಂದು ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ! ಮುಖ್ಯ ಶಿಕ್ಷಕ ಪತ್ರ ಬರೆದಿರುವುದು ನಿಜ ಎನ್ನುತ್ತದೆ ತಾಲ್ಲೂಕು ಶಿಕ್ಷಣ ಇಲಾಖೆ.
 
ಕಾಲೇಜಿಗೆ ₹ 6 ಲಕ್ಷ ವೆಚ್ಚದಲ್ಲಿ 2 ಶೌಚಾಲಯ ನಿರ್ಮಿಸಿದ್ದರೂ ಬಳಕೆಗೆ ನೀಡಿಲ್ಲ. ಶೌಚಾಲಯ ನಿರ್ಮಾಣದ ಬಿಲ್‌ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರು ಕಾಲೇಜಿಗೆ ಕಟ್ಟಡ ಹಸ್ತಾಂತರಿಸಿಲ್ಲ. ಒಂದು ವೇಳೆ ಬಳಕೆಗೆ ನೀಡಿದರೂ ಶೌಚಕ್ಕೆ ಬಳಸಲು ಒಂದು ಹನಿ ನೀರಿನ ವ್ಯವಸ್ಥೆಯೂ ಇಲ್ಲ. ಸಮೀಪದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ಇದೆ. ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ ಶೌಚಾಲಯಕ್ಕೆ ಬಳಸಲು ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆರೋಪಿಸುವರು.
 
 ಪ್ರಾಂಶುಪಾಲರು ಮತ್ತು ಸಿಬ್ಬಂದಿಗೆ ಪ್ರತ್ಯೇಕ ಕೊಠಡಿಗಳಿಲ್ಲ. ಪ್ರೌಢಶಾಲೆ ವಿಭಾಗದ ಸಣ್ಣ ಕೊಠಡಿಯನ್ನು ಕಾಲೇಜು ಸಿಬ್ಬಂದಿ ಬಳಸುತ್ತಿದ್ದಾರೆ. ಕಾಲೇಜಿನಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಬೇರೆಡೆ ದಾಖಲಾಗಲು ಇಚ್ಛಿಸುತ್ತಿದ್ದಾರೆ. ಇಲ್ಲಿ ಕಲಾ ವಿಭಾಗ ಮಾತ್ರ ಇದೆ. ವಾಣಿಜ್ಯ ವಿಭಾಗ ತೆರೆಯಲು ಕಾಲೇಜು ಶಿಕ್ಷಣ ಇಲಾಖೆ ಗಮನ ಹರಿಸಬೇಕು.  ಮೂಲ ಸೌಕರ್ಯ ಒದಗಿಸಬೇಕು ಎಂದು ಪೋಷಕರು ಒತ್ತಾಯಿಸುವರು.
–ಎ.ಆರ್‌.ಚಿದಂಬರ
 
ಶಾಲೆಗೆ ಬಾರದ ಶಿಕ್ಷಕರು: 
 
ಪ್ರೌಢಶಾಲೆ ಮುಖ್ಯಶಿಕ್ಷಕರು ಸರಿಯಾಗಿ ಶಾಲೆಗೆ ಹಾಜರಾಗುವುದಿಲ್ಲ. ಕೆಲವು ಶಿಕ್ಷಕರು ಅವರನ್ನೆ ಅನುಸರಿಸುತ್ತಿದ್ದಾರೆ. ಮುಖ್ಯ ಶಿಕ್ಷಕರು ತರಬೇತಿ ಎಂದು ಶಾಲೆ ಕಡೆ ತಲೆ ಹಾಕುವುದಿಲ್ಲ’ ಎಂದು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರೇ ಗಂಭೀರವಾಗಿ ಆರೋಪಿಸುವರು. 

ಗಡಿ ಭಾಗದ ಶಾಲೆ ಎಂದು ಅಧಿಕಾರಿಗಳು ಯಾರೂ ತಪಾಸಣೆಗೆ ಬರುವುದಿಲ್ಲ ಎಂಬ ನಿರ್ಲಕ್ಷದಿಂದ ಶಿಕ್ಷಕರು ಹಾಜರಾಗುತ್ತಿಲ್ಲ.   ಹಾಜರಾತಿ ಪುಸ್ತಕದಲ್ಲಿ ಗೈರಾದ ದಿನವೂ ಹಾಜರಾತಿ ಎಂದು ನಮೂದಿಸುತ್ತಿದ್ದಾರೆ. ಶಾಲೆಯಲ್ಲಿ ಇಂಗ್ಲಿಷ್‌ ಪಾಠ ನಡೆದಿಲ್ಲ. ಇಂಗ್ಲಿಷ್‌ ವಿಷಯದ ಶಿಕ್ಷಕರ ಕೊರತೆ ಇದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸುವರು.
 
* ಕಾಲೇಜು ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಯಾವ ಸೌಲಭ್ಯಗಳು ದೊರೆಯುತ್ತಿಲ್ಲ. ವಿದ್ಯಾರ್ಥಿನಿಯರಿಗೆ ಶೌಚಾಲಯದ ಸಮಸ್ಯೆ ತೀವ್ರವಾಗಿ ತಟ್ಟಿದೆ. 
-ಮಂಜುಳಾಬಾಯಿ, ದ್ವಿತೀಯ ಪಿಯುಸಿ ವಿದ್ಯಾರ್ಥಿ.
 
* ಮಹಿಳಾ ಹಾಗೂ ಪುರುಷ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ಇಲ್ಲ. 6 ವರ್ಷದ ಹಿಂದೆ ನಿರ್ಮಾಣವಾಗಿರುವ ಶೌಚಾಲಯಕ್ಕೆ ನೀರಿನ ಸಮಸ್ಯೆ ಇದೆ. 
-ಡಾ.ರವಿಕುಮಾರ್‌ ನೀಹ, ಪ್ರಭಾರ ಪ್ರಾಂಶುಪಾಲ
 
* ಮೂಲ ಸೌಲಭ್ಯ ಕೊರತೆಯಿಂದ ಇಲ್ಲಿನ ಸಿಬ್ಬಂದಿ ಬೇರೆಡೆ ವರ್ಗಾವಣೆ ಮಾಡಿಸಿಕೊಳ್ಳಲು ಇಚ್ಛಿಸುವರು. 
-ಮಂಜುನಾಥ, ಪ್ರಥಮ ಪಿಯುಸಿ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT