ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಯಿತು ತುಮಕೂರು ವಿ.ವಿ ಕ್ಯಾಂಪಸ್‌ ಕನಸು

ಬಿದರೆಕಟ್ಟೆ ಗ್ರಾಮದಲ್ಲಿ ಇಂದು ಶಿಲಾನ್ಯಾಸ ಕಾರ್ಯಕ್ರಮ, ಹದಿಮೂರು ವರ್ಷದ ಭೂಮಿಯ ಹುಡುಕಾಟಕ್ಕೆ ಕೊನೆಗೂ ಬಿದ್ದ ತೆರೆ
Last Updated 18 ಫೆಬ್ರುವರಿ 2017, 7:42 IST
ಅಕ್ಷರ ಗಾತ್ರ
ತುಮಕೂರು: ಜಿಲ್ಲೆಗಷ್ಟೆ ಸೀಮಿತವಾಗಿ ಆರಂಭಗೊಂಡ ದೇಶದ ಮೊದಲ ವಿಶ್ವವಿದ್ಯಾಲಯ ಎನ್ನುವ ದಾಖಲೆಗೆ ಪಾತ್ರವಾದರೂ ಸ್ವಂತ ಕ್ಯಾಂಪಸ್‌ ಇಲ್ಲದೆ ನರಳುತ್ತಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ಕನಸಿನ ಕನವರಿಕೆ ಶನಿವಾರ ನನಸಾಗುತ್ತಿದೆ. 
 
ತುಮಕೂರು–ಕುಣಿಗಲ್‌ ಹೆದ್ದಾರಿಯಲ್ಲಿ ಬರುವ ಬಿದರೆಕಟ್ಟೆಯ 240 ಎಕರೆ ವಿಸ್ತೀರ್ಣದಲ್ಲಿ ‘ಜ್ಞಾನ ಸಿರಿ’  ಕ್ಯಾಂಪಸ್‌ ತಲೆ ಎತ್ತಲಿದೆ. ಹದಿಮೂರು ವರ್ಷದ ಸತತ  ಪ್ರಯತ್ನಕ್ಕೆ ಬೆಲೆ ಸಿಕ್ಕಿದೆ.
 
2004ರಲ್ಲಿ ತುಮಕೂರು ನಗರದ ಬಿ.ಎಚ್‌. ರಸ್ತೆಯಲ್ಲಿನ ಡಾ. ಅಂಬೇಡ್ಕರ್‌ ಭವನದಲ್ಲಿ ಆರಂಭಗೊಂಡ ವಿ.ವಿಗೆ ಸ್ವಂತ ಕ್ಯಾಂಪಸ್‌ಗೆ ಅಗತ್ಯ ಭೂಮಿ ಹುಡುಕಲು 13 ವರ್ಷ  ತೆಗೆದುಕೊಂಡಿದ್ದು ಜಿಲ್ಲೆಯ ಉನ್ನತ ಶಿಕ್ಷಣದ ಬೆಳವಣಿಗೆಗೆ ತಾತ್ಕಾಲಿಕ ತಡೆ ಆಯಿತು. ವಿ.ವಿಯ ಸಂಸ್ಥಾಪಕ ಕುಲಪತಿ ಡಾ. ಓ. ಅನಂತರಾಮಯ್ಯ ಅವರ ಕಾಲದಿಂದಲೂ ಭೂಮಿಯ ಹುಡುಕಾಟ ನಡೆದಿತ್ತು. 
 
ಮೊದಲಿಗೆ, ದೇವರಾಯನ ದುರ್ಗದಲ್ಲಿ 75 ಎಕರೆ ನೀಡಲಾಗಿತ್ತು. ಜಾಗದ ಸುತ್ತಲೂ ಆವರಣಗೋಡೆ ಹಾಕುವ ಹಂತದಲ್ಲಿ ಜಾಗ ರಕ್ಷಿತಾರಣ್ಯ ವ್ಯಾಪ್ತಿಗೆ ಸೇರಿದೆ ಎಂದು ಪರಿಸರವಾದಿಗಳು ಧ್ವನಿ ಎತ್ತಿದರು.  ಪ್ರಕರಣ ನ್ಯಾಯಾಲಯಕ್ಕೆ ಹೋಯಿತು. ಅದೀಗ ಹಸಿರು ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. 
 
ಈ ವಿವಾದದ ಬಳಿಕ ಕ್ಯಾಂಪಸ್‌ಗೆ ಹೊಸ ಭೂಮಿ ಹುಡುಕುವ ಕೆಲಸದಲ್ಲೇ ಅನಂತರಾಮಯ್ಯ ಅವರ ಅವಧಿ ಮುಗಿಯಿತು. ಬಿದರೆಕಟ್ಟೆಯಲ್ಲಿ ಜಾಗ ಪಡೆಯಲು ಅನಂತರಾಮಯ್ಯ ಯತ್ನಿಸಿದ್ದರೂ ಅರಣ್ಯ ಇಲಾಖೆ ಅಡ್ಡಗಾಲು ಕಾರಣ ಅದನ್ನು ಕೈಬಿಟ್ಟಿದ್ದರು ಎನ್ನುವುದು ಇತಿಹಾಸ.
 
ಎರಡನೇ ಕುಲಪತಿಯಾಗಿ ಡಾ. ಎಸ್‌.ಸಿ.ಶರ್ಮಾ ಅವರು ಬಂದ ನಂತರ ಅಂಬೇಡ್ಕರ್‌ ಭವನದಿಂದ ಈಗಿರುವ ಕ್ಯಾಂಪಸ್‌ಗೆ ವಿ.ವಿ ಸ್ಥಳಾಂತರವಾಯಿತು. ಕಾಲೇಜು ಶಿಕ್ಷಣ ಇಲಾಖೆಯಿಂದ ಕಲಾ ಹಾಗೂ ವಿಜ್ಞಾನ ಕಾಲೇಜುಗಳನ್ನು ಸುಪರ್ದಿಗೆ ಪಡೆದು ಅವುಗಳನ್ನು ವಿ.ವಿ ಘಟಕ ಕಾಲೇಜುಗಳಾಗಿ ಮಾಡಿಕೊಳ್ಳಲಾಯಿತು. ಈ ಮೂಲಕ ಈ ಎರಡು ಕಾಲೇಜುಗಳ ಆವರಣ ವಿ.ವಿ ಕ್ಯಾಂಪಸ್‌ ಆಗಿ ಮಾರ್ಪಾಡಾಯಿತು.
 
ದಾಖಲೆಗಳ ಪ್ರಕಾರ ಸುಮಾರು 60 ಎಕರೆ ಭೂಮಿ ಇದ್ದರೂ ವಾಸ್ತವವಾಗಿ ವಿ.ವಿ ಅನುಭವದಲ್ಲಿ 40 ಎಕರೆ ಮಾತ್ರ ಇದೆ. ವಿ.ವಿಯಲ್ಲಿ ಈಗಿರುವ ಅನೇಕ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಶರ್ಮಾ ಶ್ರಮಿಸಿದ್ದರು. ಕುಲಸಚಿವ ಪ್ರೊ. ಶಿವಲಿಂಗಯ್ಯ ಜತೆ ಸೇರಿ ಹೊಸ ರೂಪವನ್ನೇ ನೀಡಿದರು. ಅವರೂ ಕ್ಯಾಂಪಸ್‌ಗೆ ಭೂಮಿ ಪಡೆಯುವ ಯತ್ನ ನಡೆಸಿದ್ದರು. ಬಿದರೆಕಟ್ಟೆಯಲ್ಲಿ ಭೂಮಿ ನೀಡಲು ಸರ್ಕಾರ ಅಂದು ಮುಂದಾದರೂ ಶರ್ಮಾ  ಅದನ್ನು ಪಡೆಯಲಿಲ್ಲ. ಇದಕ್ಕಾಗಿ ಸಿಂಡಿಕೇಟ್‌ ಉಪ ಸಮಿತಿ ರಚಿಸಿ ವರದಿ ಪಡೆಯಲಾಗಿತ್ತು. ನಗರದಿಂದ ದೂರವಿದೆ  ಹಾಗೂ ಕಾನೂನು ಸುವ್ಯವಸ್ಥೆ ಕಾರಣ ನೀಡಿ ಭೂಮಿ ತಿರಸ್ಕರಿಸಲಾಯಿತು. 
 
ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಸಮೀಪದ ಅರಣ್ಯ ಭೂಮಿ ಪಡೆಯಲು ಶರ್ಮಾ ಯತ್ನಿಸಿದರು. ಆದರೆ ಇದು ಆನೆ ಕಾರಿಡಾರ್‌ ಹಾಗೂ ನೂರಾರು ಶ್ರೀಗಂಧದ ಮರಗಳಿರುವ ಕಾರಣ ಈ ಭೂಮಿ ನೀಡಲು ಸರ್ಕಾರ ನಿರಾಕರಿಸಿತು. ಇದೇ ಕಾರಣಕ್ಕಾಗಿ ಹಳೆಯ ಕ್ಯಾಂಪಸ್‌ನಲ್ಲೆ ಮೇಲ್ಮುಖ ಅಭಿವೃದ್ಧಿಯ (ವರ್ಟಿಕಲ್‌) ಕಲ್ಪನೆ ಬಿತ್ತಲಾಯಿತು.  
 
ಪ್ರೊ.ಎ.ಎಚ್‌.ರಾಜಾಸಾಬ್‌ ಕುಲಪತಿಯಾದ ನಂತರ ಹೊಸ ಕ್ಯಾಂಪಸ್‌ ಕನಸಿಗೆ ಮತ್ತೆ ಜೀವ ಬಂದಿತು. ಹಲವು ಕಡೆ ಭೂಮಿ ಹುಡುಕಾಟ ನಡೆಸಲಾಯಿತು. ನಂತರ ಬಿದರೆಕಟ್ಟೆಯಲ್ಲಿ ಅತಿ ಹೆಚ್ಚು (240) ಎಕರೆ ಭೂಮಿ ಸಿಗುವ ಕಾರಣ ಇದನ್ನೆ ಪಡೆಯಲು ನಿರ್ಧರಿಸಲಾಯಿತು. ಅಂತೂ–ಇಂತೂ ಬಿದರೆಕಟ್ಟೆ ಭೂಮಿಯೇ ಈಗ ವಿಶ್ವವಿದ್ಯಾನಿಲಯದ ಕರ್ಮ ಭೂಮಿಯಾಗುತ್ತಿದೆ.
 
‘ತುಮಕೂರು ನಗರ ಕೇಂದ್ರದಿಂದ ದೂರ (ಸುಮಾರು 15 ಕಿ.ಮೀ) ಇರುವ ಇದು ಸಂಪೂರ್ಣ ಹಳ್ಳಿಯ ವಾತಾವರಣ.  ಇದೀಗ ‘ಜ್ಞಾನ ಸಿರಿ’ಯಾಗಿ  ಬೆಳೆಯಬೇಕಾಗಿದೆ’ ಎಂದು ಸಂಭ್ರಮ ಪಡುತ್ತಾರೆ ಅಲ್ಲಿನ ಹಳ್ಳಿಗಳ ಜನರು.  
 
ಕ್ರಿಕೆಟ್ ಸ್ಟೇಡಿಯಂ ಕನಸು
 
ವಿ.ವಿ ಕ್ಯಾಂಪಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸುವ ಕನಸು ಸಹ ಕಾಣಲಾಗಿದೆ.  ಕ್ರೀಡಾಂಗಣಕ್ಕೆ ಅಗತ್ಯವಿರುವ 15 ಎಕರೆ ಭೂಮಿ ಕೊಡುವುದಾಗಿ ವಿ.ವಿ ಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿಗೆ ತಿಳಿಸಲಾಗಿದೆ. ಈ ಬಗ್ಗೆ ಒಂದು ಸುತ್ತಿನ ಮಾತುಕತೆಯೂ ಪೂರ್ಣಗೊಂಡಿದೆ. ಆದರೆ ದೂರ ಎನ್ನುವ ಕಾರಣಕ್ಕೆ ಮಂಡಳಿ ಕಡೆಯಿಂದ ಸಕಾರಾತ್ಮಕ ಉತ್ತರ ದೊರೆತ್ತಿಲ್ಲ ಎನ್ನಲಾಗಿದೆ.
 
ಎರಡೂವರೆ ವರ್ಷದ ಯತ್ನ

ರಾಜಾಸಾಬ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ಬಿದರೆಕಟ್ಟೆ ಭೂಮಿ ಪಡೆಯುವ ಪ್ರಕ್ರಿಯೆ ಎರಡೂವರೆ ವರ್ಷ  ನಡೆದಿದೆ. ಕಂದಾಯ, ಕೇಂದ್ರ ಅರಣ್ಯ ಇಲಾಖೆ ಅನುಮತಿ ಬಳಿಕ ₹ 10 ಕೋಟಿ ನೀಡಿ 99 ವರ್ಷಕ್ಕೆ ಭೂಮಿ ಗುತ್ತಿಗೆ ಪಡೆಯಲಾಗಿದೆ. ಇಲ್ಲಿ ಕಡಿಯುವ ಮರಗಳಿಗೆ ಬದಲಿಯಾಗಿ ಇಷ್ಟೇ ಎಕರೆಯಲ್ಲಿ ಅರಣ್ಯ ಬೆಳೆಸಲು ಚಿಕ್ಕನಾಯಕನಹಳ್ಳಿ ದಸೂಡಿ ಬಳಿ ಸರ್ಕಾರಿ ಭೂಮಿ ನೀಡಲಾಗಿದೆ.
 
* ಈ ಭೂಮಿ ಪಡೆಯಲು ಇನ್ನಿಲ್ಲದ ಪರಿಶ್ರಮ ಹಾಕಿದ್ದೇವೆ. ಎಲ್ಲ ರೀತಿಯ ಸಹಕಾರ ತೋರಿದ ಬಿದರೆಕಟ್ಟೆ, ತಿಮ್ಮಸಂದ್ರ, ದಮ್ಮನಕುಪ್ಪೆ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
- ಪ್ರೊ.ಎ.ಎಚ್‌.ರಾಜಾಸಾಬ್, ಕುಲಪತಿ
 
5 ವರ್ಷದಲ್ಲಿ ಪೂರ್ಣ
 
ಈಗಿನ ಲೆಕ್ಕಾಚಾರದಂತೆ ಹೊಸ ಕ್ಯಾಂಪಸ್‌ ಇನ್ನೂ ಐದು ವರ್ಷದಲ್ಲಿ ಪೂರ್ಣಗೊಳ್ಳಬೇಕಾಗಿದೆ. ಒಟ್ಟು ₹ 500 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ವಿ.ವಿ ಆಡಳಿತ ಭವನ, ಬೋಧಕ, ಬೋಧಕೇತರರ ವಸತಿಗೃಹ, ಹಾಸ್ಟೆಲ್‌ಗಳು, ಆಟದ ಮೈದಾನ, ಹೋಟೆಲ್, ಕುಲಪತಿ ನಿವಾಸ, ಸ್ನಾತಕೋತ್ತರ ವಿಭಾಗಗಳ ಕೇಂದ್ರಗಳು ಇಲ್ಲಿ ತಲೆ ಎತ್ತಲಿವೆ. ಆದರೆ ಸರ್ಕಾರ ₹ 500 ಕೋಟಿ ಹಣ ನೀಡದ ಕಾರಣ ಈ ಎಲ್ಲ ಕೆಲಸಗಳು ಒಂದೇ ಹಂತದಲ್ಲಿ ಆರಂಭವಾಗುತ್ತಿಲ್ಲ.

ಮೊದಲ ಹಂತದಲ್ಲಿ ಸರ್ಕಾರ
₹ 90 ಕೋಟಿ ನೀಡಲು ಒಪ್ಪಿದೆ. ಇದರ ಜತೆಗೆ ವಿ.ವಿ ಯಿಂದ ₹ 40 ಕೋಟಿ ನೀಡಲು ಒಪ್ಪಲಾಗಿದೆ. ಆದರೆ ಇದಕ್ಕೆ ಇನ್ನೂ ಆಡಳಿತಾತ್ಮಕ ಅನುಮೋದನೆ ದೊರೆತ್ತಿಲ್ಲ. ಈ ಹಣ ಕೂಡ ಇನ್ನೂ ಬಿಡುಗಡೆಯಾಗಿಲ್ಲ. ಈ ಹಣ ಬಿಡುಗಡೆಯಾದ ಬಳಿಕ ಮೊದಲ ಹಂತದ ಕಾಮಗಾರಿ ಆರಂಭಗೊಳ್ಳಲಿವೆ.

ಸದ್ಯ, ಸಮಾಜ ಕಲ್ಯಾಣ ಇಲಾಖೆಯಿಂದ ನೀಡಿರುವ ₹ 17.5 ಕೋಟಿ ಹಣದಲ್ಲಿ ಪುರುಷ, ಮಹಿಳೆಯರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯುತ್ತಿದೆ. ಒಟ್ಟಾರೆ 300 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಈ ಹಾಸ್ಟೆಲ್‌ಗಳು ಹೊಂದಿವೆ. ಮುಖ್ಯಮಂತ್ರಿ ನೀಡಿರುವ ₹ 5 ಕೋಟಿಯಲ್ಲಿ ಮಹಾದ್ವಾರ, ಗಡಿಕಲ್ಲು ನಿಲ್ಲಿಸುವ ಕೆಲಸ ಕೈಗೊಳ್ಳಲು ನಿರ್ಧರಿಸಲಾಗಿದೆ.

‘ಕ್ಯಾಂಸಪ್‌ ಎಷ್ಟು ಬೇಗ ಅಸ್ತಿತ್ವಕ್ಕೆ ಬರಲಿದೆ ಎಂಬುದು ಸರ್ಕಾರ ನೀಡುವ ಹಣ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ತೋರುವ ಆಸಕ್ತಿ ಮೇಲೆ ನಿಂತಿದೆ’ ಎನ್ನುತ್ತವೆ ವಿ.ವಿ ಮೂಲಗಳು. ತಿಮ್ಮಸಂದ್ರ, ದೊಮ್ಮನಕುಪ್ಪೆ, ಬಿದರೆಕಟ್ಟೆ ಮೂರು ಗ್ರಾಮಗಳನ್ನು ಕ್ಯಾಂಪಸ್‌ ಆವರಿಸಿಕೊಂಡಿದೆ. ಇದರಲ್ಲಿ ತಿಮ್ಮಸಂದ್ರ–ದೊಮ್ಮಕುಪ್ಪೆ ನಡುವೆ 10 ಎಕರೆ ಜಾಗ ಗ್ರಾಮಸ್ಥರದ್ದಾಗಿದ್ದು, ಕ್ಯಾಂಪಸ್‌ ಅನ್ನು ಎರಡು ಭಾಗವಾಗಿ ಸೀಳಿದೆ. ಈ ಹತ್ತು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ನೀಡುವಂತೆ ವಿ.ವಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT