ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು ಗೆಲುವಿಗಿಂತ ಸ್ಪರ್ಧೆ ಮುಖ್ಯ

ಪಂಚಗಿರಿ ಬೋಧನಾ ಪ್ರಾಥಮಿಕ ಶಾಲೆಯಲ್ಲಿ ‘ಕಲಿಕೋತ್ಸವ’
Last Updated 18 ಫೆಬ್ರುವರಿ 2017, 7:44 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ಕೇವಲ ಗೆಲ್ಲುವ ಉದ್ದೇಶದಿಂದಲೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಚಾಳಿಯನ್ನು ಮಕ್ಕಳು ಬಿಡಬೇಕು. ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸುವ ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಂಡಾಗ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ’ ಎಂದು ಪಂಚಗಿರಿ ಬೋಧನಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
 
ಜೈಭೀಮ್ ನಗರದಲ್ಲಿರುವ ಪಂಚಗಿರಿ ಬೋಧನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ನಗರ ಕ್ಲಸ್ಟರ್‌ ವ್ಯಾಪ್ತಿಯ ‘ಕಲಿಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಇತ್ತೀಚಿನ ದಿನಗಳಲ್ಲಿ ಸೋಲನ್ನು ಸ್ವೀಕರಿಸುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗುತ್ತಿದೆ. ಇಂದಿನ ಸೋಲು ಮುಂದಿನ ಗೆಲುವಿಗೆ ಮೆಟ್ಟಿಲು ಎನ್ನುವ ವಾಸ್ತವ ಸಂಗತಿ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಸ್ಪರ್ಧೆಗಳನ್ನು ಸೋಲು ಗೆಲುವಿನ ದೃಷ್ಟಿಯಲ್ಲಿ ನೋಡದೆ, ಭವಿಷ್ಯ ರೂಪಿಸುವ ಮಾರ್ಗಗಳನ್ನಾಗಿ ಸ್ವೀಕರಿಸಬೇಕಿದೆ’ ಎಂದರು.
 
ಬಿಆರ್‌ಪಿ ವೆಂಕಟರೆಡ್ಡಿ ಮಾತನಾಡಿ, ‘ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಕಲಿಕೋತ್ಸವಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ದೂರವಾಗಿಸಿ ಆತ್ಮವಿಶ್ವಾಸ ತುಂಬಲು ಇದು ಉತ್ತಮ ವೇದಿಕೆಯಾಗಿದೆ. ಆದ್ದರಿಂದ ಮಕ್ಕಳು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರವಾಗಿ ಸಾಂಸ್ಕೃತಿಕ ಮತ್ತು ಸಾಹಿತ್ಯಕವಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು’ ಎಂದು ಹೇಳಿದರು.
 
‘ಶಿಕ್ಷಣದಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ. ಇದನ್ನರಿತ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ.  ಪರಿಣಾಮಕಾರಿ ಶಿಕ್ಷಣ ನೀಡುವ ಎಲ್ಲಾ ವಿಧಾನಗಳನ್ನು ಬೋಧನಾ ತಂತ್ರಗಳಲ್ಲಿ ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಸರ್ಕಾರ ನೀಡುವ ಪ್ರತಿ ಸವಲತ್ತನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾವಂತರಾಗಿ, ದೇಶದ ಉತ್ತಮ ಪ್ರಜೆಗಳಾಗಬೇಕು’ ಎಂದರು.
 
ಬಿಆರ್‌ಪಿ ಶ್ರೀವಾಣಿ ಮಾತನಾಡಿ, ‘ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ನಲಿಯುತ್ತಾ ಶಿಕ್ಷಣ ಕಲಿಯುವ ಉದ್ದೇಶದಿಂದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಸರಳವಾಗಿ ಭಾಷೆ ಕಲಿಕೆ, ಓದುವುದನ್ನು ಕಲಿಸುವುದು ಕಲಿಕೋತ್ಸವದ ಮುಖ್ಯ ಉದ್ದೇಶ’ ಎಂದು ಹೇಳಿದರು.
 
ಕಲಿಕೋತ್ಸವದಲ್ಲಿ 1ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪಷ್ಟ ಓದು, ಸಿದ್ಧಬರಹ ಮತ್ತು ಅಭಿವ್ಯಕ್ತಿ ಎಂಬ ಮೂರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಿಕ್ಕಬಳ್ಳಾಪುರ ನಗರ ಕ್ಲಸ್ಟರ್‌ ವ್ಯಾಪ್ತಿಯ 12 ಸರ್ಕಾರಿ ಶಾಲೆಗಳಿಂದ ಒಟ್ಟು 250 ವಿದ್ಯಾರ್ಥಿಗಳು ಕಲಿಕೋತ್ಸವದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಲಾಯಿತು.  ನಗರ ಸಭೆ ಸದಸ್ಯ ನಾರಾಯಣಸ್ವಾಮಿ, ಸಿಆರ್‌ಪಿ ಪುಟ್ಟರಾಜು, ಶಿಕ್ಷಕರಾದ ಮಹಾಂತೇಶ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT